Friday, February 23, 2024

ಒಂದೇ ಮನೆಯಲ್ಲಿ ಮೂವರು ಹಾಕಿ ಚಾಂಪಿಯನ್ನರು!

ಸೋಮಶೇಖರ್‌ ಪಡುಕರೆ, ಬೆಂಗಳೂರು:

ಮೊಹಮ್ಮದ್‌ ನಾಸಿರುದ್ದೀನ್‌ ಕರ್ನಾಟಕದ ರಾಷ್ಟ್ರೀಯ ಹಾಕಿ ಆಟಗಾರ, ಅವರ ಹಿರಿಯ ಮಗ ಮೊಹಮ್ಮದ್‌ ನೈನುದ್ದೀನ್‌ ರಾಷ್ಟ್ರೀಯ ಚಾಂಪಿಯನ್‌ ಹಾಕಿ ಆಟಗಾರ, ಕಿರಿಯ ಮಗ ರಾಹೀಲ್‌ ಮೊಹಮ್ಮದ್‌ ರಾಷ್ಟ್ರೀಯ ಆಟಗಾರ..ಹೀಗೆ ಬೆಂಗಳೂರಿನ ಬಾಣಸವಾಡಿಯಲ್ಲಿರುವ ಮನೆಯೊಂದು ಹಾಕಿ ಚಾಂಪಿಯನ್ನರಿಂದ ಶ್ರೀಮಂತಗೊಂಡಿದೆ.

ಇತ್ತೀಚಿಗೆ ಸ್ವಿಜರ್ಲೆಂಡ್‌ನಲ್ಲಿ ನಡೆದ ಮೊದಲ ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್‌ (ಎಫ್‌ಐಎಚ್‌) 5s ಹಾಕಿ ಲೀಗ್‌ನಲ್ಲಿ ಭಾರತ ತಂಡ ಫೈನಲ್‌ ಪಂದ್ಯದಲ್ಲಿ ಪೊಲೆಂಡ್‌ ವಿರುದ್ಧ 6-4 ಗೋಲುಗಳ ಅಂತರದಲ್ಲಿ ಜಯ ಗಳಿಸಿ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿತು. ಈ ಚಾಂಪಿಯನ್‌ಷಿಪ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿರುವ ಕರ್ನಾಟಕದ ರಾಹೀಲ್‌ ಮೊಹಮ್ಮದ್‌ ಚಾಂಪಿಯನ್‌ಷಿಪ್‌ನ ಶ್ರೇಷ್ಠ ಆಟಗಾರ ಹಾಗೂ ಅತಿ ಹೆಚ್ಚು ಗೋಲ್‌ ಗಳಿಸಿದ ಆಟಗಾರ ಎಂಬ ಗೌರವಕ್ಕೆ ಪಾತ್ರರಾದರು.

ಕರ್ನಾಟಕ ಹಾಕಿ ತಂಡದ ಮಾಜಿ ನಾಯಕ ರಾಹೀಲ್‌ ಈಗ ಭಾರತ ಹಾಕಿ ತಂಡದ ಕೋರ್‌ ಗ್ರೂಪ್‌ನಲ್ಲಿರುವ ಆಟಗಾರ. ಕಳೆದ ಬಾರಿಯ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ನಲ್ಲಿ ಬೆಂಗಳೂರು ಸೆಂಟ್ರಲ್‌ ವಿಶ್ವವಿದ್ಯಾನಿಲಯ ತಂಡ ಚಾಂಪಿಯನ್‌ ಪಟ್ಟ ಗೆದ್ದಾಗ ರಾಹೀಲ್‌ ತಂಡದ ನಾಯಕತ್ವ ವಹಿಸಿದ್ದರು. ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸಿದವರು.

ಮೂವರು ಚಾಂಪಿಯನ್ನರು: ರಾಹೀಲ್‌ ಅವರನ್ನು ಮಾತನಾಡಿಸಿದಾಗ ಅವರ ತಂದೆ ಮೊಹಮ್ಮದ್‌ ನಾಸೀರುದ್ದೀನ್‌, ಅಣ್ಣ ಮೊಹಮ್ಮದ್‌ ನೈನುದ್ದೀನ್‌ ಕೂಡ ರಾಷ್ಟ್ರೀಯ ಹಾಕಿ ಆಟಗಾರರೆಂಬುದು ತಿಳಿದು ಬಂತು. ನಾಸೀರುದ್ದೀನ್‌ ಎಚ್‌ಎಎಲ್‌ನಲ್ಲಿ ಉದ್ಯೋಗಿಯಾಗಿದ್ದು, ರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಫಾರ್ವರ್ಡ್‌ ಆಟಗಾರ. ತನ್ನಂತೆಯೇ ಮಕ್ಕಳು ಹಾಕಿಯಲ್ಲಿ ದೇಶವನ್ನು ಪ್ರತಿನಿಧಿಸಬೇಕೆಂಬ ಹಂಬಲ ಹೊತ್ತ ನಾಸೀರುದ್ದೀನ್‌ ತನ್ನ ಇಬ್ಬರೂ ಮಕ್ಕಳಿಗೂ ಹಾಕಿ ತರಬೇತಿ ನೀಡಿದರು. ಇಬ್ಬರು ಕೂಡ ಚಾಂಪಿಯನ್‌ ಕರ್ನಾಟಕ ತಂಡದ ಆಟಗಾರರು. ಈ ಇಬ್ಬರೂ ಸಹೋದರರು ಸಿಎಜಿಯಲ್ಲಿ ಉದ್ಯೋಗಿಗಳಾಗಿದ್ದು, ಕರ್ನಾಟಕದ ಹಾಕಿಯ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿರುತ್ತಾರೆ.

“ತಂದೆಯವರು ಹಾಕಿ ಆಡಿದ್ದಾರೆ, ಅಣ್ಣನೂ ಹಾಕಿ ಆಡಿದ್ದಾನೆ ಅವರ ಹೆಜ್ಜೆಯಲ್ಲೇ ಮುಂದೆ ಸಾಗಿ ನಾನು ಹಾಕಿ ಅಡುತ್ತಿದ್ದೇನೆ. 2020ರಲ್ಲಿ ಕರ್ನಾಟಕ ತಂಡದ ನಾಯಕತ್ವ ವಹಿಸಿರುವೆ. ನನ್ನ ನಾಯಕತ್ವದಲ್ಲಿ ಬೆಂಗಳೂರು ಸೆಂಟ್ರಲ್‌ ವಿಶ್ವವಿದ್ಯಾನಿಲಯ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿತ್ತು. ಸ್ವಿಜರ್ಲೆಂಡ್‌ನಲ್ಲಿ ನಡೆದ 5s ಅಂತಾರಾಷ್ಟ್ರೀಯ ಹಾಕಿ ಲೀಗ್‌ನಲ್ಲಿ ದೇಶವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿತು. ಉತ್ತಮವಾಗಿಯೇ ಆಡಿದೆ. ಅದಕ್ಕೆ ತಕ್ಕಂತೆ ಉತ್ತಮ ಆಟಗಾರ, ಅತಿ ಹೆಚ್ಚು ಗೋಲು ಗಳಿಸಿದ ಆಟಗಾರನೆಂಬ ಗೌರವ ಸಿಕ್ಕಿತು. ಇದಕ್ಕೆಲ್ಲ ನಮ್ಮ ತಂದೆಯೇ ಕಾರಣ. ಅವರು ಕ್ರೀಡೆಯಲ್ಲಿ ತೊಡಗಿಕೊಂಡು, ನಮ್ಮನ್ನು ಹಾಕಿ ಆಟಗಾರರನ್ನಾಗಿ ಮಾಡಿದ್ದರಿಂದ ಇಂದು ರಾಜ್ಯಕ್ಕಾಗಿ ಆಡುವ ಅವಕಾಶ ಸಿಕ್ಕಿದೆ. ಹಾಕಿ ಇಂಡಿಯಾದ 33 ಆಟಗಾರರ ಪಟ್ಟಿಯಲ್ಲಿರುವ. 11 ಆಟಗಾರರ ತಂಡದಲ್ಲಿ ಅವಕಾಶ ಪಡೆಯಲು ಉತ್ಮ ರೀತಿಯಲ್ಲಿ ಶ್ರಮವಹಿಸುವೆ. ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸುವುದು ನನ್ನ ಗುರಿ,” ಎಂದು ಸುರಾನ ಕಾಲೇಜಿನ ಪ್ರತಿಭೆ ರಾಹೀಲ್‌ ಮೊಹಮ್ಮದ್‌ ಹೇಳಿದ್ದಾರೆ. ಸಹೋದರರಿಬ್ಬರೂ ಸಿಎಜಿಯಲ್ಲಿ ಉದ್ಯೋಗದಲ್ಲಿದ್ದಾರೆ.

5s ಮಿನಿ ಹಾಕಿ : ಐದು ಆಟಗಾರರನ್ನೊಳಗೊಂಡ ಮಿನಿ ಹಾಕಿಯೇ 5s. ಇದು ಕ್ರಿಕೆಟ್‌ನಲ್ಲಿ ಟಿ20 ಇದ್ದಂತೆ.  ನಾಲ್ವರು ಆಟಗಾರರು ಮತ್ತು ಒಬ್ಬ ಗೋಲ್‌ ಕೀಪರ್‌ ಇರುತ್ತಾರೆ.  ಕಳೆದ ನಾಲ್ಕು ವರ್ಷಗಳಿಂದ ಈ ಮಾದರಿಯ ಹಾಕಿ ಭಾರತದಲ್ಲಿ  ನಡೆಯುತ್ತಿದೆ. ಕರ್ನಾಟಕ ಮೂರು ಬಾರಿ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿದೆ. ರಾಹೀಲ್‌ ರಾಷ್ಟ್ರಮಟ್ಟದಲ್ಲಿ ಪೂರ್ಣಪ್ರಮಾಣದ ಮಾದರಿಯ ಆಟದಲ್ಲಿ 5 ಗೋಲುಗಳನ್ನು ಗಳಿಸಿದ್ದರೆ, 5sನಲ್ಲಿ 19 ಗೋಲುಗಳನ್ನು ಗಳಿಸಿರುತ್ತಾರೆ.

ತಾಜ್‌ ಬೇಗಂ ಹಾಗೂ ಮೊಹಮ್ಮದ್‌ ನಾಸೀರುದ್ದೀನ್‌ ಅವರ ಮಗನಾಗಿರುವ ರಾಹೀಲ್‌, ಭಾರತ ತಂಡದಲ್ಲಿ ಸ್ಥಾನ ಗಳಿಸುವ ಆತ್ಮವಿಶ್ವಾಸ ಹೊಂದಿದ್ದಾರೆ.

Related Articles