Saturday, February 24, 2024

ಬ್ಯಾಡ್ಮಿಂಟನ್‌ ಅಂಗಣದಲ್ಲಿ ಬೇಲೂರಿನ ಮಿಂಚು ಹೇಮಂತ್‌

ಸೋಮಶೇಖರ್‌ ಪಡುಕರೆ, ಬೆಂಗಳೂರು:

ಬೆಂಗಳೂರಿನಲ್ಲಿ ಕಳೆದ ವಾರ ಮುಕ್ತಾಯಗೊಂಡ ಗ್ರ್ಯಾಂಡ್‌ ಪ್ರಿಕ್ಸ್‌ ಬ್ಯಾಡ್ಮಿಂಟನ್‌ ಲೀಗ್‌ನಲ್ಲಿ ಕೆಜಿಎಫ್‌ ವೂಲ್ವ್ಸ್‌ ತಂಡ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿತು. ಈ ಚಾಂಪಿಯನ್‌ಷಿಪ್‌ನಲ್ಲಿ ಬೇಲೂರಿನ ಗ್ರಾಮೀಣ ಪ್ರತಿಭೆ ಹೇಮಂತ್‌ ಎಂ, ಗೌಡ ಶ್ರೇಷ್ಠ ಆಟಗಾರರೆಂಬ ಹೆಗ್ಗಳಿಕೆಗೆ ಪಾತ್ರರಾದರು. ಹದಿನೈದಕ್ಕೂ ಹೆಚ್ಚು ಪಂದ್ಯಗಳನ್ನು ಗೆದ್ದು ಗಮನ ಸೆಳೆದರು. ಬೇಲೂರಿನ ಬಾನಸಹಳ್ಳಿ ಎಂಬ ಪುಟ್ಟ ಗ್ರಾಮದಿಂದ ಬಂದ ಹೇಮಂತ್‌ ಗೌಡ ಬ್ಯಾಡ್ಮಿಂಟನ್‌ ಅಂಗಣದಲ್ಲಿ ನಡೆದು ಬಂದ ಹಾದಿ ಅಷ್ಟು ಸುಗಮವಾಗಿರಲಿಲ್ಲ. ನೋವುಗಳ ನಡುವೆ ಚಾಂಪಿಯನ್‌ ಆಗಿ ಮೂಡಿ ಬಂದ ಹೇಮಂತ್‌ ಇತರ ಕ್ರೀಡಾಪಟುಗಳಿಗೆ ಮಾದರಿಯಾಗಿದ್ದಾರೆ.

ಬೇಲೂರಿನ ಬಾನಸಹಳ್ಳಿಯಲ್ಲಿ ಮಂಜುನಾಥ ಮತ್ತು ಸುಜಾತ ದಂಪತಿಯ ಎರಡನೇ ಮಗ ಹೇಮಂತ್‌. ಉತ್ತಮ ಶಿಕ್ಷಣ ಪಡೆಯಬೇಕೆಂದು ಬಾನಸಹಳ್ಳಿಯಿಂದ ಬೇಲೂರು ನಗರಕ್ಕೆ ಬಂದು ನೆಲೆಸಿದ. ಅಲ್ಲಿ 9ನೇ ತರಗತಿ ತನಕ ಓದಿ ಕ್ರೀಡೆಯಲ್ಲಿ ಸಾಧನೆ ಮಾಡಬೇಕೆಂದು ಬೆಂಗಳೂರಿಗೆ ಬಂದ ಹೇಮಂತ್‌ಗೆ ಬ್ಯಾಡ್ಮಿಂಟನ್‌ ಜಗತ್ತಿನ ಉತ್ತಮ ಆಟಗಾರರ ಪರಿಚಯವಾಗಿ ತಾನು ಕೂಡ ದೇಶದ ಪರ ಆಡಿ ಕ್ರೀಡೆಯಲ್ಲಿ ಬದುಕುನ್ನು ಕಟ್ಟಿಕೊಳ್ಳಬೇಕೆಂಬ ಕನಸು ಕಂಡರು. ಆದರೆ ಆ ಹಾದಿ ಅಷ್ಟು ಸುಗಮವಾಗಿರಲಿಲ್ಲ.

ಬೇಲೂರು ತೊರೆದು ಬೆಂಗಳೂರಿಗೆ:

ಸಾಮಾನ್ಯವಾಗಿ ಹಳ್ಳಿಯಲ್ಲಿ ಬೆಳೆಯುತ್ತಿರುವ ಮಕ್ಕಳಿಗೆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಅವಕಾಶ ಕಡಿಮೆ. ಹೆತ್ತವರು ಕೂಡ ಅದಕ್ಕೆ ಆಸ್ಪದ ಕೊಡುವುದು ಕಡಿಮೆ. ಹೇಮಂತ್‌ ಅವರ ತಂದೆ ಮಂಜುನಾಥ್‌ ಕೂಡ ಅದರಿಂದ ಹೊರತಾಗಿರಲಿಲ್ಲ. ಮಗ ಕ್ರೀಡೆಗಿಂತ ಓದಿನಲ್ಲಿ ಸಾಧನೆ ಮಾಡಲಿ ಎಂಬ ಹಂಬಲ. ಅದಕ್ಕಾಗಿ ಬೆಂಗಳೂರಿಗೆ ಹೊರಟ ಮಗನಿಗೆ ಯಾವುದೇ ರೀತಿಯಲ್ಲಿ ಪ್ರೋತ್ಸಾಹ ನೀಡಲಿಲ್ಲ. ತಾಯಿ ಸುಜಾತ ಅವರು ಮಗನ ಬಗ್ಗೆ ಅಪಾರ ನಂಬಿಕೆ ಇಟ್ಟವರು. ಆತ ಯಾವುದೇ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರೂ ಅದರಲ್ಲಿ ಯಶಸ್ಸು ಸಾಧಿಸುತ್ತಾನೆ ಎಂಬ ನಂಬಿಕೆ ಅವರಿಗಿದೆ. ಇದು ಹೇಮಂತ್‌ ಅವರಲ್ಲಿ ಆತ್ಮವಿಶ್ವಾಸವನ್ನು ಹುಟ್ಟಿಸಿತು. ಹೇಮಂತ್‌ ಕೂಡ ಬ್ಯಾಡ್ಮಿಂಟನ್‌ನಲ್ಲಿ ಸಾಧನೆ ಮಾಡಬೇಕೆಂಬ ಛಲದೊಂದಿಗೆ ಮನೆಯಿಂದ 3-4 ವರ್ಷ ಯಾವುದೇ ನೆರವನ್ನು ತೆಗೆದುಕೊಳ್ಳದೆ ಆಟದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಅವರ ಸಾಧನೆಯ ಬಗ್ಗೆ ಮಾಧ್ಯಮಗಳಲ್ಲಿ ವರದಿ ಬಂದ ನಂತರ ತಂದೆಗೆ ಮನವರಿಕೆಯಾಯಿತು. ಮಗ ಏನೋ ಸಾಧನೆ ಮಾಡುತ್ತಿದ್ದಾನೆ ಎಂದು ನಂತರ ನೆರವು ನೀಡಲಾರಂಭಿಸಿದರು.

ರಾಜ್ಯಕ್ಕೆ ನಂಬರ್‌ ಒನ್‌: ಬ್ಯಾಡ್ಮಿಂಟನ್‌ನಲ್ಲಿ ಸಾಧನೆ ಮಾಡಬೇಕೆಂಬ ಕನಸು ಹೊತ್ತಿ ಬೆಂಗಳೂರಿಗೆ ಬಂದ ಹೇಮಂತ್‌ಗೆ ಅದೃಷ್ಟವೆಂಬಂತೆ ಭಾರತೀಯ ಕ್ರೀಡಾಪ್ರಾಧಿಕಾರದಲ್ಲಿ ಉತ್ತಮ ತರಬೇತಿ ಸಿಕ್ಕಿತು. ನಂತರ ಅನೂಪ್‌ ಶ್ರೀಧರ್‌, ಟಾಮ್‌ ಜಾನ್‌ ಮೊದಲಾದ ಶ್ರೇಷ್ಠ ಆಟಗಾರರ ಪಾಳಯದಲ್ಲಿ ಪಳಗುವ ಅವಕಾಶ ಸಿಕ್ಕಿತು. ಈಗ 26 ವರ್ಷ ಪ್ರಾಯದ ಹೇಮಂತ್‌ಗೆ ಹೊಸ ಬದುಕು ನೀಡಿದವರು ಮಾಜಿ ಅಂತಾರಾಷ್ಟ್ರೀಯ ಆಟಗಾರ ಅರವಿಂದ್‌ ಭಟ್‌. ಲೆವೆಲ್‌ ಅಪ್‌ನಲ್ಲಿ ಅರವಿಂದ ಭಟ್‌ ನೀಡಿದ ತರಬೇತಿ ಹೇಮಂತ್‌ ಅವರಲ್ಲಿ ಆತ್ಮವಿಶ್ವಾಸ ಮೂಡಿಸಿತು. ಹಲವು ಬಾರಿ ರಾಜ್ಯದ ನಂಬರ್‌ ಒನ್‌ ಆಟಗಾರರೆನಿಸಿದರು. ವಿಶ್ವದಲ್ಲಿ 1000 ರಾಂಕ್‌ನಲ್ಲಿದ್ದ ಹೇಮಂತ್‌ ನಿರಂತರ ಪರಿಶ್ರಮದಿಂದ 135ನೇ ರಾಂಕ್‌ ತಲುಪಿದರು. ”ಇದಕ್ಕೆಲ್ಲ ಅರವಿಂದ ಭಟ್‌ ಅವರು ನೀಡಿದ ತರಬೇತಿ ಹಾಗೂ ಪ್ರೋತ್ಸಾಹ ಕಾರಣ,” ಎನ್ನುತ್ತಾರೆ ಹೇಮಂತ್‌. ಬಾಂಗ್ಲಾದೇಶದಲ್ಲಿ ನಡೆದ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್‌ನಲ್ಲಿ ಕಂಚಿನ ಪದಕ ಗೆದ್ದರು. ಮುಂದಿನ ತಿಂಗಳು ಮಹಾರಾಷ್ಟ್ರದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್‌ನಲ್ಲಿ ಹೇಮಂತ್‌ ಸ್ಪರ್ಧೆ ನಡೆಸಲಿದ್ದು, ನಂತರ ಇಂಡೋನೇಷ್ಯಾದಲ್ಲಿ ನಡೆಯುವ ಸ್ಪರ್ಧೆಯಲ್ಲೂ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಆಟದ ನಡುವೆ ಕಾಡಿದ ನೋವು: ಹೇಮಂತ್‌ ರಾಜ್ಯದಲ್ಲಿ ಹಲವು ಚಾಂಪಿಯನ್‌ ಪಟ್ಟ ಗೆದ್ದುಕೊಂಡು ಎರಡು ಮೂರು ವರ್ಷಗಳ ಕಾಲ ನಂಬರ್‌ ಒನ್‌ ಸ್ಥಾನ ತಮ್ಮದಾಗಿಸಿಕೊಂಡಿದ್ದರು. ಆದರೆ ಬೆನ್ನು ನೋವಿನ ಕಾರಣ ಒಂದು ವರ್ಷ ಯಾವುದೇ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಾಗಲಿಲ್ಲ. ಈ ನಡುವೆ ಪದವಿ ಶಿಕ್ಷಣವನ್ನು ಮುಗಿಸಿದರು. ನೋವಿನಿಂದ ಚೇತರಿಸಿಕೊಂಡು ಸ್ಪರ್ಧೆಗಳಲ್ಲಿ ಪಾಲ್ಗೊಂಡು ಮತ್ತೆ ರಾಜ್ಯದಲ್ಲಿ ನಂಬರ್‌ ಒನ್‌ ಆಟಗಾರರೆನಿಸಿದರು. ನಿರಂತರ ಪಂದ್ಯಗಳನ್ನಾಡಿದ ಕಾರಣ ನೋವು ಮತ್ತೆ ಕಾಡಿತು. 7-8 ತಿಂಗಳು ಮನೆಯಲ್ಲೇ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಆದರೆ ಆತ್ಮವಿಶ್ವಾಸ ಕಳೆದುಕೊಳ್ಳದ ಹೇಮಂತ್‌ ಚೇತರಿಸಿಕೊಂಡು ಮತ್ತೆ ಅಂಗಣದಲ್ಲಿ ಮಿಂಚತೊಡಗಿದರು. “ಈಗ ನಾನು 100 ಪ್ರತಿಶತ ಫಿಟ್‌ ಆಗಿರುವೆ. ಮುಂದಿನ ಅವಕಾಶಗಳಿಗಾಗಿ ಕಾಯುತ್ತಿರುವೆ, ಉತ್ತಮ ಪ್ರದರ್ಶನ ತೋರಲು ಸಜ್ಜಾಗಿರುವೆ. ಹಿಂದಿನದೆಲ್ಲ ಮರೆತು ಮುಂದೇನು ಮಾಡಬೇಕೆನ್ನುವುದು ಮುಖ್ಯ. ನನ್ನ ಕೋಚ್‌ ಅರವಿಂದ ಭಟ್‌ ಸರ್‌ ನನ್ನಲ್ಲಿ ಆತ್ಮವಿಶ್ವಾಸ ಮೂಡಿಸಿದ್ದಾರೆ. ಇನ್ನು ಗೆಲ್ಲುವುದೊಂದೇ ಗುರಿಯಾಗಿದೆ,” ಎಂದು ಹೇಮಂತ್‌ ಅತ್ಯಂತ ಆತ್ಮವಿಶ್ವಾಸದಲ್ಲಿ ನುಡಿದರು.

ಸೋಲಿಲ್ಲದ ಸರದಾರ: ಗ್ರ್ಯಾಂಡ್‌ ಪ್ರಿಕ್ಸ್‌ ಬ್ಯಾಡ್ಮಿಂಟನ್‌ ಲೀಗ್‌ನಲ್ಲಿ ಹೇಮಂತ್‌ ಸುಮಾರು 18 ಪಂದ್ಯಗಳನ್ನಾಡಿದ್ದಾರೆ. ಎರಡು ಪಂದ್ಯಗಳಲ್ಲಿ ಸೋಲನುಭವಿಸಿದ್ದಾರೆ, ಅದೂ ಡಬಲ್ಸ್‌ನಲ್ಲಿ. ಸಿಂಗಲ್ಸ್‌ನ ಎಲ್ಲಾ ಪಂದ್ಯಗಳನ್ನು ಗೆದ್ದು ಲೀಗ್‌ನ ಶ್ರೇಷ್ಠ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಸಾಧನೆ ಹೇಮಂತ್‌ ಅವರ ಹಿಂದಿನ ಎಲ್ಲ ನೋವುಗಳನ್ನು ಮರೆಯುವಂತೆ ಮಾಡಿ, ಹೊಸ ಹಾದಿಯನ್ನು ಕಲ್ಪಿಸಿದೆ. “ನಮ್ಮ ತಂಡಕ್ಕೆ ಎಚ್‌.ಎಸ್‌. ಪ್ರಣಾಯ್‌ ಅವರು ಮೆಂಟರ್‌ ಆಗಿದ್ದರು. ಇದು ನನಗೆ ಹೆಚ್ಚಿನ ಖುಷಿಕೊಟ್ಟ ಸಂಗತಿ. ಆಡಿದ ಪ್ರತಿಯೊಂದು ಸಿಂಗಲ್ಸ್‌ನಲ್ಲೂ ಜಯ ಗಳಿಸಿದೆ. ಸೋತಿದ್ದು ಎರಡು ಡಬಲ್ಸ್‌ ಪಂದ್ಯಗಳಲ್ಲಿ ಮಾತ್ರ. ಈ ಯಶಸ್ಸು ನನ್ನಲ್ಲಿ ಹೊಸ ಉತ್ಸಾಹವನ್ನು ಮೂಡಿಸಿದೆ. ಇದೇ ಹೆಜ್ಜೆಯಲ್ಲಿ ಮುಂದೆ ಸಾಗಬೇಕಾಗಿದೆ. ಇನ್ನು ಹಿಂದಿರುಗಿ ನೋಡುವುದಿಲ್ಲ. ಆದಷ್ಟು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಬೇಕೆಂಬ ಹಂಬಲ, ಅದಕ್ಕಾಗಿ ನಿತ್ಯವೂ ಕಠಿಣ ಶ್ರಮವಹಿಸುವೆ,” ಎಂದು ಹೇಮಂತ್‌ ನುಡಿದರು.

ಈಗ ಹೆತ್ತವರು ಖುಷಿಯಾಗಿದ್ದಾರೆ: ಹೇಮಂತ್‌ ಅವರ ಸಾಧನೆಯ ಬಗ್ಗೆ ಈಗ ಹೆತ್ತವರು ಅತ್ಯಂತ ಖುಷಿ ವ್ಯಕ್ತಪಡಿಸಿದ್ದಾರೆ. “ಆರಂಭದಲ್ಲಿ ತಂದೆಯ ವಿರೋಧ ಇದ್ದದ್ದು ಕ್ರೀಡೆಯನ್ನು ವಿರೋಧಿಸಲು ಅಲ್ಲ ಬದಲಾಗಿ ಓದಿನಲ್ಲಿ ತೊಡಗಿಸಿಕೊಳ್ಳಲು. ಆದರೆ ನನಗೆ ಓದಿಗಿಂತ ಕ್ರೀಡೆಯಲ್ಲೇ ಸಾಧನೆ ಮಾಡಬೇಕೆಂಬ ಛಲ. ಅದಕ್ಕಾಗಿ ಕೆಲವೊಮ್ಮೆ ಬೇಸರವೂ ಆಗಿದೆ. ಈಗ ಅಪ್ಪನಿಗೆ ಖುಷಿಯಾಗಿದೆ. ಅವರು ನನಗೆ ಎಲ್ಲ ರೀತಿಯ ಪ್ರೋತ್ಸಾಹ ನೀಡುತ್ತಿದ್ದಾರೆ. ಅವರ ಪ್ರೋತ್ಸಾಹವೇ ನನಗೆ ಶ್ರೀರಕ್ಷೆ. ಓದಿನಲ್ಲಿ ನನ್ನಣ್ಣ ಉತ್ತಮ ಸಾಧನೆ ಮಾಡುತ್ತಿದ್ದಾನೆ. ಮುಂದಿನ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಯಶಸ್ಸು ಕಾಣಬೇಕಿದೆ,” ಎಂದು ಹೇಮಂತ್‌ ನುಡಿದರು.

ಶುಭ ಹಾರೈಸಿದ ಅರವಿಂದ್‌ ಭಟ್‌: ಕರ್ನಾಟಕದ ಅರವಿಂದ್‌ ಭಟ್‌ ಈ ದೇಶ ಕಂಡ ಉತ್ತಮ ಬ್ಯಾಡ್ಮಿಂಟನ್‌ ಆಟಗಾರರು. ನಿವೃತ್ತಿಯ ನಂತರ ಪ್ರತಿಭೆಗಳನ್ನು ಬೆಳಗಿಸುವ ತರಬೇತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಯಶಸ್ಸಿನ ಹಾದಿ ತುಳಿದವರು. ಲೆವೆಲ್‌ಅಪ್‌ ಬ್ಯಾಡ್ಮಿಂಟನ್‌ ಅಕಾಡೆಮಿ ಮೂಲಕ ಹಲವಾರು ಪ್ರತಿಭೆಗಳನ್ನು ಬ್ಯಾಡ್ಮಿಂಟನ್‌ ಜಗತ್ತಿಗೆ ನೀಡುತ್ತಿದ್ದಾರೆ. ಹೇಮಂತ್‌ ಎಂ. ಗೌಡ ಅವರ ಬ್ಯಾಡ್ಮಿಂಟನ್‌ ಬದುಕಿಗೆ ತಿರುವು ನೀಡಿದವರು ಅರವಿಂದ್‌ ಭಟ್‌.  ತಮ್ಮ ಶಿಷ್ಯನ ಸಾಧನೆಯ ಬಗ್ಗೆ ಮಾತನಾಡಿದ ಅರವಿಂದ್‌ ಭಟ್‌, “ಗ್ರ್ಯಾಂಡ್‌ ಪ್ರಿಕ್ಸ್‌ ಬ್ಯಾಡ್ಮಿಂಟನ್‌ ಲೀಗ್‌ನಲ್ಲಿ ಹೇಮಂತ್‌ ಅತ್ಯಂತ ಜವಾಬ್ದಾರಿಯುತವಾಗಿ ಆಟವಾಡಿದರು. ಅವರೀಗ ಒಬ್ಬ ಪ್ರಬುದ್ಧ, ಜವಾಬ್ದಾರಿಯುತ ಆಟಗಾರ. ನಮ್ಮ ಅಕಾಡೆಮಿಗೆ ಸೇರುವಾಗ ಅವರಲ್ಲಿ ಕೆಲವು ತಪ್ಪು ಒಪ್ಪುಗಳು ಇದ್ದಿದ್ದವು. ಅವುಗಳನ್ನು ನಾವು ಗಮನಿಸಿ ಒಪ್ಪುವುದನ್ನು ಮಾತ್ರ ಬೆಳಗಿಸಿದೆವು. ಮುಂದಿನ ಟೂರ್ನಿಗಳಲ್ಲಿ ಅವರು ಉತ್ತಮವಾಗಿ ಪ್ರದರ್ಶನ ನೀಡುತ್ತಾರೆಂಬ ಭರವಸೆ ನನಗಿದೆ, ಅದು ಅವರಲ್ಲೂ ಇದೆ ಎಂಬುದು ನನಗೆ ಮನದಟ್ಟಾಗಿದೆ, ಅವರಿಗೆ ಯಾವಾಗಲೂ ನನ್ನ ಶುಭ ಹಾರೈಕೆ ಇದ್ದೇ ಇರುತ್ತದೆ,” ಎಂದು ಹೇಳಿದರು.

Related Articles