Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಶಿಖರದಿಂದ ಸಾಗರಕ್ಕೆ ಕನ್ನಡತಿಯರ ಸಾಧನೆ

 

ಸೋಮಶೇಖರ್‌ ಪಡುಕರೆ, Sportsmail

ಜಮ್ಮುವಿನ ಪೆಲ್ಗಾಂವ್‌ನಲ್ಲಿರುವ 5425 ಮೀಟರ್‌ ಎತ್ತರದ ಕೊಲಾಯ್‌ ಪರ್ವತಾರೋಹಣ, ನಂತರ ಕಾರ್ದುಂಗ್ಲಾ ಪಾಸ್‌ನಿಂದ ಕಾರವಾರದವರೆಗೆ ಸುಮಾರು 3350ಕಿಮೀ ಸೈಕ್ಲಿಂಗ್‌, ನಂತರ ಕಾರವಾರದಿಂದ ಸಮುದ್ರ ಮಾರ್ಗವಾಗಿ ಮಂಗಳೂರಿನ ಉಳ್ಳಾಲದವರೆಗೆ ಕಯಾಕಿಂಗ್‌ ಈ ಅಪೂರ್ವ ಸಾಧನೆ ಮಾಡಿದವರು ಬೇರೆ ಯಾರೂ ಅಲ್ಲ, ಕನ್ನಡ ನಾಡಿನ ಹೆಮ್ಮೆಯ ಕುವರಿಯರು.

ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವದ ಶುಭ ಅವಸರದಲ್ಲಿ ಇಂಡಿಯನ್‌ ಮೌಂಟನೇರಿಂಗ್‌ ಫೌಂಡೇಶನ್‌ ದಕ್ಷಿಣ ವಲಯ ಮತ್ತು ಜನರಲ್‌ ತಿಮ್ಮಯ್ಯ ಸಾಹಸ ಅಕಾಡೆಮಿ ಮತ್ತು ಕರ್ನಾಟಕ ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ನೆರವಿನಿಂದ ಕರ್ನಾಟಕದ ಐವರು ಯುವ ಸಾಧಕಿಯರು ಈ ಸಾಹಕ ಕಾರ್ಯಕ್ಕೆ ಮುಂದಾಗಿದ್ದು ಈಗ ಪರ್ವತಾರೋಹಣ ಹಾಗೂ ಸೈಕ್ಲಿಂಗ್‌ ಸಾಹಸವನ್ನು ಮುಗಿಸಿ ಕಯಾಕ್‌ ನಲ್ಲಿ ಸಮುದ್ರ ಮಾರ್ಗವಾಗಿ ಮುರುಡೇಶ್ವರ ತಲುಪಿದ್ದಾರೆ.

ಆಗಸ್ಟ್‌ 16ರಂದು ಬೆಂಗಳೂರಿನ ವಿಧಾನ ಸೌಧದಿಂದ ಚಾಲನೆ ಕಂಡ ಈ ಸಾಹಸ ಯಾತ್ರೆಗೆ ರಾಜ್ಯ ಕ್ರೀಡಾ ಸಚಿವ ಡಾ, ನಾರಾಯಣ ಗೌಡ ಅವರು ಹಸಿರು ನಿಶಾನೆ ತೋರಿದ್ದರು. ಮೈಸೂರಿನ ಬಿಂದು, ಶಿವಮೊಗ್ಗದ ಐಶ್ವರ್ಯ, ಮಡಿಕೇರಿಯ ಪುಷ್ಪ, ಬೆಂಗಳೂರಿನ ಆಶಾ ಮತ್ತು ಶಿವಮೊಗ್ಗದ ಧನಲಕ್ಷ್ಮೀ ಈ ಸಾಹಸ ತಂಡದಲ್ಲಿದ್ದಾರೆ. ಮುರುಡೇಶ್ವರದ ರವಿ ಹರಿಕಾಂತ್‌ ಮತ್ತು ಕಯಾಕ್‌ ತಜ್ಞ ಶಬ್ಬೀರ್‌ ಈಗ ತಂಡಕ್ಕೆ ನೆರವು ನೀಡುತ್ತಿದ್ದು, ಒಂದು ಯಾಂತ್ರಿಕ ಬೋಟ್‌ ತಂಡವನ್ನು ಹಿಂಬಾಲಿಸುತ್ತಿದೆ.

“ಸಮುದ್ರದಲ್ಲಿ ಮೊದಲ ದಿನ ವಿರುದ್ಧ ದಿಕ್ಕಿನಲ್ಲಿ ಗಾಳಿ ಬೀಸುತ್ತಿದ್ದ ಕಾರಣ ಕಯಾಕಿಂಗ್‌ಗೆ ಸ್ವಲ್ಪ ಅಡ್ಡಿಯಾಗಿತ್ತು ಆದರೆ ನಂತರದ ದಿನಗಳಲ್ಲಿ ಯಾವುದೇ ತೊಂದರೆಯಾಗಿಲ್ಲ,” ಎಂದು ಸಮುದ್ರದಲ್ಲಿ ತಂಡದ ಬೆಂಬಲವಾಗಿ ನಿಂತ ಕಯಾಕ್‌ ತಜ್ಞ ಶಬ್ಬೀರ್ ಸ್ಪೋರ್ಟ್ಸ್‌ ಮೇಲ್‌ಗೆ ತಿಳಿಸಿದ್ದಾರೆ.

ಸಚಿವೆ ನಿರ್ಮಲಾ ಸೀತಾರಾಮನ್‌ ಮೆಚ್ಚುಗೆ:

ಕರ್ನಾಟಕದ ಈ ಐವರು ಯುವತಿಯರ ಸಾಧನೆಯನ್ನು ಮೆಚ್ಚಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಈ ಸಾಧಕಿಯರನ್ನು ತಮ್ಮ ಕಚೇರಿಗೆ ಕರೆಸಿಕೊಂಡು ಸುಮಾರು ಅರ್ಧ ಗಂಟೆ ಕಾಲ ಅವರೊಂದಿಗೆ ಮಾತುಕತೆ ನಡೆಸಿದರಲ್ಲದೆ, ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಲು ಭಾರತ ಸೇನಾಪಡೆಯ ಪ್ರಮುಖ

ಅಧಿಕಾರಿಗಳೊಂದಿಗೆ ಮಾತುಕತೆಗೆ ಅವಕಾಶ ಮಾಡಿಕೊಟ್ಟರು. ಅಲ್ಲದೆ ಈ ಸಾಹಸಯಾತ್ರೆ ಮುಗಿದ ನಂತರ ದೇಶದ ಪ್ರಮುಖ ನಗರಗಳಿಗೆ ಈ ಸಾಧಕಿಯರನ್ನು ಕರೆದೊಯ್ದು ಇತರರಲ್ಲೂ ಸ್ಫೂರ್ತಿ ತುಂಬುವ ಕೆಲಸ ಮಾಡಲಾಗುವುದು, ಅದರ ವೆಚ್ಚವನ್ನು ಸರಕಾರವೇ ವಹಿಸಲಿದೆ ಎಂದು ಹೇಳಿರುವುದಾಗಿ ಈ

ಸಾಹಸಯಾತ್ರೆಯನ್ನು ಆಯೋಜಿಸುವಲ್ಲಿ ಪ್ರಮುಖ ಪಾತ್ರವಹಿಸಿರುವ IFSC Asia, ಉಪಾಧ್ಯಕ್ಷ, NSCC ಉಪಾಧ್ಯಕ್ಷ ಮತ್ತು GETHNAA ಸಲಹೆಗಾರ ಕೀರ್ತಿ ಪಾಯಸ್‌ ತಿಳಿಸಿದ್ದಾರೆ.

ನವೆಂಬರ್‌ ೧ ಕರ್ನಾಟಕ ರಾಜ್ಯೋತ್ಸವ ದಿನದಂದು ಮಂಗಳೂರಿನ ಉಳ್ಳಾಲದಲ್ಲಿ ಈ ಸಾಹಸ ಅಭಿಯಾನ ಕೊನೆಗೊಳ್ಳಲಿದೆ.


ಸೋಮಶೇಖರ್‌ ಪಡುಕರೆ, ಕರ್ನಾಟಕದ ಹಿರಿಯ ಕ್ರೀಡಾ ಪತ್ರಕರ್ತರು, ಕಳೆದ 32 ವರ್ಷಗಳಿಂದ ಕ್ರೀಡಾಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಸಾಧನೆಯನ್ನು ಕರ್ನಾಟಕದ ಓದುಗರಿಗೆ ಪರಿಚಯಿಸಿದ್ದಾರೆ. ಹಲವಾರು ದಿವ್ಯಾಂಗ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸರಕಾರದ ನೆರವು ಸಿಗುವಂತೆ ಮಾಡಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾ ಸಾಧಕರಿಗೆ ನಗದು ಬಹುಮಾನ ಸಿಗುವಲ್ಲಿ ಇವರು ಬರೆದ ಲೇಖನಗಳು ಪ್ರಮುಖ ಪಾತ್ರವಹಿಸಿವೆ.