Thursday, March 28, 2024

ಹಾಕಿ ಅಂಗಣದಲ್ಲಿ ಏರ್‌ಕ್ರಾಫ್ಟ್ ಎಂಜಿನಿಯರ್ ಕನ್ನಡಿಗ ರಘುಪ್ರಸಾದ್

ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್

ಬೆಂಗಳೂರಿನ ರಘುಪ್ರಸಾದ್ ಆರ್.ವಿ. ಏರ್‌ಕ್ರಾಫ್ಟ್ ಮೇಂಟೆನೆನ್ಸ್ ಎಂಜಿನಿಯರ್ ಆಗಿರುತ್ತಿದ್ದರೆ ಅವರು ಉತ್ತಮ ಕೆಲಸಗಾರನಾಗಿ ಯಾರ ಗಮನಕ್ಕೂ ಬಾರದೆ ಇರುತ್ತಿದ್ದರೋ ಏನೋ. ಆದರೆ ಹಾಕಿ ಅಂಗಣದಲ್ಲಿ ಅಂಪೈರ್ ಆದ ಕಾರಣ ಇಂದು ಜಗತ್ತು ಅವರನ್ನು ಗುರುತಿಸುತ್ತಿದೆ.
 ಲಂಡನ್ ಒಲಿಂಪಿಕ್ಸ್‌ನಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದ ಕನ್ನಡಿಗ ರಘುಪ್ರಸಾದ್ 2020ರ ಟೋಕಿಯೊ ಒಲಿಂಪಿಕ್ಸ್‌ಗೆ ಮತ್ತೆ ಅಂಪೈರ್ ಆಗಿ ಕಾರ್ಯನಿರ್ವಹಿಸಲು ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್ ಇವರನ್ನು ಆಯ್ಕೆ ಮಾಡಿದೆ.
ಏರ್‌ಕ್ರಾಫ್ಟ್  ಮೇಂಟೆನೆನ್ಸ್ ಎಂಜಿನಿಯರ್ ಆಗಿದ್ದರೂ, ರಘುಪ್ರಸಾದ್ ಆಯ್ಕೆ ಮಾಡಿಕೊಂಡಿದ್ದು ಹಾಕಿ ಅಂಗಣವನ್ನು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾಕಿ ಆಡುವ ಅವಕಾಶ ಸಿಗದಿದ್ದರೂ, ಇದುವರೆಗೂ 150 ಅಂತಾರಾಷ್ಟ್ರೀಯ ಹಾಕಿ ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ರಘು ಅವರ ಸಾಧನೆಯನ್ನು ಮೆಚ್ಚಿ ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್ ಎರಡನೇ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಕಾರ್ಯನಿರ್ವಹಿಸುವ ಅವಕಾಶ ಕಲ್ಪಿಸಿದೆ. ಒಲಿಂಪಿಕ್ಸ್‌ನಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ ಏಕೈಕ ಕನ್ನಡಿಗ  ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ರಘುಪ್ರಸಾದ್ ಅವರೊಂದಿಗೆ ‘
ಸ್ಪೋರ್ಟ್ಸ್ ಮೇಲ್  ನಡೆಸಿದ ಮಾತುಕತೆಯ ಪ್ರಮುಖ ಅಂಶ ಇಲ್ಲಿದೆ.
ಬಣ್ಣಿಸಲಸದಳ

ಈ ಖುಷಿಯನ್ನು ಬಣ್ಣಿನಸಲು ನನ್ನಲ್ಲಿ ಪದಗಳೇಇಲ್ಲ, ಏಕೆಂದರೆ ಇದು ನನ್ನ ವೃತ್ತಿ ಬದುಕಿನ ಅಪೂರ್ವ ಕ್ಷಣ. ಹಿಂದೆ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಾರ್ಯನಿರ್ವಹಿಸಿದ್ದೆ, ಆದರೆ ರಿಯೋದಲ್ಲಿ ಅವಕಾಶ ತಪ್ಪಿಹೋಯಿತು, ಅದಕ್ಕಾಗಿ ಕಠಿಣ ಶ್ರಮವಹಿಸಿದ್ದೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿಕ್ಕ ಅವಕಾಶವನ್ನು ಉತ್ತಮ ರೀತಿಯಲ್ಲಿ ಸದುಪಯೋಗಪಡಿಸಿಕೊಂಡು, ನಿಖರವಾದ ತೀರ್ಪು ನೀಡಲು ಶ್ರಮಿಸಿದ್ದೆ, ಈ ಎಲ್ಲದುದರ ಪರಿಣಾಮ ಟೋಕಿಯೊಗೆ ಅವಕಾಶ ಸಿಗುವಂತೆ ಮಾಡಿತು, ಎಂದು ರಘುಪ್ರಸಾದ್ ಹೇಳಿದರು.
ಹಣಕ್ಕಿಂತ, ಗೌರವ ಮುಖ್ಯ

ಹಾಕಿ ಅಂಪೈರ್ ಗಳಿಗೆ ಕ್ರಿಕೆಟ್ ಅಂಪೈರ್‌ಗಳಂತೆ ಉತ್ತಮ ಸಂ ಭಾವನೆ ಸಿಗುತ್ತದೆ ಎಂದು ತಿಳಿಯುವುದು ಸೂಕ್ತವಲ್ಲ. ಕ್ರಿಕೆಟ್ ಜತೆ ಹೋಲಿಕೆ ಮಾಡುವುದು ಕೂಡ ತಪ್ಪು. ಆದರೆ ಇತ್ತೀಚಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಹಾಕಿ ಸಂಸ್ಥೆ ಉತ್ತಮ ರೀತಿಯಲ್ಲಿ ಸಂ ಭಾವನೆ ನೀಡುತ್ತಿದೆ, ಹಾಕಿ ಲೀಗ್ ಗಳಲ್ಲೂ ಉತ್ತಮ ಸಂ ಭಾವನೆ ನೀಡಲಾಗುತ್ತಿದೆ, ಈ ಅಂಪೈರಿಂಗ್ ಎನ್ನುವುದು ಒಂದು ಗೌರವದ ಹುದ್ದೆ, ನಾವೆಲ್ಲರೂ ಅದನ್ನು ಅತ್ಯಂತ ಗೌರವದಿಂದ ನಿಭಾಯಿಸುತ್ತೇವೆ, ಅಂತಾರಾಷ್ಟ್ರೀಯ ಅಂಗಣದಲ್ಲಿ ಭಾರತ ದೇಶವನ್ನು ಪ್ರತಿನಿಧಿಸುವುದೇ ಹೆಮ್ಮೆಯ ಸಂಗತಿ, ಎನ್ನುತ್ತಾರೆ ರಘುಪ್ರಸಾದ್.
ಹೆಚ್ಚಿನ ಕನ್ನಡಿಗರ ನಿರೀಕ್ಷೆ
ಈ ಬಾರಿಯ ಒಲಿಂಪಿಕ್ಸ್ ಅರ್ಹತಾ ಪಂದ್ಯಗಳನ್ನಾಡಲು ಆಯ್ಕೆಯಾಗಿರುವ ಭಾರತ ತಂಡದಲ್ಲಿ ಎಸ್.ವಿ ಸುನಿಲ್ ಏಕೈಕ ಕನ್ನಡಿಗ, ಇತ್ತೀಚಿನ ವರ್ಷಗಳಲ್ಲಿ ರಾಷ್ಟ್ರೀಯ ತಂಡದಲ್ಲಿ ಕನ್ನಡಿಗರ ಸಂಖ್ಯೆ ಕಡಿಮೆಯಾಗುತ್ತಿದೆ, ಈ ಬಗ್ಗೆ ಪ್ರತಿಕ್ರಿಯೆ ನೀಡಿದ ರಘುಪ್ರಸಾದ್, ಕರ್ನಾಟಕದಲ್ಲಿ ಹಾಕಿ ಶ್ರೀಮಂತವಾಗಿದೆ, ಪ್ರತಿಯೊಂದು ಸಂಘ ಸಂಸ್ಥೆಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ, ಆದರೆ ರಾಷ್ಟ್ರೀಯ ತಂಡದಲ್ಲಿ ಕನ್ನಡಿಗರ  ಪ್ರಾತಿನಿಧ್ಯ ಹಿಂದಿಗಿಂತ ಕಡಿಮೆಯಾಗುತ್ತಿದೆ, ಇದು ಬೇಸರದ ಸಂಗತಿ, ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು ರಾಷ್ಟ್ರೀಯ ತಂಡದಲ್ಲಿ ಕಾಣಿಸಿಕೊಳ್ಳಬಹುದು ಎಂಬ ನಿರೀಕ್ಷೆ ಇದೆ ಎಂದು ಹೇಳಿದರು.
ತಂತ್ರಜ್ಞಾನದ ಸವಾಲು
ಈಗ ಅಂಪೈರಿಂಗ್‌ನಲ್ಲಿ ಸಾಕಷ್ಟು ತಂತ್ರಜ್ಞಾನ ಅಳವಡಿಕೆಯಾಗಿದೆ. ತಪ್ಪು ನಿರ್ಣಯಗಳಿಗೆ ಅವಕಾಶ ಕಡಿಮೆ ಇದೆ. ಹಾಗೆ ಒಂದು ವೇಳೆ ತಪ್ಪು ನಿರ್ಣಯ ನೀಡಿದರೂ ರಿವ್ಯೆವ್‌ಗೆ ಗುರಿಪಡಿಸಲಾಗುತ್ತದೆ. ಆದ್ದರಿಂದ ಅತ್ಯಂತ ಎಚ್ಚರಿಕೆಯಿಂದ ತೀರ್ಪು ನೀಡಬೇಕಾಗುತ್ತದೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದವರನ್ನು ಮಾತ್ರ ಒಲಿಂಪಿಕ್ಸ್‌ಗೆ ಆಯ್ಕೆ ಮಾಡುತ್ತಾರೆ, ರೋಚಕ ಹಂತದಲ್ಲಿ ನೀಡುವ ತೀರ್ಪನ್ನು ಆಟಗಾರರು ಹೆಚ್ಚಿನ ಸಂದರ್ಭ ಗಳಲ್ಲಿ ವಿರೋಧಿಸುತ್ತಾರೆ, ಆದರೆ ಈಗ ಚೆಂಡಿನ ಪ್ರತಿಯೊಂದು ಹಂತದ ಚಲನವನ್ನು ಹತ್ತಿರದಿಂದ ನೋಡುವ ತಂತ್ರಜ್ಞಾನ ಹಾಕ್ ಐ ಇರುವುದದರಿಂದ ಪ್ರಮಾದಗಳಿಗೆ ಅವಕಾಶ ಕಡಿಮೆ ಇದೆ, ಎಂದು ರಘುಪ್ರಸಾದ್ ಅಂಪೈರಿಂಗ್‌ನಲ್ಲಿ ನ ಸವಾಲುಗಳ ಬಗ್ಗೆ ನುಡಿದರು.
ಇದೇ ವೇಳೆ ರಘುಪ್ರಸಾದ್ ಭಾರತ ಹಾಕಿ ತಂಡ ಈ ಬಾರಿ ಲಂಡನ್ ಒಲಿಂಪಿಕ್ಸ್‌ಗೆ ಯಾವುದೇ ಅಡ್ಡಿ ಆತಂಕವಿಲ್ಲದೆ ಅರ್ಹತೆ ಪಡೆಯುತ್ತದೆ ಎಂದು ಅತ್ಯಂತ ಆತ್ಮವಿಶ್ವಾಸದಲ್ಲಿ ನುಡಿದರು. ತಮ್ಮ ಸಾಧನೆಯಲ್ಲಿ ಪತ್ನಿ ಶೋಭ ಹಾಗೂ ಮಗ ಮನ್ವಿತ್ ಗೌಡ ಅವರ ಪ್ರೋತ್ಸಾಹ ಯಾವಾಗಲೂ ಇದ್ದೇ ಇದೆ ಎನ್ನುತ್ತಾರೆ ರಘುಪ್ರಸಾದ್.

Related Articles