Tuesday, November 12, 2024

ಕರ್ನಾಟಕಕ್ಕೆ ನಿಶ್ಚಲ್, ಶರತ್ ಶತಕಗಳ ಸೊಬಗು

ನಾಗ್ಪುರ:

ರಣಜಿ ಪದಾರ್ಪಣೆ ಪಂದ್ಯದಲ್ಲೇ ಕರ್ನಾಟಕದ ಯುವ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್ ಮನ್ ಬಿ.ಆರ್. ಶರತ್(103) ಚೊಚ್ಚಲ ಶತಕ ಸಿಡಿಸಿದರು.

ಮತ್ತೊಂದು ತುದಿಯಲ್ಲಿ ತಾಳ್ಮೆ ಬ್ಯಾಟಿಂಗ್ ಮಾಡಿದ ಡಿ.ನಿಶ್ಚಲ್(113) ಅಜೇಯ ಶತಕದ ಬಲದಿಂದ ಕರ್ನಾಟಕ ತಂಡ ವಿದರ್ಭ ಎದುರು ರಣಜಿ ಟ್ರೋಫಿ ಎಲೈಟ್ ಗುಂಪು(ಎ) ಎರಡನೇ ಸುತ್ತಿನ ಪಂದ್ಯದ ಪ್ರಥಮ ಇನಿಂಗ್ಸ್ ನಲ್ಲಿ 378 ರನ್ ಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು. ಆ ಮೂಲಕ ಕರ್ನಾಟಕ ಎದುರಾಳಿ ತಂಡಕ್ಕಿಂತ 71 ರನ್ ಮುನ್ನಡೆ ಸಾಧಿಸಿದೆ.
ಇಲ್ಲಿನ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಐದು ವಿಕೆಟ್ ಕಳೆದುಕೊಂಡು 208 ರನ್ ಗಳಿಂದ ಮೂರನೇ ದಿನ ಬ್ಯಾಟಿಂಗ್ ಮುಂದುವರಿಸಿದ ಕರ್ನಾಟಕದ ಪರ ಅಜೇಯರಾಗಿ ಉಳಿದಿದ್ದ ಡಿ.ನಿಶ್ಚಲ್ ಹಾಗೂ ಬಿ.ಆರ್. ಶರತ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನಿಡಿದರು. ಈ ಜೋಡಿ ಆರನೇ ವಿಕೆಟ್ ಗೆ 160 ರನ್ ಗಳ ಜತೆಯಾಟ ಆಡುವ ಮೂಲಕ ತಂಡವನ್ನು 300 ಗಡಿ ದಾಟಿಸಿತು.
ಸೊಗಸಾಗಿ ಬ್ಯಾಟಿಂಗ್ ಮಾಡಿದ ಬಿ.ಆರ್. ಶರತ್ 161 ಎಸೆತಗಳಿಗೆ 20 ಬೌಂಡರಿ ಸಹಿತ ಒಟ್ಟು 103 ರನ್ ಗಳಿಸಿದರು. ಆ ಮೂಲಕ ರಣಜಿ ಪದಾರ್ಪಣೆ ಪಂದ್ಯದಲ್ಲೇ ಚೊಚ್ಚಲ ಶತಕ ಸಿಡಿಸಿ ನೆರೆದಿದ್ದ ಎಲ್ಲರೆದುರು ಸೈ ಎನಿಸಿಕೊಂಡರು. ಬಳಿಕ, ಆದಿತ್ಯ ಸರ್ವಾತೆ ಎಸೆತವನ್ನು ಅರಿಯುವಲ್ಲಿ ವಿಫಲವಾಗಿ ಚೆಂಡನ್ನು ಪ್ಯಾಡ್ ಮೇಲೆ ಹಾಕಿಕೊಂಡರು. ನಂತರ ಮತ್ತೊಂದು ತುದಿಯಲ್ಲಿ ತಾಳ್ಮೆಯ ಬ್ಯಾಟಿಂಗ್ ನಿಂದ ವಿದರ್ಭ ಬೌಲರ್  ಗಳನ್ನು ಹತಾಶೆಗೊಳಿಸಿದರು. ಡಿ.ನಿಶ್ಚಲ್ ರಣಜಿ ವೃತ್ತಿ ಜೀವನದಲ್ಲಿ ಮೊದಲ ಶತಕ ಗಳಿಸಿದರು. ಆಡಿದ 338 ಎಸೆತಗಳಲ್ಲಿ 10 ಬೌಂಡರಿಯೊಂದಿಗೆ ಒಟ್ಟು 113 ರನ್ ದಾಖಲಿಸಿದರು.  ನಾಯಕ ವಿನಯ್ ಕುಮಾರ್ ಅಜೇಯ ರನ್ ಗಳಿಸಿದರು. ವಿದರ್ಭದ ಪರ ಆದಿತ್ಯ ಸರ್ವಾತೆ  91 ರನ್ ಗೆ 5 ವಿಕೆಟ್ ಗಳಿಸಿದರು.

Related Articles