ಚಿನ್ನ ಗೆದ್ದ ಸೌರಭ್ ಚೌಧರಿ

0
210

ಏಜೆನ್ಸೀಸ್ ಜಕಾರ್ತ

ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಅತಿ ಕಿರಿಯ ಶೂಟರ್ ಸೌರಭ್ ಚೌಧರಿ 10ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಚಿನ್ನ ಗೆದ್ದಿದ್ದಾರೆ.

ಮೂರನೇ ದಿನದಲ್ಲಿ ಭಾರತ ಒಟ್ಟು ಮೂರು ಚಿನ್ನ ಗೆದ್ದ ಸಾಧನೆ ಮಾಡಿದೆ. ಇದೇ ವಿಭಾಗದಲ್ಲಿ 29 ವರ್ಷ ಪ್ರಾಯದ ಅಭಿಷೇಕ್ ವರ್ಮಾ ಕಂಚಿನ ಪದಕ ಗೆದ್ದಿದ್ದಾರೆ. ಈ ಹೊತ್ತಿಗೆ ಭಾರತದ ಪದಕಗಳ ಸಂಖ್ಯೆ ಏಳಕ್ಕೇರಿದೆ.

ಒಟ್ಟು 240.7 ಅಂಕಗಳನ್ನು ಗಳಿಸಿದ ಸೌರಭ್ ಹೊಸ ಕೂಟ ದಾಖಲೆ ಬರೆದರು. ಒಲಿಂಪಿಯನ್ ಜಿತು ರಾಯ್ ಅವರನ್ನು ಸೋಲಿಸಿ ಗೇಮ್ಸ್ ಗೆ ಆಯ್ಕೆಯಾದ ಸೌರಭ್ ಚಿಕ್ಕ ವಯಸ್ಸಿನಲ್ಲೇ ತನ್ನ ಸಾಮರ್ಥ್ಯ ಏನೆಂಬುದನ್ನು ಸಾಬೀತುಪಡಿಸಿದರು.

ಜಸ್ಪಾಲ್ ರಾಣಾ ಅವರಲ್ಲಿ ತರಬೇತಿ ಪಡೆಯುತ್ತಿರುವ ಯುವ ಶೂಟರ್ ಸೌರಭ್ ಜೂನಿಯರ್ ವಿಶ್ವ ಚಾಂಪಿಯನ್‌ಶಿಪ್ ನಲ್ಲೂ ದಾಖಲೆಯೊಂದಿಗೆ ಚಿನ್ನ ಗೆದ್ದಿದ್ದರು.