Thursday, September 12, 2024

ಕೆಎಲ್ ರಾಹುಲ್‌ನನ್ನು ರಾಹುಲ್ ದ್ರಾವಿಡ್‌ಗೆ ಹೋಲಿಸಬಾರದಿತ್ತು..!

ಸೋಮಶೇಖರ್ ಪಡುಕರೆ

ರಾಷ್ಟ್ರಕವಿ ಕುವೆಂಪುರವರ ಒಂದು ಗೀತೆ, ಮೂಡುವನು ರವಿ ಮೂಡುವನು ಕತ್ತಲೊಡನೆ ಜಗಳಾಡುವನು…ಓದುತ್ತಾ ಅದರಲ್ಲೊಂದು ಸಾಲು ಬರುತ್ತದೆ, ಏರಿದವನು ಚಿಕ್ಕವನಿರಬೇಕಲೇ ಎಂಬ ಮಾತನು ಸಾರುವನು. ಇದು ಸೂರ್ಯನ ಮೂಲಕ ನಾವು ಹೇಗೆ ಬದುಕಬೇಕೆಂಬುದನ್ನು ಕುವೆಂಪುರವರು ಹೇಳಿದ್ದು ನಿತ್ಯ ಸತ್ಯವಾದುದು.

ಭಾರತ ಕ್ರಿಕೆಟ್ ತಂಡದ ಈಗಿನ ವಿವಾದಾತ್ಮಕ ಆಟಗಾರ ಕೆ.ಎಲ್. ರಾಹುಲ್ ಬಗ್ಗೆ ಯೋಚಿಸಿದಾಗ ಕುವೆಂಪು  ಅವರ ಕವಿತೆ ನೆನಪಾಯ್ತು. ಜಗತ್ತು ವಿಭಿನ್ನ, ವಿಶೇಷ ಬಿಡಿ. ಬಿತ್ತಿದಂತೆ ಬೆಳೆ.
ಕನ್ನಡಪ್ರಭ ಪತ್ರಿಕೆಗೆ ನಾನು 2000ನೇ ಇಸವಿಯಲ್ಲಿ ಸೇರಿಕೊಂಡಾಗ ಒಂದೆರಡು ವರ್ಷ ಮಂಗಳೂರಿನಲ್ಲಿದ್ದೆ, ನಂತರ ಬೆಂಗಳೂರಿನಲ್ಲಿ ಕ್ರೀಡಾ ವರದಿಗಾರಿಕೆ ಮಾಡುತ್ತಿದ್ದೆ. ಕೆ.ಎಲ್. ರಾಹುಲ್ ಕಿರಿಯರ  ಕ್ರಿಕೆಟ್‌ನಲ್ಲಿ ಯಾವುದೇ ಪಂದ್ಯದಲ್ಲಿ ಆಡಿದರೂ ಅವರ ರನ್ ಗಳಿಕೆಯು ಬೇರೆ ಯಾವ ಪತ್ರಿಕೆಯಲ್ಲಿ ಪ್ರಕಟವಾಗದಿದ್ದರೂ ಕನ್ನಡಪ್ರಭದಲ್ಲಿ ಮಾತ್ರ ಪ್ರಕಟವಾಗುತ್ತಿತ್ತು. ಸಂಪಾದಕರು ಈ ಬಗ್ಗೆ ಕೆಲವೊಮ್ಮೆ ತಕರಾರು ಮಾಡಿದ್ದೂ ಇದೆ. “ಏನ್ರೀ ಮಂಗಳೂರಿನವರು ಅಂತ ಬರೇ ಅವನ ಬಗ್ಗೆಯೇ ಬರೆಯುತ್ತೀರಲ್ಲ,” ಎಂದು ಹೇಳಿದ್ದೂ ಇದೆ. ಇತರ ವರದಿಗಾರರು ಕೂಡ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದುಂಟು. ಆದರೂ ರಾಹುಲ್ ನಿರಂತರ ಶತಕ ಸಿಡಿಸುತ್ತಿರುವಾಗ ಅವರ  ಬಗ್ಗೆ ಬರೆಯುವುದಕ್ಕೆ ಅಡ್ಡಿಯಾಗಲಿಲ್ಲ. ಕೆ.ಎಲ್. ರಾಹುಲ್ ತಂದೆ ಲೋಕೇಶ್ ಕೂಡ ನನ್ನ ಬರವಣಿಗೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಆಗಾಗ ಕರೆ ಮಾಡಿ ಪ್ರೀತಿಯಿಂದ ಮಾತನಾಡುತಿದ್ದರು.
2010 ರಾಜ್ಯ ರಣಜಿ ತಂಡಕ್ಕೆ ಅವರನ್ನು ಆಯ್ಕೆ ಮಾಡುವ ಬಗ್ಗೆ ಚರ್ಚೆ ನಡೆದಿತ್ತು. ಕನ್ನಡ ಪ್ರಭದಲ್ಲಿ ಅವರ ದಾಖಲೆಗಳನ್ನೆಲ್ಲ ಅಂಕಿ ಅಂಶ ಸಮೇತವಾಗಿ ಕೂಡಿದ ವರದಿಯನ್ನು ಪ್ರಕಟಿಸಲಾಯಿತು. ಆ ವರದಿಗೂ ರಾಹುಲ್ ಅವರ ಆಯ್ಕೆಗೂ ಸಂಬಂಧವೇ ಇಲ್ಲ. ಆದರೂ ಕರಾವಳಿಯ ಕ್ರಿಕೆಟಿಗ ಆಯ್ಕೆಯಾಗಬೇಕು ಎಂಬುದು ನಮ್ಮ ಉದ್ದೇಶವಾಗಿತ್ತು. ಅದೇ ರೀತಿ ಆವರು ಆಯ್ಕೆಯಾಗಿ ಉತ್ತಮ ಪ್ರದರ್ಶನ ನೀಡಿದರು. ಶತಕದ ಮೇಲೆ ಶತಕ ಸಿಡಿಸಿ 2016ರಲ್ಲಿ ಭಾರತ ತಂಡಕ್ಕೆ ಆಯ್ಕೆಯಾದರು. ಧೋನಿ ನಾಯಕತ್ವದಲ್ಲಿ ಜಿಂಬಾಬ್ವೆ ಪ್ರವಾಸಕ್ಕೆ ಅವರ ಆಯ್ಕೆಯಾಗಿತ್ತು. ತಂಡದಲ್ಲಿ ಕರುಣ್ ನಾಯರ್ ಹಾಗೂ ಮನೀಶ್ ಪಾಂಡೆ ಕೂಡ ಅವಕಾಶ ಪಡೆದಿದ್ದರು.
ರಣಜಿ ಆಟಗಾರನೊಬ್ಬ ಭಾರತ ತಂಡಕ್ಕೆ ಆಯ್ಕೆಯಾದರೆ ಮಾಧ್ಯಮದವರು ಪ್ರತಿಕ್ರಿಯೆ ಪಡೆದುಕೊಳ್ಳುವುದು ಸಹಜ. ಕೆಲವರು ಸಂದರ್ಶನಕ್ಕೆ ಯತ್ನಿಸುತ್ತಾರೆ. ನಾನಾಗ ವಿಜಯ ಕರ್ನಾಟಕದಲ್ಲಿ ಕೆಲಸ ಮಾಡುತ್ತಿದ್ದೆ. ನನಗೆ ಎಲ್ಲಿಲ್ಲದ ಸಂಭ್ರಮ. ನಮ್ಮ ಬಂಧುಗಳೊಬ್ಬರು ಟೀಮ್ ಇಂಡಿಯಾಕ್ಕೆ ಆಯ್ಕೆಯಾದಷ್ಟು ಖುಷಿಯಾಗಿತ್ತು. ಸಂಜೆ ಹೊತ್ತಾದ ಕಾರಣ ಪ್ರತಿಕ್ರಿಯೆ ಕೇಳುವವರರ ಸಂಖ್ಯೆ ಹೆಚ್ಚಾಗಿರುತ್ತದೆ. ಸಂಜೆ ಏಳು ಗಂಟೆಗೆ ರಾಹುಲ್‌ಗೆ ಕರೆ ಮಾಡಿ, ನನ್ನ ಹೆಸರು ಹೇಳಿದೆ. “ಯಾವ ಸೋಮಶೇಖರ್??….ಐ ಆ್ಯಮ್ ಬಿಸ್ಸೀ ನೌ, ಕಾಲ್ ಮೀ ಲೇಟರ್..”.ಅಂದಾಗ ನನಗೆ ಬೇಸರ ಆಗಲಿಲ್ಲ. ಎಲ್ಲೋ ಬೇರೆ ಏಜೆನ್ಸೀ ಸುದ್ದಿಯಲ್ಲಿ ಬಂದಿರುವ ಕೋಟ್ಸ್ ತೆಗೆದುಕೊಂಡು ಪ್ರಕಟಿಸಲಾಯಿತು. ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿದ್ದು ಸಂಭ್ರಮವನ್ನುಂಟು ಮಾಡಿತ್ತು. ಆ ನಂತರ ಅವರ ಸಾಧನೆಯನ್ನು ನಾವು ನೋಡುತ್ತಲೇ ಇದ್ದೇವೆ. ಕ್ರಿಕೆಟ್‌ನಲ್ಲಿ ಏರು ಪೇರು ಇದ್ದದ್ದೇ.
ಕ್ರಿಕೆಟ್ ಅಂಗಣದಲ್ಲಿ ಖ್ಯಾತಿ ಪಡೆಯುತ್ತಿದ್ದಂತೆ ರಾಹುಲ್ ಅವರ ಗೆಳೆತನವೂ ವಿಸ್ತಾರಗೊಂಡಿತು. ಕೆಲವು ಪತ್ರಕರ್ತರು ಅವರನ್ನು ಖಾಸಗಿಯಾಗಿ ಭೇಟಿ ಮಾಡಲಾರಂಭಿಸಿದರು. ರಾಹುಲ್ ಅವರ ತಂದೆಗಿಂತಲೂ ಇವರ ಕಾಳಜಿ ಹೆಚ್ಚತೊಡಗಿತು. ಅವರ ಭವಿಷ್ಯವನ್ನು ರೂಪಿಸುವವರಂತೆ  ಈ ಪತ್ರಕರ್ತರು ಹಗಲಿರುಳು ಶ್ರಮಿಸತೊಡಗಿದರು. ರನ್ ಗಳಿಕೆ ಕಡಿಮೆ ಆದಾಗಲೆಲ್ಲ ಧರ್ಮಸ್ಥಳ, ಸುಬ್ರಹ್ಮಣ್ಯ ಹಾಗೂ ಕುಕ್ಕೆ ದೇವಸ್ಥಾನಗಳಲ್ಲಿ ಪೂಜೆಯ ಸಿದ್ಧತೆ ಮಾಡಿಸಿದರು. ಬದುಕಿನ ಬಗ್ಗೆ ಸಲಹೆ ಸೂಚನೆ ನೀಡಲಾರಂಭಿಸಿದರು. ಇದು ಬಹಳ ಸಂತಸದ ವಿಚಾರ.
ಕಾಲ ಎಲ್ಲವನ್ನೂ ಅನಾವರಣಗೊಳಿಸುತ್ತದೆ. ಶುಕ್ರವಾರ ರಾಹುಲ್ ದ್ರಾವಿಡ್ ಅವರ ಹುಟ್ಟು ಹಬ್ಬ. ಕ್ರಿಕೆಟ್ ದೇವರೇ ಕೈಕೊಟ್ಟಾಗ ತಂಡಕ್ಕೆ ಆಧಾರವಾದ ದ್ರಾವಿಡ್‌ಗೆ ಈಗಲೂ ಜಗತ್ತಿನಾದ್ಯಂತ ಅಭಿಮಾನಿಗಳಿದ್ದಾರೆ. ಸಚಿನ್ ತೆಂಡೂಲ್ಕರ್ ಕ್ರಿಕೆಟ್ ದೇವರು ಆಗಿರಬಹುದು, ಆದರೂ ಈಗಲೂ ಪೂಜೆಗೊಳಲ್ಪಡುತ್ತಿರುವುದು ದ್ರಾವಿಡ್. ಏಕೆಂದರೆ ಅವರ ಗುಣ ನಡತೆ. ಕೆಎಲ್ ರಾಹುಲ್ ರಾತ್ರಿ ಮಲಗುವಾಗಲೂ ಬ್ಯಾಟ್ ಹಿಡಿದು ಮಲಗುತ್ತಿದ್ದರು, ಅವರಿಗೆ ರಾಹುಲ್ ದ್ರಾವಿಡ್ ಮಾದರಿ, ದ್ರಾವಿಡ್ ಸ್ಥಾನವನ್ನು ತುಂಬಲು ಸೂಕ್ತ ಆಟಗಾರ ಎಂದೆಲ್ಲ ಬಿಂಬಿಸಿದ್ದು ಇತ್ತೀಚಿನ ಅವರ ಆಟ ಮತ್ತು ವರ್ತನೆಗಳನ್ನು ಕಂಡಾಗ ತಪ್ಪಾಯಿತೆಂಬ ಅರಿವು. ದ್ರಾವಿಡ್ ಹುಟ್ಟಿದ ದಿನವೇ ರಾಹುಲ್ ಟೀಕೆಯ ಅಸ್ತ್ರಗಳಿಗೆ ಗುರಿಯಾದುದು ವಿಪರ್ಯಾಸ. ಬಿಸಿಸಿಐ ಅವರನ್ನು ಪಾಂಡೆ ಜತೆಗೆ ಮನೆಗೆ ಕಳುಹಿಸಿದೆ. ಬದುಕಿನಲ್ಲಿ ಇಂಥ ಘಟನೆಗಳು ಪಾಠ ಕಲಿಸಬಹುದು. ಚಿಕ್ಕ ವಯಸ್ಸಿನಲ್ಲೇ ಕ್ರಿಕೆಟ್‌ನಿಂದ ಅನಿರೀಕ್ಷಿತ ಹಣ, ಘನತೆ, ಅಭಿಮಾನಿಗಳು ಇವೆಲ್ಲ ನಮ್ಮ ದಾರಿ ತಪ್ಪಿಸಬಹುದು. ಆದರೆ ಮರಳಿ ಮತ್ತೆ ಸರಿದಾರಿಯಲ್ಲಿ ಸಾಗುವ ಅವಕಾಶ ಇದ್ದೇ ಇರುತ್ತದೆ. ರಾಹುಲ್ ದ್ರಾವಿಡ್ ಅವರಂತೆ ರನ್ ಗಳಿಸದಿದ್ದರೂ ಅಂಥ ಆಟಗಾರರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬಹುದು.
ಬದುಕಿನ ಇನಿಂಗ್ಸ್‌ನಲ್ಲಿ ಇದೊಂದು ಕೆಟ್ಟ ರೀತಿಯ ಹಿಟ್ ವಿಕೆಟ್ … ಮನುಷ್ಯ ತನ್ನ ಅದೃಷ್ಟ ಹಾಗೂ ದುರಾದೃಷ್ಟಗಳನ್ನು ತಾನೇ ಸೃಷ್ಟಿಮಾಡಿಕೊಳ್ಳುತ್ತಾನೆ..ಸಾಗಬೇಕಿದೆ ನೀವೇ ನಿರ್ಮಿಸಿಕೊಂಡ ನೆಟ್‌ನಲ್ಲಿ ನಿಮ್ಮದೇ ಅಭ್ಯಾಸ…
ಅದೇ ಪ್ರೀತಿಯಿಂದ
ಸೋಮಶೇಖರ್ ಪಡುಕರೆ.

Related Articles