Friday, October 4, 2024

ಮಂಗಳೂರು ಶಾರ್ಕ್ಸ್‌, ಮಂಡ್ಯ ಬುಲ್ಸ್‌ ಜಿಬಿಪಿಎಲ್‌ ಸೂಪರ್‌ ಲೀಗ್‌ಗೆ

ಬೆಂಗಳೂರು:

ಇಲ್ಲಿ ನಡೆಯುತ್ತಿರುವ ಗ್ರ್ಯಾಂಡ್‌ ಪ್ರಿಕ್ಸ್‌ ಬ್ಯಾಡ್ಮಿಂಟನ್‌ ಲೀಗ್‌ ಚಾಂಪಿಯನ್‌ಷಿಪ್‌ನಲ್ಲಿ ಮಂಗಳೂರು ಶಾರ್ಕ್ಸ್‌ ಮತ್ತು ಮಡ್ಯಬುಲ್ಸ್‌ ತಂಡಗಳು ಗುಂಪಿನಲ್ಲಿ ಅಗ್ರ ಎರಡು ಸ್ಥಾನಗಳನ್ನು ಗಳಿಸಿ ಸೂಪರ್‌ ಲೀಗ್‌ ಹಂತ ತಲುಪಿವೆ.

ಬಂಡಿಪುರ ಟಸ್ಕರ್ಸ್‌ ವಿರುದ್ಧದ ಕೊನೆಯ ಪಂದ್ಯದಲ್ಲಿ ಸೋಲನುಭವಿಸಿದರೂ ಎ ಗುಂಪಿನಲ್ಲಿ 14 ಅಂಕಗಳನ್ನು ಗಳಿಸಿದ ಮಂಗಳೂರು ಶಾರ್ಕ್ಸ್‌ ಮತ್ತು ಕೊಡಗು ಟೈಗರ್ಸ್‌ ವಿರುದ್ಧ 7-0 ಅಂತರದಲ್ಲಿ ಜಯ ಗಳಿಸಿದ 17 ಅಂಕಗಳೊಂದಿಗೆ ಮಂಡ್ಯ ಬುಲ್ಸ್‌ ಸೂಪರ್‌ ಲೀಗ್‌ ಹಂತ ತಲಪುವಲ್ಲಿ ಯಶಸ್ವಿಯಾಗಿವೆ.

ಬುಲ್ಸ್‌ (11) ಹಾಗೂ ಟಸ್ಕರ್ಸ್‌ (6) ಈಗಾಗಲೇ ಸೂಪರ್‌ ಲೀಗ್‌ ಹಂತವನ್ನು ತಲುಪಿದ್ದರೂ ಮಿಶ್ರ ಡಬಲ್ಸ್‌ ಪಂದ್ಯ ಇತ್ತಂಡಗಳ ಪಾಲಿನ ಟ್ರಂಪ್‌ ಪಂದ್ಯವಾಗಿತ್ತು. ಪ್ರೇರಣ ಶೇಟ್‌ ಸಿಂಗಲ್ಸ್‌ನಲ್ಲಿ ಅಲ್ಫಿಯಾ ರಿಯಾಜ್‌ ವಿರುದ್ಧ ಜಯ ಗಳಿಸಿ ತಂಡಕ್ಕೆ ಮುನ್ನಡೆ ಕಲ್ಪಿಸಿದರು. ಡೇನಿಯಲ್‌ ಫರೀದ್‌ ಮತ್ತು ವೈಭವ್‌ ವಿ. ಪುರುಷರ ಡಬಲ್ಸ್‌ನಲ್ಲಿ ಜಯ ಗಳಿಸಿ ಟಸ್ಕರ್ಸ್‌ಗೆ ಸಮಬಲ ಸಾಧಿಸುವಲ್ಲಿ ನೆರವಾದರು. ಜಯಂತ್‌ ಜಿ ವಿರುದ್ಧ ಜಯ ಗಳಿಸಿದ ಅಭಿಷೇಕ್‌ ಯಳಿಗಾರ್‌ ತಂಡಕ್ಕೆ ಮುನ್ನಡೆ ತಂದುಕೊಟ್ಟರು.

ರಘು ಮರಿಸ್ವಾಮಿ ಹಾಗೂ ವಿಜೇತಾ ಹರೀಶ್‌ ಜೋಡಿ ಮಿಶ್ರ ಡಬಲ್ಸ್‌ನಲ್ಲಿ ಅಭಿಷೇಕ್‌ ಯಳಿಗಾರ್‌ ಮತ್ತು ಅಪೇಕ್ಷ ನಾಯಕ್‌ ವಿರುದ್ಧ ಜಯ ಗಳಿಸಿ ಎರಡು ಅಂಕ ಗಳಿಸಿದರು. ಎದುರಾಳಿಗಳು ಋಣಾತ್ಮಕ ಅಂಕ ಗಳಿಸಿದರು.

ಬುಲ್ಸ್‌ ಮತ್ತು ಟೈಗರ್ಸ್‌ ನಡುವಿನ ಹೋರಾಟದಲ್ಲಿ ಅನನ್ಯ ಪ್ರೇರಣ ರಾಜ್ಯ ಚಾಂಪಿಯನ್‌ ರಾಜುಲ ತಾಮು ವಿರುದ್ಧ ಜಯ ಗಳಿಸಿ ಬುಲ್ಸ್‌ಗೆ ಮುನ್ನಡೆ ಕಲ್ಪಿಸಿದರು. ಡಬಲ್ಸ್‌ನಲ್ಲಿ ಆಶಿತ್‌ ಸೂರ್ಯ ಮತ್ತು ಸಾಯ್‌ ಪ್ರತೀಕ್‌ ತಂಡಕ್ಕೆ 2-0 ಮುನ್ನಡೆ ತಂದುಕೊಟ್ಟರು. ಎರಡೂ ತಂಡಗಳು ಪುರುಷರ ಸಿಂಗಲ್ಸ್‌ ಪಂದ್ಯವನ್ನು ಟ್ರಂಪ್‌ ಪಂದ್ಯವೆಂದು ಘೋಷಿಸಿದ ಕಾರಣ, ಪಂದ್ಯ ಕುತೂಹಲದ ಕ್ಷಣಗಳಿಗೆ ಸಾಕ್ಷಿಯಾಯಿತು. ಅನಿರುಧ್‌ ದೇಶಪಾಂಡೆ ಟೈಗರ್ಸ್‌ನ ಸನೀತ್‌ ದಯಾನಂದ್‌ ವಿರುದ್ಧ ಜಯ ಗಳಿಸಿ ಪಂದ್ಯಶ್ರೇಷ್ಠರೆನಿಸಿದರು. ಬಲ್ಸ್‌ ಎರಡು ಅಂಕ ಗಳಿಸಿದರೆ, ಟೈಗರ್ಸ್‌ ನೆಗೆಟಿವ್‌ ಅಂಕ ಗಳಿಸಿತು.

ಅಂತಿಮ ಹಂತದಲ್ಲಿ ಮಿಶ್ರ ಡಬಲ್ಸ್‌ನಲ್ಲಿ ಸೋಲನುಭವಿಸಿದರೂ ಆಶಿತ್‌ ಸೂರ್ಯ/ಸಾಯ್‌  ಪ್ರತೀಕ್‌/ಮಧುಸೂಧನ್‌ ಎಂ. ಸೂಪರ್‌ ಮ್ಯಾಚ್‌ನಲ್ಲಿ ಮೂರು ಅಂಕಗಳನ್ನು ಗಳಿಸಿ ತಂಡಕ್ಕೆ ಜಯ ತಂದುಕೊಟ್ಟರು.

Related Articles