Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ದಿಲ್ಲಿಯಿಂದ ಬೆಂಗಳೂರಿಗೆ ಹಾರಿ ಬಂದ ʼರೆಡ್‌ ರಾಕೆಟ್‌ʼ ಪಾರಿವಾಳದ ಸಾಹಸ

ಸೋಮಶೇಖರ್‌ ಪಡುಕರೆ, ಬೆಂಗಳೂರು

ಶತಮಾನಗಳ ಹಿಂದೆ ಪಾರಿವಾಳಗಳ ಮೂಲಕ ಸಂದೇಶವನ್ನು ರವಾನಿಸುತ್ತಿದ್ದ ವಿಚಾರ ನಮಗೆಲ್ಲರಿಗೂ ತಿಳಿದಿದೆ. ಈಗ ತಂತ್ರಜ್ಞಾನ ಬೆಳೆದು ಕ್ಷಣದಲ್ಲೇ ಸಂದೇಶವನ್ನು ನಾವು ಜಗತ್ತಿನಾದ್ಯಂತ ಕಳುಹಿಸಬಹುದು. ಆದರೆ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ಶಂಕರ್‌ ವಜ್ರವೇಲು ʼಪಿಜಿನ್‌ ರೇಸ್‌ʼ (ಪಾರಿವಾಳ ರೇಸ್‌) ಮೂಲಕ ಕ್ರೀಡಾಸಕ್ತರ ಗಮನ ಸೆಳೆದಿದ್ದಾರೆ. ಅವರ ಪ್ರೀತಿಯ ಪಾರಿವಾಳ ʼರೆಡ್‌ ರಾಕೆಟ್‌ʼ ಇಲ್ಲಿಂದ ವಿಮಾನದಲ್ಲಿ ಡೆಲ್ಲಿಗೆ ಹೋಗಿ, ಡೆಲ್ಲಿಯಿಂದ ಮನೆಗೆ ಹಿಂದಿರುಗಿದ್ದು, ʼಕರ್ನಾಟಕ ಹೋಮ್‌ ಪಿಜಿನ್‌ ಫೆಡರೇಷನ್‌ʼನಲ್ಲಿ ಸಂಭ್ರಮ ಮನೆ ಮಾಡಿದೆ.

ವಾಯು ಮಾರ್ಗದಲ್ಲಿ 1740 ಕಿಮೀ. ಅಂತರವನ್ನು 9 ದಿನಗಳ ಅಂತರದಲ್ಲಿ ಕ್ರಮಿಸಿದ ರೆಡ್‌ ರಾಕೆಟ್‌  ಭಾರತದಲ್ಲಿ ನೂತನ ದಾಖಲೆ ಬರೆದಿದೆ. ಅಮೆರಿಕದಲ್ಲಿನ ಪಾರಿವಾಳ 1800 ಕಿಮೀ ನಿಂದ ಮನೆಗೆ ತಲುಪಿರುವುದು ಈವರೆಗಿನ ದಾಖಲೆಯಾಗಿದೆ.

ಅಮೆರಿಕ, ಬ್ರೆಜಿಲ್‌, ಕೆನಡ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಇಂಗ್ಲೆಂಡ್‌, ಬೆಲ್ಜಿಯಂ, ಪೊಲೆಂಡ್‌ ಹೀಗೆ ಜತ್ತಿನ ವಿವಿಧ ರಾಷ್ಟ್ರಗಳಲ್ಲಿ ಜನಪ್ರಿಯಗೊಂಡಿರುವ ಈ ಪಾರಿವಾಳ ರೇಸ್‌ ಈಗ ಕನ್ನಡ ನಾಡಿನಲ್ಲಿ ಜನಪ್ರಿಯಗೊಳ್ಳುತ್ತಿರುವುದು ಸಂತಸದ ವಿಷಯ.

ಶಂಕರ್‌ ಪಾರಿವಾಳದ ಪ್ರೀತಿ: ನಮ್ಮಲ್ಲಿ ಪಾರಿವಾಳಗಳನ್ನು ಸಾಕುವುದು ಸಾಮಾನ್ಯ. ಆದರೆ ಅದ ಬುದ್ಧಿಮತ್ತೆಯನ್ನು  ಕ್ರೀಡೆಯಾಗಿ ಪರಿವರ್ತಿಸಿರುವುದು ವಿರಳ. ಶಂಕರ್‌ ವಜ್ರವೇಲು ಚಿಕ್ಕಂದಿನಿಂದಲೂ ಪಾರಿವಾಳಗಳನ್ನು ಸಾಕಿ ಅವುಗಳಿಗೆ ತರಬೇತಿ ನೀಡುತ್ತಿದ್ದರು. ಮೊದಲು 100 ಕಿಮೀ ದೂರಕ್ಕೆ ಕೊಂಡೊಯ್ದು ಹಾರಿ ಬಿಡುತ್ತಿದ್ದರು. ಅವು ಶಂಕರ್‌ ಅವರ ಮನೆಗೆ ಹಿಂದಿರುಗುತ್ತಿದ್ದವು. ನಂತರ 500, ಬಳಿಕ 750 ಕಿಮೀ. ಹೀಗೆ ದೂರದ ಅಂತರವನ್ನು ಹೆಚ್ಚಿಸಿ ಪಿಜನ್‌ ರೇಸ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಏಪ್ರಿಲ್‌ ತಿಂಗಳಲ್ಲಿ 26 ಪಾರಿವಾಳಗಳನ್ನು ಬೆಂಗಳೂರಿನಿಂದ ವಿಮಾನದ ಮೂಲಕ ಡೆಲ್ಲಿಗೆ ಕಳುಹಿಸಲಾಯಿತು. ಯಮುನಾ ನದಿ ತೀರದಲ್ಲಿರುವ ಸಿಗ್ನೇಚರ್‌ ಸೇತುವೆಯಿಂದ 26 ಪಾರಿವಾಳಗಳನ್ನು ಹಾರಿ ಬಿಡಲಾಯಿತು. ಅವುಗಳಲ್ಲಿ ಉತ್ತಮ ರೀತಿಯಲ್ಲಿ ತರಬೇತಿ ಪಡೆದಿದ್ದ ಶಂಕರ್‌ ವಜ್ರವೇಲು ಅವರ “ರೆಡ್‌ ರಾಕೆಟ್‌” ಹೆಸರಿನ ಪಾರಿವಾಳ 9 ದಿನಗಳ ನಂತರ ನೇರವಾಗಿ ಮನೆಯ ಗೂಡು ತಲುಪಿದೆ. ಪ್ರತಿಕೂಲ ವಾತಾವರಣ, ಹದ್ದುಗಳ ದಾಳಿಯಿಂದಾಗಿ ಇತರ ಪಾರಿವಾಳಗಳು ಬೆಂಗಳೂರಿಗೆ ಹಿಂದಿರುಗಲಿಲ್ಲ. ರೆಕ್ಕೆ ಗಾಯಗೊಂಡಿದ್ದರೂ ರೆಡ್‌ ರಾಕೆಟ್‌ ಮನೆ ತಲಪುವಲ್ಲಿ ಯಶಸ್ವಿಯಾಗಿತ್ತು. ವಾಯು ಮಾರ್ಗದಲ್ಲಿ ಬೆಂಗಳೂರು ಮತ್ತು ಡೆಲ್ಲಿ ನಡುವಿನ ಅಂತರ 1740 ಕಿಮೀ, ರಸ್ತೆ ಮಾರ್ಗದಲ್ಲಿ 2155 ಕಿಮೀ.

ರೆಡ್‌ ರಾಕೆಟ್‌ ಇದಕ್ಕೂ ಮುನ್ನ 200, 300, 400, 500 ಹಾಗೂ 750 ಕಿಮೀ ದೂರ ಕ್ರಮಿಸಿ ಮನೆಗೆ ತಲುಪಿದೆ.

ಮನೆಗೇ ಯಾಕೆ ಬರುತ್ತವೆ?:  ಪಾರಿವಾಳಗಳಲ್ಲಿ ಭೂಮಿಯ ಗುರುತ್ವಾರ್ಷಣವನ್ನು ಅರಿಯುವ ಪ್ರಜ್ಞೆ ಇರುತ್ತದೆ. ಆ “ಅರ್ಥ್‌ ಮ್ಯಾಗ್ನೆಟಿಕ್‌ ಸೆನ್ಸ್‌” ಅವುಗಳಿಗೆ ತಾವು ಮೊದಲಿದ್ದ ಸ್ಥಳಕ್ಕೆ ಹಿಂದಿರುಗಲು ನೆರವಾಗುತ್ತದೆ. ಉತ್ತಮ ರೀತಿಯಲ್ಲಿ ತರಬೇತಿ ನೀಡಿದ ಪಾರಿವಾಳಗಳು ಅತಿ ಬೇಗನೇ ಮನೆ ತಲಪುತ್ತವೆ. ಭಾರತದಲ್ಲಿ ಕುದುರೆ ರೇಸ್‌ ಇದ್ದಂತೆ ಜಗತ್ತಿನಾದ್ಯಂತ ಪಿಜನ್‌ ರೇಸ್‌ ಜನಪ್ರಿಯವಾಗಿದೆ.

ನೂರಕ್ಕೂ ಹೆಚ್ಚು ಸದಸ್ಯರು: ಸಮಾನ ಮನಸ್ಕರೆಲ್ಲ ಸೇರಿಕೊಂಡು ಹುಟ್ಟುಹಾಕಿದ ಕರ್ನಾಟಕ ರಾಜ್ಯ ಹೋಮ್‌ ಪಿಜನ್‌ ಫೆಡರೇಷನ್‌ ನೂರಕ್ಕೂ ಹೆಚ್ಚು ಸದಸ್ಯರಿಂದ ಕೂಡಿದೆ. ಇವರೆಲ್ಲ ತಮ್ಮ ಮನೆಯಲ್ಲೇ ಪಾರಿವಾಳಗಳನ್ನು ಸಾಕಿ, ಅವುಗಳಿಗೆ ಉತ್ತಮ ರೀತಿಯಲ್ಲಿ ತರಬೇತಿ ನೀಡಿ ವಾರಾಂತ್ಯದಲ್ಲಿ ರೇಸ್‌ಗಳಲ್ಲಿ ಪಾಲ್ಗೊಳ್ಳುತ್ತಾರೆ.

ಕಾಲಿಗೆ ರಿಂಗ್‌: ತಮ್ಮ ಪಾರಿವಾಳಗಳನ್ನು ಪರಿಚಯಿಸುವುದಕ್ಕಾಗಿ ವಿವಿಧ ಬಣ್ಣಗಳಲ್ಲಿ ಕಾಲಿಗೆ ರಿಂಗ್‌ ಅಳವಡಿಸುತ್ತಾರೆ. ಈ ಕೆಲಸವನ್ನು ಚಿಕ್ಕ ಮರಿ ಇರುವಾಗಲೇ ಮಾಡುತ್ತಾರೆ. ಒಮ್ಮೆ ಅಳವಡಿಸಿದರೆ ಮತ್ತೆ ಅದನ್ನು ತೆಗೆಯುವುದಿಲ್ಲ. ಅಲ್ಲಿ ಸಂಸ್ಥೆಯ ಹೆಸರು ಮತ್ತು ಪಾರಿವಾಳಕ್ಕೆ ನೀಡಲಾದ ನೋಂದಾವಣೆ ಸಂಖ್ಯೆ ಇರುತ್ತದೆ. ಈ ರಿಂಗ್‌ಗಳನ್ನು ತಮಿಳುನಾಡಿನಲ್ಲಿ ತಯಾರು ಮಾಡಲಾಗುತ್ತದೆ.

3000 ವರ್ಷಗಳ ಇತಿಹಾಸ: ಈ ಪಾರಿವಾಳ ಹಕ್ಕಿಗಳ ರೇಸ್‌ ಇಂದು ನಿನ್ನೆಯದಲ್ಲ. 3000 ವರ್ಷಗಳ ಹಿಂದಿನ ಕ್ರೀಡೆ. ಪ್ರಾಚೀನ ಒಲಿಂಪಿಕ್ಸ್‌ನಲ್ಲೂ ಪಾರಿವಾಳಗಳ ರೇಸ್‌ ನಡೆಯುತ್ತಿತ್ತು. 1900ರ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಏಳು ರೀತಿಯ ಸ್ಪರ್ಧೆಗಳನ್ನು ನಡೆಸಲಾಗಿತ್ತು. ಆದರೆ ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿ ಇದನ್ನು ಅಧಿಕೃತಗೊಳಿಸಿಲ್ಲ. ಆದರೆ ಜಗತ್ತಿನಾದ್ಯಂತ ಈ ಕ್ರೀಡೆ ನಿರಂತರವಾಗಿ ನಡೆಯುತ್ತಿದೆ.

ಪಾರಂಪರಿಕ ಕ್ರೀಡೆಯಾಗಲಿ: ಪಾರಿವಾಳಗಳನ್ನು ಪ್ರೀತಿಯಿಂದ ಸಾಕಿ, ಅವುಗಳನ್ನು ಆರೈಕೆ ಮಾಡಿ ಸ್ಪರ್ಧೆಯಲ್ಲಿ ಬಳಸುವ ಈ ಕ್ರೀಡೆಯನ್ನು ಪಾರಂಪರಿಕ ಕ್ರೀಡೆಯಾಗಿ ಕಾಪಾಡಬೇಕು ಎನ್ನುತ್ತಾರೆ ಶಂಕರ್‌ ವಜ್ರವೇಲು. “ಪ್ರಾಣಿ, ಪಕ್ಷಿಗಳನ್ನು ಕ್ರೀಡೆಯಲ್ಲಿ ಬಳಸಿಕೊಳ್ಳುವುದು ಸಾವಿರಾರು ವರ್ಷಗಳಿಂದ ನಡೆದು ಬರುತ್ತಿದೆ. ಪ್ರಾಚಿನ ಒಲಿಂಪಿಕ್ಸ್‌ನಲ್ಲಿದ್ದ ಈ ಕ್ರೀಡೆ ಆಧುನಿಕ ಒಲಿಂಪಿಕ್ಸ್‌ನಲ್ಲೂ ಪ್ರಯೋಗಗೊಂಡಿದೆ. ಭಾರತದಲ್ಲಿ ಅಪರೂಪವಾಗಿರುವ ಈ ಕ್ರೀಡೆಯನ್ನು ಪಾರಂಪರಿಕ ಕ್ರೀಡೆಯನ್ನಾಗಿ ಘೋಷಿಸಿದರೆ ಪಾರಿವಾಳಗಳಿಗೂ ರಕ್ಷಣೆ ನೀಡಿದಂತಾಗುತ್ತದೆ,” ಎಂದು ಶಂಕರ್‌ ವಜ್ರವೇಲು ಹೇಳಿದರು.

ಗಿಡುಗಗಳ ಭಯ: ಪಾರಿವಾಳಗಳಿಗೆ ಹಾರುವಾಗ ಗಿಡುಗಗಳ ಭಯ ಇರುತ್ತದೆ. ಏಪ್ರಿಲ್‌ 15ರಂದು ಬೆಂಗಳೂರಿನಿಂದ ವಿಮಾನದಿಂದ ದೆಹಲಿ ತಲುಪಿದ ಪಾರಿವಾಳಗಳಲ್ಲಿ 24ರಂದು ಹಿಂದಿರುಗಿದ್ದು ರೆಡ್‌ ರಾಕೆಟ್‌ ಹೆಸರಿನ ಪಾರಿವಾಳ ಮಾತ್ರ. ಉಳಿದವುಗಳು ಗಿಡುಗಗಳ ಆಹಾರವಾಗಿರಬಹುದು ಎಂದು ಶಂಕರ್‌ ಅನುಮಾನಿಸಿದ್ದಾರೆ. “ಗಿಡುಗಗಳಿಗೆ ಅವು ಆಹಾರವಾಗಿರಬಹುದು. ಮನೆ ತಲುಪಿರುವ ನನ್ನ ರೆಡ್‌ ರಾಕೆಟ್‌ನ ರೆಕ್ಕೆಗಳಿಗೂ ಗಾಯವಾಗಿದೆ,” ಎಂದು ಶಂಕರ್‌ ಹೇಳಿದ್ದಾರೆ.

ಗಿಡುಗನ ಗೂಡಿನಲ್ಲಿ ಸಿಕ್ಕ ಮೃತ ಪಾರಿವಾಳಗಳ ರಿಂಗ್‌

ಗಿಡುಗನ ಗೂಡಿನಲ್ಲಿ ಸಿಕ್ಕ ಮೃತ ಪಾರಿವಾಳಗಳ ರಿಂಗ್‌


ಸೋಮಶೇಖರ್‌ ಪಡುಕರೆ, ಕರ್ನಾಟಕದ ಹಿರಿಯ ಕ್ರೀಡಾ ಪತ್ರಕರ್ತರು, ಕಳೆದ 32 ವರ್ಷಗಳಿಂದ ಕ್ರೀಡಾಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಸಾಧನೆಯನ್ನು ಕರ್ನಾಟಕದ ಓದುಗರಿಗೆ ಪರಿಚಯಿಸಿದ್ದಾರೆ. ಹಲವಾರು ದಿವ್ಯಾಂಗ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸರಕಾರದ ನೆರವು ಸಿಗುವಂತೆ ಮಾಡಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾ ಸಾಧಕರಿಗೆ ನಗದು ಬಹುಮಾನ ಸಿಗುವಲ್ಲಿ ಇವರು ಬರೆದ ಲೇಖನಗಳು ಪ್ರಮುಖ ಪಾತ್ರವಹಿಸಿವೆ.