Saturday, October 12, 2024

ವಿಶ್ವದ ಅತಿದೊಡ್ಡ ಕ್ರಿಕೆಟ್ ಅಕಾಡೆಮಿ ಕೆಐಒಸಿಗೆ ಬೆಳ್ಳಿ ಹಬ್ಬದ ಸಂಭ್ರಮ

ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್

1996ರಲ್ಲಿ ಬೆಂಗಳೂರಿನ ಸ್ವಸ್ತಿಕ್ ಯೂನಿಯನ್ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡ ಕಾರಣ ಬೆಂಗಳೂರಿನಲ್ಲಿ ವಿಶ್ವದಲ್ಲಿಯೇ ಅತ್ಯಂತ ದೊಡ್ಡದೆನಬಹುದಾದ ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಕ್ರಿಕೆಟ್ (ಕೆಐಒಸಿ) ಹುಟ್ಟಿಕೊಳ್ಳಲು ಕಾರಣವಾಯಿತು.

ಸ್ವಸ್ತಿಕ್ ಯೂನಿಯನ್ ತಂಡದಲ್ಲಿದ್ದ ಇರ್ಫಾನ್ ಸೇಠ್ ಆಸ್ಟ್ರೇಲಿಯಾದಲ್ಲಿರುವ ಉತ್ತಮ ಗುಣಮಟ್ಟದ ಅಕಾಡೆಮಿಗಳನ್ನು ನೋಡಿ ಭಾರತದಲ್ಲಿಯೂ ಇಂಥ ಅಕಾಡೆಮಿಗಳನ್ನು ಸ್ಥಾಪಿಸಿದರೆ ಯುವ ಕ್ರಿಕೆಟಿಗರಿಗೆ ನೆರವಾಗಬಹುದು ಎಂದು ಯೋಚಿಸಿದರು. ಅದೇ ರೀತಿ 1996 ಏಪ್ರಿಲ್ 19ರಂದು ಬೆಂಗಳೂರಿನ ಶಿವಾಜಿ ನಗರದಲ್ಲಿ ಅಕಾಡೆಮಿಯೊಂದನ್ನು ಸ್ಥಾಪಿಸಿದರು. ಈಗ ಬೆಳ್ಳಿ ಹಬ್ಬವನ್ನು ಆಚರಿಸುತ್ತಿರುವ ಕೆಐಒಸಿಯಲ್ಲಿ 150 ಹೆಚ್ಚು ಕ್ರಿಕೆಟಿಕಗರು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ಇಲ್ಲಿ ವರ್ಷದ 365 ದಿನಗಳ ಕಾಲ ಬೆಳಿಗ್ಗೆ 6 ರಿಂದ ರಾತ್ರಿ 10 ಗಂಟೆಯ ವರೆಗೆ ತರಬೇತಿ ನೀಡಲಾಗುತ್ತದೆ.

ಬೆಂಗಳೂರಿನ ಶಿವಾಜಿ ನಗರದಲ್ಲಿ 34 ಪಿಚ್ ಗಳ ಬೃಹತ್ ಅಕಾಡೆಮಿ, ಪ್ರಧಾನ ಕಚೇರಿ ಹೊಂದಿದ್ದು, ಚಿಕ್ಕ ಬೇಗೂರು ಮತ್ತು ಎಲೆಕ್ಟ್ರಾನಿಕ್ ಸಿಟಿಯ ಚಂದಾಪುರದಲ್ಲೂ ಅಕಾಡೆಮಿಯ ಶಾಖೆಗಳಿವೆ. ಮೈಸೂರಿನಲ್ಲಿ ಈಗಾಗಲೇ ಒಂದು ಅಕಾಡೆಮಿ ಇದ್ದು, ರೈಲ್ವೆ ನಿಲ್ದಾಣದ ಹತ್ತಿರ ಇನ್ನೊಂದು ಶಾಖೆ ಸದ್ಯದಲ್ಲಿಯೇ ಆರಂಭಗೊಳ್ಳಲಿದೆ ಎಂದು ಕೆಐಒಸಿಯ ನಿರ್ದೇಶಕ ಹಾಗೂ ಪ್ರಧಾನ ಕೋಚ್ ಇರ್ಫಾನ್ ಶೇಠ್ ಅವರು ಸ್ಪೋರ್ಟ್ಸ್ ಮೇಲ್ ಗೆ ತಿಳಿಸಿದ್ದಾರೆ.

ಭಾರತ ಕ್ರಿಕೆಟ್ ತಂಡದ ಆಟಗಾರ ಮನೀಶ್ ಪಾಂಡೆ ಕೆಐಒಸಿಗೆ ಸೇರಿದಾಗ 7 ವರ್ಷದ ಬಾಲಕ. ಇಲ್ಲಿಯೇ ಕ್ರಿಕೆಟ್ ನಲ್ಲಿ ಪಳಗಿ ಕರ್ನಾಟಕ ರಣಜಿ ತಂಡದ ಭಾಗವಾಗಿ ನಂತರ ಭಾರತ ತಂಡವನ್ನು ಪ್ರತಿನಿಧಿಸಿದರು. ಅದೇ ರೀತಿ ರಾಬಿನ್ ಉತ್ತಪ್ಪ. ಶ್ರೇಯಶ್ ಗೋಪಾಲ್, ಸ್ಟುವರ್ಟ್ ಬಿನ್ನಿ, ಕೆ. ಗೌತಮ್, ಆರ್, ಸಮರ್ಥ್ ಮತ್ತು ದೇವದತ್ತ ಪಡಿಕ್ಕಲ್ ಸೇರಿದಂತೆ ಅನೇಕ ಯುವ ಆಟಗಾರರು ಕೆಐಒಸಿಯಲ್ಲಿ ಪಳಗಿದವರು. ಆರು ಆಟಗಾರ್ತಿಯರು ಇಲ್ಲಿ ತರಬೇತಿ ಪಡೆದು ಭಾರತ ತಂಡದಲ್ಲಿ ಮಿಂಚಿದ್ದಾರೆ. ಜರ್ಮನಿ ಕ್ರಿಕೆಟ್ ತಂಡದ ನಾಯಕಿ ಅನುರಾಧ ದೊಡ್ಡಬಳ್ಳಾಪುರ ಮತ್ತು ಶರಣ್ಯ ಕೂಡ ಕೆಐಒಸಿಯಲ್ಲಿ ಪಳಗಿದ ಆಟಗಾರ್ತಿ. ಅಮೆರಿಕಾ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಸಿಂಧೂ ಶ್ರೀಹರ್ಷ, ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಸೋನಿಯಾ ಒಡೆದ್ರಾ ಕೂಡ ಕೆಐಒಸಿಯಲ್ಲಿ ತರಬೇತಿ ಪಡೆದಿದ್ದಾರೆ ಎಂದು ಹೇಳಲು ಹೆಮ್ಮೆ.

70 ತರಬೇತುದಾರರು!!!

ಕೆಐಒಸಿಯಲ್ಲಿ ವಿವಿಧ ವಿಭಾಗಗಳಲ್ಲಿ ಸದ್ಯ 70 ತರಬೇತುದಾರರು ಶಬಿರಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ. ಇಲ್ಲಿ ತರಬೇತಿ ಪಡೆದ ಯುವ ಆಟಗಾರರು ಪ್ರತಿಯೊಂದು ಹಂತದಲ್ಲೂ ಮಿಂಚುತ್ತಿರುವುದು ಗಮನಾರ್ಹ ಸಂಗತಿ. ಭವಿಷ್ಯದ ಭರವಸೆಯ ತಾರೆಗಳಾದ ಶಿವಂ ಎಂಬಿ, ಡೇನಿಯಲ್ ಸೆಬಾಸ್ಟಿಯನ್,  ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಈ ಅಕಾಡೆಮಿಗೆ ಭೇಟಿ ನೀಡಿ ಇಲ್ಲಿಯ ಸೌಲಭ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸದ್ಯ ಬಿಸಿಸಿಐನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗಿಂತಲೂ ಮಿಗಿಲಾದ ಸೌಲಭ್ಯಗಳು ಇಲ್ಲಿ ಸಿಗುತ್ತಿರುವುದು ವಿಶೇಷ, ಹೊನಲು ಬೆಳಕಿನಲ್ಲಿ ತರಬೇತಿ ಆರಂಭಿಸಿದ ಜಗತ್ತಿನ ಏಕೈಕ ಕ್ರಿಕೆಟ್ ಅಕಾಡೆಮಿ ಎಂಬ ಹೆಗ್ಗಳಿಕೆಗೆ ಕೆಐಒಸಿ ಪಾತ್ರವಾಗಿದೆ.

ಏಪ್ರಿಲ್ 5ರಿಂದ ಬೆಳ್ಳಿ ಹಬ್ಬದ ವಾರ್ಷಿಕ ಶಿಬಿರ

ಬೆಳ್ಳಿ ಹಬ್ಬವನ್ನು ಆಚರಿಸುತ್ತಿರುವ ಕೆಐಒಸಿ ಈ ಬಾರಿ ಏಪ್ರಿಲ್ 5 ರಿಂದ ವಾರ್ಷಿಕ ಶಿಬಿರವನ್ನು ಆಯೋಜಿಸಿದೆ. 5 ವರ್ಷದಿಂದ ಮೇಲ್ಪಟ್ಟವರಿಗೆ ಇಲ್ಲಿ ತರಬೇತಿ ನೀಡಲಾಗುವುದು. 34 ಸುರಕ್ಷಿತ ನೆಟ್ ಗಳಲ್ಲಿ ತರಬೇತಿ ನೀಡಲಾಗುತ್ತದೆ, 70 ತರಬೇತುದಾರರು ತರಬೇತಿ ನೀಡಲಿದ್ದಾರೆ. ಬಿಳಿ ಹಾಗೂ ಪಿಂಕ್ ಬಾಲ್ ಮತ್ತು ಹೊನಲು ಬೆಳಕಿನಲ್ಲಿ ತರಬೇತಿ ನೀಡಲಾಗುವುದು. ಟರ್ಫ್, ಮ್ಯಾಟ್, ಸಿಂಥಟಿಕ್, ಹುಲ್ಲುಹಾಸು ಜತೆಯಲ್ಲಿ ಧೂಳು ರಹಿತ ಔಟ್ ಫೀಲ್ಡ್ ನಲ್ಲಿ ತರಬೇತಿ ನಡೆಯಲಿದೆ. ಒಳಾಂಗಣ ನೆಟ್ ಸೌಲಭ್ಯ, 5 ಬೌಲಿಂಗ್ ಮೆಷಿನ್, ಅಂತಾರಾಷ್ಟ್ರೀಯ ಗುಣಮಟ್ಟದ ಜಿಮ್ ಸೌಲಭ್ಯ ಇರುತ್ತದೆ. ವೃತ್ತಿಪರ ಫಿಟ್ನೆಸ್ ಟ್ರೈನರ್, ಕ್ರೀಡಾ ಮನಃಶಾಸ್ತ್ರಜ್ಞರು, ನ್ಯೂಟ್ರೀಷನಿಸ್ಟ್ ಮತ್ತು ಫಿಸಿಯೋಥೆರಪಿಸ್ಟ್ ತರಬೇತಿಯ ಭಾಗವಾಗಿರುತ್ತಾರೆ. ಶಿಬಿರಾರ್ಥಿಗಳ ಆರೋಗ್ಯ ಮತ್ತು ಸುರಕ್ಷತೆಯ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸುವುದು ನಮ್ಮ ಮೊದಲ ಆಧ್ಯತೆ ಎಂದು ನಿರ್ದೇಶಕ ಮತ್ತು ಪ್ರಧಾನ ಕೋಚ್ ಇರ್ಫಾನ್ ಶೇಠ್ ಹೇಳಿದ್ದಾರೆ.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:

9035022875, 9008675618, 9448194109, 9620946834.

 ವಿಳಾಸ: No.32, RBANMS Main Ground, Near Ulsoor lake, Gangadhar Chetty Road, Shivajinagar, Bangalore-560042.

Related Articles