Saturday, April 20, 2024

ಕ್ರೀಡಾಪಟುಗಳ ಪಾಲಿನ ಚಾಂಪಿಯನ್: ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್

ಸ್ಪೋರ್ಟ್ಸ್ ಮೇಲ್ ವರದಿ

ಒಲಿಂಪಿಕ್ಸ್‌ನಲ್ಲಿ ಪದಕ ವಿಜೇತ ಶೂಟರ್ ಕರ್ನಲ್ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರಿಗೆ ಕ್ರೀಡಾ ಸಚಿವ ಸ್ಥಾನ ನೀಡಿದಾಗ ದೇಶದ ಅನೇಕ ಕ್ರೀಡಾಪಟುಗಳು ಸಂಭ್ರಮ ವ್ಯಕ್ತಪಡಿಸಿದ್ದರು. ಕ್ರೀಡಾ ಇಲಾಖೆಯಲ್ಲಿ ಇತ್ತೀಚಿನ ಬೆಳವಣಿಗೆ, ಏಷ್ಯನ್ ಗೇಮ್ಸ್‌ನಲ್ಲಿ ದಾಖಲೆಗಳ ಪದಕ ಇವೆಲ್ಲವೂ ರಾಥೋಡ್ ಅವರ ಯೋಜನೆಯ ಪ್ರತಿಫಲ.

ಅವೆಲ್ಲಕ್ಕಿಂತ ಮುಖ್ಯವಾಗಿ ಏಷ್ಯನ್ ಗೇಮ್ಸ್‌ನಲ್ಲಿ ಪದಕ ವಿಜೇತರಿಗೆ ನಗದು ಬಹುಮಾನ ಕೊಡುವಾಗ ಪದಕ ವಂಚಿತ ಒಬ್ಬ ಕ್ರೀಡಾಪಟುವನ್ನು ಗುರುತಿಸಿ ಆತನಿಗೂ ಬಹುಮಾನ ನೀಡಿದ್ದು ಅವರಲ್ಲಿರುವ ಚಾಂಪಿಯನ್ ಗುಣವನ್ನು ಎತ್ತಿ ತೋರಿಸುತ್ತಿದೆ. ಕ್ರೀಡಾಪಟುವೊಬ್ರು  ಕ್ರೀಡಾ ಸಚಿವರಾಗಿರುವುದರಿಂದಲೇ ಇಂಥ ಉತ್ತಮ ತೀರ್ಮಾನವೊಂದನ್ನು ಕೈಗೊಳ್ಳಲು ಸಾಧ್ಯವಾಯಿತು. ಭಾರತ ದೇಶ ಕಂಡ ಅತ್ಯುತ್ತಮ ಕ್ರೀಡಾ ಸಚಿವರು ಎಂದು ರಾಜ್ಯವರ್ಧನ್  ಸಿಂಗ್ ರಾಥೋಡ್ ಅವರನ್ನು ಕರೆದರೆ ಅತಿಶಯೋಕ್ತಿಯಾಗಲಾರದು.

ತಪ್ಪಿನ ಹೆಜ್ಜೆ

ಗೋವಿಂದನ್ ಲಕ್ಷ್ಮಣನ್ ಜಕಾರ್ತದಲ್ಲಿ ನಡೆದ 10,000 ಮೀ. ಓಟದಲ್ಲಿ ಕಂಚಿನ ಪದಕ ಗೆದ್ದಿದ್ದರು. ಆದರೆ ಓಡುವಾಗ ಟ್ರ್ಯಾಕ್ ಮೆಟ್ಟಿದ ಕಾರಣಕ್ಕೆ ಅವರ ಪದಕವನ್ನು ಸಂಘಟಕರು ಹಿಂಪಡೆದಿದ್ದರು. ಈ ಬಗ್ಗೆ ಭಾರತೀಯ ಅಥ್ಲೆಟಿಕ್ಸ್ ಸಂಸ್ಥೆ ಪ್ರತಿಭಟಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.  ಗೋವಿಂದನ್ ಲಕ್ಷ್ಮಣನ್ ಅತ್ಯಂತ ಬಡ ಕಟುಂಬದಿಂದ ಬಂದ ಓಟಗಾರ.
ಕ್ರೀಡಾ ಸಚಿವ ರಾಥೋಡ್ ಅವರು ಕ್ರೀಡಾಕೂಟದಲ್ಲಿದ್ದುಕೊಂಡೇ ಇವೆಲ್ಲವನ್ನೂ ಗಮನಿಸಿದ್ದರು. ಒಬ್ಬ ಅಥ್ಲೀಟ್ ಗೆದ್ದ ಪದಕವನ್ನು ನಿಯಮದ ಆಧಾರದ ಮೇಲೆ ಹಿಂದಿರುಗಿಸಿದಾಗ  ಪಡುವ  ಬೇಸರ ಎಷ್ಟೆಂಬುದು ಒಬ್ಬ ಕ್ರೀಡಾಪಟುವಾಗಿ ಅವರು ಚೆನ್ನಾಗಿ ಬಲ್ಲರು.
ಪದಕ ಗೆದ್ದವರಿಗೇ ಸರಿಯಾದ ನಗದು ಬಹುಮಾನ ಕೊಡುವಲ್ಲಿ ಸರಕಾರಗಳು ವಿಫಲವಾಗುತ್ತಿವೆ. ನಿಯಮದ ಪ್ರಕಾರ ಗೋವಿಂದನ್ ಲಕ್ಷ್ಮಣನ್‌ಗೆ  ನಗದು ಬಹುಮಾನ ನೀಡುವಂತಿಲ್ಲ. ಆದರೆ ಒಲಿಂಪಿಯನ್ ಹಾಗೂ ಸಚಿವ ರಾಜ್ಯವರ್ಧನ  ಸಿಂಗ್ ರಾಥೋಡ್ ಸ್ವ ಆಸಕ್ತಿ ವಹಿಸಿ ಪದಕ ವಂಚಿತ ಓಟಗಾರನಿಗೆ 10 ಲಕ್ಷ ರೂ. ನಗದು ಬಹುಮಾನ ನೀಡಿ, ಇತರ ಪದಕ ವಿಜೇತರಿಗೆ ನೀಡಿದ ಗೌರವವನ್ನೇ ನೀಡಿದರು. ಸಚಿವರ ಈ ತೀರ್ಮಾನ ದೇಶದ ಕ್ರೀಡಾಪಟುಗಳಲ್ಲಿ ಅತೀವ ಸಂತಸವನ್ನುಂಟು ಮಾಡಿದೆ.
 ಚಿನ್ನ ಗೆದ್ದವರಿಗೆ 40, ಬೆಳ್ಳಿ ಗೆದ್ದವರಿಗೆ 20 ಹಾಗೂ ಕಂಚಿನ ಪದಕ ಗೆದ್ದವರಿಗೆ 10 ಲಕ್ಷ ರೂ. ನೀಡುವ ಮೂಲಕ ಕೇಂದ್ರ ಸರಕಾರ ಪದಕ ವಿಜೇತರನ್ನು ಗೌರವಿಸಿದೆ. ಬೇರೋಬ್ಬ ಕ್ರೀಡಾಪಟುವಿನ ಶೂ ತಗಲಿದ ಕಾರಣ ಗೋವಿಂದನ್ ಲಕ್ಷ್ಮಣನ್ ಅವರು ಅರಿವಿಲ್ಲದೆ ಪ್ರಮಾದ ಎಸಗಿದರು. 1998ರ ಬ್ಯಾಂಕಾಕ್ ಏಷ್ಯನ್ ಗೇಮ್ಸ್‌ನಲ್ಲಿ ಗುಲಾಬ್ ಚಂದ್ 10,000 ಮೀ. ಓಟದಲ್ಲಿ  ಕಂಚಿನ ಪದಕ ಗೆದ್ದ ನಂತರ ಇದುವರೆಗೂ ಈ ವಿಭಾಗದಲ್ಲಿ ಪದಕ ಗೆದ್ದಿರಲಿಲ್ಲ. ಈ ಬಾರಿಯ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಅಥ್ಲೀಟ್‌ಗಳು ಒಟ್ಟು 19 ಪದಕಗಳನ್ನು ಗೆದ್ದಿರುತ್ತಾರೆ. ಅವುಗಳಲ್ಲಿ  ಏಳು ಚಿನ್ನ, ಹತ್ತು  ಬೆಳ್ಳಿ ಹಾಗೂ ಎರಡು ಕಂಚಿನ ಪದಕ ಸೇರಿದೆ.

Related Articles