Saturday, February 24, 2024

ಆಟದೊಂದಿಗೆ ಬದುಕಿನ ಪಾಠ ಕಲಿಸುವ ಮೈಸೂರು ವಾರಿಯರ್ಸ್‌

ಸೋಮಶೇಖರ್‌ ಪಡುಕರೆ, ಬೆಂಗಳೂರು:

ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಕ್ರಿಕೆಟ್‌ ಚಾಂಪಿಯನ್‌ಷಿಪ್‌ನ ಮೈಸೂರಿನ ಆವೃತ್ತಿ ಮುಗಿದು ಬುಧವಾರದಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉಳಿದ ಹದಿನಾರು ಪಂದ್ಯಗಳು ನಡೆಯಲಿವೆ. ತನ್ನ ಮನೆಯಗಂಣದಲ್ಲಿ ನಡೆದ ಪಂದ್ಯದಲ್ಲಿ ಮೈಸೂರು ವಾರಿಯರ್ಸ್‌ ಆಡಿದ ಆರು ಪಂದ್ಯಗಳಲ್ಲಿ ಮೂರು ಜಯ ಮತ್ತು ಮೂರು ಸೋಲು ಅನುಭವಿಸಿ ಆರು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಮೈಸೂರು ವಾರಿಯರ್ಸ್‌ ಗೆಲ್ಲಲಿ, ಸೋಲಲಿ ಅದು ಮುಖ್ಯವಲ್ಲ, ಆಟದ ನಡುವೆ ಈ ತಂಡ ಬದುಕಿನ ಪಾಠವಾಗಿರುವುದು ಗಮನಾರ್ಹ. ಸೋಲು ಗೆಲುವಿನ ನಡುವೆ ಪರಿಸರ ಮತ್ತು ಸಾಮಾಜಿಕ ಕಾಳಜಿ ಹೊಂದಿರುವ ಈ ತಂಡದ ಕಾರ್ಯವೈಖರಿ ಇತರರಿಗೆ ಮಾದರಿಯಾಗಿದೆ.

ಮೈಸೂರು ವಾರಿಯರ್ಸ್‌ ತಂಡದ ಬೌಲರ್‌ ಗಳಿಸಿ ವಿಕೆಟ್‌ನ ಬೆಲೆ 2,000 ರೂ, ಸಿಕ್ಸರ್‌ ಬೆಲೆ 1,000 ರೂ, ಬೌಂಡರಿ ಸಿಡಿಸಿದರೆ 500 ರೂ. ಸಂಗ್ರಹವಾಗುತ್ತದೆ. ತಂಡದ ಪ್ರಾಯೋಜಕರಾಗಿರುವ ಸೈಕಲ್‌ಪ್ಯೂರ್‌ ಅಗರ್‌ಬತ್ತೀಸ್‌ನ ತಯಾರಕರಾದ ರಂಗರಾವ್‌ ಆಂಡ್‌ ಸನ್ಸ್‌ನ ಸಿಇಒ, ಅರ್ಜುನ್‌ ರಂಗ ಅವರ ದೂರದೃಷ್ಟಿಯಿಂದಾಗಿ ಈ ಸಾಮಾಜಿಕ ಕಾಳಜಿಯ ಕಾರ್ಯ ನಡೆಯುತ್ತಿದೆ. ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ನಡೆಸುತ್ತಿದ್ದ ಕರ್ನಾಟಕ ಪ್ರೀಮಿಯರ್‌ ಲೀಗ್‌ (ಕೆಪಿಎಲ್‌) ವೇಳೆಯೂ ಮೈಸೂರು ವಾರಿಯರ್ಸ್‌ ಈ ರೀತಿ ಸಾಮಾಜಿಕ ಕಾಳಜಿಯನ್ನು ನಿರ್ವಹಿಸುತ್ತ ಬಂದಿದೆ.

ನಾಲ್ಕು ಸಂಸ್ಥೆಗಳೊಂದಿದೆ ಕೈ ಜೋಡಿಸಿದ ವಾರಿಯರ್ಸ್‌:

ಮೈಸೂರಿನ ಕ್ಲೆಫ್ಟ್‌ ಲಿಪ್‌ ಫೌಂಡೇಷನ್‌ ಜೊತೆ ಕೈ ಜೋಡಿಸಿದ ಮೈಸೂರು ವಾರಿಯರ್ಸ್‌ ಬಂದ ಹಣದಲ್ಲಿ ಒಂದು ಪಾಲನ್ನು ಸೀಳ್ದುಟಿ ಹೊಂದಿರುವ ಹತ್ತು ಮಕ್ಕಳ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಲಿದೆ. ಇದುವರೆಗೂ ಮೈಸೂರು ವಾರಿಯರ್ಸ್‌ ನೆರವಿನಿಂದ 50ಕ್ಕೂ ಹೆಚ್ಚು ಮಕ್ಕಳು ಸುಂದರ ತುಟಿಗಳನ್ನು ಹೊಂದಿದ್ದಾರೆ.

ಅದೇ ರೀತಿ ಮೈಸೂರಿನ ಉಷಾಕಿರಣ್‌ ಕಣ್ಣಿನ ಆಸ್ಪತ್ರೆಯೊಂದಿಗೆ ಕೈ ಜೋಡಿಸಿದ ಮೈಸೂರು ವಾರಿಯರ್ಸ್‌ 10 ಹೆಣ್ಣು ಮಕ್ಕಳ ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿ ಅವರಿಗೆ ದೃಷ್ಟಿ ನೀಡುತ್ತಿದೆ. ಕಳೆದ 32 ವರ್ಷಗಳಿಂದ ರಂಗರಾವ್‌ ದಿವ್ಯಾಂಗ ಮಕ್ಕಳ ಶಾಲೆಯನ್ನು ರಂಗರಾವ್‌ ಆಂಡ್‌ ಸನ್ಸ್‌ ನಡೆಸಿಕೊಂಡು ಬರುತ್ತಿದ್ದು, ಇದುವರೆಗೂ 50ಕ್ಕೂ ಹೆಚ್ಚು ಮಕ್ಕಳಿಗೆ ಈ ಯೋಜನೆಯ ನೆರವು ನೀಡಲಾಗಿದೆ.

ಮೈಸೂರಿನ ಕಲಿಸು ಎಂಬ ಎನ್‌ಜಿಒ ಸಂಸ್ಥೆಯೊಂದಿಗೆ ಕೈ ಜೋಡಿಸಿದ ಮೈಸೂರು ವಾರಿಯರ್ಸ್‌, ಪ್ರತಿವರ್ಷ ಮೈಸೂರಿನಲ್ಲಿರುವ ಸರಕಾರಿ ಶಾಲೆಗೆ ಒಂದು ಗ್ರಂಥಾಲಯ ನಿರ್ಮಿಸಿಕೊಡುತ್ತಿದೆ. ಕಳೆದ ಐದು ವರ್ಷಗಳಲ್ಲಿ ಐದು ಸರಕಾರಿ ಶಾಲೆಗಳಲ್ಲಿ ಗ್ರಂಥಾಲಯ ನಿರ್ಮಿಸಲಾಗಿದೆ.

 

ರಿ ಫಾರೆಸ್ಟ್‌ ಇಂಡಿಯಾ ಜೊತೆ ಕೈ ಜೋಡಿಸಿದ ಮೈಸೂರು ವಾರಿಯರ್ಸ್‌ ಪರಿಸರ ಸಂರಕ್ಷಣೆಯ ಜೊತೆಯಲ್ಲಿ ಕಾಡು ಬೆಳೆಸುವ ಸೇವೆಯಲ್ಲೂ ತನ್ನನ್ನು ತೊಡಗಿಸಿಕೊಂಡಿದೆ. ಮಿಡ್‌ವಿಕೆಟ್‌ನಲ್ಲಿ 10 ಅಡಿ ಎತ್ತರದ ಅಗರ್‌ಬತ್ತಿ ಬಾಕ್ಸ್‌ ಇಟ್ಟು ಅದರಲ್ಲಿ ವಿ ಆಕಾರದಲ್ಲಿ ಅಗರ್‌ಬತ್ತಿ ಇಡಲಾಗುತ್ತದೆ. ಸಿಕ್ಸರ್‌ ದಾಖಲಾದ ಚೆಂಡು ಆ ಬಾಕ್ಸಿನಲ್ಲಿ ಬಂದು ಬಿದ್ದರೆ ನೂರು ಗಿಡಗಳನ್ನು ನೆಡಲಾಗುತ್ತದೆ. ಕಳೆದವಾರ ಶ್ರೀರಂಗಪಟ್ಟಣದ ಹತ್ತಿರ ಕರಿಘಟ್ಟದಲ್ಲಿ  ಸಾಲುಮರ ತಿಮ್ಮಕ್ಕನ ಸಾಕುಮಗ ಉಮೇಶ್‌ ಅವರನ್ನು ಕರೆಸಿ ಮೈಸೂರು ವಾರಿಯರ್ಸ್‌ ವತಿಯಿಂದ 100 ಗಿಡಗಳನ್ನು ನೆಡಲಾಗಿದೆ.

ಟಿಎನ್‌ಪಿಎಲ್‌ನಲ್ಲೂ ಮಾದರಿಯಾದ ಸೈಕಲ್‌ ಪ್ಯೂರ್‌ ಅಗರ್‌ಬತ್ತೀಸ್‌:

ಸೈಕಲ್‌ ಪ್ಯೂರ್‌ ಅಗರ್‌ಬತ್ತೀಸ್‌ ತಯಾರಕರಾದ ರಂಗರಾವ್‌ ಆಂಡ್‌ ಸನ್ಸ್‌ ಅವರ ಈ ರಿ ಫಾರೆಸ್ಟ್‌ ಯೋಜನೆ ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ. ಚೆನ್ನೈನಲ್ಲಿ ನಡೆದ ತಮಿಳುನಾಡು ಪ್ರೀಮಿಯರ್‌ ಲೀಗ್‌ನಲ್ಲೂ ಪರಿಸರ ಕಾಳಜಿ ಮತ್ತು ಗಿಡನೆಡವು ಕೆಲಸಗಳನ್ನು ಮಾಡಿದೆ. ಕ್ರೀಡೆಗೆ ಪ್ರೋತ್ಸಾಹ ನೀಡುವುದರ ಜೊತೆಯಲ್ಲಿ ಸಮಾಜದ ಅಸಹಾಯಕರು, ಸಾಮಾಜಿಕ ಅಗತ್ಯತೆ, ಶಿಕ್ಷಣ, ಆರೋಗ್ಯ ಮೊದಲಾದ ಕಾಳಜಿಯ ಕಾರ್ಯಗಳಲ್ಲಿ ಮೈಸೂರು ವಾರಿಯರ್ಸ್‌ ತನ್ನನ್ನು ತೊಡಗಿಸಿಕೊಂಡಿದೆ.

ಗಂಧದ ಗುಡಿಯಲ್ಲಿ ಬೆಳಗಿ, ದೇಶದ ಮನೆ ಮನಗಳನ್ನು ತುಂಬಿ, ವಿದೇಶಗಳಲ್ಲೂ ಕನ್ನಡ ನಾಡಿನ ಸಿರಿಗಂಧವನ್ನು ಪಸರಿಸಿರುವ ಮೈಸೂರಿನ ಸೈಕಲ್‌ ಪ್ಯೂರ್‌ ಅಗರ್‌ಬತ್ತೀಸ್‌ ತಯಾರಕರಾದ ರಂಗರಾವ್‌ ಆಂಡ್‌ ಸನ್ಸ್‌ ಅವರ ಬ್ರಾಂಡ್‌ ಇಂದು ಕ್ರೀಡಾ ಜಗತ್ತಿನಲ್ಲಿ ಆರೋಗ್ಯಕರ ಬ್ರಾಂಡ್‌ ಆಗಿ ಬೆಳೆದು ನಿಂತಿದೆ. ಈ ಸಂದರ್ಭದಲ್ಲಿ sportsmail ಜೊತೆ ಮಾತನಾಡಿದ ಕಂಪೆನಿಯ ಸಿಒಒ ಎಂ.ಆರ್‌. ಸುರೇಶ್‌, “ರಂಗರಾವ್‌ ಆಂಡ್‌ ಸನ್ಸ್‌ ಮೊದಲಿಂದಲೂ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಕ್ರೀಡೆಯ ಮೂಲಕ ಸಮಾಜದಲ್ಲಿ ಅರಿವು ಮೂಡಿಸುವ ಕೆಲಸವನ್ನು ಮಾಡಬೇಕಾಗಿರುವುದು ಇಂದಿನ ಅಗತ್ಯವಾಗಿದೆ. ಕಣ್ಣು ಕಾಣುವಂತೆ ಮಾಡುವುದು, ಮಾತನಾಡುವಂತೆ ಮಾಡುವುದು, ಗ್ರಂಥಾಲಯಗಳನ್ನು ನಿರ್ಮಸುವುದು ಮತ್ತು ಗಿಡ ನೆಟ್ಟು ಬೆಳೆಸುವುದು ಇವೆಲ್ಲವೂ ಪುಣ್ಯದ ಕೆಲಸ. ನಮ್ಮ ಮೈಸೂರು ವಾರಿಯರ್ಸ್‌ ಮೂಲಕ ಅಂಥ ಒಂದು ಉತ್ತಮ ಕೆಲಸ ಆಗುತ್ತಿರುವುದು ಖುಷಿಯ ಸಂಗತಿ,” ಎಂದು ಹೇಳಿದರು.

6 ಪಂದ್ಯಗಳಿಂದ 1.43 ಲಕ್ಷ ರೂ. ಸಂಗ್ರಹ:

ಮೈಸೂರು ವಾರಿಯರ್ಸ್‌ ತಂಡ ಇದುವರೆಗೂ 6 ಪಂದ್ಯಗಳನ್ನಾಡಿದ್ದು, 86 ಬೌಂಡರಿ, 30 ಸಿಕ್ಸರ್‌ ಮತ್ತು 35 ವಿಕೆಟ್‌ ಗಳಿಸಿದೆ. ಇದರೊಂದಿಗೆ ತಂಡ 1,43,000 ರೂ. ಸಂಗ್ರಹಿಸಿದೆ. ಈ ಮೊತ್ತ ನಾಲ್ಕು ಸಂಸ್ಥೆಗಳೊಂದಿಗೆ ಸಾಮಾಜದ ಸದುದ್ದೇಶಕ್ಕೆ ವಿನಿಯೋಗವಾಗಲಿದೆ.

ಆದ್ದರಿಂದ ಮೈಸೂರು ವಾರಿಯರ್ಸ್‌ನ ಆಟಗಾರರು ಅತಿ ಹೆಚ್ಚು ಸಿಕ್ಸರ್‌ ಸಿಡಿಸಲಿ, ಅತಿ ಹೆಚ್ಚು ಬೌಂಡರಿ ದಾಖಲಿಸಲಿ ಮತ್ತು ಅತಿ ಹೆಚ್ಚು ವಿಕೆಟ್‌ ಗಳಿಸಲು. ದೃಷ್ಟಿ ಪಡೆದವರು ಮುಂದಿನ ದಿನಗಳಲ್ಲಿ ಪಂದ್ಯ ವೀಕ್ಷಿಸಲಿ, ಸರಕಾರಿ ಶಾಲೆಯ ಮಕ್ಕಳು ಅತಿ ಹೆಚ್ಚು ಪುಸ್ತಕ ಓದಲಿ, ಸೀಳು ತುಟಿಗಳು ಮಾಯವಾಗಿ ಸುಂದರವಾಗಿ ಕಾಣಲಿ, ಗಿಡಗಳು ಬೆಳೆದು ಮರವಾಗಲಿ….

Related Articles