ಸೋಮಶೇಖರ್ ಪಡುಕರೆ, ಬೆಂಗಳೂರು:
ವಿಶ್ವ ಜೂನಿಯರ್ ಅಥ್ಲೆಟಿಕ್ಸ್‌ನಲ್ಲಿ ಭಾರತ ಈ ಬಾರಿಯೂ ಹೊಸ ಅಧ್ಯಾಯ ಬರೆದಿದೆ. ಕಳೆದ ಬಾರಿ ಮಿಕ್ಸೆಡ್ ರಿಲೇಯಲ್ಲಿ ಕಂಚಿನ ಪದಕ ಗೆದ್ದಿದ್ದ ಭಾರತ ತಂಡ ಈ ಬಾರಿ ಬೆಳ್ಳಿಯ ಸಾಧನೆ ಮಾಡಿದೆ. ಕಿರಿಯರ ಈ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಯಶಸ್ಸಿಗೆ ಕರ್ನಾಟಕ ಓಟಗಾರ್ತಿ ಪ್ರಿಯಾ ಮೋಹನ್ ಪಾತ್ರ ಪ್ರಮುಖವಾಗಿತ್ತು. ಆ ಮಿಂಚಿನ ಓಟಗಾರ್ತಿಯ ಯಶಸ್ಸಿನ ಹಿಂದೆ ಒಬ್ಬ ಉತ್ತಮ ತರಬೇತುದಾರರೂ ಕಾರ್ಯನಿರ್ವಹಿಸುತ್ತಿದ್ದಾರೆ. ಹೆಸರು ಅರ್ಜುನ್ ಅಜಯ್…. ತಂದೆ ಅಜಯ್ ಅವರಂತೆ ಅಥ್ಲೆಟಿಕ್ಸ್‌ನಲ್ಲಿ ಸಾಧನೆ ಮಾಡಿದ ಅರ್ಜುನ್ ಅವರು ಈಗ ತಂದೆಯಂತೆ ತರಬೇತಿಯಲ್ಲೂ ತೊಡಗಿಸಿಕೊಂಡಿದ್ದಾರೆ.
ಭಾರತದ ಉದಯೋನ್ಮುಖ ಓಟಗಾರ್ತಿ ಪ್ರಿಯಾ ಮೋಹನ್‌ಗೆ ತರಬೇತಿ ನೀಡುತ್ತಿರುವ ಅರ್ಜುನ್ ಅಜಯ್ ಅಥ್ಲೆಟಿಕ್ಸ್ ಅಂಗಣದಲ್ಲಿ ತಾವು ಸಾಗಿ ಬಂದ ಹಾದಿಯನ್ನೊಮ್ಮೆ ಹಿಂದಿರುಗಿ ನೋಡಿದ್ದಾರೆ. ತಾನು ಸಾಗಬೇಕಾದ ಹಾದಿ ಬಹಳ ಇದೆ, ಸಾಧನೆ ಆ ದಿನಕ್ಕೆ ಸಂಬಂಧಿಸಿದ್ದು, ನಡುವೆ ಸ್ಥಿರತೆ ಕಾಯ್ದುಕೊಳ್ಳುವುದು ನಮ್ಮ ಕರ್ತವ್ಯ. ಸೋಲಿಗಾಗಿ ಯಾರೂ ತರಬೇತಿ ನಡೆಸುವುದಿಲ್ಲ. ಪ್ರತಿಯೊಬ್ಬರು ಗುರಿ ಜಯದ ಕಡೆಗೇ ಇರುತ್ತದೆ. ಉಸೇನ್ ಬೋಲ್ಟ್ ಚಿನ್ನ ಗೆಲ್ಲುತ್ತಾರೆಂದು ಗೊತ್ತೇ ಇರುತ್ತದೆ, ಆದರೆ ಜಗತ್ತಿನ ಪ್ರತಿಯೊಂದು ರಾಷ್ಟ್ರದಲ್ಲಿಯೂ 100 ಮೀ. ಓಡುವ ಓಟಗಾರನಿಗೆ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡು ಚಿನ್ನ ಗೆಲ್ಲುವ ಗುರಿ ಇದ್ದೇ ಇರುತ್ತಿದೆ. ಆದ್ದರಿಂದ ಸೋಲುಗಳನ್ನೇ ಜಯದ ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಯಶಸ್ಸಿ ಹಾದಿ ತುಳಿಯಬೇಕು ಎನ್ನುತ್ತಾರೆ ಅರ್ಜುನ್ ಅಜಯ್.
ದೇಶಕ್ಕೆ ಕೀರ್ತಿ ತಂದ ಪ್ರಿಯಾ ಮೋಹನ್: ಕಳೆದ ಬಾರಿಯ ವಿಶ್ವ ಜೂನಿಯರ್ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದು, ವೈಯಕ್ತಿಕ 400 ಮೀ, ಓಟದಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದರು, ಈ ಬಾರಿಯ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಿಯಾ ಮೋಹನ್ ರಿಲೇಯಲ್ಲಿ ಭಾರತ ತಂಡ ಬೆಳ್ಳಿ ಪದಕ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು, ಆದರೆ ವೈಯಕ್ತಿಕ ವಿಭಾಗದಲ್ಲಿ ಪದಕ ಗೆಲ್ಲುವಲ್ಲಿ ವಿಫಲರಾದರು.
ಈ ಬಗ್ಗೆ ಮಾತನಾಡಿದ ಅರ್ಜುನ್ ಅಜಯ್, “ಪ್ರಿಯಾ ಮೋಹನ್ ಈ ಬಾರಿ ವೈಯಕ್ತಿಕ ವಿಭಾಗದಲ್ಲಿ ಪದಕ ಗೆಲ್ಲುವಲ್ಲಿ ವಿಫಲರಾಗಿರುವುದು ಬೇಸರವನ್ನುಂಟು ಮಾಡಿದೆ. ಇದಕ್ಕೆ ಅವರು ನಿಜವಾಗಿಯೂ ಕಾರಣರಲ್ಲ. ಕ್ರೀಡಾಪಟುಗಳನ್ನು ಕೊನೆಯ ದಿನದವರೆಗೂ ದೆಹಲಿಯಲ್ಲಿ ನಿಲ್ಲಿಸಿ ಒಂದು ದಿನ ಬಾಕಿ ಇರುವಾಗ ಕೊಲಂಬಿಯಾದ ಕ್ಯಾಲಿಗೆ ಕರೆದೊಯ್ದರು. ಮರುದಿನ ನೇರವಾಗಿ ಸ್ಪರ್ಧೆಗೆ, ಇನ್ನುಳಿದ ದೇಶದವರು ಒಂದು ವಾರ ಮುಂಚಿತವಾಗಿಯೇ ಕೊಲಂಬಿಯಾಕ್ಕೆ ಆಗಮಿಸಿದ್ದರು. ಈ ವಿಳಂಬ ಎಂಬುದು ಅಥ್ಲೀಟ್‌ಗಳ ಪ್ರದರ್ಶನದ ಮೇಲೆ ಪರಿಣಾಮ ಬೀರುತ್ತದೆ. ಮತ್ತೆ ರಿಲೇಯಲ್ಲಿ ಸಾಕಷ್ಟು ವೇಗವಾಗಿ ಓಡಿದ ಕಾರಣ ವೈಯಕ್ತಿಕ ವಿಭಾಗದಲ್ಲಿ ಹಿನ್ನಡೆಗೆ ಕಾರಣವಾಯಿತು. ರಿಲೇಯಲ್ಲಿ ಬದಲಿ ಓಟಗಾರರು ಇರುತ್ತಿದ್ದರೆ ವೈಯಕ್ತಿಕ ವಿಭಾಗದಲ್ಲಿ ಉತ್ತಮ ಪ್ರದರ್ಶನ ತೋರಬಹುದಾಗಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಪರ್ಸನಲ್ ಕೋಚ್ ಗೈರು ಕೂಡ ಪ್ರಿಯಾ ಅವರ ಓಟದ ಹಿನ್ನಡೆಗೆ ಕಾರಣವಾಯಿತು,” ಎಂದು ತಿಳಿಸಿದರು.
ವೇಗದ ಓಟಗಾರ ಅರ್ಜುನ್: ಅರ್ಜುನ್ ಅಜಯ್ ಜೂನಿಯರ್ ವಿಭಾಗದಲ್ಲಿ 400 ಮೀ. ಓಟದಲ್ಲಿ ಪಾಲ್ಗೊಳ್ಳುತ್ತಿದ್ದರು, ನಂತರ ಸೀನಿಯರ್ ವಿಭಾಗದಲ್ಲಿ 100, ಓಟದಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿದ್ದರು. 10:5 ಸೆ. ಅವರ ಉತ್ತಮ ಸಾಧನೆಯಾಗಿತ್ತು. ಕರ್ನಾಟಕ ರಿಲೇ ತಂಡದಲ್ಲೂ ಪಾಲ್ಗೊಂಡಿದ್ದ ಅರ್ಜುನ್ ಕಿರಿಯರ ವಿಭಾಗದಲ್ಲಿ ಪದಕ ವಿಜೇತರು.
ಸಚಿನ್, ಸೆಹ್ವಾಗ್ ಸಂಸ್ಥೆಯಲ್ಲಿ ದುಡಿಮೆ: ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್ ಹಾಗೂ ವೀರೇಂದ್ರ ಸೆಹ್ವಾಗ್ ಅವರು ಸ್ಥಾಪಿಸಿದ ಸ್ಪೋರ್ಟ್ಸ್ ಮೆಂಟರ್ ಸಂಸ್ಥೆಯಲ್ಲಿ ಅರ್ಜುನ್ ಕೆಲವು ವರ್ಷಗಳ ಕಾಲ ಕೆಲಸ ಮಾಡಿದ್ದರು. 2018ರ ವರೆಗೂ ಮೈಸೂರಿನಲ್ಲಿ ಅಥ್ಲೆಟಿಕ್ಸ್‌ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದ ಅರ್ಜುನ್ ನಂತರ ಕೋಚಿಂಗ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಕರ್ನಾಟಕದಿಂದ ದೇಶಕ್ಕೆ ಉತ್ತಮ ಅಥ್ಲೀಟ್‌ಗಳನ್ನು ನೀಡುವುದೇ ತಮ್ಮ ಗುರಿ ಎಂದು ಅರ್ಜುನ್ ಹೇಳಿದ್ದಾರೆ.
ಕ್ರೀಡಾಂಗಣದಲ್ಲಿ ಕನ್ನಡದ ಧ್ವನಿ: ಅರ್ಜುನ್ ಅಜಯ್ ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ ಮಟ್ಟದ ಯಾವುದೇ ಕ್ರೀಡಾಕೂಟವಿರಲಿ ಅಲ್ಲಿ ಪ್ರಿಯಾ ಮೋಹನ್ ಅವರಿಗೆ ಪ್ರೋತ್ಸಾಹ ನೀಡಲು ಪಾಲ್ಗೊಳ್ಳುತ್ತಾರೆ. ಪ್ರಿಯಾ ಮೋಹನ್ ಅವರಿಗೂ ತನ್ನ ಕೋಚ್ ಜೊತೆಯಲ್ಲಿದ್ದರೆ ಆತ್ಮವಿಶ್ವಾಸ. ಪ್ರಿಯಾ ಮೋಹನ್ ಅಂಗಣಲ್ಲಿ ಓಡುತ್ತಿರಬೇಕಾದರೆ ದೂರದಿಂದ ಕನ್ನಡದ ಧ್ವನಿಯೊಂದು ಕೇಳಿಬರುತ್ತದೆ, “ಪ್ರಿಯಾ ಓಡು, ನಿನ್ನಿಂದ ಸಾಧ್ಯವಿದೆ,,,,, ಕಮಾನ್….. ಬಂತು ನೋಡು ಪದಕ…. ನಿಲ್ಲಬೇಡ ಓಡು…” ಈ ಮಾತು ಅರ್ಜುನ್ ಇದ್ದಲ್ಲಿ ಸಾಮಾನ್ಯವಾಗಿರುತ್ತದೆ. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೇಳಿ ಬರುವುದಿಲ್ಲ, ಏಕೆಂದರೆ ಅಲ್ಲಿ ಓಡುವಾಗ ಸಂಗೀತವಿರುತ್ತದೆ. ಈ ಮಾತು ಪ್ರಿಯಾ ಮೋಹನ್‌ಗೆ ಕೇಳದಿರಬಹುದು, ಆದರೆ ಕನ್ನಡದ ಧ್ವನಿ ಇದ್ದೇ ಇರುತ್ತದೆ. ಜೊತೆಯಲ್ಲಿ ಒಂದು ವೀಡಿಯೋ….
ಅಜಯ್ ಅಂತಾರಾಷ್ಟ್ರೀಯ ಕ್ರೀಡಾಪಟು: ಅರ್ಜುನ್ ಅವರ ತಂದೆ ಅಜಯ್ ಉತ್ತಮ ಅಥ್ಲೀಟ್. ಕ್ರೀಡೆಯನ್ನೇ ಉಸಿರಾಗಿಸಿಕೊಂಡ ಅಜಯ್ 1500 ಮೀ. ಓಟದಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದವರು. ನೂರಾರು ಕ್ರೀಡಾಪಟುಗಳ ಬದುಕಿಗೆ ನೆರವಾದ ಅಜಯ್ ಸದ್ಯ ಕರ್ನಾಟಕ ಅಥ್ಲೆಟಿಕ್ಸ್ ಸಂಸ್ಥೆಯ ಜಂಟಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಭಾರತೀಯ ಆಹಾರ ನಿಗಮದಲ್ಲಿ ಅಧಿಕಾರಿಯಾಗಿ ನಿವೃತ್ತರಾಗಿರು ಅಜಯ್, ಈಗ ಅರ್ಜುನ್ ಅಥ್ಲೆಟಿಕ್ಸ್ ತರಬೇತಿ ಕೇಂದ್ರದಲ್ಲಿ ಯುವ ಅಥ್ಲೀಟ್‌ಗಳಿಗೆ ನೆರವಾಗುತ್ತಿದ್ದಾರೆ.
ಮುಂದಿನ ಗುರಿ ಏಷ್ಯನ್ ಮತ್ತು ವಿಶ್ವ ಯೂನಿವರ್ಸಿಟಿ ಗೇಮ್ಸ್:
ಅರ್ಜುನ್ ಅಥ್ಲೆಟಿಕ್ಸ್ ಕೇಂದ್ರದಲ್ಲಿ ಪ್ರಿಯಾ ಮೋಹನ್ ಅಲ್ಲದೆ ಇನ್ನೂ ಅನೇಕ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕ್ರೀಡಾಪಟುಗಳು ತರಬೇತಿ ಪಡೆಯುತ್ತಿದ್ದಾರೆ. ಪ್ರಿಯಾ ಮೋಹನ್ ಈಗಾಗಲೇ ವಿಶ್ವ ಯೂನಿವರ್ಸಿಟಿ ಗೇಮ್ಸ್‌ಗೆ ಆಯ್ಕೇಯಾಗಿದ್ದಾರೆ. ಭುವನೇಶ್ವರದಲ್ಲಿ ನಡೆದ ಆಲ್ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ಮತ್ತು ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ಗಳಲ್ಲಿ ಚಿನ್ನದ ಸಾಧನೆ ಮಾಡುವ ಮೂಲಕ ಪ್ರಿಯಾ ಮೋಹನ್ ವಿಶ್ವ ಚಾಂಪಿಯನ್‌ಷಿಪ್‌ಗೆ ಆಯ್ಕೆಯಾಗಿದ್ದಾರೆ. “ವಿಶ್ವ ಯೂನಿವರ್ಸಿಟಿ ಗೇಮ್ಸ್ ಮತ್ತು ಏಷ್ಯನ್ ಗೇಮ್ಸ್ ಈಗ ನಮ್ಮ ಮುಂದಿರುವ ಗುರಿ. ಪ್ರಿಯಾ ಮೋಹನ್ ಇನ್ನು ಜೂನಿಯರ್ ವಿಭಾಗದಲ್ಲಿ ಸ್ಪರ್ಧಿಸುವುದಿಲ್ಲ. ಸೀನಿಯರ್ ವಿಭಾಗದಲ್ಲಿ ಮಾತ್ರ ಸ್ಪರ್ಧಿಸುತ್ತಾರೆ. ವಿಶ್ವ ಯೂನಿವರ್ಸಿಟಿ ಗೇಮ್ಸ್ ಮತ್ತು ಏಷ್ಯನ್ ಗೇಮ್ಸ್ ಗಮನದಲ್ಲಿರಿಸಿಕೊಂಡು ತರಬೇತಿ ನಡೆಸುತ್ತಿದ್ದೇವೆ. ಪೂವಮ್ಮ ಅವರಂಥ ಅಂತಾರಾಷ್ಟ್ರೀಯ ಓಟಗಾರ್ತಿಯರನ್ನು ಹಲವು ಬಾರಿ ಮಣಿಸಿದ ಪ್ರಿಯಾ ಮೋಹನ್ ಮುಂದಿನ ಸ್ಪರ್ಧೆಯಲ್ಲಿ ಜಾಗತಿಕ ಮಟ್ಟದಲ್ಲಿ ಪದಕ ಗೆದ್ದು ದೇಶಕ್ಕೆ ಕೀರ್ತಿ ತರುತ್ತಾರೆಂಬ ಆತ್ಮವಿಶ್ವಾಸವಿದೆ, ಅದಕ್ಕೆ ಪೂರಕವಾದ ತಯಾರಿಯನ್ನು ಮಾಡುತ್ತೇವೆ,” ಎಂದು ಅರ್ಜುನ್ ಅತ್ಯಂತ ಆತ್ಮವಿಶ್ವಾಸದಲ್ಲಿ ಹೇಳಿದ್ದಾರೆ.
“ನಮ್ಮ ತಂದೆಯ ಕ್ರೀಡಾ ಸಾಧನೆಯೇ ನನ್ನನ್ನು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿತು. ಕ್ರೀಡೆಯಲ್ಲಿ ತೊಡಗಿಸಿಕೊಂಡವರೆಲ್ಲರಿಗೂ ಪದಕ ಗೆಲ್ಲಲಾಗದು. ಆದರೆ ಶಿಸ್ತಿನ ಬದುಕನ್ನು ರೂಪಿಸಿಕೊಳ್ಳಲು ಕ್ರೀಡೆ ಎಲ್ಲ ರೀತಿಯಲ್ಲಿ ನೆರವಾಗುತ್ತದೆ. ಉತ್ತಮ ಶಿಸ್ತು, ಆರೋಗ್ಯ ಇದು ಕ್ರೀಡೆ ಕಲಿಸುವ ಮೊದಲ ಪಾಠ. ಕೇಂದ್ರ ಸರಕಾರ ಜಾರಿಗೆ ತಂದ ಫಿಟ್ ಇಂಡಿಯಾದ ಮೂಲ ಉದ್ದೇಶವೂ ಇದೆ ಆಗಿದೆ,” ಎಂದು ಅರ್ಜುನ್ ಅಜಯ್ ಹೇಳಿದ್ದಾರೆ.