ಬೆಂಗಳೂರು: ಕ್ರೀಡೆಯಲ್ಲಿ ಡೋಪಿಂಗ್ ಕೆಲವರು ಉದ್ದೇಶಪೂರ್ಕವಾಗಿ ಮಾಡಿದರೆ ಇನ್ನು ಕೆಲವರು ತಮಗರಿವಿಲ್ಲದಂತೆ ಬಲಿಯಾಗುತ್ತಾರೆ. ನಮ್ಮ ಕರ್ನಾಟಕದ ಉದಯೋನ್ಮುಖ ಜಾವೆಲಿನ್ ಎಸೆತಗಾರ ಡಿ.ಪಿ. ಮನು ಈ ಬಾರಿಯ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದು, ಪ್ಯಾರಿಸ್‌ಗೆ ಪ್ರಯಾಣ ಬೆಳೆಸುವುದು ಬಹುತೇಕ ಖಚಿತವಾಗಿತ್ತು. ಆದರೆ ಇತ್ತೀಚಿನ ವರದಿ ಬಂದಾಗ ಅವರ ಹೆಸರನ್ನು ಕೈ ಬಿಡಲಾಗಿದೆ. ಅವರ ಡೋಪಿಂಗ್ ಪರೀಕ್ಷೆ ಫೇಲ್ ಆಗಿದೆ ಎಂಬ ಆತಂಕಕಾರಿ ಸುದ್ದಿ ಬಂದಿದೆ. Doping sometime it is not your mistake
ಕಾಮನ್‌ವೆಲ್ತ್ ಕ್ರೀಡೆಯಲ್ಲಿ ಪದಕ ಗೆದ್ದ, ಯೋಧ ಕಾಶಿನಾಥ್ ನಾಯಕ್ ಅವರ ಶಿಷ್ಯರಾಗಿರುವ ಡಿ.ಪಿ. ಮನು ಈ ತಪ್ಪನ್ನು ಮಾಡಲಾರ ಎಂಬ ನಂಬಿಕೆ ಎಲ್ಲರಿಗೂ ಇದೆ. ಆದರೆ ಡೋಪಿಂಗ್ ಪರೀಕ್ಷೆಯಲ್ಲಿ ಫೇಲ್ ಹೇಗಾದರು? ಎಂಬ ಪ್ರಶ್ನೆ ಕಾಡುವುದು ಸಹಜ. ಡೋಪಿಂಗ್ ಪ್ರಮಾದವನ್ನು ನೀವೇ ಮಾಡಬೇಕೆಂದಿಲ್ಲ, ಅದು ಬೇರೆಯವರಿಂದಲೂ ಆಗಬಹುದು. ನಿಮ್ಮನ್ನು ಸೋಲಿಸಲಾಗದವರು ನಡೆಸುವ ಕೊನೆಯ ಹೋರಾಟ ಇದಾಗಿರುತ್ತದೆ.
ಭಾರತದ ಕುಸ್ತಿಪಟು ನರಸಿಂಘ ಯಾದವ್ ಅವರ ಡೋಪಿಂಗ್ ಪ್ರಕರಣವನ್ನು ಅಧ್ಯಯನ ಮಾಡಿದಾಗ ಡೋಪಿಂಗ್ ಕೇವಲ ಸ್ಪರ್ಧಿಗಳು ಮಾತ್ರ ತೆಗೆದುಕೊಳ್ಳುವುದಲ್ಲ, ನಿಷೇಧಿತ ಔಷಧ ಎದುರಾಳಿಗಳಿಂದಲೂ ನಿಮ್ಮ ಆಹಾರದೊಡನೆ ದೇಹವನ್ನು ಸೇರುವುದಿದೆ, ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಮತ್ತು ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದಿರುವ ಯಾದವ್‌ಗೆ ನಾಲ್ಕು ವರ್ಷಗಳ ಕಾಲ ನಿಷೇಧ ಹೇರಲಾಗಿತ್ತು. ಇದು ಎದುರಾಳಿಗಳ ಮಾಡಿದ ಕುತಂತ್ರದಿಂದ ನಡೆದ ಘಟನೆ ಎಂಬುದು ಆ ನಂತರ ಬೆಳಕಿಗೆ ಬಂದಿತ್ತು. ಅಷ್ಟರಲ್ಲೇ ಅವರ ಕ್ರೀಡಾ ಬದುಕು ಕೊನೆಗೊಂಡಿತ್ತು. ಈಗ ಎಲ್ಲ ಆರೋಪಗಳಿಂದ ನರಸಿಂಘ ಯಾದವ್ ಮುಕ್ತರಾಗಿದ್ದು ಭಾರತೀಯ ಕುಸ್ತಿ ಸಂಸ್ಥೆಯ ಅಥ್ಲೆಟಿಕ್ಸ್ ಕಮಿಷನ್‌ನ ಚೇರ್ಮನ್ ಆಗಿ ಆಯ್ಕೆಯಾಗಿದ್ದಾರೆ. ರಿಯೋ ಒಲಿಂಪಿಕ್ಸ್‌ಗೆ ತೆರಳುವ ಮುನ್ನ ಒಲಿಂಪಿಕ್ ಪಕದ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್ ಹಾಗೂ ನರಸಿಂಘ ಯಾದವ್ ನಡುವೆ ಆಯ್ಕೆಯ ವಿಷಯದಲ್ಲಿ ವಿವಾದ ನಡೆದಿತ್ತು. ಸುಶೀಲ್ ಈ ವಿಷಯದಲ್ಲಿ ನ್ಯಾಯಾಲಯದ ಮೆಟ್ಟಿಲೇರಿ ವಿಫಲರಾಗಿದ್ದರು. ರಿಯೋ ಒಲಿಂಪಿಕ್ಸ್‌ಗೆ ತೆರಳುವ ಮುನ್ನವೇ ಅವರು ಡೋಪಿಂಗ್‌ನಲ್ಲಿ ಸಿಕ್ಕಿಬಿದ್ದರು. ಆ ಬಳಿಕ ಎದುರಾಳಿಗಳಿಂದ ಇದು ನಡೆದಿದೆ ಎಂಬುದು ಸಾಬೀತಾಗಿತ್ತು. ಆ ಎದುರಾಳಿ ಯಾರಿರಬಹುದು ಎಂಬುದನ್ನು ಸಾಮಾನ್ಯ ಜನ ಊಹಿಸಬಲ್ಲರು.
ಈಗ ಕ್ರೀಡೆ ಹಲವಾರು ಸವಲತ್ತುಗಳನ್ನು ನೀಡುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದರೆ, ಒಲಿಂಪಿಕ್ಸ್‌ಗೆ ಆಯ್ಕೆಯಾದರೆ, ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದರೆ ಸರಕಾರದಿಂದ ಕೋಟ್ಯಂತರ ನಗದು ಬಹುಮಾನ ಸಿಗುತ್ತದೆ, ಅರ್ಜುನ, ಪದ್ಮ, ಖೇಲರತ್ನದಂತಹ ಶ್ರೇಷ್ಠ ಪ್ರಶಸ್ತಿಗಳೂ ಸಿಗುತ್ತಿರುವುದು ಸಂತಸದ ವಿಷಯ. ತರಬೇತುದಾರರಿಗೂ ನಗದು ಮತ್ತು ಪ್ರಶಸ್ತಿಗಳೂ ಸಿಗುತ್ತವೆ. ಇದರಿಂದಾಗಿ ಆಯ್ಕೆ ಪ್ರಕ್ರಿಯೆಯ ಬಗ್ಗೆ ಹೆಚ್ಚಿನ ಗಮನ ಹರಿಸಲಾಗುತ್ತಿದೆ.
ನೀವು ತಿನ್ನುವ ಆಹಾರದ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಉದಾಹರಣೆಗೆ A ಮತ್ತು B ಕ್ರೀಡಾಪಟುಗಳ ನಡುವೆ ಒಂದು ಆಯ್ಕೆ ಪ್ರಕ್ರಿಯೆ ನಡೆಯುತ್ತಿರುತ್ತದೆ. ಇಬ್ಬರಿಗೂ ಅರ್ಹತೆ ಇದೆ. A ಆಯ್ಕೆಯಾದರೆ B ಗೆ ಅವಕಾಶವಿಲ್ಲ. A ಮತ್ತು B ಆತ್ಮೀಯ ಸ್ನೇಹಿತರು. ನಂಬಿಕಸ್ಥರು. A ಯನ್ನು ಡೋಪಿಂಗ್‌ಗೆ ಸಿಲುಕಿಸಿದರೆ ತಾನು ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಬಹುದು ಎಂಬುದು B ಯ ಯೋಚನೆಯಾಗಿರುತ್ತದೆ. ಆತ್ಮೀಯ ನೆಲೆಯಲ್ಲಿ ಯಾವುದೋ ಆಹಾರವನ್ನು ನೀಡಿದ. ಅದನ್ನು A ಸೇವಿಸಿದ, ಡೋಪಿಂಗ್ ಪರೀಕ್ಷೆಯಲ್ಲಿ ಸಿಕ್ಕಿಬಿದ್ದ. ಅಲ್ಲಿಗೆ A ಯ ಅವಕಾಶ ತಪ್ಪಿ B ಗೆ ಸಿಗುತ್ತದೆ. ಹೆಚ್ಚಿನ ಕ್ರೀಡಾಕೂಟಗಳು ನಡೆಯುವುದಕ್ಕೆ ಮುನ್ನ ಕೆಲವು ಕ್ರೀಡಾಪಟುಗಳು ಡೋಪಿಂಗ್‌ನಲ್ಲಿ ಸಿಕ್ಕಿಬಿದ್ದಿದ್ದಾರೆ ಎಂಬ ಸುದ್ದಿ ಕೇಳಿದಾಗ ಅಚ್ಚರಿಯಾಗುತ್ತದೆ. ಆದರೆ ಸತ್ಯಾಂಶ ಬೇರೆಯೇ ಇರುತ್ತದೆ. ಆದ್ದರಿಂದ ಕ್ರೀಡಾಪಟುಗಳೇ ಬಹಳ ಎಚ್ಚರಿಕೆಯಿಂದ ಇರಿ. ಡೋಪಿಂಗ್ ವಿಷಯದಲ್ಲಿ ನೀವು ನಿಮ್ಮ ಪ್ರತಿಸ್ಪರ್ಧಿಯನ್ನೂ ಸುಲಭವಾಗಿ ನಂಬಬೇಡಿ.