ವಿಶ್ವ ಇ-ಸ್ಕೂಟರ್ ಚಾಂಪಿಯನ್‌ಷಿಪ್ ಅಗ್ರ ಸ್ಥಾನದಲ್ಲಿ ಏಷ್ಯಾದ ಫಿಟ್ಟೆಸ್ಟ್ ಮ್ಯಾನ್ ಅನೀಶ್ ಶೆಟ್ಟಿ
ಸೋಮಶೇಖರ್ ಪಡುಕರೆ, ಬೆಂಗಳೂರು
ಏಷ್ಯಾ ಮಟ್ಟದ ಬೈಕ್ ರೇಸ್‌ನಲ್ಲಿ ಅಂಕ ಗಳಿಸಿದ ಭಾರತದ ಮೊದಲ ರೇಸರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಕನ್ನಡಿಗ ಅನೀಶ್ ಶೆಟ್ಟಿ ಈಗ ಜಾಗತಿಕ ಕ್ರೀಡೆಯಲ್ಲಿ ಈಗ ಭಾರತಕ್ಕೆ ಮತ್ತೊಂದು ಕೀರ್ತಿ ತಂದಿದ್ದಾರೆ. ಏಷ್ಯಾದ ಅತ್ಯಂತ ಫಿಟ್ಟೆಸ್ಟ್ ಮ್ಯಾನ್ ಎಂಬ ಹೆಗ್ಗಳಿಕೆಗೆ ಪಾತ್ರಾಗಿರುವ ಅನೀಶ್ ಶೆಟ್ಟಿ ಜಗತ್ತಿನ ಮೊದಲ ಇ-ಸ್ಕೂಟರ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡ ಏಷ್ಯಾದ ಮೊದಲ ಸ್ಪರ್ಧಿ ಮಾತ್ರವಲ್ಲ ಆರು ಸುತ್ತುಗಳ ಚಾಂಪಿಯನ್‌ಷಿಪ್‌ನಲ್ಲಿ ಈಗಾಗಲೇ ಎರಡು ರೇಸ್‌ಗಳಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡು ಪ್ರಶಸ್ತಿ ಗೆಲ್ಲುವ ಫೇವರಿಟ್ ಎನಿಸಿದ್ದಾರೆ.
ಈ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲು ಜಗತ್ತಿನಾದ್ಯಂತ 150 ಚಾಲಕರನ್ನು ಆಯ್ಕೆ ಮಾಡಲಾಗಿತ್ತು. ಅವರಲ್ಲಿ ಅಂತಿಮವಾಗಿ 30 ಸ್ಪರ್ಧಿಗಳು ಚಾಂಪಿಯನ್‌ಷಿಪ್‌ನಲ್ಲಿ ಆಯ್ಕೆಯಾಗಿದ್ದಾರೆ. ಅವರಲ್ಲಿ ಏಷ್ಯಾದಿಂದ ಆಯ್ಕೆಯಾದ ಏಕೈಕ ಸ್ಪರ್ಧಿ ಅನೀಶ್ ಶೆಟ್ಟಿ. ಲಂಡನ್‌ನಲ್ಲಿ ಅಗ್ರ ಸ್ಥಾನ ಪಡೆದ ಅನೀಶ್, ಸ್ವಿಜರ್ಲೆಂಡ್‌ನ ಸಯಾನ್‌ನಲ್ಲಿ ನಡೆದ ಸುತ್ತಿನಲ್ಲಿ ನಾಲ್ಕನೇ ಸ್ಥಾನ ಪಡೆದು ಒಟ್ಟು 52 ಅಂಕಗಳೊಂದಿಗೆ ಚಾಂಪಿಯನ್‌ಷಿಪ್‌ನಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿದ್ದಾರೆ.
ಲಂಡನ್ ಮೂಲಕ ಕಾರ್ಲಿನ್ ರೇಸಿಂಗ್ ಕಂಪೆನಿಯನ್ನು ಪ್ರತಿನಿಧಿಸುತ್ತಿರುವ ಅನೀಶ್ ಶೆಟ್ಟಿ sportsmail ಜತೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ, “ಇದು 500-1000 ಮೀಟರ್ ಉದ್ದದ ರಸ್ತೆಯಲ್ಲಿ ನಡೆಯುವ ರೇಸ್. ಒಮ್ಮೆಗೆ ಆರು ಜನರನ್ನು ಸ್ಪರ್ಧೆಗಿಳಿಸಿ ಅದರಲ್ಲಿ ಉತ್ತಮ ಮೂವರನ್ನು ಆಯ್ಕೆ ಮಾಡುತ್ತಾರೆ. ಇಲ್ಲಿ ರೈಡರ್‌ಗಳು ಗೆದ್ದರೆ ಉತ್ತಮ ರೀತಿಯಲ್ಲಿ ಸಂಭಾವನೆ ಕೊಡುತ್ತಾರೆ, ಮತ್ತು ಪ್ರತೀ ರೇಸ್‌ಗೂ ಸಂಭಾವನೆ ನೀಡುತ್ತಾರೆ. ಉತ್ತಮ ವೃತ್ತಿಪರತೆಯಿಂದ ಕೂಡಿದೆ. ಈಗ ಎಲೆಕ್ಟ್ರಿಕ್ ಸ್ಕೂಟರ್‌ಗಳು ಹೆಚ್ಚು ಜನಪ್ರಿಯವಾಗುತ್ತಿರುವುದರಿಂದ ಈ ಚಾಂಪಿಯನ್‌ಷಿಪ್ ಪ್ರೇಕ್ಷಕರನ್ನು ಆಕರ್ಷಿಸುತ್ತಿದೆ,” ಎಂದರು.
ಇ-ಸ್ಕೂಟರ್ ರೇಸ್ ಜಗತ್ತಿನ ಮೊದಲ ಕಡಿಮೆ ಅಂತರದ ಮತ್ತು ಹಗುರ ವಾಹನದ ರೇಸ್ ಆಗಿರುತ್ತದೆ. ಇದಕ್ಕೆ ದೈಹಿಕ ಕ್ಷಮತೆಯ ಜೊತೆಯಲ್ಲಿ ರೇಸ್‌ನ ಜ್ಞಾನ ಗೊತ್ತಿರಬೇಕು. ಅನೀಶ್ ಶೆಟ್ಟಿ ಅವರಿಗೆ ಇವೆರಡರಲ್ಲೂ ಅಪಾರ ಜ್ಞಾನ ಇರುವುದರಿಂದ ರೇಸನಲ್ಲಿ ಪ್ರಭುತ್ವ ಸಾಧಿಸಿದರು. ಎರಡು ರೇಸ್‌ಗಳ ನಂತರ ಅಗ್ರ ಸ್ಥಾನದಲ್ಲಿರುವ ಅನೀಶ್ ಮೂರನೇ ಸುತ್ತಿಗಾಗಿ ಇಟಲಿಗೆ ಪ್ರಯಾಣಿಸಲಿದ್ದಾರೆ.
ಫಿಟ್ಟೆಸ್ಟ್ ಮ್ಯಾನ್ ಇನ್ ಏಷ್ಯಾ: ಕ್ರಾಸ್ ಫಿಟ್ ಓಪನ್ ಚಾಂಪಿಯನ್‌ಷಿಪ್‌ನಲ್ಲಿ ಅಗ್ರ ಸ್ಥಾನ ಪಡೆದ ಅನೀಶ್ ಶೆಟ್ಟಿ ಅವರು ಕಳೆದ ವರ್ಷ ಕ್ರಾಸ್ ಫಿಟ್ ಓಪನ್ ಚಾಂಪಿಯನ್‌ಷಿಪ್ (Cross Fit Open Championships) ನಲ್ಲಿ ಏಷ್ಯಾದ ಫಿಟ್ಟೆಸ್ಟ್ ಮ್ಯಾನ್ (‘The Fittest Man in Asia’) ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ರಾಷ್ಟ್ರೀಯ ಮಾಜಿ ಮೋಟೋ ಸೈಕಲ್ ರೇಸಿಂಗ್ ಚಾಂಪಿಯನ್ ಆಗಿರುವ ಅನೀಶ್, ಮೊದಲ ಜಾಗತಿಕ ಇ-ಸ್ಕೂಟರ್ ಚಾಂಪಿಯನ್ ಪಟ್ಟ ಗೆಲ್ಲುವ ಫೇವರಿಟ್ ಎನಿಸಿದ್ದಾರೆ.
S1-X ಬ್ರಾಂಡ್‌ನ ಸ್ಕೂಟರ್ ಚಲಾಯಿಸುತ್ತಿರುವ ಅನೀಶ್ ಶೆಟ್ಟಿ ಅವರ ಸಾಧನೆಯಿಂದಾಗಿ ಕಾರ್ಲಿನ್ ರೇಸಿಂಗ್ ತಂಡ ಕೂಡ ಚಾಂಪಿಯನ್‌ಷಿಪ್‌ನಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡು ಮುನ್ನಡೆದಿದೆ.