Friday, October 4, 2024

ರಾಜ್ಯ ತಂಡದ ಕದ ತಟ್ಟುತ್ತಿರುವ ತೆಕ್ಕಟ್ಟೆಯ ಸ್ಪಿನ್ ಮಾಂತ್ರಿಕ ಶ್ರೀಶ

ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್

ಚಿಕ್ಕಂದಿನಲ್ಲಿ ವಾಲಿಬಾಲ್ ಆಡಿಕೊಂಡು, 16 ವರ್ಷ ವಯೋಮಿತಿಯಲ್ಲಿ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಗಳಲ್ಲಿ ಪಾಲ್ಗೊಂಡಿದ್ದ ಗ್ರಾಮೀಣ ಪ್ರದೇಶದ ಯುವಕನೊಬ್ಬ ಇಂದು ಬೆಂಗಳೂರಿನಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯ ಲೀಗ್ ಪಂದ್ಯಗಳಲ್ಲಿ ಸ್ಪಿನ್ ಮಾಂತ್ರಿಕನಾಗಿ ಮಿಂಚುತ್ತಿರುವುದು ಸಂತಸದ ವಿಚಾರ. ತೆಕ್ಕಟ್ಟೆಯ ಶ್ರೀಶ ಆಚಾರ್ಯ ಲೆಫ್ಟ್ ಆರ್ಮ್ ಆಫ್ ಸ್ಪಿನ್ನ ಬೌಲರ್ ಆಗಿದ್ದು ಈಗಾಲೇ ಲೀಗ್ ಪಂದ್ಯಗಳಲ್ಲಿ ತಮ್ಮ ಪ್ರಭುತ್ವ ಸಾಧಿಸಿದ್ದು, ಮುಂದಿನ ದಿನಗಳಲ್ಲಿ ರಾಜ್ಯ ತಂಡಕ್ಕೆ ಅಗತ್ಯವೆನಿಸಿರುವ ಬೌಲರ್ ಎನಿಸಿದ್ದಾರೆ.

ತೆಕ್ಕಟ್ಟೆ ಕುವೆಂಪು ಕನ್ನಡ ಶಾಲೆಯಲ್ಲಿ ಪ್ರಾಥಮಿಕದ ಶಿಕ್ಷಣ ಮುಗಿಸಿದ ಶ್ರೀಶ, ನಂತರ ಅಲ್ಲಿಯೇ ಇರುವ ಸರಕಾರಿ ಹೈಸ್ಕೂಲ್ ನಲ್ಲಿ ಮತ್ತು ಜೂನಿಯರ್ ಕಾಲೇಜಿನಲ್ಲಿ ಪಿಯುಸಿ ಮುಗಿಸಿ ಆಳ್ವಾಸ್ ನಲ್ಲಿ ಪದವಿ ಮತ್ತು ಎಂಪಿಎಡ್ ಶಿಕ್ಷಣ ಪಡೆದಿರುತ್ತಾರೆ, ಈಗ ಬೆಂಗಳೂರಿನ ಸೋಶಿಯಲ್ ಕ್ರಿಕೆಟರ್ಸ್ ತಂಡದಲ್ಲಿ ಮೊದಲ ಡಿನಿಜನ್ ಲೀಗ್ ಪಂದ್ಯವನ್ನು ಆಡುತ್ತಿದ್ದು, ತಮ್ಮ ಸ್ಪಿನ್ ಬೌಲಿಂಗ್ ಮೂಲಕ ತಂಡದ ಆಧಾರವೆನಿಸಿದ್ದಾರೆ.

ಕಳೆದ ಎಂಟು ವರ್ಷಗಳಿಂದ ಕ್ರಿಕೆಟ್ ನಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಶ್ರೀಶ ಆಚಾರ್ಯ, ಮೊದಲು ವಾಲಿಬಾಲ್ ನಲ್ಲಿ ಪಂದ್ಯದಲ್ಲಿ ತೊಡಗಿಸಿಕೊಂಡಿದ್ದರು. ಕುಂದಾಪುರ ಬಸ್ರೂರು ಕಾಲೇಜಿನ ದೈಹಿಕ ಶಿಕ್ಷಕ ಅವರ ಪ್ರೋತ್ಸಾಹದಲ್ಲಿ ಪಂಚಾಯತ್ ಖೇಲ್ ಅಭಿಯಾನದಲ್ಲಿ ರಾಜ್ಯಮಟ್ಟದ ಪಂದ್ಯಗಳಲ್ಲಿ ಮಿಂಚಿದ್ದರು. ನಂತರ ಪದವಿಗಾಗಿ ಆಳ್ವಾಸ್ ಕಾಲೇಜು ಸೇರಿಕೊಂಡು ಕ್ರಿಕೆಟ್ ನಲ್ಲಿ ಪಳಗಿದರು. ಮಧ್ಯಮವೇಗಿ ಬೌಲರ್ ಆಗಿದ್ದ ಶ್ರೀಶ ಮಂಗಳೂರು ಪ್ರೀಮಿಯರ್ ಲೀಗ್ ನಲ್ಲಿ ಸ್ಪಿನ್ ಬೌಲರ್ ಆಗಿ ಪದಾಪರ್ಪಣೆ ಮಾಡಿದರು. ಅಲ್ಲಿಂದ ಯಶಸ್ಸಿನ ಹಾದಿಯಲ್ಲಿ ಮುನ್ನಡೆದರು. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ನಡೆಸುವ ವೈಎಸ್ಆರ್ ಟಿ20ಯಲ್ಲಿ  4 ಪಂದ್ಯಗಳನ್ನಾಡಿ 8 ವಿಕೆಟ್ ಗಳಿಸುವ ಮೂಲಕ ಶ್ರೀಶ ತಾನೊಬ್ಬ ಭವಿಷ್ಯದ ಸ್ಪಿನ್ ಬೌಲರ್ ಎಂಬುದನ್ನು ಸಾಬೀತುಪಡಿಸಿದರು. “ಲೀಗ್ ನಲ್ಲಿ ಉತ್ತಮ ರೀತಿಯಲ್ಲಿ ಪ್ರದರ್ಶನ ತೋರಿ ರಾಜ್ಯ ತಂಡವನ್ನು ಸೇರಬೇಕು, ಕೆಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಬೇಕು” ಎನ್ನುತ್ತಿರುವ ಶ್ರೀಶ ಆಚಾರ್ಯರಿಗೆ ಅವಕಾಶದ ಅಗತ್ಯವಿದೆ.

ಕೆಪಿಎನ್ ನಲ್ಲಿ ಅಚ್ಚರಿ!!

ಕಳೆದ ಬಾರಿ ಮೈಸೂರಿನಲ್ಲಿ ನಡೆದ ಕರ್ನಾಟಕ ಪ್ರೀಮಿಯರ್ ಲೀಗ್ ನಲ್ಲಿ ಶ್ರೀಶ ಅವರನ್ನು ಯಾವುದೇ ತಂಡ ಖರೀದಿಸಿರಲಿಲ್ಲ. ಆದರೆ ನೆಟ್ ಬೌಲರ್ ಆಗಿ ಬೆಳಗಾವಿ ಪ್ಯಾಂಥರ್ಸ್ ತಂಡವನ್ನು ಸೇರಿಕೊಂಡರು. ಶ್ರೀಶ ಅವರ ಬೌಲಿಂಗ್ ಪರಿಚಯ ಎಲ್ಲರಿಗೂ ತಿಳಿದಿತ್ತು, ಹುಬ್ಬಳ್ಳಿ ಟೈಗರ್ಸ್ ವಿರುದ್ಧ ನಡೆದ ಎರಡನೇ ಕ್ಬಾಲಿಫಯರ್ ಪಂದ್ಯದಲ್ಲಿ ನೆಟ್ ಬೌಲರ್ ಆಗಿದ್ದ ಶ್ರೀಶಗೆ ತಂಡದಲ್ಲಿ ಆಡುವ ಅವಕಾಶ ಸಿಕ್ಕಿತ್ತು, ಬ್ಯಾಟಿಂಗ್ ನಲ್ಲಿ ಮಿಂಚಿದ ಶ್ರೀಶ 34 ರನ್ ಗೆ 3 ಅಮೂಲ್ಯ ವಿಕೆಟ್ ಗಳಿಸಿ ಅಚ್ಚರಿ ಮೂಡಿಸಿದರು. ಇದು ತನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿತು ಎನ್ನುತ್ತಾರೆ ಶ್ರೀಶ.

ನೆನಪಿನಂಗಳದಲ್ಲಿ ಜೈಭಾರತ್

ಕ್ರಿಕೆಟ್ ಗೆ ತಾಯಿ ಎಂದರೆ ಅದು ಟೆನಿಸ್ ಬಾಲ್ ಕ್ರಿಕೆಟ್. ಸಚಿನ್ ತೆಂಡೂಲ್ಕರ್, ಮಹೇಂದ್ರ ಸಿಂಗ್ ಧೋನಿ ಅಥವಾ ವಿರಾಟ್ ಕೊಹ್ಲಿ ಸೇರಿದಂತೆ ಯಾವುದೇ ಕ್ರಿಕೆಟ್ ಆಟಗಾರರ ಆರಂಭದ ದಿನಗಳು ಟೆನಿಸ್ ಬಾಲ್ ಕ್ರಿಕೆಟ್ ನಲ್ಲೇ ಕಳೆದಿರುತ್ತದೆ. ಶ್ರೀಶ ಆಚಾರ್ಯ ಕೂಡ ಹೈಸ್ಕೂಲು ಮತ್ತು ಪಿಯುಸಿಯಲ್ಲಿದ್ದಾಗ ಟೆನಿಸ್ ಬಾಲ್ ಕ್ರಿಕೆಟ್ ನಲ್ಲಿ ಮಿಂಚಿದ್ದರು. ಹಲವಾರು ಕ್ರಿಕೆಟ್ ಟೂರ್ನಿಗಳನ್ನು ಆಡಿ ತೆಕ್ಕಟ್ಟೆಯಲ್ಲಿ ಮನೆಮಾತಾಗಿದ್ದರು. ತೆಕ್ಕಟ್ಟೆಯ ಜನಪ್ರಿಯ ತಂಡ ಜೈಭಾರತ್ ಕ್ರಿಕೆಟರ್ಸ್ ತಂಡದ ಪರ ಆಡುತ್ತಿದ್ದ ಶ್ರೀಶ ತಮ್ಮ ಕ್ರಿಕೆಟ್ ಬದುಕಿಗೆ ಆ ತಂಡ ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡಿತ್ತು ಎಂದು ಸ್ಮರಿಸುತ್ತಾರೆ.

ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ ಶ್ರೀಶ ಲೀಗ್ ಪಂದ್ಯಗಳಲ್ಲಿ ಮಿಂಚುತ್ತ ಪಾವನಿ ಸ್ಪೋರ್ಟ್ಸ್ ಅರೆನಾದಲ್ಲಿರುವ ಬೂಟ್ ಕ್ಯಾಂಪ್ ನಲ್ಲಿ ಯುವ ಆಟಗಾರರಿಗೆ ತರಬೇತಿ ನೀಡುತ್ತಿದ್ದಾರೆ. ಕ್ರೀಡೆಯಲ್ಲೇ ಬದುಕುನ್ನು ಕಟ್ಟಿಕೊಳ್ಳಬೇಕೆಂಬ ಕನಸು ಹೊತ್ತಿರುವ ಶ್ರೀಶ, ಸದ್ಯ ರಾಜ್ಯ ರಣಜಿ ತಂಡವನ್ನು ಕದತಟ್ಟುತ್ತಿದ್ದಾರೆ. ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡರೂ ತಾಯಿ ಶಾರದೆಯ ಪ್ರೀತಿಯಲ್ಲಿ ಬೆಳೆದ ಶ್ರೀಶ ಅವರಲ್ಲಿ ಒಬ್ಬ ಸಮರ್ಥ ಆಟಗಾರನಲ್ಲಿರಬೇಕಾದ ಎಲ್ಲ ಸಾಮರ್ಥ್ಯ, ಒಬ್ಬ ನೈಜ ಕ್ರೀಡಾಪಟುವನಿಲ್ಲರಬೇಕಾದ ಎಲ್ಲ ಗುಣಗಳು ಮನೆಮಾಡಿವೆ. ಭಾರತ ಕ್ರಿಕೆಟ್ ತಂಡದ ಶ್ರೇಷ್ಠ ಆಲ್ರೌಂಡರ್ ರವೀಂದ್ರ ಜಡೆಜಾ ಅವರನ್ನು ಆದರ್ಶವಾಗಿರಿಸಿಕೊಂಡಿರುವ ಶ್ರೀಶ ಅವರಂತೆಯೇ ಉತ್ತಮ ಆಲ್ರೌಂಡರ್ ಆಗಲಿ ಎಂಬುದು ಹಾರೈಕೆ.

Related Articles