ಪದಕ ಗೆದ್ದ ದಿವ್ಯಾಂಗ ಕ್ರೀಡಾಪಟು ರಾಘವೇಂದ್ರರಿಗೆ ಪದೋನ್ನತಿ ನೀಡಿ
ಬೆಂಗಳೂರು: ನೈಜೀರಿಯಾದಲ್ಲಿ ನಡೆದ ಕಾಮನ್‌ವೆಲ್ತ್ ಪ್ಯಾರಾ ಫೆನ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಕರ್ನಾಟಕದ ಆರೋಗ್ಯ ಇಲಾಖೆಯ ಸಿಬ್ಬಂದಿ ರಾಘವೇಂದ್ರ ಅವರು ಚಿನ್ನದ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತಂದಿದ್ದಾರೆ. ಅವರಿಗೆ ಉದ್ಯೋಗದಲ್ಲಿ ಪದೋನ್ನತಿ ಅಥವಾ ವೇತನದಲ್ಲಿ ಏರಿಕೆ ನೀಡಬೇಕೆಂದು ರಾಜ್ಯ ಔಷಧ ನಿಯಂತ್ರಣ ಘಟಕದಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದ ರಾಘವೇಂದ್ರ ಅವರು ಸರಕಾರವನ್ನು ಮನವಿ ಮಾಡಿಕೊಂಡಿದ್ದಾರೆ. Raghavendra, who was working as a first-class assistant at the State Drug Control Unit, has appealed to the government for a promotion or a salary increase.
ಈ ಹಿಂದೆ 2022ರಲ್ಲಿ ಕಾಮನ್‌ವೆಲ್ತ್ ಚಾಂಪಿಯನ್‌ಷಿಪ್‌ನಲ್ಲಿ ಎರಡು ಬೆಳ್ಳಿ ಪದಕ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದರು. ಈಗ ಚಿನ್ನದ ಸಾಧನೆ ಮಾಡಿದ್ದಾರೆ. ಸಾಮಾಜಿಕ ಕಳಕಳಿ ಹೊಂದಿರುವ ರಾಜ್ಯ ಆರೋಗ್ಯ ಸಚಿವರಾದ ಯು.ಟಿ. ಖಾದರ್ ಅವರು ರಾಘವೇಂದ್ರ ಅವರ ನೋವಿಗೆ ಸ್ಪಂದಿಸಬೇಕಿದೆ. ಬಳ್ಳಾರಿಗೆ ವರ್ಗಾವಣೆಗೊಂಡು ವರ್ಷ ಕಳೆದಿದ್ದು, ಇನ್ನು ಕೆಲವು ತಿಂಗಳ ಕಾಲ ಅಲ್ಲೇ ಕಾರ್ಯನಿರ್ವಹಿಸಲಿದ್ದಾರೆ. ಆ ಬಳಿಕ ಉದ್ಯೋಗದಲ್ಲಿ ಪದೋನ್ನತಿ ನೀಡಲಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಪದಕ ಗೆದ್ದವರಿಗೆ ಕರ್ನಾಟಕ ಸರಕಾರ ಉದ್ಯೋಗ ನೀಡುತ್ತಿದೆ. ನಗದು ಬಹುಮಾನ ಕೊಡುತ್ತಿದೆ. ಉದ್ಯೋಗದಲ್ಲಿದ್ದವರಿಗೆ ಭಡ್ತಿ ನೀಡುತ್ತದೆ. ಆದರೆ ಪದಕ ಗೆದ್ದ ಒಬ್ಬ ಇಲಾಖೆಯ ದಿವ್ಯಾಂಗ ಉದ್ಯೋಗಿಯನ್ನು ದೂರದ ಊರಿಗೆ ವರ್ಗಾವಣೆ ಮಾಡಿರುವುದು ಆರೋಗ್ಯ ಇಲಾಖೆಯ ಅನಾರೋಗ್ಯ ನಿರ್ಧಾರವೇ ಸರಿ.
ರಾಘವೇಂದ್ರ ಅವರು ಕಳೆದ ವಾರ ನೈಜೀರಿಯಾದ ಲಾಗೋಸ್‌ನಲ್ಲಿ ನಡೆದ ಕಾಮನ್‌ವೆಲ್ತ್ ಪ್ಯಾರಾ ಫೆನ್ಸಿಂಗ್ ಚಾಂಪಿಯನ್‌ಷಿಪ್‌ನ ತಂಡ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಈ ಹಿಂದೆಯೂ ಅವರು ಜಾಗತಿಕ ಮಟ್ಟದಲ್ಲಿ ಹಲವಾರು ಪದಕಗಳನ್ನು ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಮೊದಲು ಅಥ್ಲೆಟಿಕ್ಸ್‌ನಲ್ಲಿ ಪಾಲ್ಗೊಳ್ಳುತ್ತಿದ್ದ ಅವರು ಈಗ ಫೆನ್ಸಿಂಗ್‌ನಲ್ಲಿ ಸಾಧನೆ ಮುಂದುವರಿಸಿದ್ದಾರೆ. 2018ರಲ್ಲಿ ದುಬೈನಲ್ಲಿ ನಡೆದ ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಒಂದು ಚಿನ್ನ ಹಾಗೂ ಒಂದು ಬೆಳ್ಳಿಯ ಸಾಧನೆ ಮಾಡಿದ್ದಾರೆ. 2022ರಲ್ಲಿ ಲಂಡನ್‌ನಲ್ಲಿ ನಡೆದ ಕಾಮನ್‌ವೆಲ್ತ್ ಫೆನ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ವೈಯಕ್ತಿಕ ವಿಭಾಗದಲ್ಲಿ ಬೆಳ್ಳಿ ಹಾಗೂ ತಂಡದಲ್ಲಿ ಬೆಳ್ಳಿಯ ಸಾಧನೆ ಮಾಡಿದ್ದಾರೆ. ಲಾನ್‌ಬೌಲ್‌ನಲ್ಲೂ ಸ್ಪರ್ಧಿಸಿದ್ದ ರಾಘವೇಂದ್ರ ಮಲೇಷ್ಯಾದಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.
ದಿವ್ಯಾಂಗರನ್ನು ವರ್ಗಾವಣೆ ಮಾಡಬಹುದೇ?
ದಿವ್ಯಾಂಗರನ್ನು ಅವರ ಅನುಕೂಲಕ್ಕೆ ತಕ್ಕಂತೆ ವರ್ಗಾವಣೆ ಮಾಡಬೇಕು. ಅವರು ನೆಲೆಸಿರುವ ಪ್ರದೇಶದ ಹಸುತ್ತಮುತ್ತ ವರ್ಗಾವಣೆ ಮಾಡಬಹುದು. ಆದರೆ ನೂರಾರು ಕಿಲೋ ಮೀಟರ್ ದೂರಕ್ಕೆ ವರ್ಗಾವಣೆ ಮಾಡುವಂತಿಲ್ಲ. ರಾಘವೇಂದ್ರ ಅವರನ್ನು ಬೆಂಗಳೂರಿನ ಕೆಆರ್‌ಸರ್ಕಲ್ ಹತ್ತಿರದ ಕಚೇರಿಯಿಂದ ಬಳ್ಳಾರಿಗೆ ವರ್ಗವಾಣೆ ಮಾಡಲಾಗಿದೆ. ಇದರಿಂದಾಗಿ ಅವರ ಕ್ರೀಡಾ ತರಬೇತಿಗೆ ಅಡ್ಡಿಯಾಗಿದೆ. ಕಾಮನ್‌ವೆಲ್ತ್ ಚಾಂಪಿಯನ್‌ಷಿಪ್‌ನಲ್ಲಿ ಅವರು ತಂಡವಿಭಾಗದಲ್ಲಿ ಚಿನ್ನ ಗೆದ್ದರು, ಆದರೆ ಏಷ್ಯನ್ ಗೇಮ್ಸ್‌ಗೆ ಅರ್ಹತೆ ಸಿಗಲಿಲ್ಲ. ಕಾರಣ ಅಭ್ಯಾಸದ ಕೊರತೆ. ಬಳ್ಳಾರಿಯಲ್ಲಿ ಅಭ್ಯಾಸ ಮಾಡಲು ಅಗತ್ಯವಾದ ಸೌಕರ್ಯಗಳಿಲ್ಲ. ಇದರಿಂದಾಗಿ ಉತ್ತವಾಗಿ ಅಭ್ಯಾಸ ಮಾಡಲಾಗದ ಕಾರಣ ಏಷ್ಯನ್ ಗೇಮ್ಸ್‌ಗೆ ಅಹರ್ತೆ ಪಡೆಯಲಾಗಲಿಲ್ಲ ಎಂದು ರಾಘವೇಂದ್ರ ನೋವನ್ನು ವ್ಯಕ್ತಪಡಿಸಿದ್ದಾರೆ.
ಶುಭ ಕೋರಿ ಪ್ರೋತ್ಸಾಹಿಸಿದ ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ದಿವ್ಯಾಂಗರ ಕ್ರೀಡಾ ಸಂಸ್ಥೆಗೆ ರಾಘವೇಂದ್ರ ಅವರ ಧನ್ಯವಾದ ಸಲ್ಲಿಸಿದ್ದಾರೆ.

