Thursday, October 10, 2024

Bjorn Borg : ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿಗೆ ಸಮಯದ ಪಾಠ ಕಲಿಸಿದ ಬ್ಯೋನ್‌ ಬೋರ್ಗ್‌

ಬೆಂಗಳೂರು: ಸಮಯ ಮತ್ತು ಅಲೆಗಳು ಯಾರಿಗೂ ಕಾಯುವುದಿಲ್ಲ, ಕ್ರೀಡೆಯಲ್ಲಿ ಸಮಯ ಮುಖ್ಯ. ಕ್ರೀಡಾಪಟುಗಳು ತಮ್ಮ ಬದುಕಿನಲ್ಲಿ ಸಮಬಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಬೆಂಗಳೂರು ಓಪನ್‌ ಟೆನಿಸ್‌ ಚಾಂಪಿಯನ್‌ಷಿಪ್‌ನಲ್ಲಿ 11 ಬಾರಿ ಗ್ರ್ಯಾನ್‌ ಸ್ಲಾಮ್‌ ಚಾಂಪಿಯನ್‌ ಪಟ್ಟ ಗೆದ್ದಿರುವ ಸ್ವೀಡನ್‌ನ ಬ್ಯೋನ್‌ ಬೋರ್ಗ್‌ (Bjorn Borg rejects felicitation program at KSLTA) ಕರ್ನಾಟಕದ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ (Basavaraj Bommai) ಅವರಿಗೆ ಸಮಯದ ಪಾಠ ಕಲಿಸಿದರು.

ಮಂಗಳವಾರ ಬೆಳಿಗ್ಗೆ ಬ್ಯೋನ್‌ ಬೋರ್ಗ್‌ (Bjorn Borg) ಮತ್ತು ಭಾರತದ ಮಾಜಿ ಟೆನಿಸ್‌ ಆಟಗಾರ ವಿಜಯ್‌ ಅಮೃತರಾಜ್‌ ಅವರನ್ನು ಸನ್ಮಾನಿಸಲು ಕರ್ನಾಟಕ ರಾಜ್ಯ ಲಾನ್‌ ಟೆನಿಸ್‌ ಸಂಸ್ಥೆ ತೀರ್ಮಾನಿಸಿತ್ತು. ಈ ಕಾರ್ಯಕ್ರಮ ಬೆಂಗಳೂರು ಓಪನ್‌ ಟೆನಿಸ್‌ ಚಾಂಪಿಯನ್‌ಷಿಪ್‌ನ ಭಾಗವಾಗಿರಲಿಲ್ಲ. ಆದರೆ ಐದು ಬಾರಿ ವಿಂಬಲ್ಡನ್‌ ಮತ್ತು ಆರು ಬಾರಿ ಫ್ರೆಂಚ್‌ ಓಪನ್‌ ಪ್ರಶಸ್ತಿ ಗೆದ್ದಿರುವ ಸ್ವೀಡನ್‌ನ ಆಟಗಾರ ಮತ್ತು ಭಾರತದ ವಿಜಯ್‌ ಅಮೃತರಾಜ್‌ ಅವರನ್ನು ಸನ್ಮಾನಿಸುವುದು ಹೆಮ್ಮೆಯ ಸಂಗತಿ ಬೆಳಿಗ್ಗೆ 9:30 ಕ್ಕೆ ಕರ್ನಾಟಕ ರಾಜ್ಯ ಲಾನ್‌ ಟೆನಿಸ್‌ ಸಂಸ್ಥೆಯಲ್ಲಿ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಿ ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರನ್ನು ಆಹ್ವಾನಿಲಸಾಗಿತ್ತು. ಆದರೆ ಮುಖ್ಯಮಂತ್ರಿಗಳು ಬೇರೆ ಕಾರ್ಯದೊತ್ತಡದ ಕಾರಣ 11:10ಕ್ಕೆ ಆಗಮಿಸಿದರು.

ಈ ನಡುವೆ ಬೋರ್ಗ್‌ ಎರಡು ಬಾರಿ ಸನ್ಮಾನ ನಡೆಯುವ ಸ್ಥಳಕ್ಕೆ ಆಗಿಮಿಸಿ ಬೇಸತ್ತಿದ್ದರು. ನಂತರ ತಮ್ಮ ಮಗ ಲಿಯೋ ಬೋರ್ಗ್‌ ಅವರ ಮೊದಲ ಸುತ್ತಿನ ಪಂದ್ಯ ವೀಕ್ಷಿಸಲು ಪತ್ನಿಯೊಂದಿಗೆ ಗ್ಯಾಲರಿಯಲ್ಲಿ ಕುಳಿತರು. ಮುಖ್ಯಮಂತ್ರಿಗಳು ಆಗಮಿಸಿದ ಕೂಡಲೇ ಸಂಘಟಕರು ಬೋರ್ಗ್‌ ಅವರನ್ನು ಸನ್ಮಾನದಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಿಕೊಂಡರು. ಆದರೆ ಸಮಯಕ್ಕೆ ಹೆಚ್ಚಿನ ಒತ್ತು ಕೊಡುವ ಬೋರ್ಗ್‌ ಸನ್ಮಾನಕ್ಕೆ ಒಪ್ಪದೇ ಪಂದ್ಯ ವೀಕ್ಷಿಸುವುದರಲ್ಲೇ ಮುಂದುವರಿದರು. ಮುಖ್ಯಮಂತ್ರಿಗಳು ಕೆಲ ಹೊತ್ತು ವಿಐಪಿ ಗ್ಯಾಲರಿಯಲ್ಲಿ ಪಂದ್ಯ ವೀಕ್ಷಿಸಿ ನಿರಾಸೆಯಿಂದ ನಿರ್ಗಮಿಸಿದರು.

ಕಲಿಯಬೇಕಾದ ಪಾಠ:

ಸಮಯ ಯಾರಿಗೂ ಕಾಯುವುದಿಲ್ಲ. ಅದು ಪ್ರಧಾನಿಯೇ ಆಗಿರಲಿ, ಮುಖ್ಯಮಂತ್ರಿಯೇ ಆಗಿರಲಿ. ಒಬ್ಬ ಕ್ರೀಡಾಪಟು ತನ್ನ ಶ್ರಮದ ಮೂಲಕ ಚಾಂಪಿಯನ್‌ ಪಟ್ಟ ಗೆಲ್ಲುತ್ತಾನೆ. ಅದು ಆತನಿಗೆ ಸಮಾಜದಲ್ಲಿ ಉನ್ನತ ಸ್ಥಾನ ಮಾನ ನೀಡಬಹುದು. ಆದರೆ ಆ ಸಾಧನೆಯ ಹಾದಿಯಲ್ಲಿ ಆತ ಹಲವಾರು ಬದುಕಿನ ಪಾಠಗಳನ್ನು ಕಲಿತಿರುತ್ತಾನೆ. ಅವುಗಳಲ್ಲಿ ಸಮಯ ಪಾಲನೆಯೂ ಒಂದು. ರಾಜಕಾರಣಿಗಳಲ್ಲಿ ಈ ರೀತಿಯ ಸಮಯ ಪಾಲನೆಯನ್ನು ಕಾಣಲು ಅಸಾಧ್ಯ. ಶಾಲಾ ವಾರ್ಷಿಕೋತ್ಸವಕ್ಕೆ ಅವರನ್ನು ಮುಖ್ಯ ಅತಿಥಿಗಳನ್ನಾಗಿ ಕರೆದರೆ ಮಕ್ಕಳು ಬಿಸಿಲಿನಲ್ಲಿ ಕಾದು, ತಲೆ ತಿರುಗಿ ಬಿದ್ದ ಘಟನೆಗಳೇ ಹೆಚ್ಚು. ರಾಜಕಾರಣಿಗಳ ಯಾವುದೇ ಕೆಲಸವು ಕ್ಲಪ್ತ ಸಮಯಕ್ಕೆ ಆಗಿರುವುದಕ್ಕೆ ಉದಾಹರಣೆಗಳೇ ಇಲ್ಲ. ಆದರೆ ರಾಜಕಾರಣಿಗಳು ಸಮಯ ಪರಿಪಾಲನೆ, ಆರೋಗ್ಯ, ಬದ್ಧತೆ, ಶಿಸ್ತು ಇವುಗಳ ಬಗ್ಗೆ ಗಂಟೆಗಟ್ಟಲೆ ಭಾಷಣ ಮಾಡಬಲ್ಲರು.

ರಾಜಕಾರಣಿಗಳಿಗೆ ರಾಜಕೀಯ ಸಭೆ ಸಮಾರಂಭಗಳಲ್ಲಿ ಇರುವ ಆಸಕ್ತಿ ಈ ರೀತಿಯ ಕ್ರೀಡಾ ಕಾರ್ಯಕ್ರಮಗಳಲ್ಲಿ ಇರುವುದಿಲ್ಲ. ಅವರು ಯಾವಾಗಲೂ ಸ್ವಲ್ಪ ತಡವಾಗಿಯೇ ಬರುತ್ತಾರೆ. ಬಸವರಾಜ್‌ ಬೊಮ್ಮಾಯಿ ಅವರು ಕರ್ನಾಟಕದ ಮುಖ್ಯಮಂತ್ರಿ. ಅವರಿಗೆ ಹಲವಾರು ಜವಾಬ್ದಾರಿಗಳೂ ಇರುತ್ತವೆ. ಅವರು ಈ ಕಾರ್ಯಕ್ರಮವನ್ನು ಪರಿಗಣಿಸಿದ ರೀತಿಯಲ್ಲಿ ಕ್ರೀಡಾಪಟುಗಳು ಪರಿಗಣಿಸುವುದಿಲ್ಲ. ಬ್ಯೋನ್‌ ಬೋರ್ಗ್‌  ಸನ್ಮಾನಕ್ಕಿಂತ ತಮ್ಮ ಮಗನ ಆಟ ನೋಡುವುದೇ ಮುಖ್ಯ, ಅದು ನನಗೆ ಸಿಗುವ ಸನ್ಮಾನ ಎಂದು ತಿಳಿದಿರುತ್ತಾರೆ. ಏಕೆಂದರೆ ಅವರೊಬ್ಬ ಚಾಂಪಿಯನ್‌. ಒಬ್ಬ ಚಾಂಪಿಯನ್‌ ಕ್ರೀಡಾಕೂಟವೊಂದಕ್ಕೆ ತಡವಾಗಿ ಹೋದರೆ ಆತ ಆ ಟೂರ್ನಿಯಿಂದ ವಂಚಿತನಾಗಬಹುದು, ಆದರೆ ಒಬ್ಬ ರಾಜಕಾರಣಿ ಕಾರ್ಯಕ್ರಮವೊಂದಕ್ಕೆ ತಡವಾಗಿ ಹೋದರೆ ಆ ಕುರಿತು ಯೋಚಿಸುವವರೇ ಇರುವುದಿಲ್ಲ. ಅದು ಆ ಕಾರ್ಯಕ್ರಮದ ಮೇಲೆ ಯಾವುದೇ ರೀತಿಯಲ್ಲಿ ಪರಿಣಾಮ ಬೀರಲಿಲ್ಲ ಎಂಬಂತೆ ಸಂಘಟಕರೂ ವರ್ತಿಸುತ್ತಾರೆ.

ಆದರೆ ಬ್ಯೋನ್‌ ಬೋರ್ಗ್‌ ತನ್ನ ನಿರ್ಧಾರಕ್ಕೆ ಬದ್ಧರಾಗಿರುವುದು ಅವರಲ್ಲಿನ ನೈಜ ಚಾಂಪಿಯನ್‌ ಗುಣವನ್ನು ಸ್ಪಷ್ಟಪಡಿಸುತ್ತದೆ. ಇದನ್ನು ಅನೇಕರು ಬೋರ್ಗ್‌ ಮುಖ್ಯಮಂತ್ರಿಗಳಿಗೆ ತೋರಿದ ಅಗೌರವ ಎನ್ನಬಹುದು, ಆದರೆ ಸಮಬ ಯಾರಿಗೂ ಕೇರ್‌ ಮಾಡೊಲ್ಲ ಎಂಬುದನ್ನು ಮುಖ್ಯಮಂತ್ರಿಗಳೂ ತಿಳಿದುಕೊಳ್ಳಬೇಕು.

ತಪ್ಪದೇ ಓದಿ : WPL Auction 2023 : ಬೆಂಗಳೂರಿಗೆ ಸ್ಮೃತಿ ಮಂದಾನ, ಮುಂಬೈಗೆ ಹರ್ಮನ್ ಪ್ರೀತ್ ಕೌರ್

ತಪ್ಪದೇ ಓದಿ : Tilottama Sen : ವಿಶ್ವ ಶೂಟಿಂಗ್‌ನಲ್ಲಿ ಇತಿಹಾಸ ಬರೆದ ಬೆಂಗಳೂರಿನ ತಿಲೋತ್ತಮಾ ಸೇನ್‌

Related Articles