Friday, October 4, 2024

Hero Santosh Trophy Final ಮೈಸೂರಿನ ಗತ ವೈಭವ ಮರುಕಳಿಸೀತೆ?

ಕರ್ನಾಟಕ ಫುಟ್ಬಾಲ್ ತಂಡ 48 ವರ್ಷಗಳ ಬಳಿ ಸಂತೋಷ್ ಟ್ರೋಫಿ ರಾಷ್ಟ್ರೀಯ ಫುಟ್ಬಾಲ್ ಚಾಂಪಿಯನ್ಷಿಪ್ನ (Hero Santosh Trophy Final) ಫೈನಲ್ ತಲುಪಿದೆ. ಶನಿವಾರ ಸೌಧಿ ಅರೇಬಿಯಾದ ರಿಯಾಧ್ನಲ್ಲಿರುವ ಕಿಂಗ್ ಫಹಾದ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ (King Fahd International Stadium) ಮೇಘಾಲಯ ವಿರುದ್ಧ ಪ್ರತಿಷ್ಠಿತ ಪ್ರಶಸ್ತಿಗಾಗಿ ಸೆಣಸಲಿದೆ.

1975-76ರಲ್ಲಿ ಕೋಝಿಕ್ಕೋಡ್ನಲ್ಲಿ ನಡೆದ ಚಾಂಪಿಯನ್ಷಿಪ್ನಲ್ಲಿ ಕರ್ನಾಟಕ ತಂಡ ಫೈನಲ್ ಪ್ರವೇಶಿಸಿ ಬಂಗಾಳ ವಿರುದ್ಧ 1-3 ಗೋಲುಗಳ ಅಂತರದಲ್ಲಿ ಸೋತು ಪ್ರಶಸ್ತಿಯಿಂದ ವಂಚಿತವಾಗಿತ್ತು.

ಮೇಘಾಲಯ ವಿರುದ್ಧದ ಫೈನಲ್ (Hero Santosh Trophy Final) ಪಂದ್ಯದಲ್ಲಿ ಕರ್ನಾಟಕ ಜಯ ಗಳಿಸಿದರೆ ಕರ್ನಾಟಕ ಏಕೀಕರಣವಾದ ನಂತರ ಮೊದಲ ಪ್ರಶಸ್ತಿ ಇದಾಗಲಿದೆ. 1968-69ರಲ್ಲಿ ಮೈಸೂರು ತಂಡ ಬೆಂಗಳೂರಿನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಬಂಗಾಳ ತಂಡದ ವಿರುದ್ಧ 1-0 ಗೋಲುಗಳ ಅಂತರದಲ್ಲಿ ಜಯ ಗಳಿಸಿ ಪ್ರಶಸ್ತಿ ಗೆದ್ದಿತ್ತು. ಕಳೆದ 54 ವರ್ಷಗಳಿಂದ ಕರ್ನಾಟಕದ ಆಟಗಾರರು ಸಂತೋಷ್ ಟ್ರೋಫಿಗೆ ಮುತ್ತಿಡಲಿಲ್ಲ.

ಮರುಕಳಿಸೀತೆ ಗತವೈಭವ?: 82 ವರ್ಷಗಳ ಸಂತೋಷ್ ಟ್ರೋಫಿಯ ಇತಿಹಾಸವನ್ನು ಗಮನಿಸಿದಾಗ ಮೈಸೂರು ರಾಜ್ಯ ನಾಲ್ಕು ಬಾರಿ ಪ್ರಶಸ್ತಿ ಗೆದ್ದಿತ್ತು. ಇದರಲ್ಲಿ ಬೆಂಗಳೂರಿನಲ್ಲಿ ನಡೆದ ಫೈನಲ್ ಪಂದ್ಯಗಳಲ್ಲಿ ಜಯ ಗಳಿಸಿರುವುದೇ ಹೆಚ್ಚು. ಒಂದು ಬಾರಿ ಪಂಜಾಬ್ ವಿರುದ್ಧ ಫೈನಲ್ ಆಡಿ ಸೋತಿರುವುದನ್ನು ಹೊರತುಪಡಿಸಿದರೆ ಮೈಸೂರು ತಂಡಕ್ಕೆ ಫೈನಲ್ನಲ್ಲಿ ಎದುರಾದದ್ದು ಬಂಗಾಳ ತಂಡವೇ ಹೆಚ್ಚು. ಈಗ ಮೇಘಾಲಯ ವಿರುದ್ಧ ಜಯ ಗಳಿಸಿದೆ ಕರ್ನಾಟಕದ ಕ್ರೀಡಾ ಇತಿಹಾಸದಲ್ಲಿ ಹೊಸ ಅಧ್ಯಾಯನ ನಿರ್ಮಾಣವಾಗಲಿದೆ.

1946-47ರ ಚಾಂಪಿಯನ್ಷಿಪ್ನ ಫೈನಲ್ ಪಂದ್ಯ ಬೆಂಗಳೂರಿನಲ್ಲಿ ನಡೆದಿತ್ತು. ಮೈಸೂರು ಹಾಗೂ ಬಂಗಾಳ ತಂಡಗಳು ಫೈನಲ್ ಪ್ರವೇಶಿಸಿದ್ದವು. ಫೈನಲ್ ಪಂದ್ಯದಲ್ಲಿ ಮೈಸೂರು 2-1 ಗೋಲುಗಳ ಅಂತರದಲ್ಲಿ ಜಯ ಗಳಿಸಿ ಮೊದಲ ಬಾರಿಗೆ ಪ್ರಶಸ್ತಿ ಗೆದ್ದುಕೊಂಡಿತ್ತು.

ನಂತರ 1952-53ರಲ್ಲೂ ಫೈನಲ್ ಪಂದ್ಯ ಬೆಂಗಳೂರಿನಲ್ಲೇ ನಡೆದಿತ್ತು. ಅಲ್ಲಿ ಮೈಸೂರಿನ ಎದುರಾಳಿ ಬಂಗಾಳ. ಫೈನಲ್ ಪಂದ್ಯದಲ್ಲಿ 1-0 ಗೋಲಿನಿಂದ ಜಯ ಗಳಿಸಿದ ಮೈಸೂರು ಎರಡನೇ ಬಾರಿಗೆ ಪ್ರತಿಷ್ಠಿತ ಟ್ರೋಫಿಗೆ ಮುತ್ತಿಟ್ಟಿತ್ತು.

1953-54ರಲ್ಲಿ ಫೈನಲ್ ಪಂದ್ಯ ಕೋಲ್ಕೊತಾದಲ್ಲಿ ನಡೆದಿತ್ತು. ಈ ಬಾರಿ ಮೈಸೂರಿಗೆ ಅದೃಷ್ಟ ಒಲಿಯಲಿಲ್ಲ, ಮನೆಯಂಗಣದಲ್ಲಿ ನಡೆದ ಪಂದ್ಯದಲ್ಲಿ ಬಂಗಾಳ 3-1 ಗೋಲುಗಳ ಅಂತರದಲ್ಲಿ ಜಯ ಗಳಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿತು.

ಎಂಟು ವರ್ಷಗಳ ಬಳಿಕ ಮೈಸೂರು ತಂಡ ಮತ್ತೊಮ್ಮೆ ಫೈನಲ್ ಪ್ರವೇಶಿಸಿತು. 1962-63ರಲ್ಲಿ ಬೆಂಗಳೂರಿನಲ್ಲಿ ಫೈನಲ್ ಪಂದ್ಯ ನಡೆಯಿತು. ಈ ಬಾರಿ ಮನೆಯಂಗಣದ ಲಾಭವನ್ನು ಪಡೆಯುವಲ್ಲಿ ಮೈಸೂರು ವಿಫಲವಾಯಿತು.2-0 ಗೋಲುಗಳ ಅಂತರದಲ್ಲಿ ಸೋಲನುಭವಿಸಿ ರನ್ನರ್ ಅಪ್ಗೆ ತೃಪ್ತಿಪಟ್ಟಿತು.

ಮತ್ತೆ ನಾಲ್ಕು ವರ್ಷಗಳ ಕಾಲ ಮೈಸೂರು ಫೈನಲ್ ತಲಪುವಲ್ಲಿ ವಿಫಲವಾಯಿತು. 1967-68ರಲ್ಲಿ ಕಟಕ್ನಲ್ಲಿ ಫೈನಲ್ ಪಂದ್ಯ ನಡೆಯಿತು. ಈ ಬಾರಿಯೂ ಬಲಿಷ್ಠ ಬಂಗಾಲ ತಂಡ ಎದುರಾಳಿ. ಏಕೈಕ ಗೋಲಿನಿಂದ ಜಯ ಗಳಿಸಿದ ಮೈಸೂರು ತಂಡ ಮೂರನೇ ಬಾರಿಗೆ ಪ್ರಶಸ್ತಿ ಗೆದ್ದುಕೊಂಡಿತು.

1968-69ರಲ್ಲಿ ಮತ್ತೆ ಬೆಂಗಳೂರಿನಲ್ಲಿ ಫೈನಲ್ ಪಂದ್ಯ. ಈ ಬಾರಿಯೂ ಬಂಗಾಳ ಎದುರಾಳಿ. ಮನೆಯಂಗಣದಲ್ಲಿ ಮಿಂಚಿದ ಮೈಸೂರು 1-0 ಗೋಲುಗಳ ಅಂತರದಲ್ಲಿ ಜಯ ಗಳಿಸಿ ನಾಲ್ಕನೇ ಬಾರಿಗೆ ಪ್ರಶಸ್ತಿ ತನ್ನದಾಗಿಸಿಕೊಂಡಿತು.

1970-71ರಲ್ಲಿ ಪಂಜಾಬ್ನ ಜಾಲಂಧರ್ನಲ್ಲಿ ಫೈನಲ್ ಪಂದ್ಯ ನಡೆಯಿತು. ಮೈಸೂರಿಗೆ ಹ್ಯಾಟ್ರಿಕ್ ಫೈನಲ್ ತಲುಪಿದ ಸಂಭ್ರಮ. ಈ ಬಾರಿ ಎದುರಾಳಿ ಬದ್ಧ ಎದುರಾಳಿ ಬಂಗಾಳ ಬದಲು ಪಂಜಾಬ್ ಸಿಕ್ಕಿತ್ತು. 3-1 ಗೋಲುಗಳ ಅಂತರದಲ್ಲಿ ಸೋಲನುಭವಿಸಿದ ಮೈಸೂರು ರನ್ನರ್ ಅಪ್ಗೆ ತೃಪ್ತಿಪಟ್ಟಿತು.

ಮೈಸೂರು ರಾಜ್ಯ ಕರ್ನಾಟಕ ಎಂದು ಹೆಸರುಪಡೆದ ನಂತರ ಮೊದಲ ಬಾರಿಗೆ ಕರ್ನಾಟಕ ಸಂತೋಷ್ ಟ್ರೋಫಿಯ ಫೈನಲ್ ಪ್ರವೇಶಿಸಿತು. ಕೋಝಿಕ್ಕೋಡ್ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಬಂಗಾಳ ವಿರುದ್ಧ 1-3 ಗೋಲುಗಳ ಅಂತರದಲ್ಲಿ ಸೋಲನುಭವಿಸಿ ಪ್ರಶಸ್ತಿಯಿಂದ ವಂಚಿತವಾಯಿತು.

ಇದನ್ನೂ ಓದಿ :Santosh Trophy Football ಸೌದಿ ಅರೇಬಿಯಾದಲ್ಲೇಕೆ ಸಂತೋಷ್ ಟ್ರೋಫಿ ಫುಟ್ಬಾಲ್‌ ?

ಇದನ್ನೂ ಓದಿ: Tulunadu Cricket League: ಅನಿವಾಸಿ ಕನ್ನಡಿಗರ ಕ್ರಿಕೆಟ್‌ ಹಬ್ಬ: ತುಳುನಾಡು ಕ್ರಿಕೆಟ್‌ ಲೀಗ್‌

ಇತ್ತಂಡಗಳಿಗೆ ಐತಿಹಾಸಿಕ ಪಂದ್ಯ: ಮೇಘಾಲಯ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದೆ. ಕರ್ನಾಟಕ 48 ವರ್ಷಗಳ ಬಳಿಕ ಫೈನಲ್ಗೆ ಲಗ್ಗೆ ಇಟ್ಟಿದೆ. ಆದ್ದರಿಂದ ಇತ್ತಂಡಗಳಿಗೂ ಇದು ಐತಿಹಾಸಿಕ ಪಂದ್ಯ. ಹುಲಿಗಳಂತೆ ಆಡುವ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮೇಘಾಲಯ ಅತ್ಯಂತ ಅಪಾಯಕಾರಿ ತಂಡ, 8 ಬಾರಿ ಚಾಂಪಿಯನ್ ಪಟ್ಟ ಗೆದ್ದಿರುವ ಪಂಜಾಬ್ ತಂಡಕ್ಕೆ ಸೆಮಿಫೈನಲ್ನಲ್ಲಿ ಸೋಲುಣಿಸಿರುವುದು ಗಮನಾರ್ಹ. ಆದರೆ ಬಲಿಷ್ಠ ತಂಡಗಳಿಗೆ ಸೋಲುಣಿಸಿ 48 ವರ್ಷಗಳ ಬಳಿಕ ಫೈನಲ್ ಪ್ರವೇಶಿಸಿ 54 ವರ್ಷಗಳ ಬಳಿಕ ಪ್ರಶಸ್ತಿ ಗೆಲ್ಲುವ ಗುರಿಹೊಂದಿರುವ ಕರ್ನಾಟಕ ತಂಡ ಮೇಘಾಲಯಕ್ಕೆ ಸುಲಭ ತುತ್ತಾಗದು.

Related Articles