Saturday, July 27, 2024

ಕ್ರೀಡಾ ಹಾಸ್ಟೆಲ್‌ಗೆ ಕೀರ್ತಿ ತಂದ ಚಿನ್ನದ ಸಂಪತ್‌

ಸೋಮಶೇಖರ್‌ ಪಡುಕರೆ, ಬೆಂಗಳೂರು

ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡ ನೋವು, ಟೈಲರಿಂಗ್‌ ಮಾಡಿ ಬದುಕು ಕಟ್ಟಿಕೊಳ್ಳುತ್ತಿರುವ ತಾಯಿ, ಸಮಾಜ ಸೇವಕ ನವಲಿ ಹಿರೇಮಠ್‌ ನೀಡಿದ ಸೈಕಲ್‌ ಹೀಗೆ ಸಂಕಷ್ಟಗಳ ನಡುವೆ ಕ್ರೀಡಾ ಬದುಕನ್ನು ಕಟ್ಟಿಕೊಂಡ ಕರ್ನಾಟಕ ಸರಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವಿದ್ಯಾರ್ಥಿ ಸಂಪತ್‌ ಪಾಸ್ಮಲ್‌ ಹರಿಯಾಣದ ಪಂಚಕುಲದಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ಯೂಥ್‌ ಗೇಮ್ಸ್‌ನ ಸೈಕ್ಲಿಂಗ್‌ನಲ್ಲಿ ಚಿನ್ನದ ಪದಕ ಗೆದ್ದು ಕರ್ನಾಟಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

1 ಕಿ.ಮೀ. ಟೈಮ್‌ ಟ್ರಯಲ್‌ ವಿಭಾಗದಲ್ಲಿ ಚಿನ್ನ ಗೆದ್ದ ಹುನಗುಂದ ತಾಲೂಕಿನ ಅಮರಾವತಿ ಗ್ರಾಮದ ಸಂಪತ್‌, ಕಳೆದ ಬಾರಿಯ ಖೇಲೋ ಇಂಡಿಯಾ ಯೂಥ್‌ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು.

ಅನಿತಾ ನಿಂಬರ್ಗಿ ನೆರವು: ಸಂಪತ್‌ ಎರಡನೇ ವಯಸ್ಸಿನಲ್ಲಿರುವಾಗ ತಂದೆ ವಿಷ್ಣುವರ್ಧನ್‌ ಅಕಾಲಿಕ ಮರಣಕ್ಕೆ ತುತ್ತಾದರು. ಇದರಿಂದಾಗಿ ತಾಯಿ ರೇಣುಕಾ ಅವರಿಗೆ ಬದುಕು ಕಷ್ಟವಾಯಿತು. ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದ ಸಂಪತ್‌ಗೆ ಸೈಕ್ಲಿಂಗ್‌ನಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಿದವರು ಬಾಗಲಕೋಟೆಯಲ್ಲಿರುವ ಸರಕಾರಿ ಕ್ರೀಡಾ ಹಾಸ್ಟೆಲ್‌ನ ಕೋಚ್‌ ಅನಿತಾ ನಿಂಬರ್ಗಿ ಅವರು. ಸೈಕಲ್‌ನಲ್ಲಿ ಸ್ಪರ್ಧಿಸಬೇಕೆಂದಿದ್ದ ಸಂಪತ್‌ಗೆ ಸೈಕಲ್‌ ಇರಲಿಲ್ಲ.  ಸಮಾಜ ಸೇವಕರಾದ ನವಲಿ ಹಿರೇಮಠ್‌ ಸಂಪತ್‌ ಅವರ ಆಸಕ್ತಿ ನೋಡಿ ಒಂದು ಸೈಕಲನ್ನು ಉಡುಗೊರೆಯಾಗಿ ನೀಡಿದರು. ಈ ನಡುವೆ ಸಂಪತ್‌ ಹೆಚ್ಚಿನ ಅಭ್ಯಾಸಕ್ಕಾಗಿ ಸೈಕ್ಲಿಂಗ್‌ ಕಣಜ ಬಿಜಾಪುರದಲ್ಲಿರುವ ಕ್ರೀಡಾ ಹಾಸ್ಟೆಲ್‌ ಸೇರಿದರು.

ಹರಿಯಾಣದಲ್ಲಿ ಬೆಳ್ಳಿ: ಸಂಪತ್‌ ಭಾಗವಹಿಸಿದ ರಾಷ್ಟ್ರಮಟ್ಟದ ಮೊದಲ ಸ್ಪರ್ಧೆಯಲ್ಲಿಯೇ ಬೆಳ್ಳಿ ಗೆದ್ದರು. 2018ರಲ್ಲಿ ಹರಿಯಾಣದಲ್ಲಿ ನಡೆದ ರಾಷ್ಟ್ರೀಯ ಚಾಠಂಪಿಯನ್‌ಷಿಪ್‌ ಸಂಪತ್‌ಗೆ ಹೊಸ ಹುರುಪನ್ನು ನೀಡಿತು. ನಂತರ ಖೇಲೋ ಇಂಡಿಯಾ ಯೂಥ್‌ ಗೇಮ್ಸ್‌ನಲ್ಲಿ ಭಾಗವಹಿಸಿ ಕಂಚಿನ ಪದಕ ಗೆದ್ದರು. ಈಗ ಚಿನ್ನಕ್ಕೆ ಮುತ್ತಿಟ್ಟಿದ್ದಾರೆ.

ಏಷ್ಯನ್‌ ಚಾಂಪಿಯನ್‌ಷಿಪ್‌ಗೆ ಆಯ್ಕೆ: ದಿಲ್ಲಿಯ ಇಂದಿರಾ ಗಾಂಧಿ ಸೈಕಲ್‌ ವೆಲೋಡ್ರೋಮ್‌ನಲ್ಲಿ ನಡೆಯಲಿರುವ ಏಷ್ಯನ್‌ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ಗೆ ಆಯ್ಕೆಯಾಗಿರುವ ಸಂಪತ್‌ ಈಗ ಕೇಂದ್ರ ಸರಕಾರದ ಖೇಲೋ ಇಂಡಿಯಾ ಯೋಜನೆಯಡಿ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ದಿಲ್ಲಿಯಿಂದ ಸ್ಪೋರ್ಟ್ಸ್‌ ಮೇಲ್‌ ಜತೆ ಮಾತನಾಡಿದ ಸಂಪತ್‌, “ಈ ಪದಕ ತಾಯಿಗೆ ಅರ್ಪಣೆ. ನನ್ನ ಕ್ರೀಡಾ ಬದುಕಿಗಾಗಿ ಅವರು ನಿತ್ಯವೂ ಶ್ರಮ ಪಡುತ್ತಿದ್ದಾರೆ. ಜೊತೆಯಲ್ಲಿ ಅಕ್ಕನ ಶಿಕ್ಷಣಕ್ಕೂ ನೆರವಾಗುತ್ತಿದ್ದಾರೆ. ಖೇಲೋ ಇಂಡಿಯಾದ ಯೋಜನೆಯಲ್ಲಿ ಸ್ಪರ್ಧಿಸುವ ಅವಕಾಶ ಸಿಕ್ಕಿದ್ದರಿಂದ ವಿದ್ಯಾರ್ಥಿ ವೇತನ ಸಿಗುತ್ತದೆ, ಅದರಲ್ಲೇ ಖರ್ಚು ವೆಚ್ಚ ಮತ್ತು ಮನೆ ನೋಡಿಕೊಳ್ಳುತ್ತಿದ್ದೇನೆ. ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆದ್ದು ದೇಶಕ್ಕೆ ಕೀರ್ತಿ ತರಬೇಕೆಂಬ ಹಂಬಲ. ಅದಕ್ಕಾಗಿ ಕಠಿಣ ಶ್ರಮ ವಹಿಸುವೆ. ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ನೆರವಿಗೆ ನಾನು ಚಿರಋಣಿಯಾಗಿದ್ದೇನೆ. ಮೊದಲು ಸೈಕಲ್‌ ನೀಡಿ ಪ್ರೋತ್ಸಾಹಿಸಿದ ನವಲಿ ಹಿರೇಮಠ್‌ ಮತ್ತು ಸೈಕ್ಲಿಂಗ್‌ ಸೇರುವಂತೆ ಪ್ರೋತ್ಸಾಹಿಸಿದ ನನ್ನ ಗುರುಗಳಾದ ಅನಿತಾ ನಿಂಬರ್ಗಿ ಅವರಿಗೆ ನಾನು ಚಿರಋಣಿ,” ಎಂದಿದ್ದಾರೆ.

ಮನದಲ್ಲಿ ಮನೆ:

6ನೇ ತರಗತಿಯಿಂದ ಕ್ರೀಡಾ ಇಲಾಖೆಯ ಹಾಸ್ಟೆಲ್‌ಗೆ ಸೇರಿದ ಸಂಪತ್‌ ಈಗ ದ್ವಿತೀಯ ಪಿಯುಸಿ ಓದುತ್ತಿದ್ದಾರೆ. 18 ವರ್ಷದ ಸಂಪತ್‌ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದು, ಯಾವುದಾದರೂ ಕೆಲಸಕ್ಕೆ ಸೇರಿ, ತಾಯಿಗಾಗಿ ಸ್ವಂತ ಮನೆ ಕಟ್ಟಬೇಕೆಂಬ ಹಂಬಲ, “ನಾವು ಇರುವುದು ಬಾಡಿಗೆ ಮನೆಯಲ್ಲಿ. ತಾಯಿಯ ದುಡಿಮೆ ಅಷ್ಟಕಷ್ಟೇ, ಅಕ್ಕನ ವಿದ್ಯಾಭ್ಯಾಸ ಮುಗಿದು ಎಲ್ಲಿಯಾದರೂ ಕೆಲಸ ಸಿಕ್ಕರೆ ನಮ್ಮ ಬದುಕು ಸ್ವಲ್ಪ ಸುಧಾರಿಸಿಕೊಳ್ಳುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದು, ಎಲ್ಲಿಯಾದರೂ ಕೆಲಸಕ್ಕೆ ಸೇರಿ ಸ್ವಂತ ಮನೆ ಕಟ್ಟಬೇಕೆಂಬುದು ನನ್ನ ಹಿರಿಯ ಆಸೆ,” ಎಂದು ಹೇಳುವ ಸಂಪತ್‌ ಅವರ ಮಾತಿನಲ್ಲಿ ಆತ್ಮವಿಶ್ವಾಸ ಮನೆ ಮಾಡಿತ್ತು.

Related Articles