Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಮಿಂಚಿನ ವಿಕೆಟ್‌ ಕೀಪರ್‌ ಪ್ರತೀಕ್‌ ಪ್ರಶಾಂತ್‌

ಸೋಮಶೇಖರ್‌ ಪಡುಕರೆ ಬೆಂಗಳೂರು:

ಆ ಯುವ ಆಟಗಾರನಿಗೆ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್‌ ಮಾದರಿ, ಬ್ಯಾಟಿಂಗ್‌ಗೆ ನಿಂತರೆ ಭಾರತದ ವೀರೇಂದ್ರ ಸೆಹ್ವಾಗ್‌ ಅವರನ್ನು ಹೋಲುವ ಶೈಲಿ. ಅಬ್ಬರದ ಆಟ, ಮಿಂಚಿನ ವಿಕೆಟ್‌ ಕೀಪಿಂಗ್‌ ಮೂಲಕ ಚಿಕ್ಕ ವಯಸ್ಸಿನಲ್ಲೇ ಅಚ್ಚರಿ ಮೂಡಿಸಿದ ಬೆಂಗಳೂರಿನ ಪ್ರತೀಕ್‌ ಪ್ರಶಾಂತ್‌ ತಾನು ಕರ್ನಾಟಕದ ಭವಿಷ್ಯದ ವಿಕೆಟ್‌ಕೀಪರ್‌ ಎಂಬುದನ್ನು ಈಗಾಗಲೇ ಸಾಬೀತುಪಡಿಸಿದ್ದಾರೆ.

ಪ್ರತೀಕ್‌ ಅವರ ತಂದೆ ಪ್ರಶಾಂತ್‌ ಕೂಡ ಬೆಂಗಳೂರಿನ ವೈಎಂಸಿಎನಲ್ಲಿ ರೋಜರ್‌ ಬಿನ್ನಿ ಅವರಲ್ಲಿ ಪಳಗಿ, ವೈಎಂಸಿಎ ಪರ ಲೀಗ್‌ ಪಂದ್ಯಗಳನ್ನು ಆಡಿರುವ ವಿಕೆಟ್‌ ಕೀಪರ್‌ ಮತ್ತು ಬ್ಯಾಟ್ಸ್‌ಮನ್‌. ಅವಕಾಶಗಳಿಂದ ವಂಚಿತರಾದ ಕಾರಣ ಅವರು ಕ್ರಿಕೆಟ್‌ನಲ್ಲಿ ಮುಂದುವರಿಯಲಿಲ್ಲ.

ಪ್ರತೀಕ್‌ ಚಿಕ್ಕ ವಯಸ್ಸಿನಲ್ಲೇ ಕ್ರಿಕೆಟ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಮಗನ ಆಸಕ್ತಿಗೆ ತಂದೆ ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡಿದರು. ಕರ್ನಾಟಕ ಇನ್‌ಸ್ಟಿಟ್ಯೂಟ್‌ ಆಫ್‌ ಕ್ರಿಕೆಟ್‌ನಲ್ಲಿ ಇರ್ಫಾನ್‌ ಸೇಠ್‌, ನಾಸೀರ್‌ ಹಾಗೂ ಮಸೂದ್‌ ಅವರಲ್ಲಿ ಉತ್ತಮ ತರಬೇತಿಯನ್ನು ಪಡೆದು ಕಿರಿಯರ ಹಂತದಲ್ಲಿ ಉತ್ತಮ ಕ್ರಿಕೆಟಿಗರೆನಿಸಿಕೊಂಡರು. ಚಿಕ್ಕಂದಿನಲ್ಲಿ ಸರ್ಜಾಪುರ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಆರು ವರುಷದ ಪುಟ್ಟ ಬಾಲಕ ಪ್ಯಾಡ್‌ ಕಟ್ಟಿ ಆಡುತ್ತಿರುವುದನ್ನು ಕಂಡು ಅಲ್ಲಿಯ ಕ್ರಿಕೆಟ್‌ ಅಭಿಮಾನಿಗಳು “ಈತ ಭವಿಷ್ಯದ ತಾರೆ” ಎಂದು ಮೆಚ್ಚಿ ಭವಿಷ್ಯ ನುಡಿದಿರುವುದನ್ನು ಪ್ರತೀಕ್‌ ಅವರ ತಂದೆ ಪ್ರಶಾಂತ್‌ ಈಗಲೂ ಸ್ಮರಿಸುತ್ತಾರೆ.

ಕೊರೋನಾ ಕಾಲದಲ್ಲಿ ಯೂಟ್ಯೂಬ್‌ ಮೂಲಕ ಜಗತ್ತಿನ ಶ್ರೇಷ್ಠ ವಿಕೆಟ್‌ ಕೀಪರ್‌ಗಳ ವೀಡಿಯೋಗಳನ್ನು ನೋಡಿ ಕೊಂಡು ಅದೇ ರೀತಿಯಲ್ಲಿ ಅಭ್ಯಾಸ ಮಾಡುವ ಮೂಲಕ ವಿಕೆಟ್‌ ಕೀಪಿಂಗ್‌ನ ತಂತ್ರಗಳನ್ನು ಸುಲಭವಾಗಿ ಕರಗತ ಮಾಡಿಕೊಂಡಿದ್ದರು.

ವಿಕೆಟ್‌ಕೀಪಿಂಗ್‌ಗೆ ಆರಂಭದಲ್ಲಿ ವಿರೋಧ!

ಕ್ರಿಕೆಟ್‌ ಬದುಕಿನಲ್ಲಿ ತಾನು ಅನುಭವಿಸಿದ್ದನ್ನು ತನ್ನ ಮಗ ಅನುಭವಿಸಬಾರದು ಎಂಬ ಉದ್ದೇಶದಿಂದ ಪ್ರಶಾಂತ್‌ ಅವರು ಪ್ರತೀಕ್‌ಗೆ ವಿಕೆಟ್‌ ಕೀಪಿಂಗ್‌ ಬೇಡ ಕೇವಲ ಬ್ಯಾಟಿಂಗ್‌ನಲ್ಲಿ ಪಳಗಿದರೆ ಸಾಕು ಎಂದು ಸಲಹೆ ನೀಡಿದ್ದರು. ಆದರೆ ಪ್ರತೀಕ್‌ ಗುರಿಯೇ ಬೇರಾಗಿತ್ತು. “ವಿಕೆಟ್‌ ಕೀಪರ್‌ಗೆ ಸಾಕಷ್ಟು ಏಕಾಗ್ರತೆ ಬೇಕಾಗುತ್ತದೆ. ತಂಡದ ಫಲಿತಾಂಶದ ಮೇಲೆ ವಿಕೆಟ್‌ಕೀಪರ್‌ ತೋರುವ ಪ್ರದರ್ಶನ ಪ್ರಮುಖ ಪಾತ್ರವಹಿಸುತ್ತದೆ. ಉಳಿದ ಆಟಗಾರರಂತೆ ವಿಶ್ರಾಂತಿ ಕಡಿಮೆ. ಆಯ್ಕೆಯ ವಿಷಯ ಬಂದಾಗಲೂ ಇಬ್ಬರಿಗೆ ಮಾತ್ರ ಅವಕಾಶ ಇರುತ್ತದೆ. ಈ ಹಿನ್ನಲೆಯಲ್ಲಿ ಕೇವಲ ಬ್ಯಾಟಿಂಗ್‌ ಮಾತ್ರ ಸಾಕು ಎಂದಿದ್ದೆ, ಆದರೆ ಪ್ರತೀಕ್‌ ಬ್ಯಾಟಿಂಗ್‌ ಮತ್ತು ವಿಕೆಟ್‌ ಕೀಪಿಂಗ್‌ ಎರಡರಲ್ಲೂ ಉತ್ತಮ ಪ್ರದರ್ಶನ ತೋರುತ್ತಿರುವುದು ಖುಷಿಯ ಸಂಗತಿ,” ಎಂದು ಪ್ರಶಾಂತ್‌ ಹೇಳಿದರು.

ಓದಲು ನೆರವಾದ ವಿಕೆಟ್‌ ಕೀಪಿಂಗ್‌!:

ಮಕ್ಕಳು ಆಟ ಆಡಿಕೊಂಡಿದ್ದರೆ ಓದಿನಲ್ಲಿ ಹಿಂದೆ ಬೀಳುತ್ತಾರೆ ಎಂಬುದು ಅನೇಕ ಹೆತ್ತವರ ತಪ್ಪು ನಂಬಿಕೆ. ಆದರೆ ಪ್ರತೀಕ್‌ ಆಟ ಆಡಿಕೊಂಡೂ ಓದಿನಲ್ಲಿ ಉತ್ತಮ ಅಂಕ ಗಳಿಸಿರುವುದು ಗಮನಾರ್ಹ. ಇದಕ್ಕೆ ನೆರವಾದುದು ವಿಕೆಟ್‌ ಕೀಪಿಂಗ್‌. “ವಿಕೆಟ್‌ ಕೀಪಿಂಗ್‌ ಅತ್ಯಂತ ಕಠಿಣವಾದ ಕೆಲಸ. ಸದಾ ಕಾಲ ಮನಸ್ಸನ್ನು ಏಕಾಗ್ರತೆಯಲ್ಲಿರಿಸಿಕೊಳ್ಳಬೇಕು. ಮನಸ್ಸು ಯಾವಾಗಲೂ ಚೆಂಡಿಗ ಕಡೆಗೇ ಕೇಂದ್ರೀಕೃತವಾಗಿರಬೇಕು. ಈ ಏಕಾಗೃತೆಯನ್ನು ತರಗತಿಯಲ್ಲೂ ಅನ್ವಯಿಸುವ ಮೂಲಕ ಪ್ರತೀಕ್‌ ಓದಿನಲ್ಲಿ 90+ ಅಂಕಗಳನ್ನುಗಳಿಸಿರುತ್ತಾನೆ,” ಎಂದು ಪ್ರಶಾಂತ್‌ ಮಗನ ಬಗ್ಗೆ ಹೆಮ್ಮೆಯಿಂದ ನುಡಿದರು.

ಯಲಹಂಕದಲ್ಲಿರುವ ಡಿಪಿಎಸ್‌ ನಾರ್ಥ್‌ ಶಾಲೆಯ ಹತ್ತನೇ ತರಗತಿಯಲ್ಲಿ ಓದುತ್ತಿರುವ ಪ್ರತೀಕ್‌‌ ಇದುವರೆಗೂ ವಿವಿಧ ಹಂತದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ. ಡಿಪಿಎಸ್‌ನಲ್ಲಿ ವಿನಯ್‌ ಅವರು ಉತ್ತಮ ರೀತಿಯಲ್ಲಿ ತರಬೇತಿ ನೀಡುತ್ತಿದ್ದಾರೆ. ಲೀಗ್ ಪಂದ್ಯಗಳಲ್ಲಿ 196 ರನ್‌, 9 ಕ್ಯಾಚ್‌, 3 ಸ್ಟಂಪಿಂಗ್‌, ಅಂತರ್‌ ವಲಯ ಮಟ್ಟದಲ್ಲಿ 319 ರನ್‌, 10 ಕ್ಯಾಚ್‌, 2 ಸ್ಟಂಪಿಂಗ್‌. ಸೆಲೆಕ್ಷನ್‌ ಪಂದ್ಯದಲ್ಲಿ 90 ರನ್‌, 7 ಕ್ಯಾಚ್‌ ಹಾಗೂ 1 ಸ್ಟಂಪಿಂಗ್‌.. ಆದರೆ ಈ ಪ್ರತಿಭಾವಂತ ಆಟಗಾರ 16ವರ್ಷ ವಯೋಮಿತಿಯ ಬಿಸಿಸಿಐ ವಿಜಯ ಮರ್ಚಂಟ್‌ ಟ್ರೋಫಿಗೆ ಆಯ್ಕೆಯಾಗದಿರುವುದು ರಾಜ್ಯದ ಕ್ರಿಕೆಟ್‌ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ವಿಕೆಟ್‌ ಕೀಪಿಂಗ್‌ ಮತ್ತು ಆರಂಭಿಕ ಬ್ಯಾಟ್ಸ್‌ಮನ್‌ ಆಗಿರುವ ಪ್ರತೀಕ್‌ ಅಂತರ್‌ ವಲಯ ಕ್ರಿಕೆಟ್‌ನಲ್ಲಿ ಪಂದ್ಯವೊಂದರಲ್ಲಿ 155 ರನ್‌ ಸಿಡಿಸುವ ಮೂಲಕ ರಾಜ್ಯ ಆಯ್ಕೆ ಸಮಿತಿಯ ಗಮನ ಸೆಳೆದಿದ್ದರು. “ಕ್ರಿಕೆಟ್‌ನಲ್ಲಿ ಬರೇ ರನ್‌ ಮತ್ತು ವಿಕೆಟ್‌ ಸಾಧನೆ ಮಾಡಿದರೆ ಸಾಲದು, ಅದೃಷ್ಟವೂ ಬೇಕಾಗುತ್ತದೆ,” ಎನ್ನುತ್ತಾರೆ ಪ್ರತೀಕ್‌ ತಂದೆ ಪ್ರಶಾಂತ್‌.

ಬಹುಮುಖ ಪ್ರತಿಭೆಯ ಪ್ರತೀಕ್‌:

ಯುವ ಆಟಗಾರ ಪ್ರತೀಕ್‌ ತನ್ನ ಕ್ರೀಡಾ ಬದುಕನ್ನು ಕೇವಲ ಕ್ರಿಕೆಟ್‌ಗಾಗಿ ಮೀಸಲಿಟ್ಟಿದ್ದರೂ, ಇತರ ಕ್ರೀಡೆಗಳಲ್ಲೂ ಆತ ಚಾಂಪಿಯನ್‌, ಈ ನಿಟ್ಟಿನಲ್ಲಿ ಅವರ ತಾಯಿ ರಮ್ಯ ಪ್ರಶಾಂತ್‌ ಅವರ ಪಾತ್ರ ಪ್ರಮುಖವಾಗಿದೆ. ಕರಾಟೆ, ಸ್ಕೇಟಿಂಗ್‌, ಈಜು, ಫುಟ್ಬಾಲ್‌, ಟೇಬಲ್‌ ಟೆನ್ನಿಸ್‌ ಹಾಗೂ ಬ್ಯಾಡ್ಮಿಂಟನ್‌ ಕ್ರೀಡೆಗಳಲ್ಲೂ ಪ್ರತೀಕ್‌ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ತಂಡಕ್ಕೆ ಆಟಗಾರರನ್ನು ಆಯ್ಕೆ ಮಾಡುವಾಗ ಆಟಗಾರರ ಹಿಂದಿನ ದಾಖಲೆಗಳು, ಆಯ್ಕೆ ಟ್ರಯಲ್ಸ್‌ ಪಂದ್ಯಗಳಲ್ಲಿ ತೋರಿದ ಸಾಧನೆಯನ್ನು ಪರಿಗಣಿಸಬೇಕಾಗುತ್ತದೆ. ಹಾಗೆ ಆಗದಿದ್ದಲ್ಲಿ ಪ್ರತಿಭಾವಂತ ಆಟಗಾರರ ಭವಿಷ್ಯಕ್ಕೆ ದಕ್ಕೆಯಾಗುತ್ತದೆ. ಹೆತ್ತವರ ಶ್ರಮಕ್ಕೂ ಫಲ ಸಿಗದಂತಾಗುತ್ತದೆ.


ಸೋಮಶೇಖರ್‌ ಪಡುಕರೆ, ಕರ್ನಾಟಕದ ಹಿರಿಯ ಕ್ರೀಡಾ ಪತ್ರಕರ್ತರು, ಕಳೆದ 32 ವರ್ಷಗಳಿಂದ ಕ್ರೀಡಾಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಸಾಧನೆಯನ್ನು ಕರ್ನಾಟಕದ ಓದುಗರಿಗೆ ಪರಿಚಯಿಸಿದ್ದಾರೆ. ಹಲವಾರು ದಿವ್ಯಾಂಗ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸರಕಾರದ ನೆರವು ಸಿಗುವಂತೆ ಮಾಡಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾ ಸಾಧಕರಿಗೆ ನಗದು ಬಹುಮಾನ ಸಿಗುವಲ್ಲಿ ಇವರು ಬರೆದ ಲೇಖನಗಳು ಪ್ರಮುಖ ಪಾತ್ರವಹಿಸಿವೆ.