Saturday, October 12, 2024

ದೃಷ್ಠಿ ದಿವ್ಯಾಂಗರ ಕ್ರಿಕೆಟ್‌ ರಾಷ್ಟ್ರೀಯ ತರಬೇತಿ ಶಿಬಿರ, ಟೂರ್ನಮೆಂಟ್‌

ಬೆಂಗಳೂರು: ಭಾರತೀಯ ದೃಷ್ಠಿ ದಿವ್ಯಾಂಗರ ಕ್ರಿಕೆಟ್‌ ಸಂಸ್ಥೆ (ಸಿಎಬಿಐ)ಯು ಎನ್‌ಟಿಟಿ ಡಾಟಾ ವತಿಯಿಂದ ರಾಷ್ಟ್ರೀಯ ತರಬೇತಿ ಶಿಬಿರ ಮತ್ತು ಟೂರ್ನಿಗೆ ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚಾಲನೆ ನೀಡಿತು. ಈ ಕಾರ್ಯಕ್ರಮ ಸಮರ್ಥನಂ ಸಂಸ್ಥೆಯ ನೆರವಿನೊಂದಿಗೆ ನಡೆಯಿತು.

ಗ್ಲೋಬಲ್‌ ಸಿಎಸ್‌ಆರ್‌ ಮತ್ತು ಇಂಡಿಹಾ ಮಾರ್ಕೆಟಿಂಗ್‌ ಎನ್‌ಟಿಟಿ ಡಾಟಾ ಇದರ ಉಪಾಧ್ಯಕ್ಷ ಅಂಕುರ್‌ ದಾಸಗುಪ್ತ ರಾಷ್ಟ್ರೀಯ ಶಿಬಿರ ಮತ್ತು ಟೂರ್ನಿಗೆ ಚಾಲನೆ ನೀಡಿದರು. ಸಮರ್ಥನಂ ಸಂಸ್ಥೆಯ ಸ್ಥಾಪಕ ಆಡಳಿತ ಟ್ರಸ್ಟಿ, ಸಿಎಬಿಐ ಉಪಾಧ್ಯಕ್ಷ ಡಾ. ಮಹಂತೇಶ್‌ ಜಿ.ಕೆ, ಮಾಜಿ ಕ್ರಿಕೆಟಿ ಸದಾನಂದ ವಿಶ್ವನಾಥ್‌, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತ ಡಾ. ಎಚ್‌.ಎನ್‌. ಗೋಪಾಲಕೃಷ್ಣ, ಸಮೂಹ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕರಾದ ಸುಶ್ಮಾ ಗೋಡ್ಬೊಲೆ ಕಾರ್ಯಕ್ರಮದಲ್ಲಿ ಹಾಜರಿದ್ದು, ಆಟಗಾರರೊಂದಿಗೆ ಮಾತುಕತೆ ನಡೆಸಿದರು.

ಈ ತರಬೇತಿ ಶಿಬಿರದಲ್ಲಿ ದೇಶದ 56 ಯುವ ಮತ್ತು ಪ್ರತಿಭಾವಂತ ಕ್ರಿಕೆಟಿಗರಿಗೆ ಉನ್ನತ ಮಟ್ಟದ ತರಬೇತಿ ನೀಡಲಾಗುವುದು. ಇದರಲ್ಲಿ 29 ಆಟಗಾರರನ್ನು ದೃಷ್ಠಿ ದಿವ್ಯಾಂಗರಿಗಾಗಿ ನಡೆಯುವ ವಿಶ್ವಕಪ್‌ನಲ್ಲಿ ಸ್ಪರ್ಧಿಸಲಿರುವ ಭಾರತ ತಂಡಕ್ಕೆ ಆಯ್ಕೆ ಮಾಡಲು ತರಬೇತಿ ನೀಡಲಾಗುವುದು, ಆಯ್ಕೆಯಾದ ಆಟಗಾರರಿಗೆ ತಮ್ಮ ತರಬೇತಿ ಮತ್ತು ದೈಹಿಕ ಕ್ಷಮತೆಯನ್ನು ಕಾಯ್ದುಕೊಳ್ಳಲು ಐದು ತಿಂಗಳ ಕಾಲ ಶಿಷ್ಯವೇತನ ನೀಡಲಾಗುವುದು,

ಸಿಎಬಿಐ ಸ್ಥಾಪನೆಯಾದಾಗಿನಿಂದ ದೃಷ್ಠಿ ದಿವ್ಯಾಂಗ ಕ್ರಿಕೆಟಿಗರಿಗೆ  ಎಲ್ಲ ರೀತಿಯ ಪ್ರೋತ್ಸಾಹವನ್ನು ನೀಡುತ್ತ ಬಂದಿದೆ. ಇಂಡಿಯಾ ಬ್ಲೂ, ಇಂಡಿಯಾ ಯೆಲ್ಲೂ, ಇಂಡಿಯಾ ಆರೆಂಜ್‌ ಹಾಗೂ ಇಂಡಿಯಾ ರೆಡ್‌ ತಂಡಗಳಿಗೆ ಅನುಕ್ರಮವಾಗಿ ಅಜಯ್‌ ರೆಡ್ಡಿ, ಸುನಿಲ್‌ ರಮೇಶ್‌, ದೀಪಕ್‌ ಹಾಗೂ ಡಿ. ವೆಂಕಟೇಶ್ವರ ಅವರು ನಾಯಕರಾಗಿರುತ್ತಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಡಾ. ಮಹಂತೇಶ್‌ ಜಿ.ಕೆ, “ದೃಷ್ಠಿ ದಿವ್ಯಾಂಗರ ಕ್ರಿಕೆಟ್‌ನಲ್ಲಿ ಭಾರತವು ಎಲ್ಲ ಜಾಗತಿಕ ಮಟ್ಟದ ಟೂರ್ನಿಗಳನ್ನು ಗೆದ್ದ ಏಕೈಕ ರಾಷ್ಟ್ರವೆಂದು ಹೇಳಲು ಹೆಮ್ಮೆ ಅನಿಸುತ್ತಿದೆ. ಸಿಎಬಿಐ ರಾಷ್ಟ್ರಾದ್ಯಂತ ದೃಷ್ಠಿ ದಿವ್ಯಾಂಗರ ಕ್ರಿಕೆಟ್‌ ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡಿದ್ದರ ಪರಿಣಾಮ ಇಂದು ದೇಶದಲ್ಲಿ ಉತ್ತಮ ಸ್ಥಿತಿ ತಲುಪಿದೆ, ಅಲ್ಲದೆ ಜಗತ್ತಿನಾದ್ಯಂತ ಈ ಕ್ರಿಕೆಟ್‌ ಜನಪ್ರಿಯತೆ ಕಂಡುಕೊಂಡಿದೆ. ಇದಕ್ಕೆ ಆಟಗಾರರ ಶ್ರಮ ಹಾಗೂ ಬದ್ಧತೆಯೂ ಕಾರಣವಾಗಿದೆ. ಎನ್‌ಟಿಟಿ ಡಾಟಾ ವಿಶೇಷವಾದ ತರಬೇತಿ ವ್ಯವಸ್ಥೆಯನ್ನು ಆಯೋಜಿಸಿರುವುದರಿಂದ ಈ ಕ್ರಿಕೆಟ್‌ ಮುಖ್ಯವಾಹಿನಿಗೆ ಬರಲು ಮತ್ತಷ್ಟು ನೆರವಾಗುತ್ತದೆ,” ಎಂದರು.

Related Articles