Saturday, October 12, 2024

ಅತಿ ಹೆಚ್ಚು ರನ್‌ ನೀಡಿ ಪ್ರಸಿದ್ಧಿ ಆದ ಪ್ರಸಿಧ್‌ ಕೃಷ್ಣ!

ಗುವಾಹಟಿ: ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರ ವೇಗದ ಶತಕದ ನೆರವಿನಿಂದ ಆಸ್ಟ್ರೇಲಿಯಾ ತಂಡ ಭಾರತ ವಿರುದ್ಧದ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ 5 ವಿಕೆಟ್‌ ಅಂತರದಲ್ಲಿ ಜಯ ಗಳಿಸಿತು. ಈ ಸಾಧನೆಯನ್ನು ಮ್ಯಾಕ್ಸ್‌ವೆಲ್‌ ಇನ್ನೊಂದು ಸಾಧನೆಯ ಮೂಲಕ ಮರೆಯಬಹುದು, ಆದರೆ ಕೊನೆಯ ಓವರ್‌ ಎಸೆದ ಪ್ರಸಿಧ್‌ ಕೃಷ್ಣ ಒಟ್ಟು 68 ರನ್‌ಗಳ ಕೊಡುಗೆಯನ್ನು ಮರೆಯುವುದು ಕಷ್ಟ ಸಾಧ್ಯ. ಪ್ರಸಿಧ್ ಕೃಷ್ಣ ತಮ್ಮ ತಪ್ಪುಗಳನ್ನು ಸರಿಪಡಿಸಿಕೊಂಡು ಮತ್ತೆ ಪುಟಿದೇಳುತ್ತಾರೆಂಬ ನಂಬಿಕೆ ಇದ್ದೇ ಇದೆ. Prasidh Krishna will come back strongly.

ಟಿ20 ಕ್ರಿಕೆಟ್‌ನಲ್ಲಿ ಬೌಲರ್‌ ಯಾವತ್ತೂ ದುರಂತ ನಾಯಕ. ಆದರೆ ಬೌಲಿಂಗ್‌ನಲ್ಲಿ ನೈಪುಣ್ಯತೆಯನ್ನು ಪ್ರದರ್ಶಿಸುವುದು ಮತ್ತು ಏರಿಳಿತವನ್ನು ಕಂಡುಕೊಳ್ಳುವುದು ಅನಿವಾರ್ಯ. ಒಬ್ಬ ವೇಗದ ಬೌಲರ್‌ ಯಾರ್ಕರ್‌ ಎಸೆಯದೆ ಓವರ್‌‌ ಮುಗಿಸುವುದು ಸರಿಯಲ್ಲ. ಪ್ರಸಿಧ್‌ ಕೃಷ್ಣ ಅವರು ಎಸೆದ ನಾಲ್ಕು ಓವರ್‌ನಲ್ಲಿ 68 ರನ್‌ ನೀಡಿ ಟಿ20 ಇತಿಹಾದಲ್ಲೇ ಆರನೇ ದುಬಾರಿ ಬೌಲರ್‌ ಎನಿಸಿದರು. ಗಾಯದಿಂದ ಚೇತರಿಸಿಕೊಂಡು ಬಂದ ಪ್ರಸಿಧ್‌ ಕೃಷ್ಣ ಅವರಿಗೆ ಇದೊಂದು ಉತ್ತಮ ಅವಕಾಶವಾಗಿತ್ತು. ಮೂರನೇ ಓವರ್‌ನಲ್ಲಿ ರನ್‌ ನಿಯಂತ್ರಿಸಿದ ಪ್ರಸಿಧ್‌ ಕೃಷ್ಣ ಅವೆರ ಮೇಲೆ ಭರವಸೆಯನ್ನಿತ್ತು ನಾಯಕ ಸೂರ್ಯ ಕುಮಾರ್‌ ಯಾದವ್‌ ಕೊನೆಯ ಓವರ್‌ ಎಸೆಯಲು ಅವಕಾಶ ನೀಡಿದರು. 18ನೇ ಓವರ್‌ ಎಸೆದ ಪ್ರಸಿಧ್‌ ಕೇವಲ 6 ರನ್‌ ನೀಡಿದಾಗ ಭರವಸೆ ಹುಟ್ಟುವುದು ಸಹಜ. ಆದರೆ ಎದುರಿಗೆ ನಿಂತಿದ್ದು ದೈತ್ಯ ದಾಂಡಿಗ ಮ್ಯಾಕ್ಸ್‌ವೆಲ್‌. “ ಕ್ರಿಕೆಟ್‌ ಆಡ್ತಾನೋ, ಇಲ್ಲ ಗಾಲ್ಫ್‌ ಆಡ್ತಾನೋ” ಎಂದು ಜನ ಅಂದುಕೊಳ್ಳುತ್ತಿದ್ದಾರೆ. 19ನೇ ಓವರ್‌ನಲ್ಲಿ ಅಕ್ಷರ್‌ ಪಟೇಲ್‌ 22 ರನ್‌ ನೀಡಿದಾಗಲೇ ಪಂದ್ಯ ಆಸ್ಟ್ರೇಲಿಯಾದ ಪರ ವಾಲಿತ್ತು. ಕೊನೆಯ ಓವರ್‌ನಲ್ಲಿ ಪ್ರಸಿಧ್‌ ತನ್ನ ನೈಜ ಬೌಲಿಂಗ್‌ ಪ್ರದರ್ಶನವನ್ನು ನೀಡುವಲ್ಲಿ ವಿಫಲರಾದರು. 23 ರನ್‌ ನೀಡುವ ಮೂಲಕ ಆಸೀಸ್‌ ಜಯ ಗಳಿಸಿತು. ಮ್ಯಾಕ್ಸ್‌ವೆಲ್‌ 47 ಎಸೆತಗಳಲ್ಲಿ ಶತಕ ಸಿಡಿಸಿ ಆಸೀಸ್‌ ಪರ ಟಿ20 ಕ್ರಿಕೆಟ್‌ನಲ್ಲಿ ವೇಗದ ಶತಕ ಸಿಡಿಸಿದ ಮೂವರು ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರೆನಿಸಿದರು. ಮೂವರೂ 47 ಎಸೆತಗಳಲ್ಲಿ ಶತಕ ಸಿಡಿಸಿರುವುದು ವಿಶೇಷ. ಆರೋನ್‌ ಫಿಂಚ್‌ ಮತ್ತು ಜೋಶ್‌ ಇಂಗ್ಲಿಸ್‌ ವೇಗದ ಶತಕ ಸಿಡಿಸಿದ ಇನ್ನಿಬ್ಬರು ಆಟಗಾರರು.

ಕ್ರಿಕೆಟ್‌ನಲ್ಲಿ ಇದು ಸಾಮಾನ್ಯ, ಆದರೆ ಭಾರತದಲ್ಲಿ ಅವಕಾಶಕ್ಕಾಗಿ ಹಾತೊರೆಯುತ್ತಿರುವ ಇಂಥ ಸಂದರ್ಭದಲ್ಲಿ ಪ್ರಸಿಧ್‌ ಕೃಷ್ಣ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕಿತ್ತು. ಆಸೀಸ್‌ ವಿರುದ್ಧದ ಪ್ರವಾಸ ಕರ್ನಾಟಕದ ಬೌಲರ್‌ ಪಾಲಿಗೆ ಮರೆಯಬೇಕಾದ ಸರಣಿಯಾಗಲಿದೆ? ವಿಶಾಖ ಪಟ್ಣಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ 4 ಓವರ್‌ಗಳಲ್ಲಿ 41 ರನ್‌ ನೀಡಿದರೂ 3 ವಿಕೆಟ್‌ ಗಳಿಸಿದ್ದರು. ತಿರುವನಂತಪುರದಲ್ಲಿ ನಡೆದ ಎರಡನೇ ಪಂದ್ಯದಲ್ಲಿ 4 ಓವರ್‌ಗಳಲ್ಲಿ 50 ರನ್‌ ನೀಡಿ 1 ವಿಕೆಟ್‌ ಗಳಿಸಿದ್ದರು. ಗುವಾಹಟಿಯಲ್ಲಿ 4 ಓವರ್‌ಗಳಲ್ಲಿ 68 ರನ್‌ ನೀಡಿದರು. ಒಟ್ಟು ಆಡಿರುವ ಮೂರು ಪಂದ್ಯಗಳಲ್ಲಿ ಎಸೆದ 12 ಓವರ್‌ಗಳಲ್ಲಿ ಪ್ರಸಿಧ್‌ ಕೃಷ್ಣ ನೀಡಿದ್ದು ಒಟ್ಟು 159 ರನ್‌. ಅಂದರೆ ಓವರ್‌ ಒಂದಕ್ಕೆ 13.25 ರನ್‌. ಒಬ್ಬ ಉತ್ತಮ ಬೌಲರ್‌ನನ್ನು ತಂಡದಿಂದ ಹೊರಗಿಡಲು ಈ ಅಂಕಿ ಅಂಶ ಸಾಕಾಗುತ್ತದೆ. ಯಜುವೇಂದ್ರ ಚಹಲ್‌ ಇದೇ ರೀತಿಯಲ್ಲಿ ತಂಡದಿಂದ ಹೊರಗುಳಿಯಬೇಕಾಯಿತು. ಅವರು ಕೂಡ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ 4 ಓವರ್‌ಗೆ 64 ರನ್‌ ನೀಡಿದ್ದರು.

Related Articles