Saturday, October 12, 2024

ಇಂದಿನಿಂದ ಬೆಂಗಳೂರು ಕಪ್‌ ಅಖಿಲ ಭಾರತ ಹಾಕಿ ಟೂರ್ನಿ ಆರಂಭ

ಸ್ಪೋರ್ಟ್ಸ್ ಮೇಲ್ ವರದಿ

ಹಾಕಿ ಕರ್ನಾಟಕದ ವತಿಯಿಂದ 2019ರ ಡೊಲೊ -650 ಬೆಂಗಳೂರು ಕಪ್ ಆಹ್ವಾನಿತ ಅಖಿಲ ಭಾರತ ಹಾಕಿ ಟೂರ್ನಿ(ಪುರುಷರು)ಯು ಆ.10 ರಂದು ಬೆಂಗಳೂರಿನ ಫೀಲ್ಡ್ ಮಾರ್ಷಲ್ ಕೆ.ಎಂ ಕಾರಿಯಪ್ಪ ಹಾಕಿ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. 


ನಾಲ್ಕನೇ ಆವೃತ್ತಿಯ ಟೂರ್ನಿ ಇದಾಗಿದ್ದು, ದೇಶೀಯ ಮಟ್ಟದ ಅಗ್ರ ಎಂಟು ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. ಪ್ರಥಮ ಬಹುಮಾನ 4 ಲಕ್ಷ ರೂ. ಹಾಗೂ ರನ್ನರ್‌ ಅಪ್‌ ತಂಡ 2 ಲಕ್ಷ ರೂ. ಬಹುಮಾನ ಪಡೆದುಕೊಳ್ಳಲಿವೆ.
 ಟೂರ್ನಿಯ ರೌಂಡ್‌ ರೊಬಿನ್‌ ಮಾದರಿಯಲ್ಲಿ ನಡೆಯಲಿದ್ದು, ಇಂಡಿಯನ್‌ ಆಯಿಲ್‌ ಕಾರ್ಪೋರೇಷನ್‌ ಲಿ. ಮುಂಬೈ (ಐಓಸಿಎಲ್‌), ಭಾರತ್‌ ಪೆಟ್ರೋಲಿಯಮ್‌ ಕಾರ್ಪೋರೇಷನ್‌ ಲಿಮಿಟೆಡ್‌, ಮುಂಬೈ (ಬಿಪಿಸಿಎಲ್‌), ಇಂಡಿಯನ್‌ ನ್ಯಾವಿ, ನವದೆಹಲಿ, ಆಲ್‌ ಇಂಡಿಯಾ ಕಾಸ್ಟಮ್ಸ್‌, ಮುಂಬೈ ತಂಡಗಳು ‘ಎ’ ಗುಂಪಿನಲ್ಲಿ ಮುಖಾಮುಖಿಯಾಗಲಿವೆ. 
‘ಬಿ’ ಗುಂಪಿನಲ್ಲಿ ಆರ್ಮಿ ಇಲೆವೆನ್‌, ಏರ್‌ ಇಂಡಿಯಾ(ಮುಂಬೈ), ಇಂಡಿಯನ್‌ ಏರ್‌ಪೋರ್ಸ್ (ನವದೆಹಲಿ) ಹಾಗೂ ಆತಿಥೇಯ ಹಾಕಿ ಕರ್ನಾಟಕ ತಂಡಗಳು ಸೆಣಸಲಿವೆ. ರೌಂಡ್‌ ರೊಬಿನ್‌ ಹಂತದಲ್ಲಿ ಎರಡೂ ಗುಂಪಿನಲ್ಲಿ ಅಗ್ರ ಎರಡು ಸ್ಥಾನ ಪಡೆದ ತಂಡಗಳು ಆ. 17 ರಂದು ಸೆಮಿಫೈನಲ್‌ನಲ್ಲಿ ಕಾದಾಟಗಳಲ್ಲಿ ನಡೆಸಲಿವೆ. ಆ.18 ರಂದು ಫೈನಲ್‌ ಜರುಗಲಿದೆ. 
“ಬೆಂಗಳೂರು ಕಪ್ ಅಖಿಲ ಭಾರತ ಹಾಕಿ ಟೂರ್ನಿ(ಪುರುಷರು)ಯನ್ನು ಮರಳಿ ಆಯೋಜನೆ ಮಾಡುತ್ತಿರುವುದನ್ನು ಘೋಷಿಸಲು ನಾವು ಸಂತೋಷಪಡುತ್ತೇವೆ. ಹಾಕಿ ಕರ್ನಾಟಕದಲ್ಲಿ ನಾವು ನಡೆಸಿದ ಪ್ರಯತ್ನಗಳು ರಾಜ್ಯದಲ್ಲಿ ಮತ್ತೊಮ್ಮೆ ಹಾಕಿ ಪುನರುಜ್ಜೀವನಗೊಳಿಸುವ ಕಡೆಗೆ ಮತ್ತು ಅದ್ಭುತ ದಿನಗಳನ್ನು ಮರಳಿ ತರಲು ನಾವು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ನಾಲ್ಕನೇ ಆವೃತ್ತಿಯ ಟೂರ್ನಿಯಲ್ಲಿ ಭಾರತದ ಅಗ್ರ ಆಟಗಾರರು ಭಾಗವಹಿಸಲಿದ್ದಾರೆ ಎಂಬ ನಂಬಿಕೆ ಇದೆ. ಟೂರ್ನಿಯು ಉತ್ತಮ ಪ್ರೇಕ್ಷಕರು ಹಾಗೂ ಯುವ ಪ್ರತಿಭೆಗಳು ಕ್ರೀಡಾಂಗಣಕ್ಕೆ ಆಗಮಿಸಿ ತಮ್ಮ ನೆಚ್ಚಿನ ತಾರೆಗಳನ್ನು ಕಣ್ತುಂಬಿಸಿಕೊಳ್ಳಲಿದ್ದಾರೆ” ಎಂದು ಹಾಕಿ ಕರ್ನಾಟಕದ ಡಾ. ಎಸ್‌ವಿಎಸ್‌ ಸುಬ್ರಮಣ್ಯ ಗುಪ್ತಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
 ಭಾರತದ ಅಗ್ರ ಆಟಗಾರರು ನಾಲ್ಕನೇ ಆವೃತ್ತಿಯಲ್ಲಿ ಆಡಲಿದ್ದಾರೆಂಬ ನಂಬಿಕೆ ಇದೆ. ಇವರ ಭಾಗವಹಿಸುವಿಕೆಯಿಂದ ರಾಜ್ಯದ ಯುವ ಆಟಗಾರರು ತಮ್ಮ ಫೇವರಿಟ್‌ ಆಟಗಾರರ ಆಟವನ್ನು ಕಣ್ತುಂಬಿಸಿಕೊಳ್ಳಲಿದ್ದಾರೆ. 
ಸತತ ಎಂಟು ದಿನಗಳ ಕಾಲ ನಡೆಯುವ ಟೂರ್ನಿಯಲ್ಲಿ ಭಾರತ ತಂಡದ ಆಟಗಾರರು ಭಾಗವಹಿಸುವುದರಿಂದ ಹೆಚ್ಚು ಕುತೂಹಲ ಹಾಗೂ ಭಾರಿ ಪೈಪೋಟಿ ನಿರೀಕ್ಷಿಸಲಾಗಿದೆ. ತವರು ರಾಜ್ಯದ ಆಟಗಾರರಾದ ಒಲಿಂಪಿಯನ್‌ ವಿ.ಆರ್‌ ರಘುನಾಥ್‌ ಹಾಗೂ ಎಸ್‌.ಕೆ ಉತ್ತಪ್ಪ ಅವರು ಐಓಸಿಎಲ್‌ ತಂಡವನ್ನು ಪ್ರತಿನಿಧಿಸಲಿದ್ದಾರೆ. ಇವರ ಜತೆ  ಪ್ರತಿಭಾನ್ವಿತ ಮುಂಚೂಣಿ ಆಟಗಾರರಾದ ತಲ್ವಿಂದರ್‌ ಸಿಂಗ್‌ ಹಾಗೂ ಅಫ್ಫಾನ್‌ ಯುಸೂಫ್‌ ಆಡಲಿದ್ದಾರೆ. ಏರ್‌ ಇಂಡಿಯಾ ತಂಡದಲ್ಲಿ ಭಾರತ ತಂಡದ ಮಾಜಿ ಗೋಲ್‌ ಕೀಪರ್‌ ಆ್ಯಡ್ರಿಯನ್‌ ಡಿ ಸೌಜಾ ಹಾಗೂ ವಿನಯ್‌ ಅವರು ಕೀ ಆಟಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ.
ಬಿಪಿಸಿಎಲ್‌ ತಂಡದಲ್ಲಿ ಹಿರಿಯ ಆಟಗಾರ ತುಷಾರ್‌ ಕಿಂಡೇಕರ್‌, ಒಲಿಂಪಿಯನ್‌ ದೇವೆಂದರ್‌ ವಾಲ್ಮಿಕಿ ಮತ್ತು ಕಿರಿಯರ ವಿಶ್ವಕಪ್‌ ವಿಜೇತ ತಂಡದ ನಾಯಕ ಹರ್ಜೀತ್‌ ಸಿಂಗ್‌ ಆಡಲಿದ್ದಾರೆ. ನಿಕ್ಕಿಮ್‌ ತಿಮ್ಮಯ್ಯ ಅವರು ಹಾಕಿ ಕರ್ನಾಟಕದ ಪರ ಕಣಕ್ಕೆ ಇಳಿಯಲಿದ್ದಾರೆ.
ಕಳೆದ 2017ರಲ್ಲಿ ಭುವನೇಶ್ವರದಲ್ಲಿ ನಡೆದಿದ್ದ ವಿಶ್ವ ಲೀಗ್ ಫೈನಲ್‌ನಲ್ಲಿ ಭಾರತ ಪರವಾಗಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದ ಆರ್ಮಿ ಇಲೆವೆನ್ ಗೋಲ್‌ಕೀಪರ್ ಆಕಾಶ್ ಚಿಕ್ಟೆ ಕೂಡ ಒಂದು ವರ್ಷದಿಂದ ಅಂಗಳದಿಂದ ಹೊರಗುಳಿದ ನಂತರ ತಮ್ಮ ಗೆಲುವಿನ ದಾರಿಗಳನ್ನು ಕಂಡುಕೊಳ್ಳುವ ಭರವಸೆಯೊಂದಿಗೆ ಕಣಕ್ಕೆ ಇಳಿಯಲಿದ್ದಾರೆ.
 “ಈ ಟೂರ್ನಿಯು ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆಯಾಗಲು ಸ್ಪರ್ಧಿಸುತ್ತಿರುವ ಯುವ ಭಾರತದ ಆಟಗಾರರಿಗೆ ಉತ್ತಮ ಅವಕಾಶವನ್ನು ಒದಗಿಸಲಿದೆ. ದೇಶೀಯ ಅಗ್ರ ತಂಡಗಳ ವಿರುದ್ಧ ಅವರು ಆಡುವುದರಿಂದ ಉತ್ತಮ ಪಂದ್ಯ ಅನುಭವವಾಗಲಿದ್ದು, ರಾಷ್ಟ್ರೀಯ ತಂಡದಲ್ಲಿ ಹೆಚ್ಚು ಅವಧಿ ಉಳಿಯಲು ಈ ಟೂರ್ನಿ ಸಹಾಯವಾಗಲಿದೆ” ಎಂದು ಹಾಕಿ ಕರ್ನಾಟಕದ ಉಪಾಧ್ಯಕ್ಷ ರಘುನಾಥ್‌ ತಿಳಿಸಿದ್ದಾರೆ.

2017ರಲ್ಲಿ ನಡೆದಿದ್ದ ಆವೃತ್ತಿಯಲ್ಲಿ ಓಎನ್‌ಜಿಸಿ ತಂಡ ಚಾಂಪಿಯನ್‌ ಆಗಿತ್ತು. ದಕ್ಷಿಣ ಕೇಂದ್ರ ರೈಲ್ವೆ ತಂಡವೂ ರನ್ನರ್‌ ಅಪ್‌ ಆಗಿತ್ತು.

Related Articles