ಪಂಚಕುಲ: ತಾಯಿ ಎರಡು ಬಾರಿ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿ, ಏಷ್ಯನ್ ಗೇಮ್ಸ್‌ನಲ್ಲಿ ಪದಕ ಗೆದ್ದ ಕಾರಣ ಕ್ರೀಡೆಯಲ್ಲಿ ತೊಡಗಿಸಿಕೊಂಡ ಅವರ ಮಗಳಿಗೆ ಇನ್ನೂ ದೊಡ್ಡ ಗುರಿ ಇರುವುದು ಸಹಜ. ಆ ಗುರಿಯಲ್ಲೇ ಸಾಗಿದ್ದಾರೆ ಒಲಿಂಪಿಯನ್ ಪ್ರಮಿಳಾ ಅಯ್ಯಪ್ಪ ಅವರ ಮಗಳು ಉನ್ನತಿ.
ಪಂಚಕುಲದಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ಯೂಥ್ ಗೇಮ್ಸ್‌ನ ವನಿತೆಯರ 100 ಮೀ. ಹರ್ಡಲ್ಸ್‌ನಲ್ಲಿ ಉನ್ನತಿ 14.00 ಸೆಕೆಂಡುಗಳಲ್ಲಿ ಗುರಿ ತಲುಪಿ ರಾಜ್ಯಕ್ಕೆ ಚಿನ್ನದ ಕೀರ್ತಿ ತಂದಿದ್ದಾರೆ.
ಅಥ್ಲೆಟಿಕ್ಸ್‌ನಲ್ಲಿ ತಾಯಿ ಪ್ರಮಿಳಾ ಹಾಗೂ ತಂದೆ ಅಯ್ಯಪ್ಪ ಅವರು ಉತ್ತಮ ಸಾಧನೆಯನ್ನು ಮಾಡಿದ್ದರೂ ಮಗಳನ್ನು ಬ್ಯಾಡ್ಮಿಂಟನ್ ಅಥವಾ ಈಜಿನಲ್ಲಿ ತೊಡಗಿಸಬೇಕೆಂಬ ಹಂಬಲ. ಆದರೆ ಉನ್ನತಿಯ ಗುರಿ ಬೇರೆಯೇ ಆಗಿತ್ತು. “ನಾನು ಹಲವಾರು ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಲು ಯತ್ನಿಸಿದೆ. ಆದರೆ ಯಾವುದೂ ನನಗೆ ಇಷ್ಟವಾಗಲಿಲ್ಲ. ಅಥ್ಲೆಟಿಕ್ಸ್‌ನಲ್ಲೂ ನಾನು ಲಾಂಗ್‌ಜಂಪ್ ಚಾಂಪಿಯನ್ ಆಗಿದ್ದೆ, ಆದರೆ ಹರ್ಡಲ್ಸ್‌ನಲ್ಲಿ ಉತ್ತಮ ಸಾಧನೆ ಮಾಡಿದ ಕಾರಣ ಅದಕ್ಕೆ ಒಗ್ಗಿಕೊಂಡೆ,” ಎಂದು ಉನ್ನತಿ ಹೇಳಿದ್ದಾರೆ.
“ನಾವು ಆಕೆಯ ಮೇಲೆ ಎಂದೂ ಒತ್ತಡ ಹೇರಲಿಲ್ಲ. ಆಕೆ ಸಹಜವಾಗಿಯೇ ಬೆಳೆಯಲಿ ಎಂದು ಬಯಸಿದ್ದೆವು,” ಎಂದ ಪ್ರಮಿಳಾ ಹೆಪ್ಟಥ್ಲಾನ್‌ನಲ್ಲಿ ತೊಡಗಿಕೊಳ್ಳಬಹುದು ಎಂದು ಬಯಸಿದ್ದೆವು ಎಂದರು. “ಖೇಲೋ ಇಂಡಿಯಾ ಗೇಮ್ಸ್‌ನಲ್ಲಿ ಉನ್ನತಿಯ ಮೊದಲ ಸ್ಪರ್ಧೆ. ಖೇಲೋ ಇಂಡಿಯಾ ಯೂಥ್ ಗೇಮ್ಸ್‌ನಲ್ಲಿ ಪದಕ ಗೆಲ್ಲುವುದು ಆಕೆಯ ದೊಡ್ಡ ಕನಸಾಗಿತ್ತು. ಅದು ಇಂದು ಈಡೇರಿದೆ. ಆಕೆ ಪದಕ ಗೆದ್ದಿರುವುದು ಅತೀವ ಖುಷಿ ಕೊಟ್ಟಿದೆ,” ಎಂದರು.
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ತರಬೇತಿ ಪಡೆಯುತ್ತಿರುವ ಉನ್ನತಿಗೆ ಎಲ್ಲ ಕ್ರೀಡಾಪಟುಗಳ ಆಸೆಯಂತೆ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವುದಾಗಿದೆ. “ನೀರಜ್ ಚೋಪ್ರಾ ಅವರು ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ನಂತರ ಎಲ್ಲರ ಸಾಮರ್ಥ್ಯದ ಮಟ್ಟವೂ ಏರಿದೆ. ಭಾರತೀಯರಿಗೆ ಈಗ ಪದಕ ಗೆಲ್ಲುವ ಆತ್ಮವಿಶ್ವಾಸ ಹೆಚ್ಚಿದೆ,” ಎಂದು ಉನ್ನತಿ ನುಡಿದರು.