ಚಾಂಪಿಯನ್ನರ ಚಿನ್ನದ ಪದಕಗಳ ಹಿಂದೆ ವಜ್ರದ ಅಮ್ಮಂದಿರು
ಬೆಂಗಳೂರು: ಇತ್ತೀಚಿಗೆ ಛತ್ತೀಸ್ಗಢದ ರಾಯ್ಪುರದಲ್ಲಿ ನಡೆದ ಖೇಲೋ ಇಂಡಿಯಾ ಟ್ರೈಬಲ್ ಗೇಮ್ಸ್ನ ಈಜುಕೊಳದ ಪ್ರೇಕ್ಷಕರ ಗ್ಯಾಲರಿಯಲ್ಲಿ ಕರ್ನಾಟಕದ ಮೂವರು ಮಹಿಳೆಯರು ತಮ್ಮ ಸ್ಪರ್ಧಿಗಳನ್ನು ಹುರಿದುಂಬಿಸುತ್ತಿರುವುದನ್ನು ಕಂಡು ಖುಷಿಯಾಯಿತು. ಈಜು ವಿಭಾಗದ ಸ್ಪರ್ಧೆಗಳು ಮುಗಿದು ಅವರನ್ನು ಮಾತನಾಡಿಸಿದಾಗ ಅಚ್ಚರಿಯಾಯಿತು. ತಮ್ಮ ಮಕ್ಕಳ ಈಜಿನ ಯಶಸ್ಸಿಗಾಗಿ ದೇಶದೆಲ್ಲೆಡೆ ಪ್ರಯಾಣಿಸುವ ಈ ತಾಯಂದಿರ ತ್ಯಾಗದ ಬದುಕು ನಿಜವಾಗಿಯೂ ಇತರರಿಗೆ ಮಾದರಿ. The lives of sacrifice of these mothers from Karnataka, who travel all over the country for their children’s swimming success, are truly an example for others.
ಈ ಕ್ರೀಡಾಕೂಟದಲ್ಲಿ ಕರ್ನಾಟಕ 23 ಚಿನ್ನ, 08 ಬೆಳ್ಳಿ ಹಾಗೂ 07 ಕಂಚಿನ ಪದಕಗಳೊಂದಿಗೆ ಚಾಂಪಿಯನ್ ಪಟ್ಟ ಗೆದ್ದಿತ್ತು. ನಮ್ಮ ರಾಜ್ಯ ತಂಡ ಚಾಂಪಿಯನ್ ಪಟ್ಟ ಗೆಲ್ಲಲು ಈಜುಪಟುಗಳು ಮಾಡಿರುವ ಸಾಧನೆಯೇ ಪ್ರಮುಖ ಕಾರಣವಾಗಿತ್ತು. ಈಜಿನಲ್ಲಿ ನಮ್ಮ ಚಾಂಪಿಯನ್ನರು 15 ಚಿನ್ನ, 5 ಬೆಳ್ಳಿ ಹಾಗೂ 3 ಕಂಚಿನ ಪದಕ ಗೆದ್ದಿರುತ್ತಾರೆ. ಕರ್ನಾಟಕ ಒಟ್ಟು 38 ಪದಕಗಳನ್ನು ಗೆದ್ದಿದೆ. ಅದರಲ್ಲಿ 23 ಪದಕಗಳು ಈಜಿನಿಂದಲೇ ಬಂದಿವೆ. ಮಣಿಕಂಠ ಎಲ್. 8 ಚಿನ್ನ 1 ಬೆಳ್ಳಿ ಪದಕ ಗೆದ್ದು ಕ್ರೀಡಾಕೂಟದ ಶ್ರೇಷ್ಠ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಎಲ್ಲಿಗೇ ಹೋದರೂ ಸ್ಟವ್, ಕುಕ್ಕರ್ ಜೊತೆ ಸಾಗುವ ದಾವಣಗೆರೆಯ ನಿರ್ಮಲ:
ಕ್ರೀಡಾಕೂಟದ ಈಜಿನಲ್ಲಿ ನಿಧಿ ಎಸ್ ಅವರು ಎರಡು ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಗೆದ್ದಿದ್ದಾರೆ. ನಿಧಿ ಅವರ ತಾಯಿ ನಿರ್ಮಲ ಮೂಲತಃ ದಾವಣಗೆರೆಯ ಶಿವಕುಮಾರ ಸ್ವಾಮೀಜಿ ಬಡಾವಣೆಯವರು, ತಂದೆ ಶ್ರೀಧರ್ ಜಲಮಂಡಳಿಯಲ್ಲಿ ಅಧಿಕಾರಿ. ನಿಧಿ ರಾಷ್ಟ್ರೀಯ ಈಜಗಾರ್ತಿ ಜೊತೆಯಲ್ಲಿ ಫುಡ್ ನ್ಯೂಟ್ರಿಷನಿಸ್ಟ್ ಅಧ್ಯಯನ ಮಾಡುತ್ತಿದ್ದಾರೆ. ಮಗಳು ಕ್ರೀಡೆಗೆ ಪೂರಕವಾದ ಪೌಷ್ಠಿಕ ಆಹಾರವನ್ನೇ ಸೇವಿಸಲಿ ಎಂದು ನಿರ್ಮಲ ಅವರು ಒಂದು ಸ್ಟವ್, ಕುಕ್ಕರ್ ಹಾಗೂ ಬೇಳೆ ಕಾಳುಗಳೊಂದಿಗೆ ಎಲ್ಲೇ ಸ್ಪರ್ಧೆ ನಡೆದರೂ ಅಲ್ಲಿ ಹಾಜರಿರುತ್ತಾರೆ.

Sportsmail ಜೊತೆ ಮಾತನಾಡಿದ ನಿರ್ಮಲ, “ಮಗಳ ಈಜಿಗಾಗಿ ನಾವು ಶ್ರಮ ವಹಿಸಿದ್ದೇವೆ, ಆಕೆಗೆ ಈಜಿನ ಯಶಸ್ಸಿಗಾಗಿ ಉತ್ತಮ ಆಹಾರವನ್ನು ನೀಡುವುದು ನಮ್ಮ ಕರ್ತವ್ಯ. ಯಾವುದನ್ನು ತಿನ್ನಬೇಕು ಎಂಬುದು ಆಕೆಯೇ ಪಟ್ಟಿ ಮಾಡುತ್ತಿದ್ದಳು, ಅದರಂತೆ ನಾನು ತಯಾರು ಮಾಡುವೆ. ಆಕೆ ನ್ಯೂಟ್ರಿಷನಿಸ್ಟ್ ಕೂಡ ಹೌದು, ದೇಶದಲ್ಲಿ ಎಲ್ಲೇ ಚಾಂಪಿಯನ್ಷಿಪ್ ನಡೆದರೂ ಸ್ವವ್, ಕುಕ್ಕರ್ ಹಾಗೂ ಬೇಳೆ ಕಾಳುಗಳೊಂದಿಗೆ ಪ್ರಯಾಣಿಸುತ್ತೇವೆ. ಶಬ್ದ ಮಾಡದ ಕುಕ್ಕರ್ ಬಳಸುತ್ತೇವೆ. ಎಲ್ಲೇ ಹೋದರೂ ಮಗಳಿಗಾಗಿ ಈಜುಕೊಳದ ಹತ್ತಿರವಿರುವ ಮನೆಯನ್ನೇ ಬಾಡಿಗೆಗೆ ಪಡೆಯುತ್ತೇವೆ. ನಾನು ಸಿದ್ಧ ಮಾಡಿದ ಪೌಷ್ಠಿಕ ಆಹಾರವನ್ನು ಜೊತೆಗಿರುವ ಮಕ್ಕಳಿಗೂ ನೀಡುತ್ತೇವೆ,” ಎಂದರು.

ದೇವರಲ್ಲಿ ಜರ್ಸಿ ಕೇಳಿದೆವು, ಆತ ಪದಕವನ್ನೇ ಕೊಟ್ಟ!!!!
ಛತ್ತೀಸ್ಗಢದಲ್ಲಿ ರಾಯ್ಪುರದ ಈಜು ಕೊಳದಲ್ಲಿ ಮೇಘಾಂಜಲಿ ಚಿನ್ನ ಗೆದ್ದು ರಾಜ್ಯಕ್ಕೆ ಕೀರ್ತಿ ತಂದರು. ಕರ್ನಾಟಕ ಚಾಂಪಿಯನ್ ಪಟ್ಟ ಗೆಲ್ಲುವಲ್ಲಿ ಮೇಘಾಂಜಲಿ ಅವರು ಗೆದ್ದಿರುವ 4 ಚಿನ್ನ, 2 ಕಂಚಿನ ಪದಕ ಪ್ರಮುಖ ಮಾತ್ರವಹಿಸಿತ್ತು. ಸ್ಪರ್ಧೆಯ ವೇಳೆ ಮೇಘಾಂಜಲಿ ಅವರ ತಾಯಿ, ಸುನೀತಾ ಹಾಗೂ ತಂದೆ ಅಂಬರೀಶ್ ಹುರಿದುಂಬಿಸುತ್ತಿರುವುದನ್ನು ಕಂಡಾಗ ಅವರಿಗೆ ಕ್ರೀಡೆಯ ಬಗ್ಗೆ ಇರುವ ಕಾಳಜಿ ಸ್ಪಷ್ಟವಾಗುತ್ತದೆ.

ಮಗಳ ಸಾಧನೆಯ ಬಗ್ಗೆ ಹರ್ಷ ವ್ಯಕ್ತಪಡಿಸಿರುವ, ಸುನೀತಾ, “ಮಗಳ ಈಜಿನಿಂದಾಗಿ ದೇಶದ ಹಲವು ರಾಜ್ಯಗಳಲ್ಲಿ ಪ್ರಯಾಣ ಮಾಡುವಂತಾಯಿತು. ಬೆಂಗಳೂರಿನ ಜೆಪಿ ಪಾರ್ಕ್ನಲ್ಲಿ ಬೇಸಿಗೆ ಶಿಬಿರಕ್ಕೆ ಚಿಕ್ಕ ವಯಸ್ಸಿನಲ್ಲಿ ಸೇರಿಕೊಂಡ ಮೇಘಾಂಜಲಿ ಎಂಟನೇ ತರಗತಿಯಲ್ಲಿರುವಾಗಲೇ ಎಸ್ಜಿಎಫ್ಐ ಕ್ರೀಡಾಕೂಟದಲ್ಲಿ ಪಾಲ್ಗೊಂಡಳು. ಆ ನಂತರ ಹಲವು ಚಾಂಪಿಯನ್ಷಿಪ್ಗಳಲ್ಲಿ ಭಾಗವಹಿಸಿರುತ್ತಾಳೆ. ಖೇಲೊಇಂಡಿಯಾದಲ್ಲಿ ಸ್ಪರ್ಧಿಸಿದರೂ ಪದಕ ಗೆಲ್ಲಲಾಗಲಿಲ್ಲ. ಈ ನಡುವೆ ಗಾಯದ ಸಮಸ್ಯೆಯಿಂದಾಗಿ ಹಲವು ಸ್ಪರ್ಧೆಗಳನ್ನು ಕೈಬಿಡಬೇಕಾಯಿತು. ಈ ಬಾರಿ ದೇವರಲ್ಲಿ ಬೇಡಿದ್ದು ಇಷ್ಟೇ, “ದೇವರೇ, ಪದಕ ಸಿಗದಿದ್ದರೂ ಚಿಂತೆ ಇಲ್ಲ, ಒಂದು ಜರ್ಸಿಯನ್ನಾದರೂ ಒದಗಿಸು,” ಎಂದು. ಆದರೆ ದೇವರು ಆರು ಪದಕಗಳನ್ನು ನೀಡಿದ, ಅದರಲ್ಲಿ ನಾಲ್ಕು ಚಿನ್ನ, ಎರಡು ಕಂಚು, ಮಗಳ ಸಾಧನೆ ಖುಷಿ ಕೊಟ್ಟಿದೆ.” ಎಂದರು. ಮೇಘಾಂಜಲಿ ಅವರ ತಂದೆ ಅಂಬರೀಶ್ ಬೆಂಗಳೂರಿನ ಎಂ.ಎಸ್. ರಾಮಯ್ಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ಉಪನ್ಯಾಸಕರು.
ಮಗನ ಈಜಿಗಾಗಿ ಕೆಲಸ ತೊರೆದ ಸೌಮ್ಯ ಶರತ್:
ಖೇಲೋ ಇಂಡಿಯಾ ಟ್ರೈಬಲ್ ಗೇಮ್ಸ್ನಲ್ಲಿ ಕೀರ್ತನ್ ಶರತ್ ಶರತ್ 2 ಚಿನ್ನ, 1 ಬೆಳ್ಳಿ ಹಾಗೂ 1 ಕಂಚಿನ ಪದಕ ಗೆದ್ದಿದ್ದಾರೆ. ರಾಯ್ಪುರದ ಅಂತಾರಾಷ್ಟ್ರೀಯ ಈಜುಕೊಳದ ಗ್ಯಾಲರಿಯಲ್ಲಿ “ಕಮಾನ್ ಕೀರ್ತನ್… ಕಮಾನ್ ಕೀರ್ತನ್” ಎಂದು ಹುರಿದುಂಬಿಸುತ್ತಿರುವ ಸೌಮ್ಯ ಅವರು ತನ್ನಿಬ್ಬರೂ ಮಕ್ಕಳನ್ನು ಕ್ರೀಡಾಪಟುಗಳನ್ನಾಗಿ ಮಾಡಬೇಕು ಎಂಬ ಕನಸು ಕಂಡವರು.ಅವರಲ್ಲಿ ಮಗಳು ಭುವಿ ಓದಿನ ಕಡೆಗೆ ಹೆಚ್ಚಿನ ಗಮನ ಹರಿಸಿ ಈಗ ಎಂಬಿಬಿಎಸ್ ಓದುತ್ತಿದ್ದಾರೆ. ಕಿರಿಯ ಮಗ ಕೀರ್ತನ್ ಈಜಿನಲ್ಲಿ ರಾಷ್ಟ್ರ ಮಟ್ಟದಲ್ಲಿ ಮಿಂಚುತ್ತಿದ್ದಾರೆ.

ಸೌಮ್ಯ ಅವರು ವೃತ್ತಿಯಲ್ಲಿ ವಕೀಲರು. ಮೊದಲು ಮೆಟ್ಲೈಫ್ನಲ್ಲಿ ಲೀಗಲ್ ಅಡ್ವೈಸರ್ ಆಗಿದ್ದರು. ಕ್ರೀಡೆಯ ಬಗ್ಗೆ ಅಪಾರ ಪ್ರೀತಿ ಮತ್ತು ಕಾಳಜಿ ಇರಿಸಿಕೊಂಡವರು. ಮಗನ ಈಜಿಗಾಗಿ ಎಲ್ಲೇ ಚಾಂಪಿಯನ್ಷಿಪ್ ನಡೆದರೂ ಹೋಗುತ್ತಾರೆ. “ಕೀರ್ತನ್ ಐದು ವರ್ಷದಿಂದ ಈಜು ಕಲಿಯುತ್ತಿದ್ದಾನೆ, ಈಗ ಅವನಿಗೆ 16 ವರ್ಷ. ಕ್ರೀಡೆಯಿಂದಾಗಿ ನಮ್ಮ ಮಕ್ಕಳಿಗೆ ಸಾಕಷ್ಟು ಅನುಕೂಲವಾಗಿದೆ. ಮೊಬೈಲ್ನಿಂದ ದೂರ ಇದ್ದು ಬಹಳ ಚುರುಕಾಗಿದ್ದಾರೆ. ಕ್ರೀಡೆಗೆ ಸೇರಿಸಿದ್ದರಿಂದ ಅವರ ಓದಿನಲ್ಲಿ ಯಾವುದೇ ಹಿನ್ನಡೆ ಆಗಲಿಲ್ಲ. ಕ್ರೀಡೆಯಿಂದಾಗಿ ಓದಿನ ಕಡೆಗೆ ಹೆಚ್ಚು ಏಕಾಗ್ರತೆ ವಹಿಸಲು ನೆರವಾಗಿದೆ. ಮಗನ ಈಜಿಗಾಗಿ ಕೆಲಸ ತೊರೆದ್ದದ್ದು ಈಗ ಖುಷಿ ಕೊಟ್ಟಿದೆ,ʼ ಎಂದು ಸೌಮ್ಯ ಅವರು ಹೇಳಿದ್ದಾರೆ.

