Friday, April 26, 2024

ರೇಸಿಂಗ್ ನಲ್ಲಿ ದೇಶಕ್ಕೆ ಕೀರ್ತಿ ತಂದ ಕುಂಬ್ಳೆಯ ಅನೀಶ್ ಶೆಟ್ಟಿ!!

ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್

Be a game changer, the world has enough achievers: Anish Shetty

ಸಾಹಸ ಪ್ರವೃತ್ತಿ ಬದುಕಿಗೆ ಅಂಟಿಕೊಂಡರೆ ಸಾಧನೆಯ ಹಾದಿ ಸುಗಮವಾಗುತ್ತದೆ. ಬೈಕ್ ನಲ್ಲಿ ಸ್ಟಂಟ್ ಪ್ರದರ್ಶನ ನೀಡುತ್ತಿದ್ದ ಯುವಕನೊಬ್ಬ ಮುಂದೊಂದು ದಿನ ಏಷ್ಯಾ ರೋಡ್ ರೇಸಿಂಗ್ ನಲ್ಲಿ ದೇಶಕ್ಕೆ ಕೀರ್ತಿ ತರುತ್ತಾನೆಂದು ಯಾರೂ ಊಹಿಸಿರಲಿಲ್ಲ. ಆದರೆ ಅಂತಾರಾಷ್ಟ್ರೀಯ ರಾಲಿ ಪಟು ಕುಂಬ್ಳೆಯ ಅನೀಶ್ ಶೆಟ್ಟಿ ಈಗ ಏಷ್ಯಾ ರೋಡ್ ರೇಸಿಂಗ್ ಎಪಿ-250 ವಿಭಾಗದಲ್ಲಿ ಪೂರ್ಣಗೊಳಿಸಿ, ಅಂಕ ಗಳಿಸಿದ ಮೊದಲ ಭಾರತೀಯರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಕುಂಬ್ಳೆಯ ದಾಮೋಧರ್ ಶೆಟ್ಟಿ ಮತ್ತು ವೀಣಾರತ್ನ ಶೆಟ್ಟಿ ಅವರ ಮುದ್ದಿನ ಮಗ ಅನೀಶ್ ಓದಿದ್ದು, ಆಟೋಮೊಬೈಲ್ ಎಂಜಿನಿಯರಿಂಗ್. ಆದರೆ ಬದುಕನ್ನು ರೂಪಿಸಿಕೊಂಡಿದ್ದು ರೇಸಿಂಗ್ ನಲ್ಲಿ. ಹುಬ್ಬಳ್ಳಿಯಲ್ಲಿ ಇರುವಾಗಲೇ ಸ್ಟಂಟ್ ರೈಡರ್ ಆಗಿದ್ದ ಅನೀಶ್ ಗೆ ರೇಸಿಂಗ್ ನಲ್ಲಿ ಹೊಸ ಹುರುಪು ನೀಡಿದ್ದು, ಜಗತ್ತಿನ ಅತ್ಯಂತ ಪ್ರಸಿದ್ಧ ರಾಲಿ ಎನಿಸಿರುವ ಡೆಸರ್ಟ್ ಸ್ಟಾರ್ಮ್ ರಾಲಿ.

ಕಿಕ್ ಸ್ಟಾರ್ಟ್!!!!

2012ರಲ್ಲಿ ಫ್ರೀ ಸ್ಟೈಲ್ ಸ್ಟಂಟ್ ರೈಡರ್ ಆಗಿ ಬೈಕ್ ಏರಿದ ಅನೀಶ್ ಅವರ ಪ್ರಯಾಣ ಈಗ ಜಾಗತಿಕ ಮಟ್ಟವನ್ನು ತಲುಪಿದೆ. ಅವರ ರೇಸಿಂಗ್ ಬದುಕಿನ ಹಾದಿಯನ್ನೊಮ್ಮೆ ಹಿಂದಿರುಗಿ ನೋಡಿದಾಗ ಅಲ್ಪ ಅವಧಿಯಲ್ಲೇ ಅವರ ಸಾಧನೆ ಬೆರಗು ಮೂಡಿಸುವಂಥದ್ದು.

2013ರಲ್ಲಿ ರಾಷ್ಟ್ರೀಯ ಆಟೋಕ್ರಾಸ್ ರೇಸಿಂಗ್ ನಲ್ಲಿ ಸ್ಪರ್ಧಿಸುವ ಮೂಲಕ ಅನೀಶ್ ರೇಸಿಂಗ್ ಬದುಕಿಗೆ ಕಾಲಿಟ್ಟರು. ಭಾರತದುದ್ದಕ್ಕೂ ತಮ್ಮ ಸ್ಟಂಟ್ ರೈಡಿಂಗ್ ಮೂಲಕ ಯುವ ರೇಸರ್ ಗಳ ಮನ ಗೆದ್ದರು. 2014ರಲ್ಲಿ ಮರ್ಸಿಡಿಸ್ ಬೆಂಝ್ ಯಂಗ್ ಸ್ಟಾರ್ ರೈಡರ್ ಪ್ರೋಗ್ರಾಂನಲ್ಲಿ ಅನೀಶ್ ಶೆಟ್ಟಿ ಅವರ ಹೆಸರು ಅಂತಿಮ ಶಾರ್ಟ್ ಲಿಸ್ಟ್ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದು ಅವರ ರೇಸಿಂಗ್ ಬದುಕಿಗೆ ಹೊಸ ತಿರುವು ನೀಡಿತು. ಸುಮಾರು 6,000ಕ್ಕೂ ಹೆಚ್ಚು ಸ್ಪರ್ಧಿಗಳಿರುವ ಈ ಕಾರ್ಯಕ್ರಮದಲ್ಲಿ ಗುರುತಿಸಲ್ಪಡುವುದು ಅಷ್ಟು ಸುಲಭವಲ್ಲ.

2015ರಲ್ಲಿ ಹೊಂಡಾ=ಟೆನ್10 ರೇಸಿಂಗ್ ಅಕಾಡೆಮಿಯಲ್ಲಿ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಅನೀಶ್ ಸರ್ಕ್ಯೂಟ್ ರೇಸಿಂಗ್ ನತ್ತ ಹೆಜ್ಜೆ ಹಾಕಿದರು. ಇದೇ ವರ್ಷ ಯುನೈಟೆಡ್ ಟೆಕ್ ಟಾರ್ಕ್ಯೂ ರೇಸಿಂಗ್ ಟೀಮ್ ಮೂಲಕ ಇಂಡಿಯನ್ ನ್ಯಾಷನಲ್ ಮೋಟಾರ್ ರೇಸಿಂಗ್ (ಐಎನ್ಎಂಆರ್ ಸಿ) ನಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿದರು. ಹೊಂಡಾ ಒನ್ ಮೇಕ್ ಚಾಂಪಿಯನ್ಷಿಪ್ ನಲ್ಲಿ ಸತತ 5 ಬಾರಿ ಟಾಪ್ ಫಿನಿಶರ್ ಎನಿಸಿದರು.

ಹೊಂಡಾ ಟೀಮ್ ಗೆ ಅನೀಶ್!!!

2015ರವರೆಗೂ ಹುಬ್ಬಳ್ಳಿಯಲ್ಲಿದ್ದುಕೊಂಡೇ ರೇಸಿಂಗ್ ನಲ್ಲಿ ಪಾಲ್ಗೊಳ್ಳುತ್ತಿದ್ದ ಅನೀಶ್ ಹೆಚ್ಚಿನ ತರಬೇತಿ ಹಾಗೂ ಅವಕಾಶಕ್ಕಾಗಿ ಬೆಂಗಳೂರಿಗೆ ಸ್ಥಳಾಂತರಗೊಂಡರು. ಉತ್ತಮ ರೀತಿಯಲ್ಲಿ ತರಬೇತಿ ಪಡೆದು ಚಾಂಪಿಯನ್ ಪಟ್ಟ ತಮ್ಮದಾಗಿಸಿಕೊಂಡರು. ಬೆಂಗಳೂರು ಅವರ ಪಾಲಿಗೆ ಅದೃಷ್ಟದ ನಗರವೆನಿಸಿತು. ಐಎನ್ಎಂಆರ್ ಸಿ ಗ್ರೂಪ್ ಡಿ ಮತ್ತು ಹೊಂಡಾ ಒನ್ ಮೇಕ್ ಚಾಂಪಿಯನ್ ಪಟ್ಟ ಗೆದ್ದುಕೊಂಡರು. 2017ರಲ್ಲಿ ಹೊಂಡಾ-10ರೇಸಿಂಗ್ ಟೀಮ್ ನಲ್ಲಿ ಅನೀಶ್ ಅವರಿಗೆ ಅವಕಾಶ ಸಿಕ್ಕಿತು. ಹೊಂಡಾ ಮೋಟಾರ್ ಸೈಕಲ್ಸ್ ಮತ್ತು ಸ್ಕೂಟರ್ಸ್ ಇಂಡಿಯಾದಲ್ಲಿ ಸ್ಥಾನ ಪಡೆದ ಮೊದಲ ತಂಡವೆಬ್ಬ ಹೆಗ್ಗಳಿಕೆಗೆ ಪಾತ್ರವಾದ ತಂಡದಲ್ಲಿ ಅನೀಶ್ ಗೆ ಅವಕಾಶ ಸಿಕ್ಕಿತು. ನಂತರ ರಾಷ್ಟ್ರೀಯ ರೇಸಿಂಗ್ ನಲ್ಲಿ ಎಕ್ಸ್ಪರ್ಟ್ ವಿಭಾಗದಲ್ಲೂ ಅನೀಶ್ ಸ್ಪರ್ಧಿಸಿದರು.

ವಿಶ್ವ ಚಾಂಪಿಯನ್ಷಿಪ್ ಗೆ ಪದಾಪರ್ಪಣೆ

 ರಾಷ್ಟ್ರೀಯ ಚಾಂಪಿಯನ್ಷಿಪ್ ಗಳಲ್ಲಿ ಯಶಸ್ಸು ಕಾಣುತ್ತಿರುವ ಅನೀಶ್ ಏಷ್ಯನ್ ಚಾಂಪಿಯನ್ಷಿಪ್ ನಲ್ಲಿ ಪಾಲ್ಗೊಳ್ಳುವ ಮೂಲಕ ವಿಶ್ವ ಚಾಂಪಿಯನ್ಷಿಪ್ ನಲ್ಲಿ ಸ್ಪರ್ಧೆಗೆ ಪದಾರ್ಪಣೆ ಮಾಡಿದರು. ಥಾಯ್ಲೆಂಡ್ ನಲ್ಲಿ ನಡೆದ ಸ್ಪರ್ಧೆಯಲ್ಲಿ ಎಡೆಮಿತ್ಸು ಹೊಂಡಾ ರೇಸಿಂಗ್ ಇಂಡಿಯಾ –ಟಿ ಪ್ರೋ ಟೆನ್10 ರೇಸಿಂಗ್ ತಂಡವನ್ನು ಪ್ರತಿನಿಧಿಸಿದ್ದ ಅನೀಶ್ ಏಷ್ಯಾ ಮಟ್ಟದ ಸ್ಪರ್ಧೆಯಲ್ಲಿ ಅಂಕ ಗಳಿಸಿದ ಮೊದಲ ರೇಸರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿ ಹೊಸ ಇತಿಹಾಸ ಬರೆದರು. ಇದೇ ವರ್ಷ ಪ್ರೊ ಸ್ಟೋಕ್ ವಿಭಾಗದಲ್ಲಿ ರಾಷ್ಟ್ರೀಯ ಚಾಂಪಿಯನ್ಷಿಪ್ ನಲ್ಲೂ ಮಿಂಚಿದರು.  2018ರಲ್ಲಿ ಭಾಗವಹಿಸಿದ ಪ್ರತಿಯೊಂದು ರೇಸಿಂಗ್ ನಲ್ಲೂ ಪೋಡಿಯಂ ಫಿನಿಶ್ ಸಾಧನೆ ಮಾಡುವಲ್ಲಿ ಅನೀಶ್ ಯಶಸ್ವಿಯಾದರು. ಹೀಗೆ ಫ್ರೀಸ್ಟೈಲ್ ಸ್ಟಂಟ್ ರೈಡರ್ ಆಗಿ ಬೈಕ್ ಏರಿದ ಅನೀಶ್ ಏಷ್ಯಾದಲ್ಲೇ ಭಾರತಕ್ಕೆ ಕೀರ್ತಿ ತಂದ ರೈಡರ್ ಆಗಿ ರೂಪುಗೊಂಡರು.

ಡೆಸರ್ಟ್ ಸ್ಟಾರ್ಮ್ ನಲ್ಲಿ ಅನೀಶ್ ಅಬ್ಬರ!!!

ಜಗತ್ತಿನ 10 ಅತ್ಯಂತ ಕಠಿಣ ರಾಲಿಗಳಲ್ಲಿ  ಒಂದಾಗಿರುವ ಡೆಸರ್ಟ್ ಸ್ಟಾರ್ಮ್ ರಾಲಿಯಲ್ಲಿ ಜಯ ಕಾಣುವುದು ಅಷ್ಟು ಸುಲಭವಲ್ಲ. ಆ ರಾಲಿಯನ್ನು ಪೂರ್ಣಗೊಳಿಸುವುದೇ ಕಠಿಣ ಸವಾಲು. 2019ರ ರಾಲಿಯಲ್ಲಿ ಅನೀಶ್ ಶೆಟ್ಟಿ, ಗ್ರೂಪ್ ಬಿ ವಿಭಾಗದಲ್ಲಿ ಸಮಗ್ರ ಚಾಂಪಿಯನ್ ಪಟ್ಟ ಗೆದ್ದುಕೊಂಡರು. ಅದೇ ವರ್ಷ ರಾಷ್ಟ್ರೀಯ ರಾಲಿಯ ಪ್ರೋಸ್ಟೋಕ್ 300 ಸಿಸಿ ವರೆಗಿನ ವಿಭಾಗದಲ್ಲಿ ಚಾಂಪಿಯನ್ ಪಟ್ಟ ಗೆದ್ದುಕೊಂಡರು. 8 ರೇಸ್ ಗಳಲ್ಲಿ ಸತತ 7 ರೇಸ್ ಗಳನ್ನು ಗೆಲ್ಲುವ ಮೂಲಕ ಹೊಸ ದಾಖಲೆ ಬರೆದರು. ಎಂಎಂಆರ್ ಟಿ ಪಿಎಸ್ 300 ವಿಭಾಗದಲ್ಲಿ ಲ್ಯಾಪ್ ದಾಖಲೆಯನ್ನೂ ಬರೆದಿದ್ದಾರೆ.

ಏಷ್ಯನ್ ಕ್ರಾಸ್ ಫಿಟ್ ಚಾಂಪಿಯನ್!!!

ಜಗತ್ತಿನಾದ್ಯಂತ 4.5 ಲಕ್ಷಕ್ಕೂ ಹೆಚ್ಚು ಸ್ಪರ್ಧಿಗಳು ಪಾಲ್ಗೊಂಡ ನ್ಯಾಷನಲ್ ಕ್ರಾಸ್ ಫಿಟ್ ಚಾಂಪಿಯನ್ಷಿಪ್ ನಲ್ಲಿ ಅನೀಶ್ ಶೆಟ್ಟಿ ಏಷ್ಯಾ ಮಟ್ಟದಲ್ಲಿ ಅಗ್ರ ಸ್ಥಾನ ಪಡೆದಿದ್ದು, ವಿಶ್ವದಲ್ಲಿ 36ನೇ ಸ್ಥಾನ ಗಳಿಸಿದ್ದಾರೆ. ಇದಕ್ಕೆ ಅವರು ಸ್ಥಾಪಿಸಿರುವ ರೇಸ್ ಫಿಟ್ ತರಬೇತಿ ಕೇಂದ್ರವೇ ಸ್ಫೂರ್ತಿಯಾಗಿದೆ. ವಿಶೇಷವಾಗಿ ಅಥ್ಲೀಟ್ ಗಳಿಗೆ ಫಿಟ್ನೆಸ್ ತರಬೇತಿ ನೀಡುವ ರೇಸ್ ಫಿಟ್ ಬಗ್ಗೆ ಕ್ರೀಡಾಭಿಮಾನಿಗಳಲ್ಲಿ ಉತ್ತಮ ಒಲವು ಮೂಡಿದೆ. ಹೀಗೆ ಪ್ರಶಸ್ತಿಗಳ ಮೇಲೆ ಪ್ರಶಸ್ತಿ ಗೆದ್ದುಕೊಂಡ 27 ವರ್ಷ ಪ್ರಾಯದ ಅನೀಶ್ ಶೆಟ್ಟಿ, ತನ್ನಂತೆ ಇತರರೂ ರೇಸಿಂಗ್ ನಲ್ಲಿ ತೊಡಗಿಸಿಕೊಳ್ಳಲಿ ಎಂದು 44 ಸ್ಕೋಲ್ ಆಫ್ ರೇಸಿಂಗ್ ಎಂಬ ತರಬೇತಿ ಕೇಂದ್ರವನ್ನೂ ತೆರೆದಿದ್ದಾರೆ.

ಭಾರತದಲ್ಲಿ ಉತ್ತಮ ಬೇಡಿಕೆ

ಎಂಜಿನಿಯರಿಂಗ್ ಪದವಿ ಗಳಿಸಿ ರೇಸಿಂಗ್ ಕಡೆಗೆ ಮುಖ ಮಾಡಿರುವುದು ಎಂದಾದರೂ ಬೇಸರವನ್ನುಂಟು ಮಾಡಿದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದಿ ಅನೀಶ್, “ಇದು ನನ್ನ ಇಷ್ಟದ ಕ್ಷೇತ್ರ. ಇದೊಂದು ಸಾಹಸ ಕ್ರೀಡೆ. ಭಾರತ ಸರಕಾರ ಈಗ ಈ ಕ್ರೀಡೆಗೆ ಮಾನ್ಯತೆ ನೀಡಿದೆ. ಪ್ರತಿಷ್ಠಿತ ಪ್ರಶಸ್ತಿಗಳೂ ಸಿಗಲಾರಂಭಿಸಿದೆ. ಉದ್ಯೋಗದಲ್ಲಿ ಗಳಿಸಬಹುದಾದ ಆದಾಯವನ್ನೂ ಗಳಿಸುತ್ತಿದ್ದೇನೆ, ಜನರು ಗರುತಿಸುತ್ತಿದ್ದಾರೆ. ಖುಷಿ ಇದೆ. ಇದಕ್ಕಿಂತ ಬೇರೇನು ಬೇಕು?” ಎಂದು ನಗುತ್ತಲೇ ನುಡಿದರು.

Related Articles