Saturday, July 27, 2024

ಹುಬ್ಬಳ್ಳಿಯಲ್ಲಿ ಅರಳಿತು ಮತ್ತೊಂದು ಕ್ರಿಕೆಟ್ ಅಂಗಣ

ಸ್ಪೋರ್ಟ್ಸ್ ಮೇಲ್ ವರದಿ:

ಹುಬ್ಬಳ್ಳಿಯಲ್ಲಿ ಕ್ರಿಕೆಟನ್ನು ಹಸಿರಾಗಿರಿಸಿರುವ ಬಾಬಾ ಭೂಸದ್ ಹಾಗೂ ಶಿವಾನಂದ ಗುಂಜಾಳ್ ಅವರು ನಗರದಲ್ಲಿ ಹೊಸ ಕ್ರಿಕೆಟ್ ಅಂಗಣವನ್ನು ನಿರ್ಮಿಸಿದ್ದಾರೆ. ಸದ್ಯದಲ್ಲೇ ಈ ಕ್ರಿಕೆಟ್ ಅಂಗಣ ಕ್ರಿಕೆಟ್ ಅಭಿಮಾನಿಗಳಿಗೆ ಪಂದ್ಯಗಳನ್ನು ನಿಯೋಜಿಸಲು ಸಜ್ಜಾಗಲಿದೆ.

 

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಹಾಗೂ ಧಾರವಾಡ  ವಲಯದ ಸಮನ್ವಯಕಾರರಾಗಿರುವ ಬಾಬಾ ಭೂಸದ್ ಕ್ರಿಕೆಟ್ ವಲಯದಲ್ಲಿ ಚಿರಪರಿಚಿತರು. ಶಿವಾನಂದ ಗುಂಜಾಳ್ ‘ಭಾರತೀಯ ವಿಶೇಷ ಚೇತನ ಕ್ರಿಕೆಟ್ ಸಂಸ್ಥೆಯ ದಕ್ಷಿಣ ಭಾರತದ ಪ್ರತಿನಿಧಿಯಾಗಿದ್ದಾರೆ. ಈಗಾಗಲೇ ಹಲವಾರು ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡಿದ್ದಾರೆ. ಕ್ರಿಕೆಟ್ ಪ್ರೀತಿಯಿಂದ ಗುಂಜಾಳ್ ಮಗನಿಗೆ ಶತಕ ಎಂದು ಹೆಸರಿಟ್ಟಿರುವುದು ವಿಶೇಷ.
ಎರಡು ಪಂದ್ಯಗಳಿಗೆ ಅವಕಾಶ
ಹುಬ್ಬಳ್ಳಿಯ ಜೆಕೆ ಸ್ಕೂಲ್ ಸಮೀಪದ ಶಿರೂರ ಲೇ ಔಟ್‌ನಲ್ಲಿ ನಿರ್ಮಾಣಗೊಂಡಿರುವ ಈ ಕ್ರಿಕೆಟ್ ಅಂಗಣದಲ್ಲಿ ಏಕ ಕಾಲದಲ್ಲಿ ಎರಡು ಪಂದ್ಯಗಳನ್ನು ಆಯೋಜಿಸಬಹುದು. ಸುಮಾರು ೮.೫ ಎಕರೆ  ವಿಸ್ತಾರವುಳ್ಳ ಕ್ರೀಡಾಂಗಣ ಈ ತಿಂಗಳಲ್ಲಿ ಉದ್ಘಾಟನೆಗೊಳ್ಳಬೇಕಿತ್ತು. ಆದರೆ ಮಳೆಯ ಕಾರಣ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ಶಿವಾನಂದ ಗುಂಜಾಳ್ ತಿಳಿಸಿದ್ದಾರೆ.
ಬಾಬಾ ಭೂಸದ್ ಹಾಗೂ ಶಿವಾನಂದ ಗುಂಜಾಳ್ ಅವರು ಒಂದಾಗಿ ನಿರ್ಮಿಸಿದ ಕಾರಣ ಈ ಕ್ರೀಡಾಂಗಣಕ್ಕೆ ಬಿಜಿ ಕ್ರಿಕೆಟ್ ಅಂಗಣ ಎಂದು ಹೆಸರಿಸಲಾಗಿದೆ. ಬಾಬಾ ಭೂಸದ್ ಅವರ ಮಗ ನಿಖಿಲ್ ಭೂಸದ್ ಹಾಗೂ ಶಿವಾನಂದ ಗುಂಜಾಳ್ ಇದರ ನಿರ್ವಹಣೆ ಮಾಡುತ್ತಿದ್ದಾರೆ.
ಮುಖ್ಯ ಎರಡು ಪಿಚ್‌ಗಳು ಸೇರಿದಂತೆ ಒಟ್ಟು ೧೨ ಪಿಚ್‌ಗಳು ಇಲ್ಲಿವೆ. ಕಲಘಟಗಿ ಬಳಿಯ ಗ್ರಾಮವೊಂದರಿಂದ ವಿಶೇಷ ಮಣ್ಣನ್ನು ತಂದು ಪಿಚ್ ಸಿದ್ಧಗೊಳಿಸಲಾಗಿದೆ. ಹುಬ್ಬಳ್ಳಿಯಲ್ಲಿರುವ ಕೆಎಸ್‌ಸಿಎ ಮೈದಾನಕ್ಕಿಂತಲೂ ವಿಸ್ತಾರವಾಗಿದೆ ಎನ್ನಲಾಗುತ್ತಿದೆ.
ಉತ್ತರ ಕರ್ನಾಟಕದಲ್ಲಿ ಕ್ರಿಕೆಟ್ ಗೆ ಸಾಕಷ್ಟು ಬೇಡಿಕೆ ಇದೆ. ಯುವ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ನೀಡುವ ಸಲುವಾಗಿ ನಾವು ಈ ಯೋಜನೆ ರೂಪಿಸಿದೆವು. ಅದಕ್ಕೆ ಎಲ್ಲರ ಪ್ರೋತ್ಸಾಹ ಅಗತ್ಯವಿದೆ ಎಂದು ಶಿವಾನಂದ ಗುಂಜಾಳ್ ಹೇಳಿದರು.

Related Articles