Saturday, February 24, 2024

ಉಡುಪಿಯಲ್ಲಿ ಫುಟ್ಬಾಲ್‌ಗೆ ಜೀವ ತುಂಬಿದ ಕ್ಲೈವ್‌, ಮಿಲನ

ಸೋಮಶೇಖರ್‌ ಪಡುಕರೆ, ಬೆಂಗಳೂರು

ಕರ್ನಾಟಕದಲ್ಲಿ ಬೆಂಗಳೂರು ಹೊರತುಪಡಿಸಿದರೆ ಇತರ ಜಿಲ್ಲೆಗಳಲ್ಲಿ ಫುಟ್ಬಾಲ್‌ ಕ್ರೀಡೆ ಅಷ್ಟು ಉತ್ತಮ ರೀತಿಯಲ್ಲಿ ಅಭಿವೃದ್ಧಿಗೊಂಡಿಲ್ಲ. ಇದಕ್ಕೆ ಮುಖ್ಯ ಕಾರಣ ಗ್ರಾಮೀಣ ಪ್ರದೇಶದಲ್ಲಿ ಫುಟ್ಬಾಲ್‌ಗೆ ಅಗತ್ಯ ಇರುವ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಸರಕಾರ ಮತ್ತು ರಾಜ್ಯ ಫುಟ್ಬಾಲ್‌ ಸಂಸ್ಥೆ ವಿಫಲವಾಗಿರುವುದು, ಆದರೆ ಉಡುಪಿಯ ಯುವಕ ಕ್ಲೈವ್‌ ಮಸ್ಕರೆನಾಸ್‌ ವಿಕ್ಟೋರಿಯಾ ಫುಟ್ಬಾಲ್‌ ಅಕಾಡೆಮಿಯನ್ನು ಸ್ಥಾಪಿಸಿ ನೂರಾರು ಮಕ್ಕಳಿಗೆ ಫುಟ್ಬಾಲ್‌ ತರಬೇತಿ ನೀಡುತ್ತ ಅವರನ್ನು ರಾಜ್ಯ ಮಟ್ಟದ ಸ್ಪರ್ಧೆಗಳಿಗೆ ಸಜ್ಜುಗೊಳಿಸುತ್ತಿದ್ದಾರೆ.

ಉಡುಪಿಯ ಉಪೇಂದ್ರ ಪೈ ಸ್ಮಾರಕ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡಿರುವ ಕ್ಲೈವ್‌,  ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಫುಟ್ಬಾಲ್‌ ಆಡಿ ನಂತರ ಅಖಿಲ ಭಾರತ ಫುಟ್ಬಾಲ್‌ ಫೆಡರೇಷನ್‌ (ಎಐಎಫ್‌ಎಫ್‌)ನಿಂದ ಫುಟ್ಬಾಲ್‌ ತರಬೇತಿಯಲ್ಲಿ ಪರಿಣತಿ ಪಡೆದಿರುತ್ತಾರೆ. ರಾಷ್ಟ್ರೀಯ ರೆಫರಿ ಪರೀಕ್ಷೆಯಲ್ಲೂ ಉತ್ತೀರ್ಣರಾಗಿರುತ್ತಾರೆ. ನಂತರ ವಿಕ್ಟೋರಿಯಾ ಫುಟ್ಬಾಲ್‌ ಅಕಾಡೆಮಿಯನ್ನು ಸ್ಥಾಪಿಸಿ ನೂರಾರು ಮಕ್ಕಳಿಗೆ ಫುಟ್ಬಾಲ್‌ ತರಬೇತಿ ನೀಡುತ್ತಿದ್ದು, ಇಲ್ಲಿಯ ಮಕ್ಕಳು ಈಗ ಬೆಂಗಳೂರಿನಲ್ಲಿ ನಡೆಯುವ ಆಯ್ಕೆ ಟ್ರಯಲ್ಸ್‌ಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಕರ್ನಾಟಕ ರಾಜ್ಯ ಫುಟ್ಬಾಲ್‌ ಸಂಸ್ಥೆಗೆ ಸೇರಿದ ಉಡುಪಿ ಜಿಲ್ಲಾ ಫುಟ್ಬಾಲ್‌ ಸಂಸ್ಥೆ ನಡೆಸುವ ಲೀಗ್‌ ಹಂತದ ಪಂದ್ಯಗಳಲ್ಲಿ ಪ್ರಭುತ್ವ ಸಾಧಿಸಿರುವ ವಿಕ್ಟೋರಿಯಾ ಫುಟ್ಬಾಲ್‌ ಕ್ಲಬ್‌ ಈಗ ಸೆಮಿಫೈನಲ್‌ ಹಂತ ತಲುಪಿದೆ.

ಗೋವಾದಲ್ಲಿ ನಡೆದ ರಾಷ್ಟ್ರೀಯ ಯೂತ್‌ ಗೇಮ್ಸ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿರುವ ಉಡುಪಿ ಜಿಲ್ಲಾ ತಂಡ ಚಾಂಪಿಯನ್‌ ಪಟ್ಟ ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದೆ. ಈ ಚಾಂಪಿಯನ್‌ಷಿಪ್‌ ಫೆಬ್ರವರಿ 25 ರಿಂದ 27ರವರೆಗೆ ನಡೆದಿತ್ತು. ಫೈನಲ್‌ ಪಂದ್ಯದಲ್ಲಿ ಬಲಿಷ್ಠ ಕೇರಳವನ್ನು 3-2 ಗೋಲುಗಳ ಅಂತರದಲ್ಲಿ ಮಣಿಸಿದ ಉಡುಪಿ ತಂಡ ಚಾಂಪಿಯನ್‌ ಪಟ್ಟಕ್ಕೇರಿತ್ತು. ಕ್ಲೈವ್‌ ಅವರೊಂದಿಗೆ ರಾಷ್ಟ್ರೀಯ ಮಾನ್ಯತೆ ಪಡೆದ ಕೋಚ್‌ ಮಿಲನ ನಾಯಕ್‌ ಕೂಡ ಅಕಾಡೆಮಿಯಲ್ಲಿ ತರಬೇತುದಾರರಾಗಿ ಕಾರ್ಯನಿರ್ವಹಿಸುತಿತದ್ದಾರೆ. ಇದರಿಂದಾಗಿ ಉಡುಪಿ ಜಿಲ್ಲೆಯ ಸುತ್ತಮುತ್ತಲಿನ ಯುವತಿಯರು ಕೂಡ ಫುಟ್ಬಾಲ್‌ನಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತಾಗಿದೆ.

ನಾಲ್ಕು ಸ್ತಂಭಗಳು: ಉಡುಪಿ ಜಿಲ್ಲೆಯಲ್ಲಿ ಫುಟ್ಬಾಲ್‌ ಹೊಸ ರೂಪು ಪಡೆಯಲು ವಿಕ್ಟೋರಿಯಾ ಫುಟ್ಬಾಲ್‌ ಅಕಾಡೆಮಿ ಪ್ರಮುಖ ಕಾರಣವಾಯಿತು. 2020ರಲ್ಲಿ ಹುಟ್ಟಿಕೊಂಡ ಈ ಅಕಾಡೆಮಿ ಕಳೆದ ಎರಡು ವರ್ಷಗಳಲ್ಲಿ ಸಾಕಷ್ಟು ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿದೆ. ಇಲ್ಲಿ ತರಬೇರತಿ ಪಡೆದ ಯುವ ಫುಟ್ಬಾಲ್‌ ಆಟಗಾರರು ಲೀಗ್‌ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ. ಸಂತೋಷ್‌ ಟ್ರೋಫಿ ಆಯ್ಕೆ ಟ್ರಯಲ್ಸ್‌ನಲ್ಲೂ ಭಾಗವಹಿಸಿದ್ದಾರೆ. ಈ ಅಕಾಡೆಮಿಯ ಯಶಸ್ಸಿನಲ್ಲಿ ನಾಲ್ವರು ತರಬೇತುದಾರರು ಪ್ರಮುಖ ಪಾತ್ರವಹಿಸಿದ್ದಾರೆ. ವಿಕ್ಟೋರಿಯಾ ಫುಟ್ಬಾಲ್‌ ಅಕಾಡೆಮಿಯಲ್ಲಿ ಬಿಜು ಜಾಕೋಬ್‌ ಸ್ಪೋರ್ಟ್ಸ್‌ ಡೈರೆಕ್ಟರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಬ್ರಾಹಿಂ ಎಂ, ಅತಿಥಿ ತರಬೇತುದಾರರಾಗಿರುತ್ತಾರೆ. ಮಿಲನ ನಾಯ್ಕ್‌, ಪ್ರಧಾನ ಕೋಚ್‌ ಆಗಿದ್ದು, ಉಡುಪಿ ಜಿಲ್ಲೆಯಲ್ಲಿ ಮಹಿಳಾ ಫುಟ್ಬಾಲ್‌ ಅಭಿವೃದ್ಧಿಯ ಜವಾಬ್ದಾರಿ ಹೊತ್ತಿದ್ದಾರೆ. ಕ್ಲೈವ್‌ ಮಸ್ಕರೆನಾಸ್‌ ಪ್ರಧಾನ ಕೋಚ್‌ ಆಗಿದ್ದು ಉಡುಪಿ ಜಿಲ್ಲೆಯಲ್ಲಿ ಫುಟ್ಬಾಲ್‌ ಅಭಿವೃದ್ಧಿಯ ಜವಾಬ್ದಾರಿ ಹೊತ್ತಿದ್ದಾರೆ.

ಸಾಧನೆಯ ಹಾದಿಯಲ್ಲಿ: ಸ್ಥಾಪನೆಗೊಂಡ ಅಲ್ಪ ಅವಧಿಯಲ್ಲಿ ವಿಕ್ಟೋರಿಯಾ ಫುಟ್ಬಾಲ್‌ ಅಕಾಡೆಮಿ ಗಮನಾರ್ಹ ಸಾಧನೆ ಮಾಡಿದೆ. ವಿಕ್ಟೋರಿಯಾ ಅಕಾಡೆಮಿಯಲ್ಲಿ ತರಬೇತಿ ಪಡೆದಿರುವ ಮೆಲ್ರಾಯ್‌ ಡಿʼಸೋಜಾ ಎಫ್‌ಸಿ ಮಂಗಳೂರು ತಂಡದ 18ವರ್ಷ ವಯೋಮಿತಿಯ ತಂಡದ ಆಯ್ಕೆಯಲ್ಲಿ ಅಂತಿಮ ಹಂತ ತಲುಪಿದ್ದು, ಶಿಬಿರಕ್ಕೆ ಆಯ್ಕೆಯಾಗಿರುತ್ತಾರೆ. ಅಭಯ್‌ ಎಸ್‌.ಭಟ್‌, ಅಜಯ್‌ ಎಸ್‌.ಭಟ್‌, ದೇವಾಂಶ್‌ ಮತ್ತು ಜೋಶುವಾ ಎಫ್‌ಸಿ ಮಂಗಳೂರು ತಂಡದ 15 ವರ್ಷ ವಯೋಮಿತಿಯ ತಂಡಕ್ಕೆ ಆಯ್ಕೆಯಾಗಿದ್ದು, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪಂದ್ಯಗಳಲ್ಲಿ ತಂಡವನ್ನು ಪ್ರತಿನಿಧಿಸಲಿದ್ದಾರೆ.

ಪ್ರಸಕ್ತ ಉಡುಪಿ ಜಿಲ್ಲಾ ಫುಟ್ಬಾಲ್‌ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಲೀಗ್‌ ಪಂದ್ಯದಲ್ಲಿ ವಿಕ್ಟೋರಿಯಾ ಕ್ಲಬ್‌ ಸೆಮಿಫೈನಲ್‌ ತಲುಪಿದೆ. ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಫಲ್ಹಾ ಫುಟ್ಬಾಲ್‌ ಕ್ಲಬ್‌ ಮತ್ತು ಬೆಳ್ಮಣ್‌ ಫುಟ್ಬಾಲ್‌ ಕ್ಲಬ್‌ಗಳು ಅಂತಿಮ ಸ್ಥಾನಕ್ಕಾಗಿ ಪೈಪೋಟಿ ನಡೆದು ಫಲ್ಹಾ ಎಫ್‌ಸಿ 4-1 ಗೋಲುಗಳ ಅಂತರದಲ್ಲಿ ಜಯ ಗಳಿಸಿ ಫೈನಲ್‌ ಪ್ರವೇಶಿಸಿದೆ. ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ವಿಕ್ಟೋರಿಯಾ ಫುಟ್ಬಾಲ್‌ ಅಕಾಡೆಮಿ ಮತ್ತು ಹಿಂದೂಸ್ಥಾನ್‌ ಫುಟ್ಬಾಲ್‌ ಕ್ಲಬ್‌ಗಳು ಸೆಣಸಿ, ಹಿಂದೂಸ್ಥಾನ್‌ ಫುಟ್ಬಾಲ್‌ ಕ್ಲಬ್‌, 2-0 ಗೋಲುಗಳ ಅಂತರದಲ್ಲಿ ಜಯ ಗಳಿಸಿ ಫೈನಲ್‌ ಪ್ರವೇಶಿಸಿದೆ. ನಿಟ್ಟೆಯ ಎನ್‌ಎಂಎಎಂಐಟಿ ಅಂಗಣದಲ್ಲಿ ನಡೆಯುತ್ತಿರುವ ಈ ಚಾಂಪಿಯನ್‌ಷಿಪ್‌ಗೆ ನಿಟ್ಟೆ ತಾಂತ್ರಿಕ ವಿಶ್ವವಿದ್ಯಾನಿಲಯ ಪ್ರಾಯೋಜಕತ್ವ ನೀಡಿದೆ.

ಕ್ಲೈವ್‌ ಮತ್ತು ಮಿಲನ ಅವರ ಉಸ್ತುವಾರಿಯಲ್ಲಿ ಉಡುಪಿ ಜಿಲ್ಲಾ ಫುಟ್ಬಾಲ್‌ ಸಂಸ್ಥೆಯ ಆಶ್ರಯದಲ್ಲಿ ರೆಫರಿಗಳಿಗೆ ತರಬೇತಿ ಹಾಗೂ ಅಭಿವೃದ್ಧಿ ಕಾರ್ಯಾಗಾರವನ್ನು ನಡೆಸಲಾಗಿತ್ತು. ಡೆನ್ಸಿಲ್‌ ಫೌಂಡೇಷನ್‌ ಆಶ್ರಯದಲ್ಲಿ ನಡೆದ ಅಖಿಲ ಭಾರತ 5ಎ ಸೈಡ್‌ ಫುಟ್ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ವಿಕ್ಟೋರಿಯಾ ತಂಡ ಸೆಮಿಫೈನಲ್‌ ಪ್ರವೇಶಿಸಿತ್ತು.

ಕ್ಲೈವ್‌ ಹಾಗೂ ಮಿಲನ ಅವರು ಎನ್‌ಎಂಎಎಂಐಟಿ ಕಾಲೇಜು ತಂಡಕ್ಕೆ ತರಬೇತಿ ನೀಡಿರುತ್ತಾರೆ. ಬೆಂಗಳೂರಿನ ಕೆಂಗೇರಿಯಲ್ಲಿ ವಿಟಿಯು ವಲಯ ಮಟ್ಟದಲ್ಲಿ ಮಂಗಳೂರು ವಲಯವನ್ನು ಪ್ರತಿನಿಧಿಸಿದ್ದ ಈ ತಂಡ ಚಾಂಪಿಯನ್‌ ಪಟ್ಟ ಗೆದ್ದಿತ್ತು ಮತ್ತು ರಾಜ್ಯ ಮಟ್ಟದಲ್ಲಿ ನಾಲ್ಕನೇ ಸ್ಥಾನ ಗಳಿಸಿತ್ತು. ಅಕಾಡೆಮಿಯಲ್ಲಿ ವಿವಿಧ ವಯೋಮಿತಿಯ ಯುವಕ ಮತ್ತು ಯುವತಿಯರಿಗೆ ತರಬೇತಿ ನೀಡಲಾಗುತ್ತಿದ್ದು ಇಲ್ಲಿ ದಿನದಿಂದ ದಿನಕ್ಕೆ ತರಬೇತಿಗೆ ಹಾಜರಾಗುತ್ತಿರುವವ ಸಂಖ್ಯೆ ಹೆಚ್ಚುತ್ತಿದೆ.

ರೆಫರಿ ಟ್ರೈನಿಂಗ್‌: ಕೇವಲ ಆಟಗಾರರಿಗೆ ತರಬೇತಿ ನೀಡುವುದು ಅಕಾಡೆಮಿಯ ಉದ್ದೇಶವಾಗಿರದೆ ಉತ್ತಮ ರೆಫರಿಗಳನ್ನು ಸಿದ್ಧಗೊಳಿಸುವ ಕಾರ್ಯದಲ್ಲೂ ಕ್ಲೈವ್‌ ಮತ್ತು ಮಿಲನ ತೊಡಗಿದ್ದಾರೆ. ಫುಟ್ಬಾಲ್‌ ಅಭಿವೃದ್ಧಿ ಕಾರ್ಯಕ್ರಮದಡಿ 15 ತರಬೇತುದಾರರಿಗೆ ಇಲ್ಲಿ ತರಬೇತಿ ನೀಡಲಾಗಿದೆ. ಇಲ್ಲಿ ತರಬೇತಿ ಪಡೆದವರು ಜಿಲ್ಲೆ, ರಾಜ್ಯ, ರಾಷ್ಟ್ರ ಮತ್ತು ಅಖಿಲಭಾರತ ಮಟ್ಟದ ಟೂರ್ನಿಗಳಲ್ಲಿ ರೆಫರಿಯಾಗಿ ವಿವಿಧ ಹಂತಗಳಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಇದಕ್ಕೂ ಮುನ್ನ ಫಿಟ್ನೆಸ್‌ ಮತ್ತು ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಮಣಿಪಾಲದಲ್ಲಿರುವ ವಿಕ್ಟೋರಿಯಾ ಫುಟ್ಬಾಲ್‌ ಅಕಾಡೆಮಿಯಲ್ಲಿ ಟ್ರೈನಿ ರೆಫರಿಗಳು ಕ್ಲೈವ್‌ ಮತ್ತು ಮಿಲನಾ ಅವರ ನಿರ್ದೇಶನದಲ್ಲಿ ತರಬೇತಿ ಪಡೆಯುತ್ತಾರೆ. ಈ ಇಬ್ಬರೂ ತರಬೇತುದಾರರು ಈಗಾಗಲೇ 3ಕ್ಯಾಟಗರಿ ರೆಫರಿಗಳಾಗಿದ್ದು, ರಾಷ್ಟ್ರೀಯ ರೆಫರಿಗಳಾಗುವ ಅರ್ಹತೆ ಪಡೆದಿದ್ದಾರೆ.

ಫುಟ್ಬಾಲ್‌ಗೊಂದು ಅಂಗಣ ಬೇಕಿದೆ: ವಿಕ್ಟೋರಿಯಾ ಅಕಾಡೆಮಿಯಲ್ಲಿ ಈಗ 150ಕ್ಕೂ ಹೆಚ್ಚು ನೋದಾಯಿತ ಆಟಗಾರರಿದ್ದು, ಇಲ್ಲಿ 4 ವರ್ಷದಿಂದ 28 ವರ್ಷದ ವರೆಗಿನ ಫುಟ್ಬಾಲ್‌ ಆಸಕ್ತರಿಗೆ ತರಬೇತಿ ನೀಡಲಾಗುತ್ತದೆ. ಉಡುಪಿ ಜಿಲ್ಲೆಯಲ್ಲಿ ಪ್ರಮುಖ ಸಮಸ್ಯೆಯೆಂದರೆ ಇಲ್ಲಿ ಫುಟ್ಬಾಲ್‌ಗಾಗಿಯೇ ಕ್ರೀಡಾಂಗಣವಿಲ್ಲ. ವಿಕ್ಟೋರಿಯಾ ಫುಟ್ಬಾಲ್‌ ಅಕಾಡೆಮಿ ಈಗ ಮಣಿಪಾಲ ಜೂನಿಯರ್‌ ಕಾಲೇಜು ಅಂಗಣವನ್ನು ಬಾಡಿಗೆಗೆ ಪಡೆದು ತರಬೇತಿ ನೀಡಲಾಗುತ್ತದೆ. ಈ ಬಗ್ಗೆ ಕ್ಲೈವ್‌ ಮಸ್ಕರೆನಾಸ್‌ ಮಾತನಾಡಿ,

“ಈ ಜಿಲ್ಲೆಯಲ್ಲಿ ಫುಟ್ಬಾಲ್‌ ಕ್ರೀಡೆಯ ಬಗ್ಗೆ ಆಸಕ್ತಿ ಹೊಂದಿರುವ ಮಕ್ಕಳ ಸಂಖ್ಯೆ ಸಾಕಷ್ಟಿದೆ. ಆದರೆ ಇಲ್ಲಿ ಫುಟ್ಬಾಲ್‌ಗಾಗಿಯೇ ಅಂಗಣವಿಲ್ಲ. ರಾಜ್ಯ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಥವಾ ಕರ್ನಾಟಕ ರಾಜ್ಯ ಫುಟ್ಬಾಲ್‌ ಸಂಸ್ಥೆ ಈ ಬಗ್ಗೆ ಗಮನವಹಿಸಿ ಜಿಲ್ಲಾ ಮಟ್ಟದಲ್ಲಿ ಫುಟ್ಬಾಲ್‌ ಅಂಗಣವನ್ನು ಸ್ಥಾಪಿಸಿದರೆ ಉತ್ತಮವಾಗುತ್ತದೆ. ಇದರಿಂದ ಉಡುಪಿ ಜಿಲ್ಲೆಯಿಂದ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಆಡುವ ಪ್ರತಿಭಾವಂತರನ್ನು ಸಿದ್ಧಗೊಳಿಸಬಹದು. ಯುವಕರನ್ನು ಸಮರ್ಥ ಪ್ರಜೆಗಳನ್ನಾಗಿಸುವಲ್ಲಿ ಕ್ರೀಡೆಯ ಪಾತ್ರ ಪ್ರಮುಖವಾಗಿದೆ. ಅದರಲ್ಲಿ ಫುಟ್ಬಾಲ್‌ ಎಲ್ಲಾ ಕ್ರೀಡೆಗಳನ್ನು ಒಳಗೊಂಡಿರುವ ಆಟ. ಆದ್ದರಿಂದ ಉಡುಪಿಯಂಥ ಜಿಲ್ಲೆಯಲ್ಲಿ ಫುಟ್ಬಾಲ್‌ ತರಬೇತಿಗೆ ಒಂದು ಅಂಗಣದ ಅಗತ್ಯವಿದೆ,” ಎಂದು ಹೇಳಿದರು.

Related Articles