Friday, April 19, 2024

ಅಂದು ಗ್ರೌಂಡ್ಸ್‌ಮನ್ ಇಂದು ವೇಗದ ಬೌಲರ್

ಸೋಮಶೇಖರ್ ಪಡುಕರೆ ಬೆಂಗಳೂರು 

ಆತನಿಗೆ ಕ್ರಿಕೆಟ್ ಅಂದರೆ ಹುಚ್ಚು, ಕ್ರಿಕೆಟ್‌ಗಾಗಿ ಶಾಲೆಯನ್ನೇ ತೊರೆದವ. ಸಚಿನ್ ತೆಂಡೂಲ್ಕರ್ ಅವರ ಕಟ್ಟಾ ಅಭಿಮಾನಿ, ಆದರೆ ಅವಕಾಶ ಸಿಗದೆ ಗ್ರೌಂಡ್ಸ್‌ಮನ್ ಆದ. ಆದರೆ ಮೈಸೂರು ವಾರಿಯರ್ಸ್ ತಂಡದ ಎಂ.ಆರ್. ಸುರೇಶ್ ಹಾಗೂ ಅರುಣ್ ಅವರ ನೆರವಿನಿಂದ ಇಂದು ರಾಜ್ಯದ ವೇಗದ ಬೌಲರ್ ಆಗಲು ಸಾಧ್ಯವಾಯಿತು. ಇದು ಮಂಡ್ಯದ ವೇಗದ ಬೌಲರ್ ಯಶಸ್ ಅವರ ಬದುಕಿನ ಕತೆ.

 

ಮಂಡ್ಯದ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿರುವ ಲಕ್ಷ್ಮೇಗೌಡ ಹಾಗೂ ಶೀಲಾ ದಂಪತಿಯ ಏಕೈಕ ಪುತ್ರ ಯಶಸ್‌ಗೆ ಚಿಕ್ಕಂದಿನಿಂದಲೂ ಕ್ರಿಕೆಟ್ ಆಡುವ ಹಂಬಲ. ಏಳನೇ ತರಗತಿಯಿಂದಲೇ  ಕ್ರಿಕೆಟ್‌ನಲ್ಲಿ ಮಿಂಚುತ್ತಿದ್ದ ಯಶಸ್‌ಗೆ ಉಡುಪಿಯಲ್ಲಿ ನಡೆದ ಆಯ್ಕೆ ಟ್ರಯಲ್ಸ್‌ನಲ್ಲಿ ಶಾಲಾ ಹಂತದ ಕ್ರಿಕೆಟ್ ಆಡುವ ಅವಕಾಶ ಸಿಕ್ಕಿತು. ಆದರೆ ನಂತರ ಉತ್ತಮ ಪ್ರೋತ್ಸಾಹ ಸಿಗದ ಕಾರಣ ಮಿಂಚಲು ಸಾಧ್ಯವಾಗಲಿಲ್ಲ. ಸಿಕ್ಕ ಅವಕಾಶವನ್ನೇ ಸದುಪಯೋಗಪಡಿಸಿಕೊಂಡ ಯಶಸ್ ಮಂಡ್ಯದ ಪಿಇಟಿ ಕಾಲೇಜು ಅಂಗಣದಲ್ಲಿ ಕ್ರಿಕೆಟ್ ಆಡುವುದನ್ನು ಮುಂದುವರಿಸಿದರು. ಅಲ್ಲಿ ತರಬೇತಿ ನೀಡುತ್ತಿದ್ದ ಮಹಾದೇವ್ ಈ ಯುವ ಬೌಲರ್‌ನಲ್ಲಿರುವ ಪ್ರತಿಭೆಗೆ ಪ್ರೋತ್ಸಾಹ ನೀಡುತ್ತಿದ್ದರು. ಆದರೆ ಪ್ರಮುಖ ಪಂದ್ಯಗಳಲ್ಲಿ ಅವಕಾಶ ಸಿಗುತ್ತಿರಲಿಲ್ಲ. ಸ್ಥಳೀಯ ಪಂದ್ಯಗಳನ್ನಾಡಿದರೂ ಯಾವುದೇ ಪ್ರಯೋಜನ ಆಗುತ್ತಿರಲಿಲ್ಲ.

ಗ್ರೌಂಡ್ಸ್‌ಮನ್ ಕೆಲಸ

ಕ್ರಿಕೆಟ್‌ನಲ್ಲಿ ಅವಕಾಶ ಸಿಗುವುದು ಕಡಿಮೆಯಾದಾಗ ಬದುಕು ಕಟ್ಟಿಕೊಳ್ಳಲು ಯಶಸ್ ತಾವು ಆಡುತ್ತಿದ್ದ ಅಂಗಣದಲ್ಲೇ ಗ್ರೌಂಡ್ಸ್‌ಮನ್ ಕೆಲಸ ನೀಡುವಂತೆ ಮಹಾದೇವ್ ಅವರಲ್ಲಿ ವಿನಂತಿಸಿಕೊಂಡರು. ಇದರಿಂದ ತಿಂಗಳಿಗೆ ೬,೦೦೦ ರೂ. ವೇತನವೂ ಸಿಗುತ್ತಿತ್ತು. ಮಹಾದೇವ್ ಅವರು ಯಶಸ್ ಅವರನ್ನು ಗ್ರೌಂಡ್ಸ್‌ಮನ್ ಆಗಿ ನೋಡಲಿಲ್ಲ. ಅವಕಾಶ ಸಿಕ್ಕಲ್ಲೆಲ್ಲ ಆಡಲು ಕಳುಹಿಸುತ್ತಿದ್ದರು. ಉತ್ತಮ ಆಲ್ರೌಂಡರ್ ಆಗಿದ್ದ ಯಶಸ್ ಹಲವು ಪಂದ್ಯಗಳಲ್ಲಿ ಮಿಂಚಿ ಗಮನ ಸೆಳೆದಿದ್ದರು.
ಮೈಸೂರು ವಾರಿಯರ್ಸ್ ಪ್ರತಿಭೆ
ಕಳೆದ ೨೫ ವರ್ಷಗಳಿಂದ ಅಂಪೈರ್ ಹಾಗೂ ವೀಕ್ಷಕ ವಿವರಣೆಗಾರರಾಗಿದ್ದ ಮೈಸೂರು ವಾರಿಯರ್ಸ್ ತಂಡದ ಮ್ಯಾನೇಜರ್ ಎಂ.ಆರ್. ಸುರೇಶ್ ಹಾಗೂ ತಂಡದ ಸಮನ್ವಯಕಾರ ಹಾಗೂ ಅಂಪೈರ್ ಅರುಣ್ ಕುಮಾರ್ ಅವರು ಯಶಸ್ ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿ ತಮ್ಮದೇ ಆದ ಕ್ಲಬ್ ಕೋಲ್ಸ್‌ನಲ್ಲಿ ಆಡುವ ಅವಕಾಶ ಕಲ್ಪಿಸಿದರು. ಮೈಸೂರು ವಾರಿಯರ್ಸ್ ನಡೆಸಿದ ಪ್ರತಿಭಾನ್ವೇಷಣೆಯಲ್ಲೂ ಯಶಸ್ ಮಿಂಚಿದ್ದರು. ಮೈಸೂರಿನ ರಂಗರಾವ್ ಆಂಡ್ ಸನ್ಸ್‌ನ ಮಾಲೀಕರಾದ   ಅರ್ಜುನ್ ರಂಗಾ ಕೂಡ ಯಶಸ್ ಸಾಧನೆಯನ್ನು ಗುರುತಿಸುವಲ್ಲಿ ನೆರವಾದರು.

ಗಂಟೆಗೆ ೧೩೩ ಕಿ.ಮೀ. ವೇಗ

ಯಶಸ್ ವೇಗದ ಬೌಲರ್ ಹಾಗೂ ಉತ್ತಮ ಬ್ಯಾಟ್ಸ್‌ಮನ್. ಬ್ಯಾಟಿಂಗ್‌ಗಿಂತ ಬೌಲಿಂಗ್‌ನಲ್ಲೇ ಹೆಚ್ಚು ಯಶಸ್ಸು ಕಂಡವರು. ಮೈಸೂರು ವಲಯ ಕ್ರಿಕೆಟ್‌ನಲ್ಲಿ ಮಿಂಚಿದ ಯಶಸ್‌ಗೆ ವೀನೂ ಮಂಕಡ್ ಟ್ರೋಫಿ ಆಡುವ ಅವಕಾಶವೂ ಸಿಕ್ಕಿತ್ತು. ೨೩ ವರ್ಷದೊಳಗಿನವರ ಕ್ರಿಕೆಟ್‌ನಲ್ಲಿ ಡಿವಿಜನ್  ಹಾಗೂ ಜೋನಲ್ ಹಂತದವರೆಗೂ ಆಡಿದ್ದರು. ಕಳೆದ ಒಂದು ವರ್ಷದಿಂದ ಗಾಯದ ಸಮಸ್ಯೆ ಎದುರಿಸುತ್ತಿದ್ದ ಯಶಸ್ ಈಗ ಫಿಟ್ ಆಗಿದ್ದಾರೆ. ೨೦೧೬ರಲ್ಲಿ ರಾಜ್ಯ ಅಂಡರ್ ೧೯ ತಂಡದಲ್ಲೂ ಸ್ಥಾನ ಪಡೆದಿದ್ದ ಯಶಸ್ ೨೩ ವರ್ಷದೊಳಗಿನವರ ರಾಜ್ಯ ಸಂಭಾವ್ಯರ ಪಟ್ಟಿಯಲ್ಲೂ ಸ್ಥಾನ ಪಡೆದಿದ್ದರು.
೧೬ ಕ್ರಿಕೆಟಿಗರಿಗೆ ಉದ್ಯೋಗ
ಸೈಕಲ್‌ಪ್ಯೂರ್ ಅಗರ್‌ಬತ್ತಿ ಖ್ಯಾತಿಯ ರಂಗ ರಾವ್ ಆಂಡ್ ಸನ್ಸ್ ಕಂಪೆನಿಯು ಇದುವರೆಗೂ ರಾಜ್ಯದ ಪ್ರತಿಭಾವಂತ ೧೬ ಆಟಗಾರರಿಗೆ ಉದ್ಯೋಗ ನೀಡಿದೆ. ಅವರು ಆಟದ ನಡುವೆ ಕೆಲಸ ಮಾಡಿಕೊಂಡು ಬದುಕನ್ನು ರೂಪಿಸಿಕೊಂಡಿದ್ದಾರೆ ಎಂದು ಮೈಸೂರು ವಾರಿಯರ್ಸ್ ತಂಡದ ಮ್ಯಾನೇಜರ್ ಸುರೇಶ್ ಸ್ಪೋರ್ಟ್ಸ್ ಮೇಲ್‌ಗೆ ತಿಳಿಸಿದ್ದಾರೆ.
ಯಶಸ್ ಪ್ರತಿಭಾವಂತ ಆಟಗಾರ. ನಿಖರ ಬೌಲಿಂಗ್ ಮಾಡುತ್ತಾನೆ. ಅವರಿಗೆ ಉತ್ತಮ ಅವಕಾಶ ನೀಡಬೇಕಾಗಿದೆ. ಮೈಸೂರು ವಾರಿಯರ್ಸ್ ಈ ನಿಟ್ಟಿನಲ್ಲಿ ಗಮನ ಹರಿಸಿದೆ. ಮುಂದಿನ ದಿನಗಳಲ್ಲಿ ಅವರು ರಾಜ್ಯದ ಉತ್ತಮ ವೇಗದ ಬೌಲರ್ ಆಗಿ ಮೂಡಿಬರಲಿದ್ದಾರೆ ಎಂದು ಮೈಸೂರು ವಾರಿಯರ್ಸ್ ತಂಡದ ಸಮನ್ವಯಕಾರ ಅರುಣ್ ಕುಮಾರ್ ಹೇಳಿದ್ದಾರೆ.

Related Articles