Friday, March 29, 2024

ಮಹಾರಾಜ ಟ್ರೋಫಿಯಲ್ಲಿ ಮಿಂಚಿದ ಸಿಂಧನೂರಿನ ಮನೋಜ್‌ ಭಾಂಡಗೆ

ಸೋಮಶೇಖರ್‌ ಪಡುಕರೆ, ಬೆಂಗಳೂರು:

ಕಳೆದವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕೆಎಸ್‌ಸಿಎ ಮಹಾರಾಜ ಟ್ರೋಫಿಯ ಫೈನಲ್‌ ಪಂದ್ಯದಲ್ಲಿ ಪಂದ್ಯದ ಗತಿಯನ್ನೇ ಬದಲಾಯಿಸಿದ ಆಲ್ರೌಂಡರ್‌ ರಾಯಚೂರು ಜಿಲ್ಲೆಯ ಸಿಂಧನೂರಿನ ಮನೋಜ್‌ ಭಾಂಡಗೆ ತಾನೊಬ್ಬ ಭವಿಷ್ಯದ ಆಲ್ರೌಂಡರ್‌ ಎಂಬುದನ್ನು ತೋರಿಸಿಕೊಟ್ಟರು.

ಬೆಂಗಳೂರು ಬ್ಲಾಸ್ಟರ್ಸ್‌ನ ಎಲ್‌.ಆರ್‌. ಚೇತನ್‌ ಹಾಗೂ ಕ್ರಾಂತಿ ಕುಮಾರ್‌ 220ರನ್‌ಗಳ  ಬೃಹತ್‌ ಮೊತ್ತವನ್ನು ಬೆಂಬತ್ತಿ ಜಯದ ಹಾದಿಯಲ್ಲಿ ಸಾಗುತ್ತಿದ್ದರು. ಗುಲ್ಬರ್ಗ ಮಿಸ್ಟಿಕ್ಸ್‌ನ ಬೌಲರ್‌ಗಳು ಚೇತನ್‌ ಅವರನ್ನು ನಿಯಂತ್ರಿಸುವಲ್ಲಿ ವಿಫಲರಾಗುತ್ತಿದ್ದರು. ಇನ್ನೇನು ಪಂದ್ಯ ಕೈ ಜಾರುತ್ತಿದ್ದ ಸಂದರ್ಭದಲ್ಲಿ ನಾಯಕ ಮನೀಶ್‌ ಪಾಂಡೆ, ಗಾಯಗೊಂಡು ಒಂದೆಡೆ ಫೀಲ್ಡಿಂಗ್‌ ಮಾಡುತ್ತಿದ್ದ ಮನೋಜ್‌ ಭಾಂಡಗೆ ಅವರ ಕೈಗೆ ಚೆಂಡನ್ನು ನೀಡಿದರು. ಮಧ್ಯಮ ವೇಗಿ ಭಾಂಡಗೆ ತನ್ನ ಮೊದಲ ಓವರ್‌ನ ಕೊನೆಯ ಎಸೆತದಲ್ಲಿ 91 ರನ್‌ ಗಳಿಸಿ ಆಡುತ್ತಿದ್ದ ಚೇತನ್‌ ಅವರನ್ನು ಕ್ಲೀನ್‌ ಬೌಲ್ಡ್‌ ಮಾಡುವ ಮೂಲಕ ಪಂದ್ಯದ ಗತಿಯನ್ನೇ ಬದಲಾಯಿಸಿದರು.

ಕ್ರಿಕೆಟ್‌ನಲ್ಲಿ ಬದುಕನ್ನು ಕಟ್ಟಿಕೊಳ್ಳಬೇಕೆಂದು ದೂರದ ರಾಯಚೂರಿನ ಸಿಂಧನೂರಿನಿಂದ ಬೆಂಗಳೂರಿಗೆ ಬಂದು ಕಠಿಣ ಪರಿಶ್ರಮದಲ್ಲಿ ಪ್ರತಿಭೆಯ ಮೂಲಕವೇ ಸಯ್ಯದ್‌ ಮುಷ್ತಾಕ್‌ ಅಲಿ ಹಾಗೂ ವಿಜಯ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ತಂಡದ ಪರ ಆಡಿದ ಮನೋಜ್‌, ನಿಜವಾಗಿಯೂ ಕರ್ನಾಟಕ ತಂಡಕ್ಕೆ ಅಗತ್ಯವಿರುವ ಒಬ್ಬ ಅದ್ಭುತ ಆಲ್ರೌಂಡರ್‌. ಪಂದ್ಯ ಮುಗದಿ ನಂತರ sportsmail ಜೊತೆ ಮನೋಜ್‌ ತಮ್ಮ ಕ್ರಿಕೆಟ್‌ ಬದುಕಿನ ಬಗ್ಗೆ ಮಾತನಾಡಿದ್ದಾರೆ.

ತಂದೆಯೇ ಸ್ಫೂರ್ತಿ: ಸಿಂಧನೂರಿನಲ್ಲಿ ಜನರಲ್‌ ಸ್ಟೋರ್‌ ನಡೆಸುತ್ತಿರುವ ಶಿವರಾಮ ಭಾಂಡಗೆ ಹಾಗೂ ಸರಸ್ವತಿ ಭಾಂಡಗೆ ಅವರ ಹಿರಿಯ ಮಗ ಮನೋಜ್‌ ಅವರು ಕ್ರಿಕೆಟ್‌ಗೆ ಬರಲು ತಂದೆಯೇ ಸ್ಫೂರ್ತಿಯಂತೆ. ಮನೋಜ್‌ಗೆ ಕ್ರಿಕೆಟ್‌ನಲ್ಲಿರುವ ಆಸಕ್ತಿಯನ್ನು ಗುರುತಿಸಿ ಸ್ಥಳೀಯ ಅಕಾಡೆಮಿಗೆ ಸೇರಿಸಿದರು. ಸಿಂಧನೂರಿನಲ್ಲಿ ಹತ್ತನೇ ತರಗತಿ ವಿದ್ಯಾಭ್ಯಾಸವನ್ನು ಮುಗಿಸಿದ ಮನೋಜ್‌ ನಂತರ ಕ್ರಿಕೆಟ್‌ನಲ್ಲಿ ಹೆಚ್ಚಿನ ಸಾಧನೆ ಮಾಡಲು ಬೆಂಗಳೂರಿನ ಪ್ರೆಸಿಡೆನ್ಸಿ ಕಾಲೇಜನ್ನು ಸೇರಿಕೊಂಡರು. ನಂತರ ವಿವಿಧ ಲೀಗ್‌ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿ ಸಯ್ಯದ್‌ ಮುಷ್ತಾಕ್‌ ಅಲಿ ಟ್ರೋಫಿಯಲ್ಲಿ ಕರ್ನಾಟಕ ತಂಡವನ್ನು ಸೇರಿಕೊಂಡರು.

“ನನ್ನ ಕ್ರಿಕೆಟ್ ‌ಬದುಕಿಗೆ ನಮ್ಮ ತಂದೆಯೇ ಸ್ಫೂರ್ತಿ,” ಎನ್ನುತ್ತಾರೆ ಮನೋಜ್‌. ಕಳೆದ 13 ವರ್ಷಗಳಿಂದ ರಾಜ್ಯದ ಕ್ರಿಕೆಟ್‌ನಲ್ಲಿ ವಿವಿಧ ಹಂತಗಳಲ್ಲಿ ಗುರುತಿಸಿಕೊಂಡಿರುವ ಮನೋಜ್‌, ಕಳೆದ 7-8 ವರ್ಷಗಳ ಅವಧಿಯಲ್ಲಿ ಉತ್ತಮ ಆಲ್ರೌಂಡರ್‌ ಆಗಿ ಬೆಳೆದು ನಿಂತರು. ಬೆಂಗಳೂರಿನ ಸರ್‌ ಸಯ್ಯದ್‌ ಕ್ರಿಕೆಟರ್ಸ್‌ ತಂಡದಲ್ಲಿ ಮೊದಲ ಡಿವಿಜನ್‌ ಪಂದ್ಯದಲ್ಲಿ ಮನೋಜ್‌ ಆಡುತ್ತಿದ್ದಾರೆ.

ಮಹಾರಾಜ ಟ್ರೋಫಿಯ ಕೊನೆಯ ಎರಡು ಪಂದ್ಯಗಳಲ್ಲಿ ಮನೋಜ್‌ ಗಾಯಸ ಸಮಸ್ಯೆಯಿಂದ ಬಳಲುತ್ತಿದ್ದರು. ಈ ಕಾರಣ ಉತ್ತಮ ಪ್ರದರ್ಶನ ತೋರಿರಲಿಲ್ಲ. ಅದರೆ 126 ರನ್‌ ಮತ್ತು 10 ವಿಕೆಟ್‌ ಅವರ ಹೆಸರಿನಲ್ಲಿ ದಾಖಲಾಗಿದೆ. ಎರಡನೇ ಕ್ವಾಲಿಫಯರ್‌ ಪಂದ್ಯದಲ್ಲಿ ಮೈಸೂರು ವಾರಿಯರ್ಸ್‌ ವಿರುದ್ಧ ಅಜೇಯ 35 ರನ್‌ ಸಿಡಿಸಿ ಜಯದ ರೂವಾರಿ ಎನಿಸಿದ್ದರು. ಫೈನಲ್‌ ಪಂದ್ಯದಲ್ಲಿ ನಾಯಕ ಮನೀಶ್‌ ಪಾಂಡೆ ಗಾಯದ ಕಾರಣ ಮನೋಜ್‌ಗೆ ಓವರ್‌ ನೀಡುವ ಲೆಕ್ಕಾಚಾರದಲ್ಲಿ ಇರಲಿಲ್ಲ. ತಾವೇ ಬೌಲಿಂಗ್‌ಗೆ ಬಂದು 15 ರನ್‌ ಹೊಡೆಸಿಕೊಂಡಾಗ ಬೇರೆ ದಾರಿ ಕಾಣದೆ ಮನೋಜ್‌ಗೆ ಬೌಲಿಂಗ್‌ ನೀಡಿದರು. ಎಲ್‌.ಆರ್‌. ಚೇತನ್‌ (91), ಕ್ರಾಂತಿ ಕುಮಾರ್‌ (47) ಹಾಗೂ ಟಿ. ಪ್ರದೀಪ್‌ (3) ಅವರ ವಿಕೆಟ್‌ ಕಬಳಿಸುವ ಮೂಲಕ ಮನೋಜ್‌ ಜಯದ ರೂವಾರಿ ಎನಿಸಿದರು.

ಫೈನಲ್‌ ಪಂದ್ಯದ ಬಗ್ಗೆ ಮಾತನಾಡಿದ ಮನೋಜ್‌ ಭಾಂಡಗೆ, “ಗಾಯದ ಸಮಸ್ಯೆ ಇದ್ದ ಕಾರಣ ಫೈನಲ್‌ ಪಂದ್ಯದಲ್ಲಿ ಬೌಲಿಂಗ್‌ ಸಿಗುತ್ತದೆ ಎಂದು ಯೋಚಿಸಿರಲಿಲ್ಲ. ಆದರೆ ಪರಿಸ್ಥಿತಿ ಬೌಲಿಂಗ್‌ ಮಾಡುವಂತೆ ಮಾಡಿತು. ನಾಯಕ ಮನೀಶ್‌ ಪಾಂಡೆ ನನ್ನ ಮೇಲೆ ನಂಬಿಕೆ ಇಟ್ಟು, ಚೆಂಡನ್ನು ನೀಡಿದರು. ಚೇತನ್‌ ಅವರ ವಿಕೆಟ್‌ ಪಂದ್ಯಕ್ಕೆ ತಿರುವು ನೀಡಿತು. ಕ್ರಾಂತಿ ಕುಮಾರ್‌ ವಿಕೆಟ್‌ ನಮಗೆ ಜಯದ ಹಾದಿ ತೋರಿಸಿತು. ಇಲ್ಲಿ ತೋರಿದ ಪ್ರದರ್ಶನ ರಾಜ್ಯದ ಪ್ರಮುಖ ಟೂರ್ನಿಗಳ ಆಯ್ಕೆಗೆ ಪೂರಕವಾಗಲಿದೆ ಎಂದು ನಂಬಿರುವೆ. ಹಳ್ಳಿಯಿಂದ ಬಂದ ನಮ್ಮಂಥ ಆಟಗಾರರಿಗೆ ಮಹಾರಾಜ ಟ್ರೋಫಿ ಉತ್ತಮ ಅವಕಾಶ ನೀಡಿದೆ. ಮುಂದೆಯೂ ಉತ್ತಮ ಪ್ರದರ್ಶನ ನೀಡುತ್ತೇನೆಂಬ ಆತ್ಮವಿಶ್ವಾಸವಿದೆ,” ಎಂದು ಹೇಳಿದರು.

Related Articles