Friday, December 13, 2024

ವಿದರ್ಭದಲ್ಲಿ ವಿನಯ್ ಶತಕ ಸಂಭ್ರಮ

ಚನ್ನಗಿರಿ ಕೇಶವಮೂರ್ತಿ, ಬೆಂಗಳೂರು

ಕರ್ನಾಟಕ ರಣಜಿ ಕ್ರಿಕೆಟ್ ತಂಡದ ನಾಯಕ ಆರ್. ವಿನಯ್ ಕುಮಾರ್ ವಿದರ್ಭ ವಿರುದ್ಧದ ಪ್ರಸಕ್ತ ಋತುವಿನ ಮೊದಲ ಪಂದ್ಯವನ್ನಾಡುವ ಮೂಲಕ 100ನೇ ಪಂದ್ಯವನ್ನಾಡಿ ರಾಜ್ಯದ ರಣಜಿ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದರು.

ದಾವಣಗೆರೆ ಎಕ್ಸ್‌ಪ್ರೆಸ್ ಖ್ಯಾತಿಯ ವಿನಯ್ 100ನೇ ಪಂದ್ಯವನ್ನಾಡುವ ಮೂಲಕ ರಣಜಿ ಕ್ರಿಕೆಟ್‌ನಲ್ಲಿ ಅನೇಕ ಮೈಲಿಗಲ್ಲುಗಳನ್ನು ನಿರ್ಮಿಸಿದರು.
ಸುನಿಲ್ ಜೋಶಿ ಹಾಗೂ ಬ್ರಿಜೇಶ್ ಪಟೇಲ್ ಅವರ ನಂತರ ನೂರು ಪಂದ್ಯಗಳನ್ನಾಡಿದ ಕರ್ನಾಟಕದ ಮೂರನೇ ಆಟಗಾರರೆನಿಸಿದರು. ಇದು ಕರ್ನಾಟಕಕ್ಕಾಗಿಯೇ ಆಡಿ ನೂರು ಪಂದ್ಯಗಳನ್ನು ಪೂರೈಸಿದ ಮೂರನೇ ಆಟಗಾರ. ಇದುವರೆಗೂ ರಣಜಿ ಇತಿಹಾಸದಲ್ಲಿ 40 ಆಟಗಾರರು ನೂರಕ್ಕೂ ಹೆಚ್ಚು ಪಂದ್ಯಗಳನ್ನಾಡಿದ್ದಾರೆ.
ರಣಜಿ ಪಂದ್ಯದಲ್ಲಿ 10 ಬಾರಿ ಐದಕ್ಕೂ ಹೆಚ್ಚು ವಿಕೆಟ್ ಗಳಿಸಿರುವ ವಿನಯ್ ಕುಮಾರ್ ಇನ್ನು ಮೂರು ಬಾರಿ ಐದಕ್ಕೂ ಹೆಚ್ಚು ವಿಕೆಟ್ ಗಳಿಸಿದರೆ ನಾಯಕನಾಗಿ ಇಎಎಸ್ ಪ್ರಸನ್ನ (13 ಬಾರಿ ಐದಕ್ಕೂ ಹೆಚ್ಚು ವಿಕೆಟ್) ಅವರ ದಾಖಲೆಯನ್ನು ಸರಿಗಟ್ಟಲಿದ್ದಾರೆ.
ನಾಯಕನಾಗಿ 1531 ರನ್ ಗಳಿಸಿರುವ ವಿನಯ್ ಕುಮಾರ್ ಇನ್ನು 26 ರನ್ ಗಳಿಸಿದರೆ ವಿ. ಸುಬ್ರಹ್ಮಣ್ಯ (27 ಪಂದ್ಯಗಳಲ್ಲಿ 1556) ಅವರು ನಾಯಕನಾಗಿ ಗಳಿಸಿರುವ ಅತಿ ಹೆಚ್ಚು ರನ್‌ಗಳ ಸಾಧನೆಯನ್ನು ಮುರಿಯಲಿದ್ದಾರೆ.
ಈಗ ನಡೆಯುತ್ತಿರುವ ವಿದರ್ಭ  ವಿರುದ್ಧದ ಪಂದ್ಯ ಸೇರಿದಂತೆ ನಾಯಕನಾಗಿ 203 ವಿಕೆಟ್ ಗಳಿಸಿರುವ ವಿನಯ್ ಕುಮಾರ್ ಇನ್ನು 2 ವಿಕೆಟ್ ಗಳಿಸಿದರೆ, ನಾಯಕನಾಗಿ ಪ್ರಸನ್ನ ಗಳಿಸಿದ (37 ಪಂದ್ಯಗಳಲ್ಲಿ 204ವಿಕೆಟ್) ಸಾಧನೆಯನ್ನು ಮುರಿಯಲಿದ್ದಾರೆ.
ರಣಜಿ ಟ್ರೋಫಿಯಲ್ಲಿ 385 ವಿಕೆಟ್ ಗಳಿಸಿರುವ ಯಶಸ್ವಿ ನಾಯಕ ವಿಯನ್ ಕುಮಾರ್ ಇನ್ನು 15 ವಿಕೆಟ್ ಗಳಿಸಿದರರೆ ರಣಜಿ ಬದುಕಿನಲ್ಲಿ 400 ವಿಕೆಟ್ ಗಳಿಸಿದ ಸಾಧನೆ ಮಾಡಲಿದ್ದಾರೆ. ಸುನಿಲ್ ಜೋಶಿ (117 ಪಂದ್ಯಗಳಲ್ಲಿ 479 ವಿಕೆಟ್), ಬಿಎಸ್. ಚಂದ್ರಶೇಖರ್ (76 ಪಂದ್ಯಗಳಲ್ಲಿ 437 ವಿಕೆಟ್‌ಗಳು) ಅವರು ಕರ್ನಾಟಕದ ಪರ 400 ಮತ್ತು ಅದಕ್ಕಿಂತ ಹೆಚ್ಚು ವಿಕೆಟ್ ಗಳಿಸಿದ ಬೌಲರ್‌ಗಳು.
ಈಗಾಗಲೇ ರಣಜಿ ಯಲ್ಲಿ ಎರಡು ಹ್ಯಾಟ್ರಿಕ್ ಸಾಧನೆ ಮಾಡಿರುವ ವಿನಯ್ ಕುಮಾರ್ ಇನ್ನೊಂದು ಹ್ಯಾಟ್ರಿಕ್ ಸಾಧನೆ ಮಾಡಿದರೆ ಈ ರೀತಿ ಮೂರು ಬಾರಿ ಯಶಸ್ಸು ಕಂಡ ಕರ್ನಾಟಕದ ಮೊದಲ ಬೌಲರ್ ಎನಿಸಲಿದ್ದಾರೆ. ಅಲ್ಲದೆ ರಣಜಿ ಇತಿಹಾಸದಲ್ಲೇ ಈ ಸಾಧನೆ ಮಾಡಿದ ಎರಡನೇ ಬೌಲರ್ ಎನಿಸಲಿದ್ದಾರೆ. ಸರ್ವಿಸಸ್‌ನ ಜೆ.ಎಸ್.ರಾವ್ ಒಂದೇ ಋತುವಿನಲ್ಲಿ ಎರಡು ಬಾರಿ ಹ್ಯಾಟ್ರಿಕ್ ಸಾಧನೆ ಮಾಡಿದ ಮೊದಲ ಬೌಲರ್.
385 ವಿಕೆಟ್ ಗಳಿಸಿರುವ ವಿನಯ್ ಕುಮಾರ್ ರಣಜಿ ಇತಿಹಾಸದಲ್ಲೇ ಅತಿ ಹೆಚ್ಚು ವಿಕೆಟ್ ಪಡೆದ 11ನೇ ವೇಗದ ಬೌಲರ್ ಎನಿಸಲಿದ್ದಾರೆ. ಅತಿ ಹೆಚ್ಚು ವಿಕೆಟ್ ಪಡೆದ ಟಾಪ್ 10ರಲ್ಲಿ ಸ್ಪಿನ್ ಬೌಲರ್‌ಗಳೇ ಇದ್ದಾರೆ. ರಾಜಿಂದರ್ ಸಿಂಗ್ ಗೋಯೆಲ್ (636), ಎಸ್. ವೆಂಕಟರಾಘವನ್ (530), ಸುನಿಲ್ ಜೋಶಿ (479), ನರೇಂದ್ರ ಹಿರ್ವಾನಿ (442), ಬಿ.ಎಸ್.ಚಂದ್ರಶೇಖರ್ (437), ವಿವಿ ಕುಮಾರ್(418), ಎಸ್.ವಿ. ಬಹುತುಲೆ (405), ಬಿ.ಎಸ್, ಬೇಡಿ(403), ಇಎಎಸ್ ಪ್ರಸನ್ನ (370).
ಅನಿಲ್ ಕುಂಬ್ಳೆ ಅವರ ನಂತರ ನಾಯಕನಾಗಿ ರಣಜಿ ಪಂದ್ಯವೊಂದರಲ್ಲಿ ಶತಕ ಹಾಗೂ 5 ವಿಕೆಟ್ ಗಳಿಸಿದ್ದು ವಿನಯ್ ಕುಮಾರ್ ಮಾತ್ರ. (105 ನಾಟೌಟ್, ಹಾಗೂ 34 ರನ್‌ಗೆ 5 ವಿಕೆಟ್, ಮುಂಬೈ ವಿರುದ್ಧದ ಫೈನಲ್ ಪಂದ್ಯ 2014-15). ಒಂದೇ ಋತುವಿನಲ್ಲಿ ರಣಜಿ ಹಾಗೂ ಇರಾನಿ ಟ್ರೋಫಿ ಗೆದ್ದ ಏಕೈಕ ನಾಯಕ. ನಾಯಕನಾಗಿ ಅತಿ ಹೆಚ್ಚು ರಣಜಿ ಪಂದ್ಯಗಳನ್ನು ಮುನ್ನಡೆಸಿದ ಏಕೈಕ ಆಟಗಾರ (51 ಪಂದ್ಯಗಳು). ನಾಯಕನಾಗಿ ಕರ್ನಾಟಕದ ಪರ ಅತಿ ಹೆಚ್ಚು ಪಂದ್ಯಗಳ (25)ನ್ನು ಗೆದ್ದ ಆಟಗಾರ. ನಾಯಕನಾಗಿ 1000 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ. ನಾಯಕನಾಗಿಯೇ 205 ವಿಕೆಟ್ ಗಳನ್ನು ಗಳಿಸಿದ್ದಾರೆ. ಸತತ ಎರಡು ಬಾರಿ ರಣಜಿ ಟ್ರೋಫಿ ಗೆದ್ದ ರಾಜ್ಯದ ಏಕೈಕ ನಾಯಕ.

Related Articles