Tuesday, April 16, 2024

ಅಥ್ಲೆಟಿಕ್ಸ್: ಎರಡನೇ ದಿನ ಏಳು ಕೂಟ ದಾಖಲೆ

ಸ್ಪೋರ್ಟ್ಸ್ ಮೇಲ್ ವರದಿ ಮೂಡಬಿದಿರೆ

ಇಲ್ಲಿನ ಸ್ವರಾಜ್ ಮೈದಾನದಲ್ಲಿ  ಕಾಜ್ಯ ಅಥ್ಲೆಟಿಕ್ಸ್ ಸಂಸ್ಥೆ ಹಾಗೂ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ನಡೆಯುತ್ತಿರುವ ರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ ಎರಡನೇ ದಿನದಲ್ಲಿ ಏಳು ಕೂಟ ದಾಖಲೆಗಳು ನಿರ್ಮಾಣಗೊಂಡವು.

ಪೋಲ್ ವಾಲ್ಟ್ ವಿಭಾಗದಲ್ಲಿ ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರವನ್ನು ಪ್ರತಿನಿಧಿಸಿದ ಬಿನೇಸ್ ಜಾಕೋಬ್ 4.61 ಮೀ. ದೂರಕ್ಕೆ ಎಸೆದು ಹೊಸ ಕೂಟ ದಾಖಲೆ ನಿರ್ಮಿಸಿದರು. 2006 ರಲ್ಲಿ ಬಾಲಕೃಷ್ಣ ಪಿ. 4.60 ಮೀ. ದೂರಕ್ಕೆ ಎಸೆದು ದಾಖಲೆ ಬರೆದಿದ್ದರು.
20 ವರ್ಷ ವಯೋಮಿತಿಯು ಪುರುಷರ ವಿಭಾಗದ 1500 ಮೀ. ಓಟದಲ್ಲಿ  ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್‌ನ ಶಶಿಧರ್‌ಬಿ.ಎಲ್. 4.00.7 ಸೆಕೆಂಡುಗಳಲ್ಲಿ ಗುರಿ ತಲುಪಿ ಹೊಸ ದಾಖಲೆಗೆ ನಿರ್ಮಿಸಿದರು. ಶಶಿಧರ್ ಈ ಕ್ರೀಡಾಕೂಟದಲ್ಲಿ ಎರಡನೇ ದಾಖಲೆ ಬರೆದರು. ಕಳೆದ ವರ್ಷ ಈರಪ್ಪ ಹಳಗಣ್ಣವರ್ 4 ನಿಮಿಷ 2.1 ಸೆಕೆಂಡುಗಳಲ್ಲಿ ಗುರಿ ತಲುಪಿ ದಾಖಲೆ ಬರೆದಿದ್ದರು.
20 ವರ್ಷ ವಯೋಮಿತಿಯ ಪುರುಷರ ವಿಭಾಗದ ಡಿಸ್ಕಸ್ ಎಸೆತದಲ್ಲಿ ಡಿವೈಇಎಸ್‌ನ ಸಂಜೀವ ಕೊಳವಿ 48.77 ಮೀಟರ್ ದೂರಕ್ಕೆ ಕಬ್ಬಿಣದ ಗುಂಡನ್ನು ಎಸೆದು ಹೊಸ ದಾಖಲೆ ನಿರ್ಮಿಸಿದರು. 2008ರಲ್ಲಿ 46.72 ಮೀ. ದೂರಕ್ಕೆ ಎಸೆದಿದ್ದ ಶೀತರ್ ಕುಮಾರ್ ನಿರ್ಮಿಸಿದ್ದ ಕೂಟ ದಾಖಲೆ ನಶಿಸಿಹೋಯಿತು.
20 ವರ್ಷ ವಯೋಮಿತಿಯ ವನಿತೆಯರ ಹೈಜಂಪ್‌ನಲ್ಲಿ ಅಂತಾರಾಷ್ಟ್ರೀಯ ಅಥ್ಲೀಟ್ ಆಳ್ವಾಸ್‌ನ ಅಭಿನಯ ಶೆಟ್ಟಿ 1.75 ಮೀ. ಎತ್ತರಕ್ಕೆ ಜಿಗಿದು ನೂತನ ಕೂಟ ದಾಖಲೆ ನಿರ್ಮಿಸಿದರು. 2000ದಲ್ಲಿ ಸಹನಾ ಕುಮಾರಿ ಹಾಗೂ ಕಾವ್ಯ ಮುತ್ತಣ್ಣ ನಿರ್ಮಿಸಿದ್ದ 1.74 ಮೀ. ದಾಖಲೆ ಈಗ ನಶಿಸಿಹೋಯಿತು.
20 ವರ್ಷ ವಯೋಮಿತಿಯ ವನಿತೆಯರ 400 ಮೀ. ರಿಲೇಯಲ್ಲಿ ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್ ತಂಡ 47.4 ಸೆಕೆಂಡುಗಳಲ್ಲಿ ಗುರಿ ತಲುಪಿ ಹೊಸ ದಾಖಲೆ ಬರೆಯಿತು. 1995ರಲ್ಲಿ ಮೌಂಟ್ ಕಾರ್ಮೆಲ್ ಕಾಲೇಜು ತಂಡ 48.3 ಸೆಕೆಂಡುಗಳಲ್ಲಿ ಗುರಿ ತಲುಪಿ ದಾಖಲೆ ಬರೆದಿತ್ತು. ಇದರೊಂದಿಗೆ 23 ವರ್ಷಗಳ ಹಿಂದಿನ ದಾಖಲೆಯನ್ನು ಆಳ್ವಾಸ್ ವನಿತೆಯರು ಮುರಿಯುವಲ್ಲಿ ಯಶಸ್ವಿಯಾದರು.
14 ವರ್ಷದೊಳಗಿನವರ ಬಾಲಕರ 600 ಮೀ. ಓಟದಲ್ಲಿ ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್‌ನ ರಿಹಾನ್, 1ನಿಮಿಷ 24.16 ಸೆಕೆಂಡುಗಳಲ್ಲಿ ಗುರಿ ತಲುಪಿ ಹೊಸ ದಾಖಲೆ ಸೃಷ್ಟಿಸಿದರು. 2011ರಲ್ಲಿ ಸುಧಾಕರ್ ಸಿ.ಡಿ. 1 ನಿಮಿಷ  28.20 ಸೆಕೆಂಡುಗಳಲ್ಲಿ ಗುರಿ ತಲುಪಿ ದಾಖಲೆ ಬರೆದಿದ್ದರು.
ವನಿತೆಯರ ಹ್ಯಾಮರ್ ಥ್ರೋನಲ್ಲಿ ಮೈಸೂರು ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆಯ ಪ್ರತಿನಿಧಿ ಹರ್ಷಿತಾ ಡಬ್ಲ್ಯು ಆರ್. 46.52 ದೂರಕ್ಕೆ ಎಸೆದು 2017ರಲ್ಲಿ ತಾವೇ ಬರೆದ ದಾಖಲೆಯನ್ನು ಉತ್ತಮಪಡಿಸಿಕೊಂಡರು.
ಕರ್ನಾಟಕ ಅಥ್ಲೆಟಿಕ್ಸ್ ಸಂಸ್ಥೆಯ ಮಾಜಿ ಕಾರ್ಯದರ್ಶಿ ಹಾಗೂ ರಾಷ್ಟ್ರೀಯ ಪ್ಯಾರಾಲಿಂಪಿಕ್ಸ್ ಕೋಚ್ ಕೆ. ಸತ್ಯನಾರಾಯಣ ಅವರು ಎರಡನೇ ದಿನದಲ್ಲಿ ಮುಖ್ಯ ಅತಿಥಿಗಳಾಗಿದ್ದರು.

Related Articles