ಸೋಮಶೇಖರ್ ಪಡುಕರೆ:
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ಕೃಷಿಕ ಬಾಲಸುಬ್ರಹ್ಮಣ್ಯ ಅವರ ಮಗ ಚೇತನ್ ಬಿ. ಆಗಸ್ಟ್ ೧೮ರಿಂದ ಜಕಾರ್ತದಲ್ಲಿ ನಡೆಯಲಿರರುವ ಏಷ್ಯನ್ ಗೇಮ್ಸ್‌ನಲ್ಲಿ ಹೈಜಂಪ್ ವಿಭಾಗದಲ್ಲಿ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ. ಶಾಲಾ ದಿನಗಳಲ್ಲಿ ಇತರ ವಿದ್ಯಾರ್ಥಿಗಳಿಂದ ’ಕಂಪೌಂಡ್ ಹಾರೋನು’ ಎಂದು ತಮಾಷೆಗೆ ಗುರಿಯಾಗಿದ್ದ ಯುವಕ, ಅದರಲ್ಲೇ ಬದುಕು ಕಂಡುಕೊಂಡು ಈಗ ಅಂತಾರಾಷ್ಟ್ರೀಯ ತಾರೆಯಾಗಿ ರೂಪುಗೊಂಡಿದ್ದಾರೆ.
ವಿಶ್ವ ಯುನಿವರ್ಸಿಟಿ ಗೇಮ್ಸ್ ಹಾಗೂ ಏಷ್ಯನ್ ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ ದೇಶವನ್ನು ಪ್ರತಿನಿಧಿಸಿದ್ದ ಚೇತನ್ ಈಗ ತಮ್ಮ ಹುಟ್ಟುಹಬ್ಬದ ದಿನದಂದೇ (ಆಗಸ್ಟ್ ೧೮) ಏಷ್ಯನ್ ಗೇಮ್ಸ್‌ನಲ್ಲಿ ಸ್ಪರ್ಧಿಸುತ್ತಿರುವುದು ವಿಶೇಷ. ೨.೨೫ ಮೀ. ಎತ್ತರಕ್ಕೆ ಜಿಗಿದು, ಅಂತರ್‌ರಾಜ್ಯ ಅಥ್ಲೆಟಿಕ್ಸ್ ಹಾಗೂ ಫೆಡರೇಷನ್ ಕಪ್‌ನಲ್ಲಿ ಚಿನ್ನ ಗೆಲ್ಲುವ ಮೂಲಕ ದೇಶದ ಹೈಜಂಪ್‌ನಲ್ಲಿ ಪ್ರಭುತ್ವ ಸಾಧಿಸಿರುವ ಚೇತನ್ ಅವರನ್ನು ಒಬ್ಬ ಉತ್ತಮ ಅಥ್ಲೀಟ್ ಆಗಿ ಮಾಡಿದರು ದೇಶದ ಉತ್ತಮ ಅಥ್ಲೆಟಿಕ್ಸ್ ಕೋಚ್ ಜಿ.ವಿ. ಗಾಂವ್ಕರ್.
ಮೂವರು ಕ್ರೀಡಾಪಟುಗಳು
ಬಾಲಸುಬ್ರಹ್ಮಣ್ಯ ಹಾಗೂ ಶ್ಯಾಮಲ ದಂಪತಿಗೆ ಮೂವರ ಗಂಡು ಮಕ್ಕಳು. ಮೂವರು ಕೂಡ ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಆದರೆ ಪ್ರೋತ್ಸಾಹ ಸಿಗದ ಕಾರಣ ಇಬ್ಬರು ಉದ್ಯೋಗದಲ್ಲಿ ಮುಂದುವರೆದರು. ಆದರೆ ಚೇತನ್ ಛಲ ಬಿಡದೆ ಹೈಜಂಪ್‌ನಲ್ಲಿ ಮುಂದುವರಿದು. ಕಳೆದ ೧೦ ವರ್ಷಗಳಲ್ಲಿ ಹಲವಾರು ಪದಕಗಳನ್ನು ಗೆದ್ದು ಭಾರತೀಯ ವಾಯುಸೇನೆಯಲ್ಲಿ ಉದ್ಯೋಗ ಗಳಿಸಿಕೊಂಡರು. ೨.೨೫ ಮೀ ಎತ್ತರಕ್ಕೆ ಜಿಗಿಯುವ ಮೂಲಕ ಚೇತನ್ ಅಂತರ್‌ರಾಜ್ಯ ಅಥ್ಲೆಟಿಕ್ಸ್‌ನಲ್ಲಿ ಕೂಟ ದಾಖಲೆ ಬರೆದಿದ್ದಾರೆ.
ಪದಕ ಗೆಲ್ಲುವ ಆತ್ಮವಿಶ್ವಾಸ
ಏಷ್ಯನ್ ಗೇಮ್ಸ್‌ನಲ್ಲಿ ೨.೩೦ ಮೀ.ಗಿಂತ ಹೆಚ್ಚು ಎತ್ತರಕ್ಕೆ ಜಿಗಿಯುವ ಸ್ಪರ್ಧಿಗಳು ಇರುತ್ತಾರೆ. ಎಲ್ಲರೂ ಎಲ್ಲಾ ದಿನವೂ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ತೋರುವುದಿಲ್ಲ. ಏಷ್ಯನ್ ಟ್ರ್ಯಾಕ್‌ನಲ್ಲಿ ೨.೩೦ ಮೀ. ಎತ್ತರಕ್ಕೆ ಜಿಗಿದವರು ೨.೨೦ಕ್ಕೇ ತೃಪ್ತಿಪಟ್ಟಿರುವುದಿದೆ. ಆದ್ದರಿಂದ ಈ ಬಾರಿಯ ಏಷ್ಯನ್ ಗೇಮ್ಸ್‌ನಲ್ಲಿ ಕನಿಷ್ಠ ಕಂಚಿನ ಪದಕ ಗೆಲ್ಲುವ ಗುರಿ ಇದೆ. ಇದು ಶೇ. ೯೯ರಷ್ಟು ಸಾಧ್ಯವಿದೆ ಎಂದು ಚೇತನ್ ಹೇಳಿದ್ದಾರೆ.
ಉತ್ತಮ ಗುರುಗಳು
ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ತರಬೇತುದಾರರಾಗಿದ್ದ ಜಿ.ವಿ. ಗಾಂವ್ಕರ್ ಅವರಲ್ಲಿ ಚೇತನ್ ತರಬೇತಿ ಪಡೆಯುತ್ತಿದ್ದಾರೆ. ಭಾರತ ಕಂಡ ಉತ್ತಮ ಅಥ್ಲೆಟಿಕ್ಸ್ ಕೋಚ್‌ಗಳಲ್ಲಿ ಕನ್ನಡಿಗ ಗಾಂವ್ಕರ್ ಕೂಡ ಒಬ್ಬರು. ಕ್ರೀಡಾಪಟುಗಳಿಂದ ಶಿಷ್ಯವೇತನ ಪಡೆಯದೆ ತರಬೇತಿನೀಡುತ್ತಿರುವ ಏಕೈಕ ಕೋಚ್ ಎಂದರೆ ಅದು ಗಾಂವ್ಕರ್. ‘ಹಲವು ವರ್ಷಗಳಿಂದ ಗಾಂವ್ಕರ್ ಸರ್ ಅವರಲ್ಲಿ ತರಬೇತಿ ಪಡೆಯುತ್ತಿದ್ದೇನೆ. ನನ್ನ ಯಶಸ್ಸಿನ ಹಿಂದೆ ಗುರುಗಳ ಪಾತ್ರ ಪ್ರಮುಖವಾದುದು. ಒಂದು ಹಂತದಲ್ಲಿ ಪ್ರದರ್ಶನ ಉತ್ತಮ ಇಲ್ಲದಿರುವಾಗ ಈ ಬಾರಿಯ ಏಷ್ಯನ್ ಗೇಮ್ಸ್ ಬೇಡ ಮುಂದಿನ ಬಾರಿ ನೋಡುವ ಅಂದಿದ್ದರು. ಆದರೆ ನನ್ನಲ್ಲಿಯ ಆತ್ಮವಿಶ್ವಾದಲ್ಲಿ ಅವರಿಗೆ ನಂಬಿಕೆ ಇದೆ. ತಾಂತ್ರಿಕವಾಗಿ ಅವರು ಉತ್ತಮ ರೀತಿಯಲ್ಲಿ ಸಲಹೆ ನೀಡುತ್ತಾರೆ. ಅವರಿಗಾಗಿ ಪದಕ ಗೆದ್ದೇ ಗೆಲ್ಲುತ್ತೇನೆಂಬ ಛಲ ಇದೆ,‘ ಎಂದು ಚೇತನ್‌ಹೇಳಿದ್ದಾರೆ.
ಏಷ್ಯನ್ ಗೇಮ್ಸ್‌ನಲ್ಲಿ ಹುಟ್ಟುಹಬ್ಬ
ಆಗಸ್ಟ್ ೧೮ರಂದು ಏಷ್ಯನ್ ಗೇಮ್ಸ್ ಉದ್ಘಾಟನೆ. ಅದೇ ದಿನ ಚೇತನ್ ಅವರು ೨೫ ವರ್ಷಗಳನ್ನು ಪೂರ್ಣಗೊಳಿಸಿ ೨೬ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಕ್ರೀಡಾಪಟುವಿನ ಬದುಕಿನಲ್ಲಿ ಇದೊಂದು ಅಪೂರ್ವ ಕ್ಷಣ. ಈ ಕುರಿತು ಮಾತನಾಡಿದ ಚೇತನ್, ‘ಏಷ್ಯನ್ ಗೇಮ್ಸ್ ದಿನವೇ ನನ್ನ ಹುಟ್ಟು ಹಬ್ಬ ಬರುತ್ತದೆ ಎಂದು ಎಲ್ಲಿಯೂ ಊಹಿಸಿರಲಿಲ್ಲ. ಆದರೆ ಈ ಬಾರಿಯ ಏಷ್ಯನ್ ಗೇಮ್ಸ್ ಉದ್ಘಾಟನೆಯ ದಿನವೇ ನನ್ನ ಹುಟ್ಟಹಬ್ಬ. ಇದು ಮರೆಯಲಾಗದ ಕ್ಷಣ. ಈ ದಿನ ನನ್ನ ಪಾಲಿಗೆ ಸ್ಫೂರ್ತಿಯ ದಿನ. ನನ್ನ ಬದುಕಿನಲ್ಲಿ ಈ ದಿನ ಮರೆಯಲಾಗದಂತೆ ಮಾಡಬೇಕು. ಅಂದರೆ ಪದಕ ಗೆಲ್ಲಬೇಕು. ಹಾಗಾದಲ್ಲಿ ಮಾತ್ರ ಈ ಖುಷಿಗೆ ಒಂದು ಅರ್ಥ ಇರುತ್ತದೆ,‘ ಎಂದರು.
ಕಂಠೀರವದಲ್ಲಿ ಸೌಲಭ್ಯ ಉತ್ತಮಗೊಳ್ಳಬೇಕು
ಇದೇ ವೇಳೆ ಚೇತನ್ ರಾಜ್ಯದ ಪ್ರತಿಷ್ಠಿತ ಅಥ್ಲೆಟಿಕ್ ಕ್ರೀಡಾಂಗಣ ಶ್ರೀ ಕಂಠೀರವದಲ್ಲಿ ಕ್ರೀಡಾಪಟುಗಳ ತರಬೇತಿಗಾಗಿ ಉತ್ತಮ ಸೌಲಭ್ಯ ಕಲ್ಪಿಸಬೇಕಾದ ಅಗತ್ಯವಿದೆ ಎಂದಿದ್ದಾರೆ. ಈ ಬಗ್ಗೆ ಕೆಲವು ತಿಂಗಳ ಹಿಂದೆ ನಿರ್ದೇಶಕರಾದ ಶಿವಶಂಕರ್ ಅವರಿಗೆ ಮನವಿ ಸಲ್ಲಿಸಿರುತ್ತೇವೆ. ಅವರು ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದಾರೆ. ಈ ಕ್ರೀಡಾಂಗಣ ಅಥ್ಲೀಟ್‌ಗಳಿಗೆ ಹೆಚ್ಚು ಉಪಯೋಗವಾಗುವಂತೆ ಕ್ರೀಡಾ ಇಲಾಖೆ ನೋಡಿಕೊಳ್ಳಬೇಕಾದ ಅಗತ್ಯವಿದೆ. ಹಲವಾರು ಕ್ರೀಡಾಪಟುಗಳು ನಿತ್ಯವೂ ಇಲ್ಲಿ ಅಭ್ಯಾಸ ನಡೆಸುತ್ತಾರೆ. ಕರ್ನಾಟಕ ಪದಕ ಗಳಿಕೆಯಲ್ಲಿ ಮುನ್ನಡೆ ಕಂಡುಕೊಳ್ಳಬೇಕಾದರೆ ತರಬೇತಿಗೆ ಅವಕಾಶ ಕಲ್ಪಿಸಬೇಕು. ಇತ್ತೀಚಿನ ದಿನಗಳಲ್ಲಿ ಕರ್ನಾಟಕದ ಸಾಧನೆ ತೃಪ್ತಿದಾಯಕವಾಗಿಲ್ಲ. ಇದಕ್ಕೆ ಅಭ್ಯಾಸದ ಕೊರತೆಯೇ ಕಾರಣ ಎಂದು ಅಂತಾರಾಷ್ಟ್ರೀಯ ಅತ್ಲೀಟ್ ಚೇತನ್ ಹೇಳಿದರು.