Saturday, April 20, 2024

ವಾಲಿಬಾಲ್‌ನಲ್ಲಿ ಮಿಂಚಿ, ಕ್ರಿಕೆಟ್‌ನಲ್ಲಿ ಬೆಳಗಿ, ವಿಡಿಯೋ ವಿಶ್ಲೇಷಕಿಯಾದ ಮಾಲಾ ರಂಗಸ್ವಾಮಿ

ಸೋಮಶೇಖರ್‌ ಪಡುಕರೆ sportsmail:

ನಿನಗೆ ಬೇರೆ ಹೆಸರು ಬೇಕೆ

ಸ್ತ್ರೀ ಅಂದರೆ ಅಷ್ಟೆ ಸಾಕೆ?

ಕರ್ನಾಟಕ ಕ್ರಿಕೆಟ್‌ ಸಂಸ್ಥೆಯಲ್ಲಿ ವೀಡಿಯೋ ವಿಶ್ಲೇಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ, ದೇಶದ ಮೂವರು ವೀಡಿಯೋ ವಿಶ್ಲೇಷಕಿಯರಲ್ಲಿ ಒಬ್ಬರಾಗಿರುವ ಮತ್ತು ಕರ್ನಾಟಕದ ಏಕೈಕ ವೀಡಿಯೋ ವಿಶ್ಲೇಷಕಿ ಮಾಲಾ ರಂಗಸ್ವಾಮಿ ಅವರ ಬದುಕಿನ ಸಾಧನೆಯ ಹಾದಿಯನ್ನು ಗಮನಿಸಿದಾಗ ಕವಿ ಜಿ.ಎಸ್.‌ ಶಿವರುದ್ರಪ್ಪ ಅವರ ಕವಿತೆಯ ಸಾಲು ಮತ್ತೆ ನೆನಪಾಯಿತು.

ವಾಲಿಬಾಲ್‌ನಲ್ಲಿ ಕರ್ನಾಟಕವನ್ನು ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸಿ, ಯೂತ್‌ ನ್ಯಾಷನಲ್‌ ವಾಲಿಬಾಲ್‌ ಚಾಂಪಿಯನ್ಷಿಪ್‌ನಲ್ಲಿ ಮಿಂಚಿ, ಎರಡು ವರ್ಷಗಳ ಕಾಲ ಕರ್ನಾಟಕ ರಾಜ್ಯ ತಂಡದ ಪರ ಕ್ರಿಕೆಟ್‌ ಆಡಿ, ಮದುವೆಯ ನಂತರ ಪುಟ್ಟ ಮಗುವನ್ನು ಮನೆಯಲ್ಲಿ ಬಿಟ್ಟು ದೇಶಾದ್ಯಂತ ನಡೆಯುತ್ತಿರುವ ದೇಶೀಯ ಕ್ರಿಕೆಟ್‌ನಲ್ಲಿ ವೀಡಿಯೋ ವಿಶ್ಲೇಷಕಿಯಾಗಿ, ನೂರಿನ್ನೂರು ಪಂದ್ಯಗಳಲ್ಲಿ ಕಾರ್ಯನಿರ್ವಹಿಸಿ ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಏಕೈಕ ವೀಡಿಯೋ ವಿಶ್ಲೇಷಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಮಾಲಾ ರಂಗಸ್ವಾಮಿ ರಾಜ್ಯದ ಕ್ರೀಡಾ ಇತಿಹಾಸದಲ್ಲಿ ಅಪೂರ್ವ ಸಾಧಕಿ.

ಕ್ರಿಕೆಟ್‌ ಪಂದ್ಯಗಳನ್ನು ವೀಕ್ಷಿಸುವಾಗ ನಾವು ಕ್ರಿಕೆಟ್‌ ಆಟಗಾರನ ಹಿಂದೆ ಯಾರೆಲ್ಲ ಶ್ರಮವಹಿಸಿದ್ದಾರೆ ಎಂಬುದರ ಬಗ್ಗೆ ಎಂದೂ ಯೋಚಿಸುವುದಿಲ್ಲ. ಎಲ್ಲಾದರೂ ಕೋಚ್‌ಗಳ ಬಗ್ಗೆ ಮಾತಾಡುವ ಸಾಧ್ಯತೆ ಇದೆ. ಆದರೆ ಒಬ್ಬ ಕ್ರಿಕೆಟ್‌ ತಾರೆಯ ಸಾಧನೆಯ ಹಿಂದೆ ಕೋಚ್‌ಗಿಂತಲೂ ಹೆಚ್ಚು ಪರಿಣಾಮ ಬೀರುವ ವೀಡಿಯೋ ವಿಶ್ಲೇಷಕರ ಬಗ್ಗೆ ನಾವ್ಯಾರೂ ಯೋಚಿಸುವುದಿಲ್ಲ. ಅಷ್ಟೇ ಯಾಕೆ ಅಂತದೊಂದು ವೃತ್ತಿ ಇದೆ ಎಂದು ಹೆಚ್ಚಿನವರಿಗೆ ಗೋತ್ತೇ ಇಲ್ಲ.

 

 

ಮಹಿಳಾ ಕ್ರಿಕೆಟ್‌ನಲ್ಲಿ ಆಟಗಾರರು ಯಾವುದೇ ಸಾಧನೆ ಮಾಡಿದರೂ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಗೌರವಿಸುತ್ತದೆ, ಆದರೆ ಆದಾಯದ ವಿಷಯ ಬಂದಾಗ ಬಿಸಿಸಿಐ ಮಹತ್ವ ನೀಡುವುದು ಪುರುಷರ ಕ್ರಿಕೆಟ್‌ಗೇ, ಇಂಥ ಪುರುಷ ಪ್ರಧಾನವಾದ ಕ್ರಿಕೆಟ್‌ನಲ್ಲಿ ಮಹಿಳೆಯರಿಗೆ ಅವಕಾಶ ಸಿಗುವುದು ಕಷ್ಟ, ಆದರೆ ಮಾಲಾ ರಂಗಸ್ವಾಮಿ ಅವರು ನಮಗೆ ವಿಶೇಷವಾಗಿ ಕಾಣುತ್ತಾರೆ, ಏಕೆಂದರೆ ಪುರುಷರ ಪಂದ್ಯವಿರಲಿ. ಮಹಿಳೆಯರ ಪಂದ್ಯವಿರಲಿ ಕ್ರೀಡಾಂಗಣದ ಸುತ್ತಲೂ ಇರುವ ಆರು ಕಂಬಗಳನ್ನೇರಿ, ಅದಕ್ಕೆ ಕ್ಯಾಮರಾ ಅಳವಡಿಸಿ ಪಂದ್ಯಗಳ ಪ್ರತಿಯೊಂದು ಎಸೆತಗಳನ್ನು ಪರಿಶೀಲಿಸಿ, ನಿರ್ಣಯದ ಬಗ್ಗೆ ಗೊಂದಲುಗಳು ಬಂದಾಗ ಅಂಪೈರ್‌ಗೂ ನೆರವಾಗುತ್ತಾರೆ, ಇದಕ್ಕೆ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯ ಪ್ರಮುಖವಾಗಿಬೇಕು.

ಕ್ರಿಕೆಟ್‌ ಗುರುಗಳಿಗೇ ಗುರು!

ಕ್ರಿಕೆಟ್‌ ತರಬೇತುದಾರರು ತಾವು ತರಬೇತಿ ನೀಡಿದ ಆಟಗಾರ ಎದುರಿಸುತ್ತಿರುವ ಎಲ್ಲ ಎಸೆತಗಳನ್ನು ನೋಡದೇ ಇರಬಹುದು, ಆದರೆ ಒಬ್ಬ ವೀಡಿಯೋ ವಿಶ್ಲೇಷಕರು ಪ್ರತಿಯೊಂದು ಎಸೆತವನ್ನು ನೋಡಬೇಕಾಗುತ್ತದೆ. ಎಷ್ಟೇ ಅನುಭವಿ ಅಥವಾ ಹಿರಿಯ ಕೋಚ್‌ ಇದ್ದರೂ ವೀಡಿಯೋ ವಿಶ್ಲೇಷಣೆ ನೋಡದೆ ಅವರ ತರಬೇತಿ ಅಪೂರ್ಣ ಎನ್ನುತ್ತಾರೆ ಮಾಲಾ. “ವೀಡಿಯೋ ವಿಶ್ಲೇಷಣೆ ಮಾಡುವ ಕೆಲಸ ಅಷ್ಟು ಸುಲಭವಲ್ಲ. ಇಲ್ಲಿ ಸಾಕಷ್ಟು ತಾಳ್ಮೆ ಬೇಕಾಗುತ್ತದೆ, ಕರ್ನಾಟಕ ಮತ್ತು ತಮಿಳುನಾಡು ನಡುವೆ ಪಂದ್ಯವಿದ್ದರೆ ಎರಡು ಮೂರು ತಿಂಗಳಿಂದ ನಮ್ಮ ಕೆಲಸ ಆರಂಭವಾಗುತ್ತದೆ. ತಮಿಳುನಾಡು ತಂಡ ಮುಂಬೈ ವಿರುದ್ಧ ಆಡಿದ್ದರೆ ಅಲ್ಲಿಯ ವೀಡಿಯೋವನ್ನು ತರಿಸಿಕೊಂಡು ಕೋಚ್‌ಗಳಿಗೆ ತೋರಿಸಬೇಕಾಗುತ್ತದೆ. ಎದುರಾಳಿ ತಂಡ ಆಟದ ಬಗ್ಗೆ ಮಾಹಿತಿ ನೀಡಬೇಕಾಗುತ್ತದೆ. ದೌರ್ಬಲ್ಯಗಳನ್ನು ಕೋಚ್‌ ಗಮನಕ್ಕೆ ತರಬೇಕಾಗುತ್ತದೆ. ತಂಡದ ಸಭೆಗಳಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಕ್ರಿಕೆಟ್‌ನ ಬಗ್ಗೆ ಅಪಾರ ಜ್ಞಾನ, ಅಂಕಿಅಂಶಗಳ ಅರಿವು, ತಂತ್ರಜ್ಞಾನ ಇವೆಲ್ಲ ಇದ್ದರೆ ಈ ಕೆಲಸ ಸುಲಭ,” ಎಂದು ಮಾಲಾ ಹೇಳಿದರು.

ಆಟಗಾರರ ಯಶಸ್ಸಿನಲ್ಲಿ ಪ್ರಮುಖ ಪಾತ್ರ:

ವೀಡಿಯೋ ವಿಶ್ಲೇಷಕರು ಒಬ್ಬ ಆಟಗಾರನ ಕ್ರಿಕೆಟ್‌ ಬದುಕಿನಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಇವರು ಸಂಗ್ರಹಿಸಿದ ಮಾಹಿತಿಗಳಿಂದ ಆಟಗಾರ ತನ್ನ ಸರಿ ತಪ್ಪುಗಳನ್ನು ಗಮನಿಸಿ ಮುಂದಿನ ಪಂದ್ಯಗಳ ಬಗ್ಗೆ ಎಚ್ಚರಿಕೆ ವಹಿಸಬಹುದು. ಅಥವಾ ಮತ್ತಷ್ಟು ಸುಧಾರಣೆ ಕಂಡುಕೊಳ್ಳಬಹುದು. ಅಲ್ಲದೆ ಎದುರಾಳಿ ತಂಡದ ಬೌಲರ್‌ ಅಥವಾ ಬ್ಯಾಟ್ಸ್‌ಮನ್‌ ಬಗ್ಗೆಯೂ ಮಾಹಿತಿಗಳನ್ನು ವೀಡಿಯೋ ವಿಶ್ಲೇಷಕರಿಂದ ಪಡೆದು ಅದಕ್ಕೆ ಪೂರಕವಾಗಿ ತನ್ನ ರಣತಂತ್ರಗಳನ್ನು ರೂಪಿಸಿಕೊಳ್ಳಬಹುದು.

ಕರ್ನಾಟಕದ ಏಕೈಕ ವಿಶ್ಲೇಷಕಿ:

ಸದ್ಯ ದೇಶದಲ್ಲಿ ಕ್ರಿಕೆಟ್‌ ವೀಡಿಯೋ ವಿಶ್ಲೇಷಕರಾಗಿ ಮೂವರು ಮಹಿಳೆಯರು ಕಾರ್ಯನಿರ್ವಹಿಸುತ್ತಿದ್ದಾರೆ. ಇಬ್ಬರು ಹೈದರಾಬಾದ್‌ನವರು ಮತ್ತು ಕರ್ನಾಟಕದ ಮಾಲಾ ರಂಗಸ್ವಾಮಿ. ಕರ್ನಾಟಕದಿಂದ ಸದ್ಯ ರಾಜ್ಯ ಕ್ರಿಕೆಟ್‌ ಸಂಸ್ಥೆ ಹಾಗೂ ಬಿಸಿಸಿಐಗಾಗಿ ಕಾರ್ಯನಿರ್ವಹಿಸುತ್ತಿರುವ ಏಕೈಕ ಮಹಿಳೆ ಮಾಲಾ ರಂಗಸ್ವಾಮಿ ಎಂಬುದು ನಮ್ಮೆಲ್ಲರ ಹೆಮ್ಮೆ.

ಕಳೆದ 5 ವರ್ಷಗಳಿಂದ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯಲ್ಲಿ ವೀಡಿಯೋ ವಿಶ್ಲೇಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಮಾಲಾ ರಂಗಸ್ವಾಮಿ, ಬಿಸಿಸಿಐನಲ್ಲಿ ವರ್ಷಕ್ಕೆ 30-40 ಪಂದ್ಯಗಳ ವಿಶ್ಲೇಷಣೆ ಮಾಡುತ್ತಾರೆ. ಭಾರತ ಎ ತಂಡದಲ್ಲಿ ಪರ್ಫಾರ್ಮೆನ್ಸ್‌ ಅನಾಲಿಸ್ಟ್‌ ಆಗಿ ಹಲವಾರು ಪಂದ್ಯಗಳ ವಿಶ್ಲೇಷಣೆ ಮಾಡಿರುತ್ತಾರೆ. ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಆಸ್ಟ್ರೇಲಿಯಾ ಪ್ರವಾಸವನ್ನೂ ಕೈಗೊಂಡಿರುತ್ತಾರೆ.

ವಿಶ್ಲೇಷಣೆ ಅಷ್ಟು ಸುಲಭದ ಕೆಲಸವಲ್ಲ:

ಪುರುಷರು ಪ್ರಭುತ್ವ ಸಾಧಿಸಿರುವ ಕ್ರೀಡೆಯಲ್ಲಿ ಮಹಿಳೆಯರು ತಮ್ಮ ಅಸ್ಥಿತ್ವ ಕಾಯ್ದುಕೊಳ್ಳುವುದು ಅಷ್ಟು ಸುಲಭವಲ್ಲ ಎನ್ನುತ್ತಾರೆ ಮಾಲಾ ರಂಗಸ್ವಾಮಿ. “ಪುರುಷರು ಪ್ರಭುತ್ವ ಸಾಧಿಸಿರುವಲ್ಲಿ ಮಹಿಳೆಯರು ತಮ್ಮ ಭದ್ರತೆಯನ್ನು ಕಾಯ್ದುಕೊಳ್ಳುವುದು ಅಷ್ಟು ಸುಲಭವಲ್ಲ. ಆದರೂ ಬದ್ಧತೆ, ಜ್ಞಾನ, ಸಮಯಪ್ರಜ್ಞೆ ಇವೆಲ್ಲ ಇದ್ದರೆ ಯಾರೊಂದಿಗೂ ಪೈಪೋಟಿ ನೀಡಬಹುದು. ಬೆಳಿಗ್ಗೆ ಗ್ರೌಂಡ್ಸ್‌ಮನ್‌ ಕೆಲಸ ಮಾಡುವಾಗ ನಾವು ಅಂಗಣದಲ್ಲಿ ಹಾಜರಿರಬೇಕಾಗುತ್ತದೆ. ಅಲ್ಲಿಂದಲೇ ನಮ್ಮ ಕೆಲಸ ಆರಂಭ. ಸ್ಟ್ಯಾಂಡ್‌ ಸಿದ್ಧಗೊಳಿಸಿ ಕ್ಯಾಮರಾ ಅಳವಡಿಸಬೇಕು, ಸ್ಟ್ಯಾಂಡ್‌ ನಾವೇ ಹತ್ತಬೇಕಾಗುತ್ತದೆ, ಕೆಲವೊಮ್ಮೆ ವಿದ್ಯುತ್‌ ಶಾಕ್‌ ಹೊಡೆಯುವುದೂ ಉಂಟು. ಬಹಳ ಸಮಯ ಮನೆಯಿಂದ ದೂರ ಉಳಿಯಬೇಕಾಗುತ್ತದೆ, ಈಗ ಕೊರೋನಾ ನಿಯಮಗಳನ್ನು ಅನುಸರಿಸಬೇಕಾಗಿರುವುದರಿಂದ ಬಯೋ ಬಬಲ್‌ನಲ್ಲಿ ಇರಬೇಕು. ಬೆಂಗಳೂರಿನಲ್ಲಿದ್ದರೂ ಮನೆಗೆ ಹೋಗುವಂತಿಲ್ಲ. ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿರುವುದರಿಂದ ಪಂದ್ಯಗಳು ಮುಗಿದ ನಂತರವೇ ಮನೆಯವರನ್ನು ಸಂಪರ್ಕಿಸಬೇಕು. ಇವೆಲ್ಲ ಕಷ್ಟಗಳಲ್ಲ, ಆದರೆ ಮಹಿಳೆಯಾದ ಕಾರಣ ಸವಾಲುಗಳೆನಿಸಿವೆ,” ಎನ್ನುತ್ತಾರೆ ಮಾಲಾ ರಂಗಸ್ವಾಮಿ.

ಕುಟುಂಬ, ಕೆಎಸ್‌ಸಿಎ ಪ್ರೋತ್ಸಾಹ:

ಮಾಲಾ ಅವರ ಪತಿ ಮನೋಹರ್‌ ಬಹುರಾಷ್ಟ್ರೀಯ ಕಂಪೆನಿಯಲ್ಲಿ ಜವಾಬ್ದಾರಿಯುತ ಹುದ್ದೆಯಲ್ಲಿದ್ದಾರೆ. ತನ್ನ ಪತ್ನಿಯ ಆಕಾಂಕ್ಷೆಯ ಕೆಲಸಕ್ಕೆ ಯಾವುದೇ ರೀತಿಯ ಅಡ್ಡಿಯನ್ನುಂಟು ಮಾಡಲಿಲ್ಲ. ಪೂರಕವಾದ ನೆರವನ್ನು ನೀಡಿದ್ದಾರೆ. ಮಗಳು ಯುವಿಕಾ ಳ ಆರೈಕೆ ಮಾಡುತ್ತಾರೆ. ಮಾಲಾ ಅವರ ಹೆತ್ತವರು ಕೂಡ ನೆರವಾಗಿದ್ದಾರೆ. ದೇಶದ ಹಿರಿಯ ವೀಡಿಯೋ ವಿಶ್ಲೇಷಕ ಶಶಿ ಕುಮಾರ್‌ ಅವರಿಂದಾಗಿ ಈ ಜವಾಬ್ದಾರಿಯನ್ನು ಉತ್ತಮ ರೀತಿಯಲ್ಲಿ ನಿಭಾಯಿಸಲು ಸಾಧ್ಯವಾಯಿತು. ಒಂದು  ರೀತಿಯಲ್ಲಿ ಅವರು ನನ್ನ ಪಾಲಿನ ಗುರು ಎನ್ನುತ್ತಾರೆ ಮಾಲಾ. ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ ಕಾರ್ಯದರ್ಶಿ ಸಂತೋಷ್‌ ಮೆನನ್‌ ಕೊರೋನಾ ಕಷ್ಟ ಕಾಲದಲ್ಲೂ ವೇತನವನ್ನು ನೀಡಿ ನೆರವಾಗಿದ್ದಾರೆ. ಇದೆಲ್ಲ ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಮತ್ತಷ್ಟು ಹುಮ್ಮಸ್ಸಿನಿಂದ ಕೆಲಸ ಮಾಡುವಂತೆ ಮಾಡಿದೆ ಎಂದು ಮಾಲಾ ರಂಗಸ್ವಾಮಿ ಹೇಳಿದರು.

Related Articles