ಸೋಮಶೇಖರ್ ಪಡುಕರೆ, ಬೆಂಗಳೂರು
ಕ್ರೀಡೆಯಲ್ಲಿ ಸಾಧನೆ ಮಾಡಿದ ಸಮಾನ ಮನಸ್ಕರು ಒಂದೆಡೆ ಸೇರಿದರೆ ಎಷ್ಟು ಅದ್ಭುತವಾದ ಕ್ರೀಡಾ ಸೌಲಭ್ಯಗಳನ್ನು ಸ್ಥಾಪಿಸಬಹುದು ಎಂಬುದಕ್ಕೆ ಹುಬ್ಬಳ್ಳಿಯ ವಿದ್ಯಾನಗರದಲ್ಲಿರುವ ಚೈತನ್ಯ ಸ್ಪೋರ್ಟ್ಸ್ ಫೌಂಡೇಷನ್ ಉತ್ತಮ ನಿದರ್ಶನ.
ರಾಜ್ಯೋತ್ಸವ, ಏಕಲವ್ಯ ಪ್ರಶಸ್ತಿ ವಿಜೇತ ಅಂತಾರಾಷ್ಟ್ರೀಯ ಅಥ್ಲೀಟ್ ವಿಲಾಸ್ ನೀಲಗುಂದ್, ರಾಜ್ಯ ಕ್ರಿಕೆಟ್‌ನಲ್ಲಿ ಮಿಂಚಿದ ನಿತಿನ್ ಬಿಲ್ಲೆ, ರಾಕೇಶ್ ಶಿಂಧೆ ಮತ್ತು ಪವನ್ ದೇಶಪಾಂಡೆ ಇವರ ಶ್ರಮದಲ್ಲಿ ಸ್ಥಾಪನೆಯಾಗ ಚೈತನ್ಯ ಸ್ಪೋರ್ಟ್ಸ್ ಫೌಂಡೇಷನ್ ಕಳೆದ ಮೂರು ವರ್ಷಗಳಿಂದ ಹುಬ್ಬಳ್ಳಿಯಲ್ಲಿ ನಿರಂತರವಾಗಿ ಕ್ರೀಡಾ ತರಬೇತಿಯನ್ನು ನೀಡಿ ಹಲವಾರು ಪ್ರತಿಭೆಗಳಿಗೆ ವೇದಿಕೆಯಾಗಿದೆ.
ವಿಲಾಸ್ ನೀಲಗುಂದ್ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ಸ್‌ನಲ್ಲಿ ಮಿಂಚಿ ರಾಜ್ಯಕ್ಕೆ ಕೀರ್ತಿ ತಂದ ಅಥ್ಲೀಟ್. ಆಫ್ರೋ ಏಷ್ಯನ್ ಗೇಮ್ಸ್, ಸ್ಯಾಫ್ ಗೇಮ್ಸ್, ಏಷ್ಯನ್ ಗ್ರ್ಯಾಂಡ್ ಪ್ರಿಕ್ಸ್, ವಿಶ್ವ ರೈಲ್ವೆ ಕ್ರೀಡಾಕೂಟಗಳಲ್ಲಿ ಮತ್ತು ರಾಷ್ಟ್ರೀ ಕ್ರೀಡಾಕೂಟಗಳಲ್ಲಿ ಪದಕ ಗೆದ್ದಿರುವ ವಿಲಾಸ್ ಏಷ್ಯನ್ ಗೇಮ್ಸ್‌ನಲ್ಲೂ ದೇಶವನ್ನು ಪ್ರತಿನಿಧಿಸಿದ ರಾಜ್ಯದ ಹೆಮ್ಮೆಯ ಅಥ್ಲೀಟ್.
ಅಕಾಡೆಮಿಯಲ್ಲಿರುವ ಸೌಲಭ್ಯಗಳು: ಸುಮಾರು ಎರಡು ಎಕರೆ ಪ್ರದೇಶದಲ್ಲಿ ಸಿದ್ಧವಾಗಿರುವ ಈ
ಅಕಾಡೆಮಿಯಲ್ಲಿ ಅಥ್ಲೆಟಿಕ್ಸ್, ಫುಟ್ಬಾಲ್, ಕ್ರಿಕೆಟ್, ವಾಲ್ ಕ್ಲೈಮಿಂಗ್, ರೋಪ್ ಕ್ಲೈಮಿಂಗ್, ಶೂಟಿಂಗ್, ಬ್ಯಾಡ್ಮಿಂಟನ್, ಕರಾಟೆ, ಜಿಮ್, ಟೇಬಲ್ ಟೆನ್ನಿಸ್, ವಾಲಿಬಾಲ್, ಯೋಗ, ಎರೋಬಿಕ್, ಜುಂಬಾ ಟೆನ್ನಿಸ್, ಕ್ರಾಸ್ ಫಿಟ್ ಟ್ರೈನಿಂಗ್, ಕಬಡ್ಡಿ, ಬಾಕ್ಸ್ ಕ್ರಿಕೆಟ್, ಜಾಬ್ ಫಿಸಿಕಲ್ ಟ್ರೈನಿಂಗ್, ಹಾಕಿ ಟರ್ಫ್ ಅಂಗಣ, 7ಎ ಸೈಡ್ ಫುಟ್ಬಾಲ್ ಅಂಗಣ, ಹೈಟೆಕ್ ಗ್ರೌಂಡ್ ಸೌಲಭ್ಯವಿರುತ್ತದೆ. ಕರ್ನಾಟಕದಲ್ಲಿ ಈ ಎಲ್ಲಾ ಸೌಲಭ್ಯಗಳು ಒಂದೇ ಅಕಾಡೆಮಿಯಲ್ಲಿ ಸಿಗುವುದು ಅತಿ ವಿರಳ. ಉತ್ತರ ಕರ್ನಾಟಕದಲ್ಲಂತೂ ಇದೇ ಮೊದಲು.
ಎಲ್ಲ ಕ್ರೀಡೆಗಳಿಗೂ ನುರಿತ ತರಬೇತುದಾರರಿಂದ ತರಬೇತಿ ನೀಡಲಾಗುತ್ತದೆ. ನೀಮಗೆ ಯಾವುದಾದರೂ ಕ್ರೀಡೆಯನ್ನು ಅಕಾಡೆಮಿಗೆ ಬಂದು ಆಡಬೇಕೆಂದರೆ ಪೇ-ಪ್ಲೇ ಸೌಲಭ್ಯವನ್ನು ಬಳಸಿಕೊಳ್ಳಬಹುದು. ಆಟದ ನಡುವೆ ವಿಶ್ರಾಂತಿ ಪಡೆದು ಪೌಷ್ಠಿಕ ಆಹಾರವನ್ನು ಸೇವಿಸಲು ಫುಡ್ ಕೌಂಟರ್ ಇರುತ್ತದೆ. ಆನ್‌ಲೈನ್‌ನಲ್ಲಿ ಬುಕ್ಕಿಂಗ್ ಮತ್ತು ಶುಲ್ಕ ಪಾವತಿಸುವ ಸೌಲಭ್ಯವಿರುತ್ತದೆ, ಅಲ್ಲದೆ ಶಾಲಾ ಕಾಲಾ ಕಾಲೇಜುಗಳ ವಾರ್ಷಿಕ ಕ್ರೀಡಾಕೂಟವನ್ನೂ ಇಲ್ಲಿ ಆಯೋಜಿಸಬಹುದಾಗಿದೆ. ಇಲ್ಲಿ ಅಂಗಣ ಬಾಡಿಗೆಗೂ ದೊರೆಯುತ್ತದೆ.
ಇಲ್ಲಿ ತರಬೇತಿ ಪಡೆದ ಕ್ರೀಡಾಪಟುಗಳು ರಾಜ್ಯ ಮಟ್ಟದಲ್ಲಿ ಈಗಾಗಲೇ ಪದಕ ಗೆದ್ದು ಗಮನ ಸೆಳೆದಿದ್ದಾರೆ. ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಮಿಂಚು ಕ್ರೀಡಾಪಟುಗಳನ್ನು ನಾವು ಸಜ್ಜುಗೊಳಿಸುತ್ತೇವೆ ಎಂದು ವಿಲಾಸ್ ನೀಲಗುಂದ್ ಅತ್ಯಂತ ಆತ್ಮವಿಶ್ವಾಸಲ್ಲಿ ಹೇಳಿದ್ದಾರೆ.
ಸಮಾಜಕ್ಕೆ ಒಳಿತು ಮಾಡಬೇಕು: ಕ್ರೀಡೆ ನಮಗೆ ಬದುಕನ್ನು ನೀಡಿದೆ. ಈಗ ನಾವು ಕ್ರೀಡೆಯ ಮೂಲಕವೇ ಸಮಾಜಕ್ಕೆ ಒಳಿತು ಮಾಡಬೇಕು ಎಂಬುದು ಚಾಂಪಿಯನ್ ಅಥ್ಲೀಟ್ ವಿಲಾಸ್ ನೀಲಗುಂದ್ ಅವರ ನಿಲುವು.
“ಕ್ರೀಡೆ ನನಗೆ ಬದುಕು ನೀಡಿದೆ. ಪ್ರಶಸ್ತಿ, ಉದ್ಯೋಗ ಹಾಗೂ ಸ್ಥಾನಮಾನ ಕಲ್ಪಿಸಿದೆ. ನಾವು ಕೂಡ ಸಮಾಜಕ್ಕೆ ಒಳಿತು ಮಾಡಬೇಕು. ಉತ್ತರ ಕರ್ನಾಟಕದಲ್ಲಿ ಉತ್ತಮ ಕ್ರೀಡಾ ಸೌಲಭ್ಯಗಳಿಲ್ಲ. ಈಗಲೂ ಇಲ್ಲಿ ಹಾಕಿ ಆಡಲು ಟರ್ಫ್ ಅಂಗಣವಿಲ್ಲ. ಫುಟ್ಬಾಲ್‌ಗೆ ಒಳ್ಳೆಯ ಕ್ರೀಡಾಂಗಣವಿಲ್ಲ. ಇದೆಲ್ಲವನ್ನು ಗಮನಿಸಿ ನಾವು ಚೌತನ್ಯ ಸ್ಪೋರ್ಟ್ಸ್ ಫೌಂಡೇಷನ್ ಆರಂಭಿಸಿದ್ದೇವೆ, ಇದು ದುಬಾರಿಯಿಂದ ಕೂಡಿದ ಅಕಾಡೆಮಿಯಲ್ಲ. ಉತ್ತಮ ಕ್ರೀಡಾ ಸೌಲಭ್ಯವನ್ನು, ಸಾಧ್ಯವಾದಷ್ಟು ಹೆಚ್ಚಿನ ಕ್ರೀಡೆಗಳಲ್ಲಿ ಮಕ್ಕಳಿಗೆ, ಯುವಕರಿಗೆ ತರಬೇತಿ ನೀಡುವುದು, ಉತ್ತರ ಕರ್ನಾಟಕದಿಂದ ಹೆಚ್ಚಿನ ಕ್ರೀಡಾಪಟುಗಳು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಬೇಕೆಂಬುದು ನಮ್ಮ ಉದ್ದೇಶವಾಗಿದೆ,” ಎಂದು ವಿಲಾಸ್ ನೀಲಗುಂದ್ ಹೇಳಿದರು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಚೈತನ್ಯ ಸ್ಪೋರ್ಟ್ಸ್ ಫೌಂಡೇಷನ್,
ಕಲ್ಲೂರು ಲಕ್ಷ್ಮೀ ಲೇಔಟ್, ಬಾಲಾಜಿ ಆಸ್ಪತ್ರೆ ಎದುರುಗಡೆ,
ನ್ಯೂ ಕೋರ್ಟ್ ಹತ್ತಿರ, ವಿದ್ಯಾನಗರ
ಹುಬ್ಬಳ್ಳಿ -31
ದೂರವಾಣಿ ಸಂಪರ್ಕ: 8073100338, 8296650337, 9035428589, 8296626649, 9845709247,8277937555/666
Mail: chaitanyasportsfoundation@gmail.com