Wednesday, November 6, 2024

ನಿಟ್ಟೆಯಲ್ಲಿ ಮೂರು ದಿನಗಳ ಕ್ರಿಕೆಟ್‌ ಹಬ್ಬ

Sportsmail ನಿಟ್ಟೆ:

ಮುಂದಿನ ತಿಂಗಳು ನಿಟ್ಟೆಯ ಬಿ.ಸಿ ಆಳ್ವಾ ಕ್ರೀಡಾಂಗಣದಲ್ಲಿ ಕ್ರಿಕೆಟ್‌ ಹಬ್ಬ ನಡೆಯಲಿದೆ. 90ರ ದಶಕದಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ ಆಡಿದ್ದ ಪ್ರಮುಖ ಆಟಗಾರರು ಮೂರು ದಿನಗಳ ಕಾಲ ನಡೆಯುವ ಕ್ರಿಕೆಟ್‌ ಸಡಗರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಂಘಟಕರಾದ ಬೆಳ್ಳಿಪ್ಪಾಡಿ ಆಳ್ವಾಸ್‌ ಕ್ರಿಕೆಟ್‌ ಅಕಾಡೆಮಿ‌ (ಬಿಎಸಿಎ) ಹಾಗೂ ಕಟಪಾಡಿ ರಮಾನಂದ ಶಾಂತಿ (ಕೆಆರ್‌ಎಸ್) ಕ್ರಿಕೆಟ್‌ ಅಕಾಡೆಮಿಗಳು ಪ್ರಕಟಣೆಯಲ್ಲಿ ತಿಳಿಸಿವೆ.

ನವೆಂಬರ್‌ 19, 20 ಮತ್ತು 21 ರಂದು ನಿಟ್ಟೆ ಶಿಕ್ಷಣ ಸಂಸ್ಥೆಯಲ್ಲಿರುವ ಬಿ,ಸಿ, ಆಳ್ವಾ ಕ್ರೀಡಾಂಗಣದಲ್ಲಿ ಟೂರ್ನಿ ನಡೆಯಲಿದೆ. ಬಿಎಸಿಎ-ಕೆಆರ್‌ಎಸ್‌ ಇಲೆವೆನ್‌ ಹಾಗೂ ರಾಯಲ್‌ ಇಂಡಿಯನ್ಸ್‌ ತಂಡಗಳು ಮೂರು ದಿನಗಳ ಕಾಲ ಹೋರಾಟ ನಡೆಸಲಿವೆ. ಪುಣೆ, ಕೋಲ್ಕೊತಾ ಮತ್ತು ಚೆನ್ನೈ ಮೂಲದ ಆಟಗಾರರು ಪ್ರವಾಸಿ ತಂಡದಲ್ಲಿರುತ್ತಾರೆ.

ಕ್ರಿಕೆಟ್‌ ಅಭಿವೃದ್ಧಿಯ ಜತೆಯಲ್ಲಿ ದೈಹಿಕ ಕ್ಷಮತೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಈ ಟೂರ್ನಿಯ ಉದ್ದೇಶವಾಗಿದೆ. ಮಂಗಳೂರು ವಿಶ್ವವಿದ್ಯಾನಿಲಯದ ಮಾಜಿ ನಾಯಕರಾದ ವಿಜಯ್‌ ಆಳ್ವಾ ಹಾಗೂ ಉದಯ ಕಟಪಾಡಿ ಅವರು ನಿಟ್ಟೆ ಎಜುಕೇಶನ್‌ ಟ್ರಸ್ಟ್‌ ಮೂಲಕ ಈ ಟೂರ್ನಿಯನ್ನು ಆಯೋಜಿಸಿದ್ದಾರೆ. ನಿಟ್ಟೆ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಗೂ ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ವಿನಯ್‌ ಹೆಗ್ಡೆ ಹಾಗೂ ಪ್ರೊ ವೈಸ್‌ ಚಾನ್ಸಿಲರ್‌ ವಿಶಾಲ್‌ ಹೆಗ್ಡೆ ಅವರು ಈ ಟೂರ್ನಿಗೆ ಅಗತ್ಯ ಇರುವ ಎಲ್ಲ ರೀತಿಯ ನೆರವನ್ನು ನೀಡಲಿದ್ದಾರೆ.

ನಿಟ್ಟೆ ವಿಶ್ವವಿದ್ಯಾಲಯದ ಕುಲಸಚಿವರಾದ ಯೋಗೇಶ್‌ ಹೆಗ್ಡೆ ಮತ್ತು ವಿಶ್ವವಿದ್ಯಾಲಯದ ಎಲ್ಲ ದೈಹಿಕ ಶಿಕ್ಷಣ ನಿರ್ದೇಶಕರು ಈ ಟೂರ್ನಿಯ ಯಶಸ್ಸಿನಲ್ಲಿ ನೆರವಾಗುತ್ತಿದ್ದಾರೆ. ಕ್ರೀಡಾ ಕಾರ್ಯನಿರ್ವಾಹಕ ಶ್ಯಾಮ್ ಸುಂದರ್ ಅವರ ನೆರವು ಇಲ್ಲಿ ಸ್ಮರಣೀಯ.
ನಿಟ್ಟೆ ಎನ್.ಎಂ.ಎ.ಎಂ. ತಾಂತ್ರಿಕ ಶಿಕ್ಷಣ ಕಾಲೇಜಿನ ಪ್ರಾಂಶುಪಾಲರಾದ ಡಾ. ನಿರಂಜನ್ ಎನ್. ಚಿಪ್ಲಾಂಕರ್ ಹಾಗೂ ಅಲ್ಲಿನ ಸಿಬ್ಬಂದಿಗಳು ಈ ಟೂರ್ನಿಯ ನೆರವಿಗಾಗಿ ಶ್ರಮಿಸುತ್ತಿದ್ದಾರೆ.

ಬೆಳ್ಳಿಪ್ಪಾಡಿ ಆಳ್ವಾಸ್‌ ಕ್ರಿಕೆಟ್‌ ಅಕಾಡೆಮಿ (ಬಿಎಸಿಎ) ಯ ಅಧ್ಯಕ್ಷೆ ಅನಿತಾ ಆಳ್ವಾ ಮತ್ತು ಟ್ರೈನರ್‌ ವಿಜಯ ಆಳ್ವಾ, ಕೆಆರ್‌ಎಸ್‌ ಕ್ರಿಕೆಟ್‌ ಅಕಾಡೆಮಿಯ ಉದಯ ಕಟಪಾಡಿ ಅವರು ಟೂರ್ನಿಗೆ ಅಗತ್ಯ ಇರುವ ಎಲ್ಲ ರೀತಿಯ ಸಿದ್ಧತೆಗಳನ್ನು ಸಜ್ಜುಗೊಳಿಸುತ್ತಿದ್ದಾರೆ.

ಪ್ರವಾಸಿ ರಾಯಲ್ ಇಂಡಿಯನ್ಸ್‌ ತಂಡದ ನಾಯಕತ್ವನ್ನು ಮುಂಬೈಯ ಹಿರಿಯ ಕ್ರಿಕೆಟಿಗ, ತರಬೇತುದಾರ ಪ್ರದೀಪ್‌ ಗೋಡ್ಬೊಲೆ ವಹಿಸಲಿದ್ದಾರೆ. ವಿವಿಧ ತಂಡಗಳ ಜತೆಯಲ್ಲಿ 16 ಬಾರಿ ವಿವಿಧ ರಾಷ್ಟ್ರಗಳಲ್ಲಿ ಕ್ರಿಕೆಟ್‌ ಟೂರ್ನಿಗಳನ್ನು ಆಡಿರುವ ಪ್ರದೀಪ್‌ ಅವರು ಈಗಲೂ ತರಬೇತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

Related Articles