Saturday, October 12, 2024

ವಾಲಿಬಾಲ್ ಮೂಲಕವೇ ಸೇನೆ ಸೇರಿದ ಕಟ್ಕೆರೆಯ ಅವಳಿ ಸಹೋದರರು!!

ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್

ವಾಲಿಬಾಲ್ ಕ್ರೀಡೆಯನನ್ನೇ ತಮ್ಮ ಉಸಿರಾಗಿಸಿಕೊಂಡ ಕುಂದಾಪುರ ತಾಲೂಕಿನ ಕೋಟೇಶ್ವರ ಸಮೀಪದ ಕಟ್ಕೆರೆಯ ಅವಳಿ ಸಹೋದರರು ಸೇನೆ ಸೇರಿದ ಕತೆ ಅತ್ಯಂತ ಕುತೂಹಲಕಾರಿ. ಇದು ಭಾರತೀಯ ಸೇನೆಯಲ್ಲಿ ಮತ್ತು ಭಾರತದ ಕ್ರೀಡಾ ಇತಿಹಾದಲ್ಲೇ ಒಂದು ಅಪೂರ್ವ ಸನ್ನಿವೇಶಗಳಲ್ಲಿ ಒಂದು.

ರಮೇಶ್ ಆಚಾರ್ಯ ಮತ್ತು ಶ್ಯಾಮಲ ದಂಪತಿ ಅವಳಿ ಮಕ್ಕಳಾದ ಚಂದನ್ ಆಚಾರ್ಯ ಮತ್ತು ಚೇತನ್ ಆಚಾರ್ಯ ಕರ್ನಾಟಕದ ಉದಯೋನ್ಮುಖ ವಾಲಿಬಾಲ್ ಆಟಗಾರರು. ಚಿಕ್ಕ ವಯಸ್ಸಿನಲ್ಲಿಯೇ ರಾಜ್ಯ ಮತ್ತು ರಾಷ್ಟ್ರ ಮಟ್ಟದ ವಾಲಿಬಾಲ್ ಪಂದ್ಯಗಳಲ್ಲಿ ಮಿಂಚಿ ಈಗ ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ (ಎಂಇಜಿ)ಯಲ್ಲಿ ಯೋಧರಾಗಿ ಸೇವೆಗೆ ಸಜ್ಜಾಗಿದ್ದಾರೆ.

ಹುಟ್ಟುವಾಗ ಚೇತನ್ ಮತ್ತು ಚಂದನ್ ನಡುವೆ 5-6 ನಿಮಿಷಗಳ ಅಂತರ, ಎತ್ತರದಲ್ಲೂ ಸಮಾನ, ತೂಕದಲ್ಲು ಸಮಾನ, ಪರೀಕ್ಷೆಯಲ್ಲೂ ಇಬ್ಬರಿಗೂ 90ಕ್ಕೂ ಹೆಚ್ಚು ಅಂಕಗಳು, ವಾಲಿಬಾಲ್ ನಲ್ಲೂ ಒಬ್ಬರು ಸೆಟ್ಟರ್ ಇನ್ನೊಬ್ಬರು ಅಟ್ಯಾಕರ್ ಮತ್ತು ಆಲ್ನೌಂಡರ್, ಇಬ್ಬರೂ ಮಂಗಳೂರು ವಿಶ್ವವಿದ್ಯಾನಿಲಯದ ವಾಲಿಬಾಲ್ ಆಟಗಾರರು, ಇಬ್ಬರೂ ಕೋಟ ವಿವೇಕ ಕಾಲೇಜಿನ ಪಿಯು ವಿದ್ಯಾರ್ಥಿಗಳು, ಇಬ್ಬರೂ ಕುಂದಾಪು ಬಸ್ರೂರು  ಕಾಲೇಜಿನ ವಾಲಿಬಾಲ್ ತಂಡದ ಆಟಗಾರರು, ಇಬ್ಬರಿಗೂ ಒಂದಾಗಿಯೇ ಇರಬೇಕೆಂಬ ಹಂಬಲ. ಹಾಗೆಯೇ ಇಬ್ಬರೂ ಒಂದಾಗಿಯೇ ಒಂದೇ ದಿನ, ಒಂದೇ ಗ್ರೂಪ್ ನ ಸೇನಾ ವಿಭಾಗ ಸೇರಿದರು. ಈ ಭಾಗ್ಯ ಕ್ರೀಡಾ ಸಾಧಕರಿಗೆ ಸಿಗುವುದು ಅಪೂರ್ವ.

ಬಡ ಕುಟುಂಬದಲ್ಲಿ ಅರಳಿದ ಶ್ರೀಮಂತ ಪ್ರತಿಭೆ

ರಮೇಶ್ ಆಚಾರ್ಯ ಮತ್ತು ಶ್ಯಾಮಲ ದಂಪತಿಯರದ್ದು ಬಡ ಕುಟುಂಬ. ಕಾರ್ಪೆಂಟರ್ ಕೆಲಸ ಮಾಡುತ್ತಿದ್ದ ರಮೇಶ್ ಆಚಾರ್ಯ ಅವರು ಎರಡು ವರ್ಷಗಳ ಹಿಂದೆ ಸಂಭವಿಸಿದ ಅಪಘಾತದಲ್ಲಿ ಕಾಲುನೋವಿಗೆ ತುತ್ತಾಗಿ ಮನೆಯಲ್ಲೇ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಆದರೆ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಅವರು ಎಲ್ಲಿಯೂ ಅಡ್ಡಿ ಮಾಡಲಿಲ್ಲ. ಚೇತನ್ ಮತ್ತು ಚಂದನ್ ತಮ್ಮ ಮನೆಯ ಪರಿಸ್ಥಿತಿಯನ್ನು ಅರಿತು ಓದಿನ ಜತೆಯಲ್ಲೇ ವಾಲಿಬಾಲ್ ಆಟದಲ್ಲಿ ಪಳಗಿದರು. ನಿತ್ಯವೂ ಆನೆಗುಡ್ಡೆ ದೇವರಿಗೆ ಪೂಜೆ ಸಲ್ಲಿಸಿ ತಮ್ಮ ದೈನಂದಿನ ಕೆಲಸ ಆರಂಭಿಸುತ್ತಿದ್ದರು. “ಆ ದೇವರ ಆಶೀರ್ವಾದದಿಂದಲೇ ನಾವಿಬ್ಬರೂ ಒಟ್ಟಿಗೇ ಕೆಲಸ ಸೇರಿದೆವು” ಎನ್ನುತ್ತಾರೆ ಚೇತನ್.

ವಾಲಿಬಾಲ್ ಪರಿಚಯಿಸಿದ ಗಣೇಶ್ ಸರ್

ಮೇಲ್ ಕಟ್ಕೆರೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದ ಚೇತನ್ ಹಾಗೂ ಚಂದನ್ ಅವರಿಗೆ ಹೈಸ್ಕೂಲ್ ಶಿಕ್ಷಣಕ್ಕಾಗಿ ಕೋಟ ವಿವೇಕ ವಿದ್ಯಾಸಂಸ್ಥೆಯನ್ನು ಸೇರಿದರು. ಪಿಯುಸಿಯನ್ನು ಅಲ್ಲಿಯೇ ಮುಗಿಸಿದರು. ದೈಹಿಕ ಶಿಕ್ಷಕರಾದ ಗಣೇಶ್ ಅವರು ಈ ಅವಳಿ ಸಹೋದರರಲ್ಲಿರುವ ವಾಲಿಬಾಲ್ ಪ್ರತಿಭೆಯನ್ನು ಗುರುತಿಸಿದರು. ಇದಕ್ಕೂ ಮುನ್ನವೇ ಚೇತನ್ ಮತ್ತು ಚಂದನ್ ಕಟ್ಕೆರೆಯ ಯೂತ್ ಕ್ಲಬ್ ನಲ್ಲಿ ಚಿಕ್ಕಂದಿನಿಂದಲೇ ವಾಲಿಬಾಲ್ ಆಡುವುದನ್ನು ಕಲಿತಿದ್ದರು. ವಿವೇಕ ಪ್ರೌಢ ಶಾಲೆಯಲ್ಲಿ ಅವರ ಪ್ರತಿಭೆಗೆ ತಕ್ಕ ವೇದಿಕೆ ಸಿಕ್ಕಿತು. ಪಿಯುಸಿಯಲ್ಲಿ ಇರುವಾಗಲೇ ಈ ಸಹೋದರರು ಸುತ್ತಮುತ್ತ ನಡೆಯುವ ವಾಲಿಬಾಲ್ ಟೂರ್ನಿಗಳಲ್ಲಿ ಪಾಲ್ಗೊಂಡು ತಮ್ಮ ಆಟವನ್ನು ಉತ್ತಮಪಡಿಸಿಕೊಂಡರು. ತಮ್ಮದೇ ಆದ ತಂಡವನ್ನು ಕಟ್ಟಿಕೊಂಡು ಬಲಿಷ್ಠ ಅಟಗಾರರೆನಿಸಿದರು. ಕುಂದಾಪುರು ಮತ್ತು ಉಡುಪಿ ತಾಲೂಕಿನಲ್ಲಿ ನಡೆಯುವ ಪಂದ್ಯಗಳಲ್ಲಿ ಈ ಅವಳಿ ಸಹೋದರರು ಆಕರ್ಷಣೆಯ ಕೇಂದ್ರವಾದರು. ಜನ ಇವರ ಆಟವನ್ನು ನೋಡುವುದಕ್ಕಾಗಿಯೇ ಕುತೂಹಲದಿಂದ ಸೇರುತ್ತಿದ್ದರು. ಎಸ್ ಎಸ್ ಎಲ್ ಸಿಯಲ್ಲಿ ಇವರು ಗಳಿಸಿದ ಅಂಕ 83% ಮತ್ತು 81%, ಪಿಯುಸಿಯಲ್ಲಿ 96% ಮತ್ತು 94%. ಹೀಗೆ ಇಬ್ಬರೂ ಸಹೋದರರು ಎಲ್ಲ ವಿಷಯದಲ್ಲೂ ಸಮಬಲ ಸಾಧಿಸುತ್ತಿದ್ದರು. ನಂತರ ಕ್ರೀಡಾ ಹಾಸ್ಟೆಲ್ ಸೇರಲು ಹೋಗಿ ಅಲ್ಲಿಯ ಪರಿಸರ ಹೊಂದಿಕೆಯಾಗದ ಕಾರಣ ಶಾರದಾ ಕಾಲೇಜು ಬಸ್ರೂರು ಇಲ್ಲಿ ಪ್ರವೇಶ ಪಡೆದರು.

ಸೂರಜ್ ಶೆಟ್ಟರಲ್ಲಿ ಪಳಗಿದ ಅವಳಿ ಆಟಗಾರರು

ಕುಂದಾಪುರದ ಬಸ್ರೂರಿನ ಶಾರದಾ ಕಾಲೇಜಿನಲ್ಲಿ ಚೇತನ್ ಮತ್ತು ಚಂದನ್ ಅವರ ವಾಲಿಬಾಲ್ ಪ್ರತಿಭೆಗೆ ಉತ್ತಮ ರೀತಿಯಲ್ಲಿ ಅವಕಾಶ ಸಿಕ್ಕಿತು. ಇದಕ್ಕೆ ಮುಖ್ಯ ಕಾರಣ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಸೂರಜ್ ಶೆಟ್ಟಿ. ಹಲವಾರು ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿದ ಸೂರಜ್ ಶೆಟ್ಟಿ ಅವರು ಈ ಅವಳಿ ಸಹೋದರರ ಆಟಕ್ಕೆ ಹೊಸ ತಿರುವು ನೀಡಿದರು. ಪ್ರತಿಯೊಂದು ಪಂದ್ಯದಲ್ಲೂ ಅವಕಾಶ ಕಲ್ಪಿಸಿದರು. ಪರಿಣಾಮ ಎರಡನೇ ವರ್ಷದ ಬಿಕಾಂ ಓದುತ್ತಿರುವಾಗಲೇ ಕ್ರೀಡಾ ಕೋಟಾದಡಿ ಸೇನೆಗೆ ಆಯ್ಕೆಯಾದರು. ಕಳೆದ ವರ್ಷ ಕೊರೋನಾದ ಕಾರಣ ತರಗತಿಗಳು ನಡೆಯುತ್ತಿರಲಿಲ್ಲ. ಇದರಿಂದಾಗಿ ಚೇತನ್ ಮತ್ತು ಚಂದನ್ ಬಿಕಾಂ ಎರಡನೇ ವರ್ಷ ಪೂರ್ಣಗೊಳಿಸಿ ಸೇನೆಯ ಸಮವಸ್ತ್ರ ಧರಿಸಿದರು.

ಸೇನಾ ಆಯ್ಕೆಯಲ್ಲಿ ತಮ್ಮನ ಬಿಡದ ಅಣ್ಣ!!!

ಚೇತನ್ ತಮ್ಮ…..ಚಂದನ್ ಅಣ್ಣ….ಕೇವಲ 5-6 ನಿಮಿಷಗಳ ಅಂತರ ಅಷ್ಟೆ. ಆದರೆ ಎಲ್ಲದರಲ್ಲೂ ಇವರಿಬ್ಬರು ಸಮಾನರು. ಪ್ರತಿಯೊಂದು ವಿಷಯದಲ್ಲೂ ಇಬ್ಬರೂ ಒಟ್ಟಿಗೆ ಹೆಜ್ಜೆ ಹಾಕುತ್ತಾರೆ. ಒಮ್ಮತದ ತೀರ್ಮಾನ ಕೈಗೊಳ್ಳುತ್ತಾರೆ, ಒಟ್ಟಿಗೇ ಕೆಲಸ ಮಾಡಬೇಕೆಂಬ ಹಂಬಲ. ದೇವರ ಇಚ್ಛೆಯೂ ಅದೇ ಆಗಿತ್ತು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಮಂಗಳೂರು ವಿಶ್ವವಿದ್ಯಾನಿಲಯ ದಕ್ಷಿಣ ವಲಯದ ವಾಲಿಬಾಲ್ ಚಾಂಪಿಯನ್ಷಿಪ್ ನಲ್ಲಿ ಚಿನ್ನದ ಪದಕ ಗೆದ್ದಿತ್ತು. ಈ ತಂಡದ ಆಯ್ಕೆ ಟ್ರಯಲ್ಸ್ ನಲ್ಲಿ ಪಾಲ್ಗೊಂಡಿದ್ದ ಚೇತನ್ ಕಾಲು ನೋವಿನ ಕಾರಣ ಮಧ್ಯದಲ್ಲೇ ಕ್ಯಾಂಪ್ ತೊರೆದು ಬಂದಿದ್ದರು. ಮಂಗಳೂರು ವಿಶ್ವವಿದ್ಯಾನಿಲಯ ದಕ್ಷಿಣ ವಲಯದಲ್ಲಿ ಚಿನ್ನದ ಪದಕ ಗೆದ್ದಿತ್ತು. ಇದೇ ವೇಳೆ ಸೇನೆ ಆಯ್ಕೆ ನಡೆಸಲು ಸುಬೇದಾರ್ ಜೂಬಿ ಜೋಸ್ ಆಗಮಿಸಿದ್ದರು. ಅವರು ಮಂಗಳೂರು ವಿಶ್ವವಿದ್ಯಾನಿಲಯದಿಂದ ಆಟಗಾರರನ್ನು ಆಯ್ಕೆ ಮಾಡುವವರಿದ್ದರು. ಆಯ್ಕೆ ಟ್ರಯಲ್ಸ್ ವೇಳೆ ಚಂದನ್ ಮಾತ್ರ ಇದ್ದರು. ಗಾಯದ ಸಮಸ್ಯೆ ಕಾರಣ ಚೇತನ್ ಇದ್ದಿರಲಿಲ್ಲ. ಆದರೆ ತಮ್ಮನನ್ನು ಬಿಟ್ಟು ಒಬ್ಬನೇ ಸೇನೆ ಸೇರುವ ಮನಸ್ಸು ಚಂದನ್ ಗೆ ಇದ್ದಂತಿಲ್ಲ. ಈ ಸಂದರ್ಭದಲ್ಲಿ ಚಂದನ್ ಜೂಬಿ ಜೋಸ್ ಅವರಲ್ಲಿ ಒಂದು ವಿನಂತಿ ಮಾಡಿಕೊಂಡರು. “ನನ್ನ ತಮ್ಮ ಈ ಚಿನ್ನ ಗೆದ್ದ ತಂಡದಲ್ಲಿ ಇರಬೇಕಾಗಿತ್ತು, ಅವನೂ ನನ್ನಂತೆಯೇ ಉತ್ತಮ ಆಟಗಾರ. ನಾವಿಬ್ಬರೂ ಅವಳಿ ಸಹೋದರರು, ಆತನನ್ನು ಆಯ್ಕೆ ಟ್ರಯಲ್ಸ್ ಗೆ ಕರೆಯಬಹುದೇ?” ಎಂದು ವಿನಂತಿಸಿದ. ಚಂದನ್ ಅವರ ಆಟಕ್ಕೆ ಮನಸೋತಿದ್ದ ಜೂಬಿ ಜೋಸ್, “ನಿನ್ನ ಆಟ ಖುಷಿ ಕೊಟ್ಟಿದೆ, ನೋಡುವ ನಿನ್ನಂತೆಯೇ ಆಡಿದರೆ ಆಯ್ಕೆ ಆಗಬಹುದು, ಯಾವುದಕ್ಕೂ ಕರೆಸಿ,” ಎಂದು ಹೇಳಿದರು. ಮನೆಯಿಂದ ಕ್ಯಾಂಪ್ ಸೇರಿಕೊಂಡ ಚೇತನ್ ನೋವೆಲ್ಲ ಮರೆತು ಉತ್ತಮ ಪ್ರದರ್ಶನ ತೋರಿದರು. ಆಟಕ್ಕೆ ಮನಸೋತ ಜೂಬಿ ಜೋಸ್ ಖುಷಿಯಲ್ಲಿ ಚಂದನ್ ಅವರನ್ನು ಆಯ್ಕೆ ಮಾಡಿದರು. ಇದರೊಂದಿಗೆ ಎಂಇಜಿ ಕ್ರೀಡಾ ಇತಿಹಾಸದಲ್ಲೇ ಹೊಸ ಅಧ್ಯಾಯ ಆರಂಭವಾಯಿತು. ಕರ್ನಾಟಕದಿಂದ ಆಯ್ಕೆಯಾದ ಐವರು ಅಟಗಾರರಲ್ಲಿ ಕಟ್ಕೆರೆಯ ಈ ಆಚಾರ್ಯ ಸಹೋದರೂ ಸೇರಿದ್ದರು. ಅಣ್ಣನ ಕಾಳಜಿಯಿಂದಾಗಿ ತಮ್ಮನೂ ಸೇನೆ ಸೇರುವಂತಾಯಿತು.

ಚಂದದ ಊರಿನ ಚಿನ್ನದ ಮಕ್ಕಳು

ಚೇತನ್ ಆವರು ಮಧ್ಯಪ್ರದೇಶದಲ್ಲಿ ನಡೆದ 21 ವರ್ಷ ವಯೋಮಿತಿಯ ಯೂತ್ ನ್ಯಾಷನಲ್ಸ್ ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು, ಅಲ್ಲಿ ತಂಡ ಕಂಚಿನ ಪದಕ ಗೆದ್ದಿತ್ತು, ಗುಜರಾತ್ ನಲ್ಲಿ ನಡೆದ ರಾಷ್ಟ್ರೀಯ ಪೈಕಾ ವಾಲಿಬಾಲ್ ಚಾಂಪಿಯನ್ಷಿಪ್ ನಲ್ಲಿ ಚೇತನ್ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದು ತಂಡ ಚಿನ್ನದ ಪದಕ ಗೆದ್ದಿತ್ತು. ಚಂದನ್ ಮತ್ತು ಚೇತನ್ ಮಂಗಳೂರು ವಿವಿ ತಂಡದ ಭರವಸೆಯ ಆಟಗಾರರು, ಗಾಯದ ಸಮಸ್ಯೆಯ ಕಾರಣ ಚೇತನ್ ಕ್ಯಾಂಪ್ ನಲ್ಲಿ ಪಾಲ್ಗೊಂಡಿರಲಿಲ್ಲ. ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದ ದಕ್ಷಿಣ ವಲಯ ಚಾಂಪಿಯನ್ಷಿಪ್ ನಲ್ಲಿ ಮಂಗಳೂರು ತಂಡವನ್ನು ಪ್ರತಿನಿಧಿಸಿ ದ್ದ ಚಂದನ್  ಮೊದಲ ಬಾರಿಗೆ ತಂಡ ಚಿನ್ನದ ಪದಕ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅಲ್ಲದೆ ಆಲ್ ಇಂಡಿಯಾ ಚಾಂಪಿಯನ್ಷಿಪ್ ನಲ್ಲಿ ಮಂಗಳೂರು ವಿವಿ ಯನ್ನು ಪ್ರತಿನಿಧಿಸಿದ್ದರು.

ನಮಗೆ ದೇವರ ಆಶೀರ್ವಾದವಿದೆ

“ನಾವು ನಿತ್ಯವೂ ಆನೆಗುಡ್ಡೆ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಹೋಗಿ, ದೇವರ ದರ್ಶನ ಮಾಡಿ ಮುಂದಿನ ಕೆಲಸ ಮಾಡುತ್ತೇವೆ. ಓದಿನ ಜತೆಯಲ್ಲಿ ಕ್ರೀಡೆಯನ್ನು ಮೈಗೂಡಿಸಿಕೊಂಡಿದ್ದು ಒಳ್ಳೆಯದಾಯಿತು. ದೇಶ ಸೇವೆಯ ಜತೆಯಲ್ಲಿ ಕ್ರೀಡೆಯಲ್ಲಿ ಸಾಧನೆ ಮಾಡುವ ಅವಕಾಶ ಸಿಕ್ಕಿದೆ. ಮುಂದೆ ಸರ್ವಿಸಸ್ ತಂಡದಲ್ಲಿ ಆಡುವ ಹಂಬಲ, ಅದಕ್ಕಾಗಿ ಕಠಿಣ ಅಭ್ಯಾಸ ಮಾಡುತ್ತೇವೆ,” ಎಂದು ಚೇತನ್ ಹೇಳಿದ್ದಾರೆ. ಈ ಬಗ್ಗೆ ಅಣ್ಣ ಚಂದನ್ ಅವರನ್ನು ಮಾತನಾಡಿಸಿದಾಗ, “ನಮ್ಮೆಲ್ಲ ಅಭಿಪ್ರಾಯಗಳು ಒಂದೇ ಆಗಿರುತ್ತದೆ, ಇಬ್ಬರಿಗೂ ಒಟ್ಟಿಗೇ ದೇಶಸೇವೆ ಮಾಡುವ ಅವಕಾಶ ಸಿಕ್ಕಿದೆ, ಈಗ 22 ವರ್ಷ ಸಾಗಬೇಕಾದ ಹಾದಿ ಸಾಕಷ್ಟಿದೆ, ಎಲ್ಲರ ಹರಕೆ ಹಾರೈಕೆ ಇರಲಿ,” ಎಂದು ಹೇಳಿದರು.

ಸರ್ವಿಸಸ್ ಗೆ ಈ ಅವಳಿ ಸಹೋದರರ ಸೇವೆ ಸಿಗಲಿ:

ಚಂದನ್ ಮತ್ತು ಚೇತನ್ ಈಗ ಬೆಂಗಳೂರಿನ ಎಂಇಜಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ದೇಶದ ವಿವಿಧ ಭಾಗಗಳಿಂದ ಆಯ್ಕೆಗೊಂಡ 17 ಆಟಗಾರರು ಇಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಏರ್ ಫೋರ್ಸ್, ನೇವಿ ಮತ್ತು ಆರ್ಮಿ ತಂಡಗಳ ನಡುವೆ ಸದ್ಯದಲ್ಲೇ ಪಂದ್ಯವಿರುತ್ತದೆ. ಇಲ್ಲಿ ಉತ್ತಮವಾಗಿ ಆಡಿದ ಆಟಗಾರರನ್ನು ಈ ಮೂರು ವಿಭಾಗವನ್ನು ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸುವ ಸರ್ವಿಸಸ್ ತಂಡಕ್ಕೆ ಆಯ್ಕೆ ಮಾಡಲಾಗುತ್ತದೆ, ಅಲ್ಲಿಯೂ ನಮ್ಮ ರಾಜ್ಯದ ಅಪೂರ್ವ ಸಹೋದರರಿಗೆ ಅವಕಾಶ ಸಿಗಲಿ ಎಂಬುದೇ ನಮ್ಮೆಲ್ಲರ ಹಾರೈಕೆ.

Related Articles