ಬೆಳ್ಳಿಯ ಟ್ರ್ಯಾಕ್ನಲ್ಲಿ ಚಿನ್ನದ ಹೆಜ್ಜೆ ಮೂಡಿಸಿದ ಪೂವಮ್ಮ
ಮಂಗಳೂರು: ಕಾಲು ಶತಮಾನವನ್ನೇ ಓಟದಲ್ಲೇ ಪೂರ್ಣಗೊಳಿಸಿರುವ ಕ್ರೀಡಾಪಟುಗಳು ಜಗತ್ತಿನಲ್ಲೇ ಬೆರಳೆಣಿಕೆಯಷ್ಟಿರಬಹುದು. ಅಮೆರಿಕದ ಅಲಿಸನ್ ಫೆಲಿಕ್ಸ್, ಜಮೈಕಾದ ಶೆಲ್ಲಿ ಆನ್ ಪ್ರೆಸರ್ ಪ್ರೈಸ್, ವೆರೋನಿಕಾ ಕ್ಯಾಂಪ್ಬೆಲ್ ಬ್ರೈನ್ ಇವರು ಕ್ರೀಡಾ ಜಗತ್ತಿಲ್ಲಿ 36 ವರ್ಷ ಪ್ರಾಯದ ವರೆಗೂ ಸ್ಪರ್ಧಿಸಿದ್ದರು. ಈಗ ಅವರ ಸಾಲಿನಲ್ಲಿದ್ದಾರೆ ನಮ್ಮ ಕೊಡಗಿನ ಚಾಂಪಿಯನ್ ಮಾಚೆಟ್ಟಿರಾ ಪೂವಮ್ಮ. ಧ್ಯಾನ್ಚಂದ್ ಖೇಲ್ರತ್ನ ಪ್ರಶಸ್ತಿಗೆ ಅರ್ಹರು ಯಾರೂ ಇಲ್ಲ ಎಂದು ಸುಮ್ಮನಿರಬೇಡಿ, ಕೊಡಗಿನ ಪೂವಮ್ಮಗೆ ಕೊಡಿ. At 36, Kodagu’s M.R. Poovamma has been running on the track and bringing glory to the state and nation for the past 25 years. Her tireless journey in athletics has now reached a silver jubilee milestone.
ಕೊಡಗಿನ ಎಂ.ಆರ್. ಪೂವಮ್ಮ ಜಪಾನಿನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ನಲ್ಲಿ ಚಿನ್ನ ಹಾಗೂ ಬೆಳ್ಳಿಯ ಪದಕ ಗೆದ್ದು ಭಾರತಕ್ಕೆ ಕೀರ್ತಿ ತಂದಿರುವುದು ಮಾತ್ರವಲ್ಲ. 36 ವರ್ಷದ ಕೊಡಗಿನ ಚಾಂಪಿಯನ್ ಕ್ರೀಡಾ ಜಗತನ್ನೇ ನಿಬ್ಬೆರಗುಗೊಳಿಸಿದ್ದಾರೆ. 2006ರಲ್ಲೇ ಜೂನಿಯರ್ ವಿಶ್ವ ಅಥ್ಲೆಟಿಕ್ಸ್, 2008ರಲ್ಲಿ ಬೀಜಿಂಗ್ ಒಲಿಂಪಿಕ್ಸ್ನಲ್ಲಿ ಪಾಲ್ಗೊಂಡ ಅತ್ಯಂತ ಕಿರಿಯ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಎಂ. ಆರ್. ಪೂವಮ್ಮ ಮೂರು ಏಷ್ಯನ್ ಗೇಮ್ಸ್ಗಳಲ್ಲಿ ಚಿನ್ನದ ಸಾಧನೆ ಮಾಡಿದ್ದಾರೆ. ಜಪಾನಿನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ನಲ್ಲಿ ಒಂದು ಚಿನ್ನ ಮತ್ತು ಒಂದು ಬೆಳ್ಳಿಯ ಪದಕ ಗೆಲ್ಲುವ ಮೂಲಕ ಒಟ್ಟು ಅವರು ಭಾಗವಹಿಸಿದ ಏಷ್ಯನ್ ಗೇಮ್ಸ್ಗಳಲ್ಲಿ ಒಟ್ಟು 4 ಚಿನ್ನ, 1 ಬೆಳ್ಳಿ ಹಾಗೂ 1 ಕಂಚಿನ ಸಾಧನೆ ಮಾಡಿದ್ದಾರೆ.


200, 400 ಹಾಗೂ 800 ಮೀ. ಓಟದಲ್ಲಿ ಭಾವಹಿಸುವ ಪೂವಮ್ಮ ಹೆಚ್ಚಾಗಿ ಯಶಸ್ಸು ಕಂಡಿರುವುದು ರಿಲೇಯಲ್ಲಿ. 1990ರಲ್ಲಿ ಜನಿಸಿದ ಪೂವಮ್ಮ 4-5ನೇ ತರಗತಿಯಲ್ಲಿರುವಾಗಲೇ ಓಟ ಆರಂಭಿಸಿದ್ದರು. ಈಗ ಅವರಿಗೆ 36 ವರ್ಷ. ಕಳೆದ 25 ವರ್ಷಗಳಲ್ಲಿ ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಹಾಗೂ ಒಲಿಂಪಿಕ್ಸ್ ನಲ್ಲಿ ಸೋಲು ಗೆಲುವುಗಳ ನಡುವೆ ಸಾಗಿ ಬಂದಿದ್ದಾರೆ. ಗೆದ್ದಾಗ ಮೈ ಮರೆಯದೆ, ಸೋತಾಗ ಆತ್ಮಸ್ಥೈರ್ಯ ಕಳೆದುಕೊಳ್ಳದೆ ಸಾಗಿ ಬಂದಿದ್ದಾರೆ.
ಪೂವಮ್ಮ ಅವರ ಸಾಧನೆಯ ಬಗ್ಗೆ ಮಾತನಾಡಿದ ಅವರ ತಾಯಿ, ಎಂ.ಆರ್. ಜಾಜಿ, “ಪೂವಮ್ಮ 5ನೇ ತರಗತಿಯಲ್ಲಿರುವಾಗ ಓಟ ಆರಂಭಿಸಿದ್ದಳು. ಎಲ್ಲ ಓಟದಲ್ಲೂ ಪಾಲ್ಗೊಳ್ಳುತ್ತಿದ್ದಳು. ಪದಕ ಗೆಲ್ಲುತ್ತಿದ್ದಳು. ನಂತರ 200, 400, 800 ಮೀ.ಗಳ ಓಟದಲ್ಲಿ ಪಾಲ್ಗೊಂಡಳು. ಜೂನಿಯರ್ ವಿಶ್ವಕಪ್ನಲ್ಲಿ ಪಾಲ್ಗೊಳ್ಳುವಾಗ ಪೂವಮ್ಮಗೆ ಆಗಿನ್ನೂ 9ನೇ ತರಗತಿಯಲ್ಲಿ ಓದುತ್ತಿದ್ದಳು. 2008ರ ಬೀಜಿಂಗ್ ಒಲಿಂಪಿಕ್ಸ್ನಲ್ಲೂ ಭಾರತವನ್ನು ಪ್ರತಿನಿಧಿಸಿದ ಅತ್ಯಂತ ಕಿರಿಯ ಕ್ರೀಡಾಪಟು. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಸಾಧನೆಗೆ ಸಿಕ್ಕ ಪ್ರೋತ್ಸಾಹ ಕಡಿಮೆ. ಇನ್ನು ಓಟ ಸಾಕು ಅಂತ ನನಗೆ ಅನಿಸುತ್ತಿದೆ. ಆಕೆಗೆಯ ನಿಲುವೇನೋ ಗೊತ್ತಿಲ್ಲ,” ಎಂದು ಹೇಳಿದ್ದಾರೆ.

