Saturday, October 12, 2024

ಕಾಫಿಯ ನಾಡಿನಿಂದ ಭಾರತ ತಂಡಕ್ಕೆ ಅನೀಶ್ವರ್

 ಸೋಮಶೇಖರ್‌ ಪಡುಕರೆ sportsmail:

ಚಿಕ್ಕಮಗಳೂರಿನ ಮಲ್ಲಂದೂರು ಗೌನ್‌ ಖಾನ್‌ ಕಾಫಿ ಎಸ್ಟೇಟ್‌ನಲ್ಲಿರುವ ಮನೆಯ ಅಂಗಣದಲ್ಲಿ ಹತ್ತಿರದ ಹುಡುಗರನ್ನೆಲ್ಲ ಸೇರಿಸಿಕೊಂಡು, ಯಾರು ಬ್ಯಾಟಿಂಗ್‌ ಮಾಡಬೇಕು, ಯಾರು ಬೌಲಿಂಗ್‌ ಮಾಡಬೇಕು? ಮೊದಲ ಓವರ್‌ ಯಾರು ಹಾಕಬೇಕು? ಎಂದು ಪೇಪರ್‌ನಲ್ಲಿ ಬರೆದಿಟ್ಟುಕೊಂಡು ಕ್ರಿಕೆಟ್‌ ಆಡುತ್ತಿದ್ದ ಆರು ವರ್ಷದ ಬಾಲಕ ಮುಂದೊಂದು ದಿನ ಭಾರತದ U19 ತಂಡದ ಆಟಗಾರನಾಗುತ್ತಾನೆ ಎಂದು ಯಾರಾದರೂ ಊಹಿಸಲು ಸಾಧ್ಯವೇ?. ಆದರೆ ಈಗ ಊಹಿಸುವುದಲ್ಲ, ನಂಬಲೇ ಬೇಕು.

ಹೇಳ ಹೊರಟಿದ್ದು 19 ವರ್ಷ ವಯೋಮಿತಿಯ ಏಷ್ಯಾಕಪ್‌ ಆಡಲು ಭಾರತ ತಂಡಕ್ಕೆ ಆಯ್ಕೆಯಾಗಿರುವ ಕರ್ನಾಟಕದ ಏಕೈಕ ಆಟಗಾರ ಅನೀಶ್ವರ್‌ ಗೌತಮ್‌ ಕ್ರಿಕೆಟ್‌ ಹಾದಿಯ ಬಗ್ಗೆ. ಭಾರತ ತಂಡಕ್ಕೆ ಆಯ್ಕೆಯಾದ ನಂತರ www.sportsmail.net ಜತೆ ಅನೀಶ್ವರ್‌ ಮಾತನಾಡಿದ್ದಾರೆ. ಅದರ ಪ್ರಮುಖ ಅಂಶ ಇಲ್ಲಿದೆ.

ಕೆಲ ದಿನಗಳ ಹಿಂದೆ ಭಾರತ U19 ಎ ಮತ್ತು ಭಾರತ U19 ಬಿ ಹಾಗೂ ಬಾಂಗ್ಲಾದೇಶವನ್ನೊಳಗೊಂಡ ತ್ರಿಕೋನ ಸರಣಿ ಟೂರ್ನಿ ನಡೆದಿತ್ತು. ಆ ಪಂದ್ಯದಲ್ಲಿ ಬಿ ತಂಡದ ನಾಯಕರಾಗಿದ್ದ ಅನೀಶ್ವರ್‌ ಸಿಡಿಸಿದ ಅಜೇಯ 54 ರನ್‌ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿಯ ಗಮನ ಸೆಳೆಯಿತು. ಜಯ ಗಳಿಸಲು ಕೊನೆಯ ಎಸೆತದಲ್ಲಿ ಆರು ರನ್‌ ಅಗತ್ಯ ಇದ್ದಾಗ ಸಿಕ್ಸರ್‌ ಸಿಡಿಸಿದ ಅನೀಶ್ವರ್‌ ಪಂದ್ಯ ಗೆದ್ದುಕೊಟ್ಟರು. ಉತ್ತಮ ಎಡಗೈ ಸ್ಪಿನ್‌ ಬೌಲರ್‌ ಆಗಿರುವ ಅನೀಶ್ವರ್‌ ಭಾರತ ಕ್ರಿಕೆಟ್‌ ತಂಡದಲ್ಲಿ ಉತ್ತಮ ಆಲ್ರೌಂಡರ್‌ ಆಗಿ ಸ್ಥಾನ ಪಡೆಯುವ ಸಾಮರ್ಥ್ಯಹೊಂದಿದ್ದಾರೆ. ಇದಕ್ಕೆ ಪೂರಕವೆಂಬಂತೆ ರವೀಂದ್ರ ಜಡೇಜಾ ಅವರ ಫೇವರಿಟ್‌ ಆಟಗಾರ.

ಟೆನಿಸ್‌, ಈಜು, ಗಾಲ್ಫ್‌ ಆಟಗಾರ:

ಮಕ್ಕಳು ಯಾವುದಾದರೂ ಸ್ಪೋರ್ಟ್ಸ್‌ನಲ್ಲಿ ತೊಡಗಿಸಿಕೊಂಡರೆ ಅವರು ಇತರ ಕೆಟ್ಟ ಆಸಕ್ತಿಗಳ ಕಡೆಗೆ ಮನಸ್ಸು ಮಾಡುವುದಿಲ್ಲ, ಎಂಬುದು ಗೌತಮ್‌ ಮತ್ತು ಶ್ವೇತಾ ಅವರ ಅಭಿಪ್ರಾಯ. ಹಾಗಾಗಿ ಚಿಕ್ಕ ಬಾಲಕ ಮನೀಶ್ವರನಿಗೆ ಯಾವ ಕ್ರೀಡೆಯಲ್ಲಿ ಆಸಕ್ತಿ ಇದೆಯೋ ಅದರಲ್ಲೇ ಮುಂದುವರಿಯಲಿ ಎಂದು ಟೆನಿಸ್ ಆಡಲು ಸೇರಿಸಿದರು. ಈಜು ತರಗತಿಗೂ ದಾಖಲಿಸಿದರು ಅಲ್ಲಿಯೂ ಆತ ಆಸಕ್ತಿ ತೋರಿದ, ಕೆಲವು ಸಮಯ ಗಾಲ್ಫ್‌ನಲ್ಲಿಯೂ ತನ್ನನ್ನು ತೊಡಗಿಸಿಕೊಂಡ. ಆದರೆ ಚಿಕ್ಕಮಗಳೂರಿನ ಕಾಫಿ ಎಸ್ಟೇಟ್‌ನಲ್ಲಿ ಹುಡುಗರೊಂದಿಗೆ ಆಡಿದ ಕ್ರಿಕೆಟ್‌ ಅವರ ಭವಿಷ್ಯವನ್ನೇ ಬದಲಾಯಿಸುತ್ತದೆ ಎಂದು ಹೆತ್ತವರೂ ಊಹಿಸಿರಲಿಲ್ಲ.

ಆಟೋಗ್ರಾಫ್‌ ಬೇಡ, ಆಡಬೇಕು:

ಬೆಂಗಳೂರಿನ ವಿದ್ಯಾನಿಕೇತನ್‌ ಮತ್ತು ವಿದ್ಯಾಶಿಲ್ಪ್‌ ಅಕಾಡೆಮಿಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಅನೀಶ್ವರ್‌ಗೆ ಕ್ರಿಕೆಟ್‌ ಬಹಳ ಆಸಕ್ತಿಯ ವಿಷಯವಾಯಿತು. ಆದರೆ ಕ್ರಿಕೆಟ್‌ ಫ್ಯಾನ್‌ ಆಗುವ ಬದಲು ಕ್ರಿಕೆಟಿಗನಾಗುವ ಹಂಬಲ ಹೆಚ್ಚಾಯಿತು. ಅದಕ್ಕೆ ಚಿಕ್ಕ ವಯಸ್ಸಿನಲ್ಲಿಯೇ ದೇಶದ ಪ್ರಸಿದ್ಧ ಕ್ರಿಕೆಟ್‌ ತರಬೇತಿ ಕೇಂದ್ರಗಳಲ್ಲಿ ಒಂದಾಗಿರುವ ಕರ್ನಾಟಕ ಇನ್‌ಸ್ಟಿಟ್ಯೂಟ್‌ ಆಫ್‌ ಕ್ರಿಕೆಟ್‌ (KIOC)ಯ ಇರ್ಫಾನ್‌ ಶೇಠ್‌ ಅವರಲ್ಲಿ ಉತ್ತಮ ತರಬೇತಿ ಸಿಕ್ಕಿತು. ಡೆಲ್ಲಿ ಪಬ್ಲಿಕ್‌ ಸ್ಕೂಲ್‌ನಲ್ಲೂ ಅನೀಶ್ವರ್‌ಗೆ ಉತ್ತಮ ಪ್ರೋತ್ಸಾಹ ಸಿಕ್ಕಿತು.

ತಂದೆ ಗೌತಮ್‌ ಅವರ ಗೆಳೆಯರೊಬ್ಬರು, ”ಬಾ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್‌ ನಡೆಯುತ್ತಿದೆ ಅಲ್ಲಿಗೆ ಹೋಗಿ ಕ್ರಿಕೆಟಿಗರ ಆಟೋಗ್ರಾಫ್‌ ಹಾಕಿಸಿಕೊಡುತ್ತೇನೆʼʼ ಎಂದು ಹೇಳಿದರಂತೆ, ಆಗ ಅನೀಶ್ವರ್‌ “ನನಗೆ ಅವರ ಹಸ್ತಾಕ್ಷರ ಬೇಡ ಅವರ ಜತೆ ಅಥವಾ ಅವರಂತೆಯೇ ಆಡಬೇಕು,” ಎಂದು ಉತ್ತರ ನೀಡಿದಾಗ ಅನೀಶ್ವರ್‌ ಅವರ ಗುರಿ ಸ್ಪಷ್ಟವಾಗಿತ್ತು.

ಶನಿವಾರ ಅನೀಶ್ವರ್‌ ಜತೆ ಮಾತನಾಡುತ್ತ, “ಕ್ರಿಕೆಟ್‌ನಲ್ಲಿ ನಿಮಗೆ ಆದರ್ಶ ಯಾರು? ಎಂದು ಕೇಳಿದ ಪ್ರಶ್ನೆಗೆ ಅವರು ಕೊಟ್ಟ ಉತ್ತರ ಬಹಳ ಪ್ರಬುದ್ಧತೆಯಿಂದ ಕೂಡಿತ್ತು. “ವಿರಾಟ್‌ ಕೊಹ್ಲಿ ಮತ್ತು ರವೀಂದ್ರ ಜಡೇಜಾ ನನಗೆ ಇಷ್ಟ. ಹಾಗಂತ ಎಲ್ಲ ಆದರ್ಶಗಳೂ ಅವರಲ್ಲಿದೆ ಎಂದು ಹೇಳಲಾಗದು. ನ್ಯೂಜಿಲೆಂಡ್‌ನ ಕೇನ್‌ ವಿಲಿಯಮ್ಸನ್‌, ಆಸ್ಟ್ರೇಲಿಯಾದ ಸ್ಟೀವನ್‌ ಸ್ಮಿತ್‌, ಇಂಗ್ಲೆಂಡ್‌ನ ಜೊ ರೂಟ್‌ ಮೊದಲಾದ ವಿಶ್ವದರ್ಜೆಯ ಆಟಗಾರರನ್ನು ಆಟಗಳನ್ನು ಗಂಭೀರವಾಗಿ ನೋಡುತ್ತಿರುವೆ,” ಎಂದರು.

ಕರ್ನಾಟಕ ರಾಜ್ಯದ U14, U16 ಮತ್ತು U19 ತಂಡಗಳ ಪರ ಆಡಿರುವ ಅನೀಶ್ವರ್‌, ಮುಂಬರುವ ಏಷ್ಯಾಕಪ್‌ ಹಾಗೂ ವಿಶ್ವಕಪ್‌ ಕ್ರಿಕೆಟ್‌ನಲ್ಲಿ ತಂಡದ ಜಯಕ್ಕಾಗಿ ಮತ್ತು ದೇಶಕ್ಕಾಗಿ ಟ್ರೋಫಿ ಗೆಲ್ಲಲು ಎಲ್ಲ ರೀತಿಯಲ್ಲಿ ಯತ್ನಿಸುವೆ. ಆಲ್ರೌಂಡ್‌ ಪ್ರದರ್ಶನ ತೋರಿ ಏಷ್ಯಾ ಕಪ್‌ ಮತ್ತು ವಿಶ್ವಕಪ್‌ ಗೆಲ್ಲುವ ಗುರಿ ನಮ್ಮದಾಗಿದೆ,” ಎಂದರು.

“ನನ್ನ ಕ್ರಿಕೆಟ್‌ ಪ್ರಯಾಣದಲ್ಲಿ ನಮ್ಮ ತಂದೆ ತಾಯಿಯ ತ್ಯಾಗ ಸಾಕಷ್ಟಿದೆ. ಅವರ ತ್ಯಾಗ ಇಲ್ಲಿದೆ ಇಲ್ಲಿಯ ತನಕ ಆಡಲು ಸಾಧ್ಯವಾಗುತ್ತಿರಲಿಲ್ಲ. ಚಿಕ್ಕಮಗಳೂರಿನಲ್ಲಿ ಕಾಫಿ ತೋಟ ನೋಡಿಕೊಂಡು, ನನಗಾಗಿ ಮತ್ತೆ ಬೆಂಗಳೂರಿಗೆ ಬರುತ್ತಿದ್ದರು. ಎಲ್ಲಿಯೂ ನನ್ನ ಮೇಲೆ ಒತ್ತಡವನ್ನು ಹೇರಿಲ್ಲ. ಅವರ ಉಪಸ್ಥಿತಿಯೇ ನನಗೆ ಸ್ಫೂರ್ತಿಯಾಗುತ್ತಿತ್ತು,” ಎಂದು ಅನೀಶ್ವರ್‌ ಹೆತ್ತವರನ್ನು ಸ್ಮರಿಸಿದರು.

ಚಿಕ್ಕಂದಿನಲ್ಲೇ ಕ್ಯಾಪ್ಟನ್!!:‌

“ಮಲ್ಲಂದೂರಿನಲ್ಲಿ ಅನೀಶ್ವರ್‌ ಅವರ ತಂದೆ ಗೌತಮ್‌ ಅವರ ಕಾಫಿ ಎಸ್ಟೇಟ್‌ ಇದೆ. ಅಲ್ಲಿ ಚಾಲಕರ ಮಕ್ಕಳು, ಕೆಲಸಗಾರರ ಮಕ್ಕಳು ಮತ್ತು ಪುಟ್ಟ ಹಳ್ಳಿ ಕೆಳಮಲ್ಲಂದೂರಿನ ಹುಡುಗರನ್ನೆಲ್ಲ ಕರೆತಂದು ತಂಡ ಕಟ್ಟಿ ಆಡುವ ಅನೀಶ್ವರ್‌ ಆ ತಂಡಕ್ಕೆ ನಾಯಕನಾಗಿರುತ್ತಿದ್ದ. ಮನೆಯ ಮುಂದಿನ ಕಣದಲ್ಲೇ ಪಂದ್ಯ ನಡೆಯುತ್ತಿತ್ತು. ಅದು ಬಹಳ ಶಿಸ್ತಿನ ಪಂದ್ಯದಂತೆ ನಡೆಯುತ್ತಿತ್ತು, ನಾವೆಲ್ಲ ದೂರದಲ್ಲಿ ನೋಡಿ ನಗುತ್ತಿದ್ದೆವು. ಈಗಲೂ ನಮ್ಮ  ಚಿಕ್ಕಮಗಳೂರು ಮನೆಯಲ್ಲಿ ಸ್ಕೋರ್‌ ಕಾರ್ಡ್‌, ಆಟಗಾರರ ಪಟ್ಟಿ ಎಲ್ಲವೂ ಇದೆ. ಮೊನ್ನೆ U19 ಬಿ ತಂಡಕ್ಕೆ ಅನೀಶ್ವರ್‌ ನಾಯಕನಾದಾಗ ಆ ಬಾಲ್ಯದ ದೃಶ್ಯ ನೆನಪಿಗೆ ಬಂತು,” ಎಂದು ತಾಯಿ ಶ್ವೇತಾ ಗೌತಮ್‌ ಅವರು ಮಗನ ಬಾಲ್ಯದ ದಿನಗಳನ್ನು ನೆನಪಿಸಿಕೊಂಡರು,

ಕೆಐಒಸಿ ಉತ್ತಮ ವೇದಿಕೆ:

ಚಿಕ್ಕಂದಿನಲ್ಲಿಯೇ ಕೆಐಒಸಿಯಲ್ಲಿ ಅಭ್ಯಾಸ ಆರಂಭಿಸಿದ್ದರಿಂದ ಕ್ರಿಕೆಟ್‌ನಲ್ಲಿ ಹೆಚ್ಚು ಪಳಗಲು ಸಾಧ್ಯವಾಯಿತು. ಕೋಚ್‌ ಮಸೂದ್‌ ಹಾಗೂ ಇರ್ಫಾನ್‌ ಸರ್‌ ನಮ್ಮ ಯಶಸ್ಸಿಗಾಗಿ ಶ್ರಮಿಸಿದ್ದಾರೆ. ಉತ್ತಮ ಕೋಚಿಂಗ್‌ ಹಾಗೂ ಉತ್ತಮ ರೀತಿಯಲ್ಲಿ ಯುವ ಕ್ರಿಕೆಟಿಗರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಅನೀಶ್ವರ್‌ ಹಾಗೂ ಅವರ ತಾಯಿ ಶ್ವೇತಾ ಗೌತಮ್‌ ಹೇಳಿದರು.

Related Articles