Friday, December 13, 2024

ಫೆನ್ಸಿಂಗ್ ಕಿಂಗ್ ರಂಜಿತ್

ಸ್ಪೋರ್ಟ್ಸ್ ಮೇಲ್ ವಿಶೇಷ ವರದಿ

ಥ್ರೋಬಾಲ್, ಅಮೆರಿಕನ್ ಫುಟ್ಬಾಲ್ ಹಾಗೂ ಫೆನ್ಸಿಂಗ್ ಹೀಗೆ ಮೂರು ಕ್ರೀಡೆಗಳಲ್ಲಿ ತನ್ನನ್ನು ತೊಡಗಿಸಿಕೊಂಡು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವ ಬೆಂಗಳೂರಿನ ರಂಜಿತ್ ಕರ್ನಾಟಕದ ಉದಯೋನ್ಮುಖ ಸಾಧಕ.

ಉದಯೋನ್ಮುಖ ಸಾಧಕ.
ಥ್ರೋಬಾಲ್ ಹಾಗೂ ಅಮೆರಿಕನ್ ಫುಟ್ಬಾಲ್‌ನಲ್ಲಿ ಮಿಂಚಿದರೂ ರಾಜ್ಯ ಸರಕಾರದಿಂದ ಯಾವುದೇ ಪ್ರೋತ್ಸಾಹ ಸಿಗಲಿಲ್ಲ. ಈ ಕಾರಣದಿಂದ ರಂಜಿತ್ ಗುರುಗಳಾದ ಲಕ್ಷ್ಮೀಶ್ ಹಾಗೂ ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಸುಧೀರ್  ಅವರ ಸಲಹೆ ಮೇರೆಗೆ ಫೆನ್ಸಿಂಗ್‌ನಲ್ಲಿ ತೊಡಗಿಕೊಂಡು ಈಗ ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿದ್ದಾರೆ. ಬೆಂಗಳೂರು ವಿಶ್ವವಿದ್ಯಾನಿಲಯ ಆಯೋಜಿಸಿದ್ದ ಅಂತರ್ ಕಾಲೇಜು ಫೆನ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ರಂಜಿತ್ ಚಿನ್ನದ ಪದಕ ಗೆದ್ದು ರಾಷ್ಟ್ರಮಟ್ಟದಲ್ಲಿ ಮಿಂಚಲು ಸನ್ನದ್ಧರಾಗಿದ್ದಾರೆ.
ದೊಡ್ಡಬಳ್ಳಾಪುರದ ಮೂಲದ ರಂಜಿತ್, ಪ್ರಸಕ್ತ ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ವರ್ಷದ ಪದವಿ ಓದುತ್ತಿದ್ದಾರೆ, ಶೇಷಾದ್ರಿಪುರಂ ಫೆನ್ಸಿಂಗ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ರಂಜಿತ್, ರಾಷ್ಟ್ರಮಟ್ಟದ ಚಾಂಪಿಯನ್‌ಷಿಪ್‌ನ ವೈಯಕ್ತಿಕ ವಿಭಾಗದಲ್ಲಿ ಬೆಳ್ಳಿ ಹಾಗೂ ತಂಡ ವಿಭಾಗದಲ್ಲಿ ಕಂಚಿನ ಪದಕ ಗೆದ್ದು ಸಾಧನೆ ಮಾಡಿದ್ದಾರೆ.
‘ಥ್ರೋಬಾಲ್ ಹಾಗೂ ಅಮೆರಿಕನ್ ಫುಟ್ಬಾಲ್‌ನಲ್ಲಿ ಕಳೆದ ಹಲವು ವರ್ಷಗಳಿಂದ ಸಾಧನೆ ಮಾಡುತ್ತಿದ್ದೆ. ಆದರೆ ಯಾರೂ ನನ್ನ ಸಾಧನೆಯನ್ನು ಗುರುತಿಸಿಲ್ಲ. ಕಳೆದ 18 ವರ್ಷಗಳಿಂದ ಕಳರಿಪಯಟ್‌ನಲ್ಲಿ ತರಬೇತಿ ಪಡೆಯುತ್ತಿದ್ದೆ. ನನ್ನಲ್ಲಿರುವ ಸಾಮರ್ಥ್ಯವನ್ನು ಗುರುತಿಸಿದ ಲಕ್ಷ್ಮೀಶ್ ಹಾಗೂ ಸುಧೀರ್ ಸರ್ ಫೆನ್ಸಿಂಗ್‌ನಲ್ಲಿ ತರಬೇತಿ ಪಡೆಯಲು ಸೂಚಿಸಿದರು. ಅವರ ಸಲಹೆಯಂತೆ ಫೆನ್ಸಿಂಗ್‌ನಲ್ಲಿ ತೊಡಗಿಕೊಂಡೆ. ಕಳರಿಪಯಟ್ ಅರಿತಿದ್ದ ನನಗೆ ಫೆನ್ಸಿಂಗ್ ಬಹಳ ಸುಲಭವಾಯಿತು. ವಿಶ್ವದ ಅತ್ಯಂತ ವೇಗದ ಕ್ರೀಡೆಯಾಗಿರುವ ಫೆನ್ಸಿಂಗ್‌ನಲ್ಲಿ ಮಿಂಚುವಾಸೆ. ರಾಜ್ಯ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಮೂಲಕ ಆತ್ಮವಿಶ್ವಾಸ ಹೆಚ್ಚಿತು. ರಾಷ್ಟ್ರಮಟ್ಟದಲ್ಲೂ ಉತ್ತಮ ಸಾಧನೆ ತೋರಿರುವೆ, ಇದ ಒಲಿಂಪಿಕ್ಸ್ ಕ್ರೀಡೆಯಾಗಿರುವ ಕಾರಣ ನನ್ನ ಶ್ರಮಕ್ಕೆ ಫಲ ಸಿಗುತ್ತದೆ ಎಂಬ ನಂಬಿಕೆ ಇದೆ,‘ ಎಂದು ರಂಜಿತ್ ಸ್ಪೋರ್ಟ್ಸ್ ಮೇಲ್‌ಗೆ ತಿಳಿಸಿದರು

Related Articles