Sunday, April 14, 2024

ಜಗತ್ತಿನ ಅತಿ ದೊಡ್ಡ ಕ್ರಿಕೆಟ್ ಅಕಾಡೆಮಿ ಬೆಂಗಳೂರಿನ ಕೆಐಒಸಿ

  • ಸ್ಪೋರ್ಟ್ಸ್ ಮೇಲ್ ವರದಿ
ಕ್ರಿಕೆಟ್ ನಲ್ಲಿ ವೃತ್ತಿಪರತೆಯನ್ನು ಕಂಡುಕೊಳ್ಳಬೇಕಾದರೆ ಉತ್ತಮ ತರಬೇತಿಯ ಅನಿವಾರ್ಯವಿರುತ್ತದೆ. ಒಂದೇ ಅಕಾಡೆಮಿಯಲ್ಲಿ ಸುಮಾರು ೪೦ಕ್ಕೂ ಹೆಚ್ಚು ತರಬೇತುದಾರಿದ್ದರೆ ಆ ಅಕಾಡೆಮಿ ಯಾವ ರೀತಿಯಲ್ಲಿ ತರಬೇತಿ ನೀಡಬಹುದು ಎಂಬ ಅಚ್ಚರಿ ಕಾಡುವುದು ಸಹಜ. ಯುವ ಕ್ರಿಕೆಟಿಗರನ್ನು ಅದ್ಭುತ ರೀತಿಯಲ್ಲಿ ಪಳಗಿಸುವ ಅತ್ಯಾಧುನಿಕ ಕ್ರಿಕೆಟ್ ಅಕಾಡೆಮಿಯೊಂದು ಬೆಂಗಳೂರಿನಲ್ಲಿದೆ. ಅದೇ ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಕ್ರಿಕೆಟ್. ಮಾಜಿ ಕ್ರಿಕೆಟಿಗ ಇರ್ಫಾನ್ ಶೇಟ್ ಹುಟ್ಟುಹಾಕಿದ ಈ ಅಕಾಡೆಮಿ ಕ್ರಿಕೆಟ್ ಜಗತ್ತಿನಲ್ಲೇ ಉತ್ತಮ ಸೌಲಭ್ಯಗಳನ್ನು ಹೊಂದಿರುವ, ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಏಕೈಕ ಅಕಾಡೆಮಿ ಎನಿಸಿದೆ.
ರಾಬಿನ್ ಉತ್ತಪ್ಪ, ಮನೀಶ್ ಪಾಂಡೆ, ಆರ್. ಸಮರ್ಥ್, ಮಾಯಾಂಕ್ ಅಗರ್ವಾಲ್, ದೇವದತ್ತ ಪಡಿಕ್ಕಲ್, ವೇದಾಕೃಷ್ಣಮೂರ್ತಿ, ವನಿತಾ ವಿ.ಆರ್. ಸೇರಿದಂತೆ ಅನೇಕ ಅಂತಾರಾಷ್ಟ್ರೀಯ ಕ್ರಿಕೆಟಿಗರು ಇಲ್ಲಿ ಪಳಗಿದ್ದಾರೆ. ದೇಶದ ವಿವಿಧ ಭಾಗಗಳಿಂದ ಬಂದ ನೂರಾರು ಮಂದಿ ಯುವ ಕ್ರಿಕೆಟಿಗರು ಇಲ್ಲಿ ಪಳಗಿ, ತಮ್ಮ ರಾಜ್ಯದ ತಂಡಗಳಲ್ಲಿ ಆಡುತ್ತಿದ್ದಾರೆ.
ಕ್ರಿಕೆಟ್ ಗುರು ಇರ್ಫಾನ್ ಶೇಟ್
ಚಿಕ್ಕಂದಿನಿಂದಲೂ ಕ್ರಿಕೆಟನ್ನೇ  ಉಸಿರಾಗಿಸಿಕೊಂಡಿದ್ದ ಇರ್ಫಾನ್ ಶೇಟ್, ಶಿವಾಜಿ ನಗರದಲ್ಲಿ ಆರಂಭಿಸಿದ ಈ ಅಕಾಡೆಮಿ ಈಗ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದೆ. ಇಂಗ್ಲೆಂಡ್, ಆಸ್ಟ್ರೇಲಿಯಾ, ಶ್ರೀಲಂಕಾ, ಜಿಂಬಾಬ್ವೆ ಮೊದಲಾದ ರಾಷ್ಟ್ರಗಳಲ್ಲಿ ಈ ಅಕಾಡೆಮಿ ಮೆಚ್ಚುಗೆ ಪಡೆದಿದೆ. ಪ್ರತಿ ವರ್ಷ ಅಕಾಡೆಮಿಯ ಕ್ರಿಕೆಟಿಗರು ಇಂಗ್ಲೆಂಡ್ ಪ್ರವಾಸ ಕೈಗೊಂಡು ಅಂತಾರಾಷ್ಟ್ರೀಯ ಅನುಭವ ಪಡೆಯುತ್ತಾರೆ.
ಇರ್ಫಾನ್ ಶೇಟ್ ದಿನದ 18 ಗಂಟೆ, ವರ್ಷದ 365 ದಿನಗಳನ್ನು ತರಬೇತಿಯಲ್ಲೇ ಕಳೆಯುತ್ತಾರೆ ಎಂದರೆ ತಪ್ಪಾಗಲಾರದು. ಇದಕ್ಕಾಗಿಯೇ ಈ ಅಕಾಡೆಮಿಯು ಹೊನಲು ಬೆಳಕಿನ ವ್ಯವಸ್ಥೆಯನ್ನು ಹೊಂದಿದೆ. ಈಗ ಹೊನಲು  ಪಂದ್ಯಗಳು ನಡೆಯುವುದರಿಂದ ಈ ರೀತಿಯ ತರಬೇತಿ ಹೆಚ್ಚು ಪ್ರಯೋಜನಕಾರಿ. ಇರ್ಫಾನ್ ಕ್ರಿಕೆಟ್ ನ ಕೋಚಿಂಗ್ ನಲ್ಲಿ 1, 2 ಮತ್ತು  3 ಹಂತಗಳನ್ನು ಕಲಿತು ಪಳಗಿದವರು. ಅದೂ ಕೂಡ ಇಂಗ್ಲೆಂಡ್, ಆಸ್ಟ್ರೇಲಿಯಾ ಸೇರಿದಂತೆ  ಬೇರೆ ಬೇರೆ ರಾಷ್ಟ್ರಗಳಲ್ಲಿ ತರಬೇತಿ ಪಡೆದಿರುತ್ತಾರೆ. ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದ ಕೋಚ್ ಅಸೋಸಿಯೇಷನ್ ಅಸೋಸಿಯೇಷನ್ ನ ಸದಸ್ಯರೂ ಆಗಿರುತ್ತಾರೆ. ಈ ರೀತಿಯಲ್ಲಿ ವಿದೇಶಿ ಕ್ರಿಕೆಟ್ ಸಂಸ್ಥೆಗಳ ಕೋಚ್ ಸಂಘಟನೆಯಲ್ಲಿ ಸದಸ್ಯತ್ವ ಹೊಂದಿರುವುದು ವಿರಳ. ಕಳೆದ 30 ವರ್ಷಗಳಿಂದ ಇರ್ಫಾನ್ ಕ್ರಿಕೆಟ್ ಜತೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಎಲ್ಲ ಲೀಗ್ ನಲ್ಲೂ ಆಡಿದ ಅನುಭವ ಇರ್ಫಾನ್ ಅವರಿಗಿದೆ. 1996ರಲ್ಲಿ ಭಾರತ ಕ್ರಿಕೆಟ್ ತಂಡ ಬೆಂಗಳೂರಿನಲ್ಲಿ ವಿಶ್ವ ಕಪ್ ಗಾಗಿ ತರಬೇತಿ ಪಡೆಯುತ್ತಿರುವಾಗ ಇರ್ಫಾನ್ ತಂಡಕ್ಕೆ ನೆರವಾಗಿದ್ದರು. ಇಂಗ್ಲೆಂಡ್ ನ ಮೆಕ್ಲೆಸ್ ಫೀಲ್ಡ್, ಚೆಷೈರ್ ಕೌಂಟಿ ಮತ್ತು ಮ್ಯಾಂಚೆಸ್ಟರ್ ತಂಡಳಿಗೂ ತರಬೇತಿ ನೀಡಿರುತ್ತಾರೆ.
ಬೇರೆ ಬೇರೆ ಕ್ಲಬ್ ಗಳಲ್ಲೂ ಇರ್ಫಾನ್ ಜವಾಬ್ದಾರಿಯುತ ಹುದ್ದೆಯನ್ನು ಹೊಂದಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಕ್ಲಬ್ ಸ್ವಸ್ತಿಕ್ ಯೂನಿಯನ್ ನ ಉಪಾಧ್ಯಕ್ಷ, ಜವಾನ್ಸ್ ಕ್ರಿಕೆಟ್ ಕ್ಲಬ್ ನ ಕಾರ್ಯದರ್ಶಿ, ಮಾಡರ್ನ್ ಕ್ರಿಕೆಟ್ ಕ್ಲಬ್ ನ ಉಪಾಧ್ಯಕ್ಷ, ಕೆಂಬ್ರಿಡ್ಜ್  ಕ್ರಿಕೆಟ್ ಕ್ಲಬ್ ನ ಉಪಾಧ್ಯಕ್ಷ, ಭಾರತೀಯ ಮಹಿಳಾ ಕ್ರಿಕೆಟ್ ಸಂಸ್ಥೆಯ ದಕ್ಷಿಣ ಭಾರತದ ಕಾರ್ಯದರ್ಶಿ ಹಾಗೂ ಸಮನ್ವಯಕಾರರಾಗಿಯೂ ಕಾರ್ಯ ನಿರ್ವಹಿಸಿದ್ದರು. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ವಿವಿಧ ಸಹ ಸಮಿತಿಗಳಲ್ಲಿ ಇರ್ಫಾನ್ ಕಾರ್ಯ ನಿರ್ವಹಿಸಿದ್ದರು.
ಏನೆಲ್ಲಾ ಸೌಲಭ್ಯಗಳಿವೆ?
ವರ್ಷದ 365 ದಿನಗಳಲ್ಲೂ ತರಬೇತಿ ನೀಡಲಾಗುತ್ತಿರುವ ಏಕೈಕ ಕ್ರಿಕೆಟ್ ಅಕಾಡೆಮಿ. ಬೌಲಿಂಗ್, ಬ್ಯಾಟಿಂಗ್, ಫೀಲ್ಡಿಂಗ್, ಫಿಟ್ನೆಸ್ ಮೊದಲಾದ ವಿಭಾಗದಲ್ಲಿ ವಿಶೇಷ ತರಬೇತಿ ನೀಡಲಾಗುವುದು. 40  ತರಬೇತುದಾರರನ್ನು ಒಳಗೊಂಡ ತಂಡ. ವಿಶ್ಲೇಷಣೆಗೆ ಆಧಿನಿಕ ತಂತ್ರಜ್ಞಾನ, ಸಾಫ್ಟ್ ವೇರ್ ಬಳಕೆ.  ತರಬೇತಿ ಸಮಯದಲ್ಲಿ ಅಲ್ಲೇ ಉಳಿದುಕೊಳ್ಳುವವರಿಗೆ ವಸತಿ ಸೌಕರ್ಯವಿದೆ. ಆರು ಬೌಲಿಂಗ್ ಮೆಷಿನ್ ಗಳು, ಸಿಮೆಂಟ್, ಟರ್ಫ್, ಕೃತಕ ಟರ್ಫ್ ಹಾಗೂ ನಾರಿನ ಮ್ಯಾಟ್ ಹೊಂದಿರುವ 30 ನೆಟ್ ಗಳು. ಎರಡು ಒಳಾಂಗಣ ನೆಟ್, ಕ್ವಿನ್ಟಿಕ್  ವೀಡಿಯೊ ಅನಾಲಿಸಿಸ್ ಸಾಫ್ಟ್ ವೇರ್ ಮತ್ತು ಡಿಜಿಟಲ್  ಸಿಸ್ಟಮ್, ಪಿಚ್ ವಿಸನ್ ವಿಡಿಯೋ ಅನಾಲಿಸಿಸ್ ಸಿಸ್ಟಮ್, ಸ್ಪೀಡ್ ಚೆಕ್ ರಾಡಾರ್, ಹೊನಲು ಬೆಳಕಿನ ತರಬೇತಿ ವ್ಯವಸ್ಥೆ, ಸಾರಿಗೆ ಸೌಲಭ್ಯ, ಫಿಟ್ನೆಸ್ ಟ್ರೈನರ್ಸ್ , ಜಿಮ್ ಸೌಲಭ್ಯ. ನಿತ್ಯ ಯೋಗ ತರಬೇತಿ, ಫಿಸಿಯೋಥೆರಪಿ ಮತ್ತು ಕ್ರೀಡಾ ಮನಃಶಾಸ್ತ್ರದ ತರಗತಿಗಳು,  10, 13, 15, 17, 19 ವರ್ಷದ  ಮತ್ತು ಹಿರಿಯ ಆಟಗಾರರಿಗೆ ಅಖಿಲ ಭಾರತ ಟೂರ್ನಿಯ ಅನುಭವ, ಬದ್ಧತೆಯಿಂದ ಕೂಡಿದ ಅನುಭವಿ ತರಬೇತುದಾರರು. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಮೂಲದ ತರಬೇತುದಾರರಿಂದ ವಿಶೇಷ ತರಬೇತಿ. ಆಧಿನಿಕ ತರಬೇತಿ ಸಲಕರಣೆಗಳ ಬಳಕೆ, ಆಡಿಯೋ ವಿಶುಯಲ್ ತರಬೇತಿ ಸೌಲಭ್ಯ. ಭಾರತ ತಂಡದ ಪ್ರಮುಖ ಆಟಗಾರರನ್ನು ಕರೆಸಿ ಯುವ ಕ್ರಿಕೆಟಿಗರಲ್ಲಿ ಸ್ಪೂರ್ತಿ ತುಂಬುವುದು. ಹೀಗೆ KIOC ಯಲ್ಲಿ ಜಗತ್ತಿನ ಯಾವುದೇ ಅಡಾಡೆಮಿಯಲ್ಲಿ ಸಿಗದ ವಿಶೇಷ ಸೌಲಭ್ಯಗಳು ಸಿಗುತ್ತಿದ್ದು, ಕ್ರಿಕೆಟ್ ನಲ್ಲಿ ಹೊಸ ಬದುಕನ್ನು ರೂಪಿಸಿಕೊಳ್ಳುವವರ ಆಯ್ಕೆಗೆ ಇದು ಉತ್ತಮ.
ಹೆಚ್ಚಿನ ವಿವರಗಳಿಗೆ  www.koic.net ಸಂಪರ್ಕಿಸಿರಿ.

Related Articles