ಎಟಿಕೆಗೆ ಸೋಲುಣಿಸಿದ ಬೆಂಗಳೂರು

0
209
ಕೋಲ್ಕೊತಾ, ಅಕ್ಟೋಬರ್ 31

ಮಿಕು (45ನೇ ನಿಮಿಷ) ಹಾಗೂ ಎರಿಕ್ ಪಾರ್ಥಲು (47ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಬೆಂಗಳೂರು ಎಫ್ ಸಿ ತಂಡ ಎಟಿಕೆ ವಿರುದ್ಧ 2-1 ಗೋಲುಗಳ ಅಂತರದಲ್ಲಿ ಜಯ ಗಳಿಸಿತು.

ಎಟಿಕೆ ಪರ ಕೋಮಲ್ ಥಟಾಲ್ 15ನೇ ನಿಮಿಷದಲ್ಲಿ ಗಳಿಸಿದ ಗೋಲು  ಸೋಲಿನ ಅಂತರವನ್ನು ಕೆಡಿಮೆ ಮಾಡಿತು. ಕೊನೆಗೂ ಎಟಿಕೆ ತಂಡಕ್ಕೆ ಬೆಂಗಳೂರು ವಿರುದ್ಧ ಜಯಗಳಿಸಲು ಸಾಧ್ಯವಾಗಲಿಲ್ಲ. ಈ ಜಯದೊಂದಿಗೆ ಒಟ್ಟು 10 ಅಂಕಗಳನ್ನು ಗಳಿಸಿದ ಬೆಂಗಳೂರು ಎಫ್ ಸಿ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನ ತಲುಪಿತು.
ಬಿಎಫ್ಸಿ ದಿಟ್ಟ ಉತ್ತರ
ಎಟಿಕೆ ಪಂದ್ಯ ಆರಂಭಗೊಂಡ 15ನೇ ನಿಮಿಷದಲ್ಲಿ ಗೋಲು ಗಳಿಸಿ ಮುನ್ನಡೆ ಸುಸ್ಥಿತಿಯಲ್ಲಿತ್ತು. ಆದರೆ ಬೆಂಗಳೂರು ತನ್ನ ಹೋರಾಟವನ್ನು ಮುಂದುವರಿಸಿತು. ಪ್ರಥಮಾರ್ಧ  ನಮ್ಮದೇ ಮೇಲುಗೈ ಎಂದು ಎಟಿಕೆ ಯೋಚಿಸುತ್ತಿರುವಾಗಲೇ ಕೊನೆಯ 45ನೇ ನಿಮಿಷದಲ್ಲಿ ಮಿಕು ಮ್ಯಾಜಿಕ್ ಫಲಿಸಿತು. ಅದೊಂದು ಅದ್ಭುತ ಗೋಲು. ಈ ಬಾರಿಯ ಐಎಸ್‌ಎಲ್‌ನಲ್ಲೇ ದಾಖಲಾದ ಉತ್ತಮ ಗೋಲೆಂದರೆ ಅತಿಶಯೋಕ್ತಿ ಆಗಲಾರದು. ಆ ಗೋಲು ಗಳಿಸಿರುವುದು ಮಿಕು. ಮಿಕು ಚೆಂಡನ್ನು ದಿಮಾಸ್ ಡೆಲ್ಗಾಡೋ ನೀಡಿದ ಪಾಸ್ ಮೂಲಕ ಗೋಲು ದಾಖಲಾಗುತ್ತದೆ ಯಾರೂ ಊಹಿಸಿರಲಿಲ್ಲ. ಆದರೆ ಮಿಕು ಗುರಿ ಮಾತ್ರ ಗೋಲ್‌ಬಾಕ್ಸ್ ಕಡೆಗೇ ಇದ್ದಿತ್ತು. ಅತ್ಯಂತ ವೇಗದಲ್ಲಿ ತುಳಿದ ಚೆಂಡನ್ನು ಎಟಿಕೆ ಗೋಲ್‌ಕೀಪರ್ ಅರಿಂದಂ ಭಟ್ಟಾಚಾರ್ಯ ಅವರಿಗೆ ತಡೆಯಲಾಗಲಿಲ್ಲ. ಬಿಎಫ್ಸಿ ಪಡೆಯಲ್ಲಿ ಸಂಭ್ರಮ, ಕೋಲ್ಕೊತಾದ ಯುವಭಾರತಿ ಕ್ರೀಡಾಂಗಣದಲ್ಲಿ ಮೌನ. ಪ್ರಥಮಾರ್ಧ 1-1ರಲ್ಲಿ ಸಮಬಲ.
ಥಟಾಲ್ ಗೋಲಿಗೆ ಬಿಎಫ್ಸಿ ತಟಸ್ಥ
ಹಿಂದಿನ ಲೆಕ್ಕಾಚಾರಗಳು ಕೆಲವೊಮ್ಮೆ ಉಪಯೋಗಕ್ಕೆ ಬರುವುದಿಲ್ಲ. ಆ ದಿನವೇ ಬೇರೆ, ಈ ದಿನವೇ ಬೇರೆ. ಕೊಮಲ್ ಥಟಾಲ್ 15ನೇ ನಿಮಿಷದಲ್ಲಿ ಅದನ್ನು ಸಾಬೀತುಪಡಿಸಿದರು. ಎವರ್ಟನ್ ಸ್ಯಾಂಟೋಸ್ ನೀಡಿದ ಪಾಸ್ ಅನ್ನು ಸರಿಯಾದ ಮಾರ್ಗದಲ್ಲಿ ಕಳುಹಿಸಲು ಥಟಾಲ್‌ಗೆ ಅನುಕೂಲವಾಗಿತ್ತು. ಚೆಂಡನ್ನು ನಿಯಂತ್ರಿಸುತ್ತಲೇ ಗೋಲ್‌ಕೀಪರ್ ಅವರ ಚಲನೆಯನ್ನು ಗಮನಿಸಿದ ಥಾಟಲ್ ಅತ್ಯಂತ ಸುಲಭವಾಗಿ ಚೆಂಡನ್ನು ಗೋಲ್‌ಬಾಕ್ಸ್‌ಗೆ ತಳ್ಳಿದರು. ಗುರ್‌ಪ್ರೀತ್ ಸಿಂಗ್ ಸಂಧೂ  ಎಡಭಾಗಕ್ಕೆ ಹಾರಿ ಯತ್ನಿಸಿದರೂ ಚೆಂಡು ಅಷ್ಟರಲ್ಲೇ ನೆಟ್‌ಗೆ ಮುತ್ತಿಟ್ಟಿತ್ತು. ಬೆಂಗಳೂರು ಗೋಲಿನ ಖಾತೆ ತೆರೆಯುತ್ತದೆ ಎಂಬ ನಿರೀಕ್ಷೆ ುಟ್ಬಾಲ್ ಪಂಡಿತರದ್ದಾಗಿತ್ತು. ಆದರೆ ಎಟಿಕೆ ಎಲ್ಲ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡಿತು. ಚೆನ್ನೈ  ವಿರುದ್ಧ ಮನೆಯಂಗಣದಲ್ಲಿ ದಕ್ಕಿದ ಜಯವೇ ತಂಡದ ಈ ಆತ್ಮವಿಶ್ವಾಸದ ಆಕ್ರಮಣಕ್ಕೆ ಕಾರಣ ಎಂದರೆ ತಪ್ಪಾಗಲಾರದು.
ಕಠಿಣ ಹೋರಾಟ
ಕಳೆದ ಬಾರಿಯ ಐಎಸ್‌ಎಲ್‌ನಲ್ಲಿ ಫೈನಲ್ ತಲುಪಿದ್ದ ಬೆಂಗಳೂರು ಎಫ್ಸಿ ಹಾಗೂ ಎರಡು ಬಾರಿ ಚಾಂಪಿಯನ್ ಎಟಿಕೆ ನಡುವಿನ ಪಂದ್ಯ ಎಂದಾಗ ಎಲ್ಲಿ ಕುತೂಹಲ ಮನೆ ಮಾಡಿರುತ್ತದೆ. ಬೆಂಗಳೂರು ಎಫ್ಸಿ ತಂಡ ಹಾಲಿ ಚಾಂಪಿಯನ್ ಚೆನ್ನೈಯಿನ್ ವಿರುದ್ಧದ ಆರಂಭಿಕ ಪಂದ್ಯದಲ್ಲೇ ಜಯ ಗಳಿಸಿ ತನ್ನ ಉದ್ದೇಶವನ್ನು ಸ್ಪಷ್ಟಪಡಿಸಿದೆ. ಎರಡು ಜಯ ಹಾಗೂ ಒಂದು ಡ್ರಾ ಮೂಲಕ ಬೆಂಗಳೂರು ತಂಡ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ಸುನಿಲ್ ಛೆಟ್ರಿ ಹಾಗೂ ಮಿಕು ತಂಡ ಗಳಿಸಿರುವ ಒಟ್ಟು ಆರು ಗೋಲುಗಳಲ್ಲಿ ಐದನ್ನು ತಮ್ಮದಾಗಿಸಿಕೊಂಡಿದ್ದಾರೆ. ಕಳೆದ ಬಾರಿ ಐಎಸ್‌ಎಲ್‌ಗೆ ಕಾಲಿಟ್ಟ ಬೆಂಗಳೂರು ತಂಡ ಅಟ್ಯಾಕ್ ವಿಭಾಗದಲ್ಲಿ ಬಲಿಷ್ಠವಾಗಿರುವುದು ಸ್ಪಷ್ಟ. ಮನೆಯಂಗಣದ ಹೊರಗಡೆ ನಡೆದ ಪಂದ್ಯಗಳಲ್ಲಿ ಮೇಲುಗೈ ಸಾಧಿಸುವುದು ಬೆಂಗಳೂರು ತಂಡದ ಪ್ರಮುಖ ಲಕ್ಷಣ.  ಆಡಿರುವ ಒಂಬತ್ತು ಪಂದ್ಯಗಳಲ್ಲಿ ಏಳರಲ್ಲಿ ಜಯ ಗಳಿಸಿರುವುದೇ ಇದಕ್ಕೆ ಸಾಕ್ಷಿ. ಎಟಿಕೆ ವಿರುದ್ಧದ ಹಿಂದಿನ ಎರಡೂ ಪಂದ್ಯಗಳಲ್ಲಿ ಬೆಂಗಳೂರು ಜಯ ಗಳಿಸಿದೆ. ಅಂಥ ಆತ್ಮವಿಶ್ವಾಸದೊಂದಿಗೆ ಬ್ಲೂ ಬಾಯ್ಸ್ ಅಂಗಣಕ್ಕಿಳಿಯಿತು.
ಮನೆಯಂಗಣದಲ್ಲಿ ಚೆನ್ನೈಯಿನ್ ಎಫ್ಸಿ ವಿರುದ್ಧದ ಪಂದ್ಯದಲ್ಲಿ ಜಯ ಗಳಿಸಿರುವುದು ಎಟಿಕೆ ತಂಡದ ಮನೋಬಲವನ್ನು ಹೆಚ್ಚಿಸಿದೆ. ಅಲ್ಲದೆ ಆರಂಭಿಕ ಪಂದ್ಯಗಳಲ್ಲಿ ಗೋಲು ಗಳಿಸಲು ವಿಲವಾಗಿರುವ ಎಟಿಕೆ ಖಾತೆ ತೆರೆದಿದೆ. ತಂಡದ ಪ್ರಮುಖ ಆಟಗಾರ ಕಲು ಅಚೆ ಗೋಲು ಗಳಿಸಿರುವುದು ತಂಡದ ಆತ್ಮಬಲವನ್ನು ಹೆಚ್ಚಿಸಿದೆ. ಆದ್ದರಿಂದ ಬೆಂಗಳೂರು ತಂಡ ಹಿಂದಿನ ಲೆಕ್ಕಾಚಾರವನ್ನೇ ಮುಂದಿಟ್ಟುಕೊಂಡು ಅಂಗಣಕ್ಕಿಳಿದರೆ ಆಘಾತ ಅನುಭವಿಸುವ ಸಾಧ್ಯತೆ ಇದೆ.