Saturday, February 24, 2024

ಅಬು ಧಾಬಿಯಲ್ಲಿ ಮಿಂಚಿ ದೇಶಕ್ಕೆ ಕೀರ್ತಿ ತಂದ ಮೈಸೂರಿನ ದುರ್ಗಾಶ್ರೀ

ಸೋಮಶೇಖರ್‌ ಪಡುಕರೆ, ಬೆಂಗಳೂರು:

ಆಗಸ್ಟ್‌ 16ರಿಂದ 20ರವರೆಗೆ ಅಬು ಧಾಬಿಯಲ್ಲಿ ನಡೆದ ಎಂಎಂಎ ಯೂಥ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಮೈಸೂರಿನ ದುರ್ಗಾಶ್ರೀ ಜಿ.ಎಂ. ಕಂಚಿನ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ.

13 ವರ್ಷದ ದುರ್ಗಾಶ್ರೀ ಜೊತೆಯಲ್ಲಿ ತೀಕ್ಷಾ ಭರುಣಿ ಮತ್ತು ಆರ್ಯನ್‌ ರಾಜ್‌ ಕೂಡ ಭಾರತವನ್ನು ಪ್ರತಿನಿಧಿಸಿದ್ದು, ಎಲ್ಲರೂ ಮೈಸೂರಿನ ಅಕಾಡೆಮಿ ಆಫ್‌ ಮಾರ್ಷಲ್‌ ಸೇನ್ಸ್‌ನ ವಿದ್ಯಾರ್ಥಿಗಳಾಗಿರುತ್ತಾರೆ. ಅನುಭವಿ ತರಬೇತುದಾರರಾದ ವಿಕ್ರಂ, ಕಿರಣ್‌, ಕಾವ್ಯ ಮತ್ತು ಸಮರ್ಥ್‌ ಅವರಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಮೈಸೂರಿನ ಮೂರ್ತಿ ಜಿಎಂ ಹಾಗೂ ಶೋಭಾ ದಂಪತಿಯ ಪುತ್ರಿಯಾಗಿರುವ ದುರ್ಗಾಶ್ರೀ ಮೈಸೂರಿನ ಮಹರ್ಷಿ ಪಬ್ಲಿಕ್‌ ಸ್ಕೂಲ್‌ನಲ್ಲಿ 8 ನೇ ತರಗತಿಯಲ್ಲಿ ಓದುತ್ತಿದ್ದು, ಚಿಕ್ಕಂದಿನಿಂದಲೂ ಮಾರ್ಷಲ್‌ ಆರ್ಟ್‌ನಲ್ಲಿ ತನ್ನನ್ನು ತೊಡಗಿಸಿಕೊಂಡವಳು. ದುರ್ಗಾಶ್ರೀಯ ಅಣ್ಣ ಚಂದ್ರಮೌಳಿ ಕೂಡ ಕರಾಟೆಯಲ್ಲಿ ಬ್ಲ್ಯಾಕ್‌ ಬೆಲ್ಟ್‌ ಹಾಗೂ ಈಗ ಮಾರ್ಷಲ್‌ ಆರ್ಟ್‌ನಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಅಣ್ಣ ತಂಗಿಯರಿಬ್ಬರಿಗೂ ಗುರು ವಿಕ್ರಂ ತರಬೇತಿ ನೀಡುತ್ತಿದ್ದಾರೆ.

ದುಬೈಯಲ್ಲಿ ನಡೆದ ಚಾಂಪಿಯನ್‌ಷಿಪ್‌ನಲ್ಲಿ ದುರ್ಗಾಶ್ರೀ, ಮೂವರು ಬಲಿಷ್ಠ ಸ್ಪರ್ಧಿಗಳ ವಿರುದ್ಧ ಹೋರಾಟ ಮಾಡಿ ಐತಿಹಾಸಿಕ ಕಂಚಿನ ಪದಕ ಗೆದ್ದರು. ಉತ್ತಮ ಫೈಟ್‌ ನೀಡಿದ ಉಕ್ರೇನಿನ ಕೆರಿಯಾನಾ ಖಾನೆಕೊ ಮತ್ತು ವಾಲೆಂಟಿನಾ ಖಾನೆಕೊ ವಿರುದ್ಧ ಯಶಸ್ಸು ಗಳಿಸಿ ನಂತರ ಭಾರತದವರೇ ಆದ ಅವನಿ ವಿರುದ್ಧ ಅಂಕಗಳಲ್ಲಿ  ಸಮಬಲ ಸಾಧಿಸಿ ಕಂಚಿನ ಪದಕ ತಮ್ಮದಾಗಿಸಕೊಂಡರು.

ಮಗಳ ಸಾಧನೆಯ ಬಗ್ಗೆ ಮಾತನಾಡಿದ ಮೂರ್ತಿ ಜಿ.ಎಂ, “ನಮಗೆ ಚಿಕ್ಕಂದಿನಲ್ಲಿ ಇಂತ ಅವಕಾಶಗಳು ಇರಲಿಲ್ಲ. ಮನೆಯಿಂದ ದೂರ ಹೋಗಲೂ ಅವಕಾಶವಿರುತ್ತಿರಲಿಲ್ಲ. ಆದರೆ ನನ್ನ ಮಕ್ಕಳು ಅಂಥ ವಾತಾವರಣಲ್ಲಿ ಬೆಳೆಯಬಾರದು ಎಂದು ಅವರನ್ನು ಆರಂಭದಲ್ಲಿ ಕರಾಟೆಗೆ ಸೇರಿಸಿದೆ, ಮಗ ಚಂದ್ರಮೌಳಿ ಕರಾಟೆಯಲ್ಲಿ ಬ್ಲ್ಯಾಕ್‌ ಬೆಲ್ಟ್‌ ಗಳಿಸಿ ಈಗ ಮ್ಯೂಥಾಯ್‌ನಲ್ಲಿ ತರಬೇತಿ ಪಡೆಯತ್ತಿದ್ದಾನೆ. ಮಗಳಿಗೆ ಸೆಲ್ಫ್‌ ಡಿಫೆನ್ಸ್‌ ಬಗ್ಗೆ ಅರಿವಿರಲಿ ಎಂಬ ಉದ್ದೇಶದಿಂದ ಮಾರ್ಷಲ್‌ ಆರ್ಟ್ಸ್‌ಗೆ ಸೇರಿಸಿದೆ. ಅವಳ ಸಾಧನೆ ಖುಷಿಕೊಟ್ಟಿದೆ,” ಎಂದು ಹೇಳಿದ್ದಾರೆ.

ಚಾಂಪಿಯನ್‌ಷಿಪ್‌ನಲ್ಲಿ ಉತ್ತಮ ಪೈಪೋಟಿ ನೀಡಿ ಅಲ್ಪ ಅಂತರದಲ್ಲಿ ಪದಕದಿಂದ ವಂಚಿತರಾದ ತೀಕ್ಷಾ ಭರುಣಿ ಮೈಸೂರಿನ ಡಾ. ರವಿ ಹಾಗೂ ಶ್ರೀಮತಿ ನಂದಿನಿಯವ ಸುಪುತ್ರಿ. ಅಮೇರಿಕದ ಬ್ರಿಡ್ಜೆಟ್‌ ಕಾಸ್ಟನರ್‌,ವೇಲ್ಸ್‌ನ ಲೂಸಿಯಾ ಫೋರ್ಡ್‌ ಮತ್ತು ಅಂಗೋಲದ ಮೈರಾ ವಿರುದ್ಧ ವಾಕ್‌ವೋವರ್‌ ಪಡೆದರೂ ಪದಕ ಗೆಲ್ಲುವಲ್ಲಿ ವಿಫಲರಾದರು.

ಬಲ್ಗೇರಿಯಾದ ಇವಾಂಕೋ ಕ್ರೋಸ್ಲಾಕ್‌, ಅಮೇರಿಕದ ಕೋನಾ ಲೆನ್‌ ವಿರುದ್ಧ ಜಯ ಗಳಿಸಿ ಉಕ್ರೇನಿನ ವಿಶ್ವ ಚಾಂಪಿಯನ್‌ ಇಲಿಯಾ ಕಾನ್ಕೋ ವಿರುದ್ಧ ಸೋಲನುಭವಿಸಿದ ಮೈಸೂರಿನ ಆರ್ಯನ್‌ ರಾಜ ಅಲ್ಪ ಅಂತರದಲ್ಲಿ ಪದಕದಿಂದ ವಂಚಿತರಾದರು. ಮೈಸೂರಿನ ನಾಗೇಶ್‌ ಹಾಗೂ ಸಿಂಧೂ ಅವರ ಪುತ್ರ ಆರ್ಯನ್‌ ಕೂಡ ಗುರು ವಿಕ್ರಂ ಎಂಎನ್‌ ಅವರಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಭಾರತ ಈ ಚಾಂಪಿಯನ್‌ಷಿಪ್‌ನಲ್ಲಿ ನಾಲ್ಕ ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಸೇರಿ ಒಟ್ಟು 5 ಪದಕಗಳನ್ನು ಗೆದ್ದುಕೊಂಡಿದೆ. 42 ರಾಷ್ಟ್ರಗಳಿಂದ ಸುಮಾರು 500ಕ್ಕೂ ಹೆಚ್ಚು ಸ್ಪರ್ಧಿಗಳು ಈ ಚಾಂಪಿಯನ್‌ಷಿಪ್‌ನಲ್ಲಿ ಭಾವಹಿಸಿರುತ್ತಾರೆ. ಅಂತಾರಾಷ್ಟ್ರೀಯ ಮಿಕ್ಸೆಡ್‌ ಮಾರ್ಷಲ್‌ ಆರ್ಟ್ಸ್‌ ಫೆಡರೇಷನ್‌ (ಐಎಂಎಂಎಎಫ್‌) ಈ ಚಾಂಪಿಯನ್‌ಷಿಪ್‌ ಆಯೋಜಿಸಿದೆ. ಭಾರತೀಯ ಎಂಎಂಎ ಸಂಸ್ಥೆಯ ಅಧ್ಯಕ್ಷ ಶರೀಫ್‌ ಬಾಪು ಅವರ ಮುತುವರ್ಜಿಯಲ್ಲಿ 25 ಸ್ಪರ್ಧಿಗಳು ದೇಶವನ್ನು ಪ್ರತಿನಿಧಿಸಿದ್ದರು. ಭಾರತ ತಂಡದ ಪ್ರಧಾನ ಕೋಚ್‌ ಆಗಿ ಮೈಸೂರಿನ ವಿಕ್ರಂ ಅವರು ಕಾರ್ಯನಿರ್ವಹಿಸಿದ್ದಾರೆ. ಭಾರತೀಯ ಎಂಎಂಎ ಪ್ರಧಾನ ಕಾರ್ಯದರ್ಶಿ ಪ್ರಸಾದ್‌ ಗಾಯ್ತೊಂಡೆ, ಉಪಾಧ್ಯಕ್ಷ ಕೆವಿನ್‌ ಅಲ್ಫರೆಡ್‌ ಡೇವಿಡ್‌, ಎಎಂಎಂಎಕೆ ಹಿರಿಯ ಉಪಾಧ್ಯಕ್ಷ ಕುಮಾರ್‌ ಭಾರತ ತಂಡವನ್ನು ಬರಮಾಡಿಕೊಂಡು ಅಭಿನಂದನೆ ಸಲ್ಲಿಸಿದ್ದಾರೆ.

ಅಭಿನಂದನೆ ಸಲ್ಲಿಸಿದ ಮಾಜಿ ಮೇಯರ್‌: ಮೈಸೂರಿನ ಯುವ ಸಾಧಕರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಮೈಸೂರಿನ ಮಾಜಿ ಮೇಯರ್‌ ಹಾಗೂ ಎಎಂಎಸ್‌ ಹಿರಿಯ ಸಲಹೆಗಾರರಾಗಿರುವ ಪುರುಷೋತ್ತಮ್‌ ಅವರು ಸ್ಪರ್ಧಿಗಳನ್ನು ಸ್ವಾಗತಿಸಿ, ಅಭಿನಂದನೆ ಸಲ್ಲಿಸಿದ್ದಾರೆ.

ಸಾಧನೆಗೆ ಕೋಚ್‌ ವಿಕ್ರಂ ಮೆಚ್ಚುಗೆ: ಭಾರತ ತಂಡದ ಕೋಚ್‌ ಆಗಿ ಕಾರ್ಯನಿರ್ವಹಿಸಿದ್ದ ಮೈಸೂರಿನ ಅಕಾಡೆಮಿ ಆಫ್‌ ಮಾರ್ಷಲ್‌ ಸೈನ್ಸ್‌ನ ಸ್ಥಾಪಕ ನಿರ್ದೇಶಕ, ಎಎಂಎ ಇಂಡಿಯಾದ ಟೆಕ್ನಿಕಲ್‌ ಕಮಿಷನ್‌ ಚೇರ್ಮನ್‌, ಡಬ್ಲ್ಯುಬಿಸಿ ಇಂಡಿಯಾ ಪ್ರಧಾನ ಕಾರ್ಯದರ್ಶಿ ಹಾಗೂ ಎಎಂಎಂಎಕೆ ಪ್ರಧಾನ ಕಾರ್ಯದರ್ಶಿಯಾಗಿರುವ ವಿಕ್ರಂ ಎಂ.ಎನ್‌. ಮಾತನಾಡಿ, “ಪ್ರತಿಷ್ಠಿತ ಟೂರ್ನಿಯಲ್ಲಿ ಪ್ರಧಾನ ಕೋಚ್‌ ಆಗಿ ಕಾರ್ಯನಿರ್ವಹಿಸಿರುವುದಕ್ಕೆ ಹೆಮ್ಮೆ ಅನಿಸುತ್ತಿದೆ. ಮೈಸೂರಿನ ಸ್ಪರ್ಧಿಗಳು ಉತ್ತಮ ರೀತಿಯಲ್ಲಿ ಪ್ರದರ್ಶನ ತೋರಿದ್ದಾರೆ. ಮೂವರಿಗೂ ಪದಕವನ್ನು ನಿರೀಕ್ಷಿಸಿದ್ದೆವು. ಆದರೆ ಅಲ್ಪ ಅಂತರದಲ್ಲಿ ಇಬ್ಬರು ಪದಕದಿಂದ ವಂಚಿತರಾದರು. ಇನ್ನೂ ಉತ್ತಮ ಸಿದ್ಧತೆಯೊಂದಿಗೆ ಮುಂದಿನ ಚಾಂಪಿಯನ್‌ಷಿಪ್‌ಗಳಲ್ಲಿ ಪದಕ ಗೆಲ್ಲುತ್ತೇವೆಂಬ ಆತ್ಮವಿಶ್ವಾಸವಿದೆ,” ಎಂದು ಹೇಳಿದರು.

Related Articles