Saturday, October 12, 2024

ಕರ್ನಾಟಕದ ಯುವ ಆಲ್ರೌಂಡರ್‌ ಧೀರಜ್‌ ಗೌಡ

ಸೋಮಶೇಖರ್‌ ಪಡುಕರೆ, ಬೆಂಗಳೂರು

ಇತ್ತೀಚಿಗೆ ಮುಕ್ತಾಯಗೊಂಡ ಮಹಾರಾಜ ಟ್ರೋಫಿಯಲ್ಲಿ ಕರ್ನಾಟಕದ ಯುವ ಆಲ್ರೌಂಡರ್‌ ಧೀರಜ್‌ ಜೆ. ಗೌಡ ಅವರು ಅಂಗಣಕ್ಕಿಳಿಯುತ್ತಾರೆ ಎಂಬ ನಿರೀಕ್ಷೆ ಇದ್ದಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಆರಂಭಿಕ ಆಟಗಾರ, ಎಡಗೈ  ಮತ್ತು ಬಲಗೈ ಬೌಲರ್‌ (ಎರಡೂ ಕೈಗಳಲ್ಲೂ ಬೌಲಿಂಗ್‌ ಮಾಡಬಲ್ಲ ಬೌಲರ್‌) ಧೀರಜ್‌ ವೈಯಕ್ತಿಕ ಗರಿಷ್ಠ 219* ರನ್‌ ಸೇರಿದಂತೆ 7 ಶತಕ ಹಾಗೂ 348 ವಿಕೆಟ್‌ ಗಳಿಕೆಯ ಸಾಧನೆ ಮಾಡಿದ್ದು, ಮುಂದೊಂದು ದಿನ ಕ್ರಿಕೆಟ್‌ ಜಗತ್ತಿನ ಉತ್ತಮ ಆಲ್ರೌಂಡರ್‌ ಆಗುವ ಎಲ್ಲ ಲಕ್ಷಣ ಹೊಂದಿದ್ದಾನೆ ಧೀರಜ್‌ ಜೆ. ಗೌಡ.

ಇತ್ತೀಚಿಗೆ ನಡೆದ ಕೆಎಸ್‌ಸಿಎ ಲೀಗ್‌ ಪಂದ್ಯದಲ್ಲಿ ಸ್ವಸ್ತಿಕ್‌ ಯೂನಿಯನ್‌ 2 ತಂಡವನ್ನು ಪ್ರತಿನಿಧಿಸಿದ್ದ ಧೀಜರ್‌ ಒಂದು ಇನ್ನಿಂಗ್ಸ್‌ನಲ್ಲಿ 13 ರನ್‌ಗೆ 4 ವಿಕೆಟ್‌ ಹಾಗೂ 50ರನ್‌ಗೆ 8 ವಿಕೆಟ್‌ ಗಳಿಸಿರುವುದರಲ್ಲದೇ ಆರಂಭಿಕ ಆಟಗಾರನಾಗಿ 100 ರನ್‌ ಸಿಡಿಸಿ  ಜಯದ ರೂವಾರಿ ಎನಿಸಿದ್ದರು.  ಟಾಪ್‌ ಆರ್ಡರ್‌ ಬ್ಯಾಟ್ಸ್‌ಮನ್‌ ಮತ್ತು ಬಲಗೈಯಲ್ಲಿ ಮಧ್ಯಮ ವೇಗಿ ಹಾಗೂ ಎಡಗೈಯಲ್ಲಿ ಸ್ಪಿನ್‌ ಬೌಲಿಂಗ್‌ ಮಾಡಬಲ್ಲ ಧೀರಜ್‌ ನಿಜವಾಗಿಯೂ ಕ್ರಿಕೆಟ್‌ ಹೊಸ ಆಸ್ತಿ,

ಕೆಎಸ್‌ಸಿಎ ಲೀಗ್‌ ಹಾಗೂ ಇತರ ಪಂದ್ಯಗಳು ಸೇರಿ ಧೀರಜ್‌ ಒಟ್ಟು 226 ಪಂದ್ಯಗಳನ್ನಾಡಿ, 345 ವಿಕೆಟ್‌ ಗಳಿಸಿದ್ದರೆ, ಬ್ಯಾಟಿಂಗ್‌ನಲ್ಲಿ 226 ಪಂದ್ಯಗಳನ್ನಾಡಿ, 5817 ರನ್‌ಗಳ ಸಾಧನೆ ಮಾಡಿದ್ದು, 219* ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. 7 ಶತಕ,  36 ಅರ್ಧ ಶತಕಗಳ ಸಾಧನೆಯೂ ಇದೆ.

19 ವರ್ಷ ವಯೋಮಿತಿಯ ಕ್ರಿಕೆಟ್‌ನಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿರುವ ಧೀರಜ್‌ಗೆ ಮುಂಬೈ ವಿರುದ್ಧದ ಪಂದ್ಯದಲ್ಲಿ ಆರಂಭಿಕ ಆಟಗಾರನಾಗಿದ್ದರೂ ಕೆಳ ಕ್ರಮಾಂಕದಲ್ಲಿ ಅಂಗಣಕ್ಕಿಳಿಸಿದರೂ, ಅಲ್ಲಿಯೂ ಮಿಂಚಿದ ಮಂಡ್ಯದ ಯುವಕ ಯಾವುದೇ ಕ್ರಮಾಂಕದಲ್ಲೇ ಅಂಗಣಕ್ಕಿಳಿಸಿ ಅಲ್ಲಿ ನನ್ನ ಪ್ರದರ್ಶನ ತೋರುತ್ತೇನೆ ಎಂಬಂತೆ ಆಟವಾಡಿದ. 19 ವರ್ಷ ವಯೋಮಿತಿಯ ಕ್ರಿಕೆಟ್‌ನಲ್ಲಿ ರಾಜ್ಯದ ಪರ ಅತಿ ಹೆಚ್ಚು ವಿಕೆಟ್‌ ಗಳಿಸಿದ ಬೌಲರ್‌ ಎಂಬ ಹೆಗ್ಗಳಿಕೆಗೆ ಧೀರಜ್‌ ಪಾತ್ರರಾಗಿದ್ದಾರೆ.

9ನೇ ವಯಸ್ಸಿನಲ್ಲಿ ಕ್ರಿಕೆಟ್‌ ಆಡಲು ಆರಂಭಿಸಿದ ಧೀರಜ್‌ ಮೊದಲು ಸೆಂಚುರಿ ಕ್ರಿಕೆಟರ್ಸ್‌ ಪರ ಆಡುತ್ತಿದ್ದರು, ನಂತರ ಕರ್ನಾಟಕ ಇನ್‌ಸ್ಟಿಟ್ಯೂಟ್‌ ಆಫ್‌ ಕ್ರಿಕೆಟ್‌ನಲ್ಲಿ ಪಳಗಿ ಸ್ವಸ್ತಿಕ್‌ ಯೂನಿಯನ್‌ 2 ತಂಡದಲ್ಲಿ ಆಡಲಾರಂಭಿಸಿದರು. ಮೊದಲ ಡಿವಿಜನ್‌ ಲೀಗ್‌ ಪಂದ್ಯಗಳಲ್ಲಿ ಧೀರಜ್‌ ಮಾಡರ್ನ್‌ ಕ್ರಿಕೆಟರ್ಸ್‌ ಪರ ಆಡುತ್ತಿದ್ದಾರೆ. ಈಗ 16  ವರ್ಷ ಪ್ರಾಯದ ಧೀರಜ್‌ ಯಾವುದೇ ಹಂತದಲ್ಲೂ ತಮ್ಮ ಸಾಮರ್ಥ್ಯವನ್ನು ತೋರಲು ಸಜ್ಜಾಗಿದ್ದಾರೆ.

ಅಣ್ಣನಂತೆ ತಮ್ಮ ಆರ್ಯ ಜೆ. ಗೌಡ:

ಧೀರಜ್‌ ಅವರ ತಮ್ಮ ಆರ್ಯ ಜೆ. ಗೌಡ ಕೂಡ ಉತ್ತಮ ಆಲ್ರೌಂಡರ್.‌ 13 ವರ್ಷದ ಈ ಯುವ ಆಟಗಾರ ಈಗಾಗಲೇ ಹಲವು ಪಂದ್ಯಗಳಲ್ಲಿ ಮಿಂಚಿ ಗಮನ ಸೆಳೆದಿದ್ದಾರೆ. ಕಳೆದ ವರ್ಷ 16 ವರ್ಷ ವಯೋಮಿತಿ ಕ್ರಿಕೆಟ್‌ನಲ್ಲಿ ಆಡಿರುವ ಆರ್ಯ ಗೌಡ ಕರ್ನಾಟಕದ ಭವಿಷ್ಯದ ಆಲ್ರೌಂಡರ್‌ ಎಂಬುದನ್ನು ಸಾಬೀತುಪಡಿಸಿದ್ದಾರೆ.

ಕೆಎಸ್‌ಸಿಎ ಲೀಗ್‌ ಮತ್ತು ಇತರ ಸ್ಥಳಗಳಲ್ಲಿ ನಡೆದ ಪಂದ್ಯಗಳು ಸೇರಿ ಒಟ್ಟು 263 ಪಂದ್ಯಗಳನ್ನಾಡಿರುವ ಆರ್ಯ 272 ವಿಕೆಟ್‌, 263 ಪಂದ್ಯಗಳಲ್ಲಿ 3601 ರನ್‌ ಗಳಿಸಿದ್ದು, ಇದರಲ್ಲಿ ಎರಡು ಶತಕ ಸೇರಿದೆ, 129* ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ.

ತಂದೆಯಂತೆ ಮಕ್ಕಳು: ಧೀರಜ್‌ ಮತ್ತು ಆರ್ಯ ಅವರ ತಂದೆ ಜಗದೀಶ ಗೌಡ ಅವರ ಬದುಕಿನ ಕತೆ ಇನ್ನೂ ಕುತೂಹಲ. ಮೂಲತಃ ಮಂಡ್ಯದ ಮದ್ದೂರಿನ ರಾಮೇನ ಹಳ್ಳಿಯವರಾದ ಜಗದೀಶ್‌ ಅವರು ಕೃಷಿಕರು. ಮಕ್ಕಳ ಕ್ರಿಕೆಟ್‌ ಬದುಕಿಗಾಗಿ ಬೆಂಗಳೂರಿನ ಬಸವೇಶ್ವರ ನಗರದಲ್ಲಿ ಬಂದು ನೆಲೆಸಿರುತ್ತಾರೆ. ಲೀಗ್‌ ಹಂತದಲ್ಲಿ ಕ್ರಿಕೆಟ್‌ ಆಡಿದವರು. ಜಗದೀಶ ಅವರ ಕ್ರಿಕೆಟ್‌ ಪ್ರೀತಿಯೇ ಮಕ್ಕಳಲ್ಲಿ ಕ್ರಿಕೆಟ್‌ ಬಗ್ಗೆ ಆಸಕ್ತಿ ಹುಟ್ಟುವಂತೆ ಮಾಡಿತು. 50 ವರ್ಷ ಪ್ರಾಯದ ಜಗದೀಶ್‌ ಇತ್ತೀಚಿಗೆ ನಾಲ್ಕನೇ ಲೀಗ್‌ ಪಂದ್ಯದಲ್ಲಿ ಅರ್ಧ ಶತಕ ಗಳಿಸಿ ಎಲ್ಲರನ್ನೂ ನಿಬ್ಬೆರಗುಗೊಳಿಸಿದ್ದರು. “ನಾನು ಆಡುವುದನ್ನು ನೋಡಿ ನನ್ನ ಮಕ್ಕಳು ಕ್ರಿಕೆಟ್‌ನಲ್ಲಿ ಆಸಕ್ತಿ ತೋರಿದರು. ಮಂಡ್ಯದಲ್ಲಿ ಕೃಷಿ ಭೂಮಿ ಇದೆ. ಕೃಷಿಯ ಬಗ್ಗೆ ಕಾಳಜಿ ವಹಿಸುತ್ತ, ಮಕ್ಕಳ ಕ್ರಿಕೆಟ್‌ ಬದುಕಿಗಾಗಿ ಬೆಂಗಳೂರು-ಮಂಡ್ಯ ನಡುವೆ ಪ್ರಯಾಣಿಸುತ್ತಿರುತ್ತೇನೆ. ರಾಜ್ಯದಲ್ಲಿ ಮಿಂಚಿದ ಕ್ರಿಕೆಟಿಗರಿಗೆ ಮೊದಲ ಆದ್ಯತೆ ನೀಡಬೇಕಾಗಿದೆ. ಹಾಗಾದಲ್ಲಿ ಮಾತ್ರ ರಾಜ್ಯದಿಂದ ಹೆಚ್ಚಿನ ಪ್ರತಿಭೆಗಳು ಮುಂದಕ್ಕೆ ಬರಲು ಸಾಧ್ಯವಾಗುತ್ತದೆ,” ಎಂದು ಜಗದೀಶ್‌ ಹೇಳಿದರು.

“ಕೃಷಿಕನ ಮಕ್ಕಳಾಗಿ ಅವರು ಕ್ರಿಕೆಟ್‌ನಲ್ಲಿ ಮಿಂಚುತ್ತಿರುವುದು ಖುಷಿ ಕೊಟ್ಟಿದೆ. ಸಾಗಬೇಕಾದ ಹಾದಿ ಇನ್ನೂ ಇದೆ. ಅವರ ವಯಸ್ಸಿಗನುಗುಣವಾದ ಯಶಸ್ಸು ನೆಮ್ಮದಿ ತಂದಿದೆ. ಕ್ರಿಕೆಟ್‌ ನಡುವೆಯೂ ಧೀರಜ್‌ ಉತ್ತಮ ಓದಿನಲ್ಲೂ ಉತ್ತಮ ಸಾಧನೆ ಮಾಡಿದ್ದಾನೆ. ಎಸ್‌ಎಸ್‌ಎಲ್‌ಸಿಯಲ್ಲಿ 97% ಅಂಕ ಗಳಿಸಿರುತ್ತಾನೆ. ಮ್ಯಾಕ್ಸ್‌ಮುಲ್ಲರ್‌ ಶಾಲೆಯ ಪ್ರಾಂಶುಪಾಲರಾದ ಸುರೇಶ್‌ ಅವರು ಕ್ರಿಕೆಟ್‌ಗೆ ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡಿರುತ್ತಾರೆ,” ಎಂದು ಜಗದೀಶ್‌ ಹೇಳಿದರು.

Related Articles