ಸೋಮಶೇಖರ್ ಪಡುಕರೆ ಬೆಂಗಳೂರು
ಒಂದು ಕ್ರೀಡೆಯಲ್ಲೇ ಪದಕ ಗೆಲ್ಲುವುದು ಕಷ್ಟವೆನಿಸಿರುವ ಈ ದಿನಗಳಲ್ಲಿ ಏಳು ಕ್ರೀಡೆಗಳಲ್ಲಿ ತನ್ನನ್ನು ತೊಡಗಿಸಿಕೊಂಡು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಮಿಂಚಿ ದೇಶದ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕನ್ನಡಿಗನ ಬಗ್ಗೆ ನಾವು ಹೆಮ್ಮೆ ಪಡಲೇ ಬೇಕು.
ಪೋಲ್‌ವಾಲ್ಟ್, ಹ್ಯಾಮರ್ ಥ್ರೋ, ಡಿಸ್ಕಸ್ ಥ್ರೋ, ಶಾಟ್‌ಪುಟ್, ಜಾವೆಲಿನ್, ಕುಸ್ತಿ ಹಾಗೂ ವೇಟ್‌ಲಿಫ್ಟಿಂಗ್ ಹೀಗೆ ಏಳು ಕ್ರೀಡೆಗಳಲ್ಲಿ ಪದಕ ಗೆದ್ದಿರುವ ಸಾಧಕ ಬೇರೆ ಯಾರೂ ಅಲ್ಲ. ಭಾರತ ಸೇನೆಯ ಮದ್ರಾಸ್ ರೆಜಿಮೆಂಟ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಸುಧೀರ್ ಸಿರಿದೋನೆ.
ಮೂಡಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಕ್ರೀಡೆಯಲ್ಲಿ ಮಿಂಚಿ ಈಗ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಧೀರ್ ಸೇನಾ ಕ್ರೀಡಾಕೂಟದಲ್ಲಿ ಗೆದ್ದ ಪದಕಗಳಿಗೆ ಲೆಕ್ಕವಿಲ್ಲ. ರಾಷ್ಟ್ರೀಯ ಜೂನಿಯರ್ ಹಾಗೂ ಸೀನಿಯರ್ ವಿಭಾಗಗಳಲ್ಲೂ ಚಿನ್ನಕ್ಕೆ ಮುತ್ತಿಟ್ಟ ಕ್ರೀಡಾಪಟು.
ಈ ಬಾರಿಯ ದಸರಾ ಕ್ರೀಡಾಕೂಟದ ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ ಚಿನ್ನ ಗೆದ್ದಿರುವ ಸುಧೀರ್‌ಗೆ ಏಳು ಕ್ರೀಡೆಗಳಲ್ಲಿ ಯಾವುದರಲ್ಲೂ ಸ್ಪರ್ದಿಸಿದರರೂ ಪದಕ ಕಟ್ಟಿಟ್ಟ ಬುತ್ತಿ. ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದಿದ್ದ ಕ್ರೀಡಾಪಟುಗಳು ದಸರಾ ಕ್ರೀಡಾಕೂಟದಲ್ಲಿ ಸುಧೀರ್ ಅವರ ಮುಂದೆ ಬೆಳ್ಳಿಗೆ ಕೊರಳೊಡ್ಡಬೇಕಾಯಿತು.
‘ಸಾಮಾನ್ಯವಾಗಿ ಥ್ರೋಗಳಿಂದ ಕೂಡಿದ ಎಲ್ಲ ಕ್ರೀಡೆಗಳಲ್ಲೂ ಪಾಲ್ಗೊಳ್ಳುತ್ತಿದ್ದೆ. ಜಿಮ್‌ನಲ್ಲಿ ವೇಟ್‌ಲಿಫ್ಟಿಂಗ್ ಮಾಡುತ್ತಿದ್ದೆ, ನನ್ನ ಸಾಮರ್ಥ್ಯವನ್ನು ನೋಡಿದ ತರಬೇತುದಾರರು ಈ ಬಾರಿ ದಸರಾ ಕ್ರೀಡಾಕೂಟದಲ್ಲಿ ವೇಟ್‌ಲಿಫ್ಟಿಂಗ್‌ನಲ್ಲಿ ಪಾಲ್ಗೊಳ್ಳುವಂತೆ ಸಲಹೆ ನೀಡಿದರು. ಅವರ ಆಶಯದಂತೆ ಪಾಲ್ಗೊಂಡೆ, ಚಿನ್ನ ಗೆದ್ದೆ,‘ ಎಂದು ಸುಧೀರ್ ಸ್ಪೋರ್ಟ್ಸ್ ಮೇಲ್‌ಗೆ ತಿಳಿಸಿದರು.
‘ನಮ್ಮದು ಕೃಷಿ ಕುಟುಂಬ. ಚಿಕ್ಕಂದಿನಿಂದಲೂ ದುಡಿದುಕೊಂಡು ಬಂದವ, ಆಳ್ವಾಸ್‌ನಲ್ಲಿ ಕ್ರೀಡೆಗೆ ಉತ್ತಮ ಪ್ರೋತ್ಸಾಹ ಸಿಕ್ಕಿದು, ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡೆ, ಈಗ ಊಟಿಯ ವೆಲ್ಲಿಂಗ್ಟನ್‌ನಲ್ಲಿರುವ ಮದ್ರಾಸ್ ರೆಜಿಮೆಂಟ್‌ನಲ್ಲಿ ಕೆಲಸ ಮಾಡುತ್ತಿರುವೆ. ಅಲ್ಲಿಯೂ ಕ್ರೀಡೆಗೆ ಉತ್ತಮ ಪ್ರೋತ್ಸಾಹ ಸಿಕ್ಕಿದೆ,‘ ಎಂದರು.
ತೋಳ್ಬಲಕ್ಕೆ ಸಂಬಂಧಿಸಿದ ಕ್ರೀಡೆಗಳಾದ ಹ್ಯಾಮರ್ ಥ್ರೋ, ಡಿಸ್ಕಸ್ ಥ್ರೋ, ಜಾವೆಲಿನ್, ಶಾಟ್‌ಪುಟ್, ಪೋಲ್‌ವಾಲ್ಟ್, ವೇಟ್‌ಲಿಫ್ಟಿಂಗ್ ಹಾಗೂ ಕುಸ್ತಿ ಎಲ್ಲದರಲ್ಲೂ ಸುಧೀರ್ ಪದಕ ಗೆದ್ದಿರುವುದು ವಿಶೇಷ.