Thursday, September 12, 2024

ಕಾಮನ್ವೆಲ್ತ್‌ ಪ್ಯಾರಾ ಫೆನ್ಸಿಂಗ್‌ನಲ್ಲಿ ಇತಿಹಾಸ ಬರೆದ ಕನ್ನಡಿಗ ರಾಘವೇಂದ್ರ

ಸೋಮಶೇಖರ್‌ ಪಡುಕರೆ, ಬೆಂಗಳೂರು

ಆ ಬಾಲಕನಿಗೆ ವಿಪರೀತ ಜ್ವರ, ವೈದ್ಯರು ಯೋಚನೆ ಮಾಡದೇ ಹೈ ಡೋಸ್‌ ಪೆನ್ಸಲಿನ್‌ ಇಂಜೆಕ್ಷನ್‌ ಕೊಟ್ಟರು. ಬಾಲಕನ ಇಡೀ ದೇಹ ನಿಯಂತ್ರಣ ಕಳೆದುಕೊಂಡಿತು. ಬೆಳೆದು ದೊಡ್ಡವನಾದರೂ ಬದುಕು ವೀಲ್‌ಚೇರ್‌ಗೆ ಅಂಟಿಕೊಂಡಿತು. ಆದರೆ ಆತನಲ್ಲಿರುವ ಕ್ರೀಡಾ ಹುಮ್ಮಸ್ಸಿನ ಮೇಲೆ ಪೆನ್ಸಿಲಿನ್‌ ಇಂಜೆಕ್ಷನ್‌ನಿಂದ ಏನೂ ಮಾಡಲಾಗಲಿಲ್ಲ. ಕಳೆದ ವಾರ ಲಂಡನ್‌ನಲ್ಲಿ ನಡೆದ ಕಾಮನ್‌ವೆಲ್ತ್‌ ಪ್ಯಾರಾ ಫೆನ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಆ ಯುವಕ ಎರಡು ಬೆಳ್ಳಿ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದ. ಕಾಮನ್‌ವೆಲ್ತ್‌ ಚಾಂಪಿಯನ್‌ಷಿಪ್‌ ಫೆನ್ಸಿಂಗ್‌ನಲ್ಲಿ ಬೆಳ್ಳಿ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರನಾದ. ಆತ ಬೇರೆ ಯಾರೂ ಅಲ್ಲ, ಕ್ರೀಡಾ ಸಾಧನೆಗಾಗಿ ತನ್ನ ಬದುಕನ್ನೇ ಸವೆಸುತ್ತಿರುವ ಕರ್ನಾಟಕದ ಅಂತಾರಾಷ್ಟ್ರೀಯ ದಿವ್ಯಾಂಗ ಕ್ರೀಡಾಪಟು ರಾಘವೇಂದ್ರ.

ವೈಯಕ್ತಿಕ ಮತ್ತು ಟೀಮ್‌ ವಿಭಾಗದಲ್ಲಿ ರಾಘವೇಂದ್ರ ಚಿನ್ನದ ಸಾಧನೆ ಮಾಡಿದ್ದಾರೆ. ವೈಯಕ್ತಿಕ ಇಪೀ ವಿಭಾಗದಲ್ಲಿ ಸ್ಪರ್ಧಿಸಿದ್ದ ರಾಘವೇಂದ್ರ ದ್ವಿತೀಯ ಸ್ಥಾನ ಪಡೆಯುವ ಮೂಲಕ ಐತಿಹಾಸಿಕ ಸಾಧನೆ ಮಾಡಿದರು. ಭಾರತದ ಇನ್ನೋರ್ವ ಸ್ಪರ್ಧಿ ದೇವೇಂದ್ರ ಕಂಚಿನ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತಂದರು. ರಾಘವೇಂದ್ರ ಅವರ ಸಾಧನೆಗೆ ಭಾರತೀಯ ಪ್ಯಾರಾಲಿಂಪಿಕ್‌ ಸಮಿತಿ ಮತ್ತು  ಕರ್ನಾಟಕ ಔಷಧ ನಿಯಂತ್ರಣ ಇಲಾಖೆ ಅಭಿನಂದನೆ ಸಲ್ಲಿಸಿದೆ.

ಅಥ್ಲೆಟಿಕ್ಸ್‌ನಿಂದ ಫೆನ್ಸಿಂಗ್‌ಗೆ: ಕರ್ನಾಟಕ ಔಷಧ ನಿಯಂತ್ರಣ ಇಲಾಖೆಯಲ್ಲಿ ಉದ್ಯೋಗಿಯಾಗಿರುವ ರಾಘವೇಂದ್ರ ಹಲವು ವರ್ಷಗಳಿಂದ ಅಥ್ಲೆಟಿಕ್ಸ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಗೆದ್ದಿದ್ದರು. ಆದರೆ ಕೊರೋನ ನಂತರ ಅವರು ಫೆನ್ಸಿಂಗ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಪ್ಯಾರಾ ಅಥ್ಲೀಟ್‌ಗಳಿಗೆ ಅಭ್ಯಾಸ ಮಾಡಲು ಸೂಕ್ತ ಸ್ಥಳವಿಲ್ಲ.  ಅಲ್ಲದೆ ಕ್ಲಾಸಿಫಿಕೇಷನ್‌ನಲ್ಲಿ ಮೂರು ಮೂರು ಕ್ಯಾಟಗರಿಯನ್ನು ಮಿಶ್ರಣ ಮಾಡುತ್ತಿದ್ದರು. ಇದರಿಂದ ಪದಕ ಗಳಿಕೆಗೆ ಅವಕಾಶ ಕಡಿಮೆ ಇರುತ್ತಿತ್ತು.  ದೇಶವನ್ನು ಕೊರೋನಾ ಕಾಡಿದ ನಂತರ ರಾಘವೇಂದ್ರ ಫೆನ್ಸಿಂಗ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಪ್ಯಾರಾಲಿಂಪಿಕ್‌ ಕೋಚ್‌ ಸತ್ಯನಾರಾಯಣ ಅವರು ಉತ್ತಮ ಪ್ರೋತ್ಸಾಹ ನೀಡಿದರು. ಇತ್ತೀಚಿಗೆ ಬೆಂಗಳೂರಿನಲ್ಲಿ ಐವಾಸ್‌ ಫೆನ್ಸಿಂಗ್‌ ವತಿಯಿಂದ ಉತ್ತಮ ರೀತಿಯಲ್ಲಿ ತರಬೇತಿ ಸಿಕ್ಕಿತು. ಪರಿಣಾಮ ಐತಿಹಾಸಿಕ ಸಾಧನೆ ಮಾಡಲು ಸಾಧ್ಯವಾಯಿತು.

ಸಾಲ ಮಾಡಿ ಲಂಡನ್‌ಗೆ: ಪ್ಯಾರಾ ಕ್ರೀಡಾಪಟುಗಳ ಸಮಸ್ಯೆಗಳಿಗೆ ಮೊದಲಿನಿಂದಲೂ ಸ್ಪಂದಿಸುವವರ ಸಂಖ್ಯೆ ವಿರಳ. ರಾಘವೇಂದ್ರ ಈ ವರ್ಷ ಮೂರು ಅಂತಾರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ಪಾಲ್ಗೊಂಡಿದ್ದಾರೆ. ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡು ಹಿಂದಿರುಗಿದ ಬಳಿಕ ವಿಮಾನದ ವೆಚ್ಚವನ್ನು ಸರಕಾರ ಭರಿಸುತ್ತದೆ. ಅದಕ್ಕೆ ತಿಂಗಳುಗಳೇ ತಗಲುತ್ತದೆ. ಅಲ್ಲಿಯವರೆಗೂ ಸಾಲದ ಬದುಕು ಎನ್ನುತ್ತಾರೆ ರಾಘವೇಂದ್ರ. “ಸಾಮಾನ್ಯರ ಕ್ರೀಡೆಯಂತೆ ಪ್ಯಾರಾಲಿಂಪಿಕ್‌ ಕ್ರೀಡೆಗಳಿಗೆ ಪ್ರೋತ್ಸಾಹ ಕಡಿಮೆ. ಪ್ರತಿಯೊಂದನ್ನೂ ಹೋರಾಟ ಮಾಡಿ ಪಡೆಯಬೇಕು. ಫೆನ್ಸಿಂಗ್‌ ಕಿಟ್‌ ಬಹಳ ದುಬಾರಿಯಾಗಿರುತ್ತದೆ. ಲಕ್ಷಾಂತರ ರೂ. ಬೆಲೆಬಾಳುವಂಥದ್ದು, ಅವುಗಳನ್ನು ನಾವು ನಮ್ಮ ಸ್ವಂತ ಹಣದಿಂದ ಖರೀದಿಸಬೇಕು. ಈ ವರ್ಷ 6-7 ಲಕ್ಷ ರೂ. ವೆಚ್ಚವಾಯಿತು. ಹೆಂಡತಿಯ ಚಿನ್ನ ಅಡವಿಟ್ಟು ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುತ್ತಿದ್ದೆ.

ವೈಯಕ್ತಿಕ ಹಾಗೂ ಟೀಮ್‌ ವಿಭಾಗ ಎರಡರಲ್ಲೂ ಬೆಳ್ಳಿ ಪದಕ ಗೆದ್ದಿರುವ ರಾಘವೇಂದ್ರ ಮುಂದಿನ ಗುರಿ ಏಷ್ಯನ್‌ ಪ್ಯಾರಾಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳವುದು, ಅದಕ್ಕಾಗಿ ಎಲ್ಲ ರೀತಿಯ ತಯಾರಿ ಮಾಡುವುದಾಗಿ ಹೇಳಿದ್ದಾರೆ. ಕಾಮನ್‌ವೆಲ್ತ್‌ ಪ್ಯಾರಾಲಿಂಪಿಕ್ಸ್‌ನಲ್ಲಿ ಫೆನ್ಸಿಂಗ್‌ ಇರಲಿಲ್ಲ, ಇದ್ದಿರುತ್ತಿದ್ದರೆ ಭಾರತಕ್ಕೆ ಪದಕ ಖಚಿತವಾಗಿರುತ್ತಿತ್ತು.

ತರಬೇತುದಾರರೇ ಇಲ್ಲ!:

“ಒಂದು ವೀಲ್‌ಚೇರ್‌ ಫೆನ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಬೇಕಾದರೆ ವೀಲ್‌ ಚೇರ್‌ ಹಾಗೂ ಫೆನ್ಸಿಂಗ್‌ ಕಿಟ್‌ ಸೇರಿ 5 ಲಕ್ಷ ರೂ. ಅಗತ್ಯವಿದೆ. ಇದಕ್ಕೆಲ್ಲ ಒಣ ಒಗ್ಗೂಡಿಸುವುದು ಕಷ್ಟವಾಗುತ್ತದೆ. ಈ ಬಾರಿಯ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲು ಕ್ರೀಡಾ ಇಲಾಖೆ ನೀಡಿದ ವೀಲ್‌ ಚೇರ್‌ ಬಳಸಿದೆ. ನಮಗೆ ಸೂಕ್ತವಾದ ತರಬೇತುದಾರರೇ ಇಲ್ಲ. ಯೂಟ್ಯೂಬ್‌ನಲ್ಲಿ ಬೇರೆಯವರೆಲ್ಲ ಆಡುವುದನ್ನು ಕಲಿತು ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ದೇವೆ, ಲಂಡನ್‌ನಲ್ಲೂ ನಮಗೆ ಕೋಚ್‌ ಅಂತ ಯಾರೂ ಇರಲಿಲ್ಲ. ನಮ್ಮೆಲ್ಲ ಕುಂದುಕೊರತೆಗಳಿಗೆ ಪ್ಯಾರಾಲಿಂಪಿಕ್‌ ಕೋಚ್‌ ಸತ್ಯನಾರಾಯಣ ಅವರೇ ಸ್ಪಂದಿಸಿದರು. ಬೆಂಗಳೂರಿನಲ್ಲಿ ಪ್ಯಾರಾಲಿಂಪಿಕ್‌ ಸಮಿತಿಯು ನಡೆಸಿದ ತರಬೇತಿಯು ಲಂಡನ್‌ನಲ್ಲಿ ಬಹಳ ಪ್ರಯೋಜನವಾಯಿತು. ಸತ್ಯನಾರಾಯಣ ಸರ್‌ ನಮ್ಮ ಪಾಲಿನ ಗಾಡ್‌ಫಾದರ್‌, ” ಎಂದು ರಾಘವೇಂದ್ರ ಹೇಳಿದರು.

ಪತ್ನಿಯ ಬೆಂಬಲ: ರಾಘವೇಂದ್ರ ಅವರ ಕ್ರೀಡಾ ಯಶಸ್ಸಿನಲ್ಲಿ ಪತ್ನಿ ವಿದ್ಯಾಶ್ರೀ ಹಾಗೂ ಮಗಳು ಧನ್ವಿಕಾ ಅವರ ಪ್ರೋತ್ಸಾಹ ಅಪಾರವಾಗಿದೆ, “ಮೊನ್ನೆ ಬೆಂಗಳೂರಿನಲ್ಲಿ ನಡೆದ ಐವಾಸ್‌ ಸೆಮಿನಾರ್‌ನಲ್ಲಿ ಪಾಲ್ಗೊಳ್ಳಲು ಪ್ರವೇಶ ಶುಲ್ಕಕ್ಕೆ ಹಣವಿರಲಿಲ್ಲ. ಸತ್ಯನಾರಾಯಣ ಅವರು ನೆರವಾದರು. ಸಾಲದ ಬಾಧೆಯಿಂದ ಸಿಗುವ ಸಂಬಳ ಕುಟುಂಬ ನಿರ್ವಹಣೆಗೆ ಸಾಕಾಗುತ್ತಿಲ್ಲ. ಪ್ರತಿಬಾರಿಯೂ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬೇಕೆಂದರೆ ಪತ್ನಿಯ ಚಿನ್ನವನ್ನು ಅಡವಿಟ್ಟು ಹೋಗುವುದು. ಮುಂದೆ ಪ್ಯಾರಾಲಿಂಪಿಕ್‌ ಕ್ರೀಡೆಗಳಿಗೆ ಸರಕಾರ ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡುತ್ತದೆ ಎಂಬ ನಂಬಿಕೆ ಇದೆ,” ಎಂದು ರಾಘವೇಂದ್ರ ಹೇಳಿದರು.

ಔಷಧ ನಿಯಂತ್ರಣ ಇಲಾಖೆಯ ಅಭಿನಂದನೆ:

ಕಾಮನ್‌ವೆಲ್ತ್‌ ಪ್ಯಾರಾ ಫೆನ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದಿರುವ ರಾಘವೇಂದ್ರ ಅವರಿಗೆ ಔಷಧ ನಿಯಂತ್ರ ಇಲಾಖೆಯ ಡ್ರಗ್ಸ್‌ ಕಂಟ್ರೋಲರ್‌ ಬಾಗೋಜಿ ಟಿ. ಖಾನಾಪುರೆ ಅವರು ತಮ್ಮ ಇಲಾಖೆ ಮತ್ತು ಸರಕಾರದ ವತಿಯಿಂದ ಅಭಿನಂದನೆ ಸಲ್ಲಿಸಿದ್ದಾರೆ, “ರಾಘವೇಂದ್ರ ಅವರ ಈ ಸಾಧನೆ ಇಡೀ ದೇಶ, ರಾಜ್ಯ ಮತ್ತು ನಮ್ಮ ಇಲಾಖೆ ಹೆಮ್ಮೆ ಪಡುವಂಥದ್ದು. ಅವರಿಗೆ ಈ ಹಿಂದೆಯೂ ಇಲಾಖೆ ಅವರಿಗೆ ಎಲ್ಲ ರೀತಿಯ ನೆರವನ್ನು ನೀಡಿದೆ. ಮುಂದೆಯೂ ನೀಡಲಿದೆ. ಬಹಳ ಕಷ್ಟಪಟ್ಟು ಅಭ್ಯಾಸ ನಡೆಸಿ ಬೆಳ್ಳಿ ಪದಕ ಗೆದ್ದಿರುವ ಅವರ ಸಾಧನೆಗೆ ನಾವೆಲ್ಲರೂ ಹೆಮ್ಮೆ ಪಡುವಂಥದ್ದು. ನಮ್ಮ ಸಿಬ್ಬಂದಿ ವರ್ಗದವರು ಎಲ್ಲ ರೀತಿಯಿಂದ ನೆರವು ನೀಡಿದ್ದೇವೆ, ಇಂಗ್ಲೆಂಡಿಗೆ ಹೋಗುವಾಗಲೂ ನಾವು ಸಹಾಯ ನೀಡಿದ್ದೇವೆ. ನಮ್ಮ ಇಲಾಖೆಯಲ್ಲಿ ಇಂಥ ಸಾಧಕರೊಬ್ಬರು ಇರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ. ತರಬೇತಿ ಮುಗಿಸಿ ಇಂಗ್ಲೆಂಡಿಗೆ ಹೋದ ನಂತರವೂ ಅವರಿಗೆ ಅಗತ್ಯವಿರುವ ರಜೆಯನ್ನು ನೀಡಲು ಸರಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಇದೊಂದು ಅಸಮಾನ್ಯ ಸಾಧನೆ. ರಾಘವೇಂದ್ರ ಅವರಿಗೆ ಮುಂದೆ ಯಾವ ನೆರವು ಬೇಕೋ ಅವೆಲ್ಲವನ್ನೂ ಒದಗಿಸುವಲ್ಲಿ ಮುತುವರ್ಜಿ ವಹಿಸುವೆವು.” ಎಂದು ಬಾಲಾಜಿ ಟಿ. ಖಾನಾಪುರೆ ಅವರು ತಿಳಿಸಿದ್ದಾರೆ.

ಇಲಾಖೆಯ ಡೆಪ್ಯುಟಿ ಡ್ರಗ್ಸ್‌ ಕಂಟ್ರೋಲರ್‌ ದೀಪಕ್‌ ಗಾಯಕ್ವಾಡ್‌ ಅವರು ಕೂಡ ರಾಘವೇಂದ್ರ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಈ ಬಾರಿ ಕಾಮನ್‌ವೆಲ್ತ್‌ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲು ಔಷಧ ನಿಯಂತ್ರಣ ಇಲಾಖೆಯ ಸಿಬ್ಬಂದಿ ನೆರವು ನೀಡಿರುತ್ತಾರೆ. ಅವರೆಲ್ಲರಿಗೂ ತಾನು ಚಿರಋಣಿ ಎಂದು ರಾಘವೇಂದ್ರ ಹೇಳಿದ್ದಾರೆ.

Related Articles