ಸೋಮಶೇಖರ್ ಪಡುಕರೆ, ಬೆಂಗಳೂರು:
ಗುಜರಾತಿನಲ್ಲಿ ನಡೆಯುತ್ತಿರುವ 36ನೇ ರಾಷ್ಟ್ರೀಯ ಕ್ರೀಡಾಕೂಟದ 200 ಮೀ. ಓಟದಲ್ಲಿ ಕೂಟ ದಾಖಲೆಯೊಂದಿಗೆ ಬೆಳ್ಳಿ ಪದಕ ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿರುವ ಉಡುಪಿ ಕಲ್ಯಾಣಪುರದ ಅಭಿನ್ ದೇವಾಡಿಗ ಕನ್ನಡಿಗರ ಹೆಮ್ಮೆ. ಅಭಿನ್ ದೇವಾಡಿಗ ಈಗ ಓಟದ ಮೂಲಕ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಆದರೆ ಅವರೊಬ್ಬ ಉತ್ತಮ ಡ್ರಮ್ಮರ್. ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಡ್ರಮ್ ಬಾರಿಸಿ, ಜೂನಿಯರ್ ಶಿವಮಣಿ ಎಂದೇ ಖ್ಯಾತಿ ಪಡೆದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಹೆಸರು ದಾಖಲಿಸಿರುವ ಅಭಿನ್ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಗುರಿ ಹೊಂದಿದ್ದಾರೆ.
ಉಡುಪಿ ಕಲ್ಯಾಣಪುರದ ಎಂ. ಭಾಸ್ಕರ್ ದೇವಾಡಿಗ ಮತ್ತು ಆಶಾ ಬಿ. ದೇವಾಡಿಗ ಅವರ ಮುದ್ದಿನ ಮಗನಾಗಿರುವ ಅಭಿನ್, ಒಂದನೇ ತರಗತಿಯಿಂದ ಡ್ರಮ್ಮರ್ ಆಗಿ ಜನಪ್ರಿಯರೆನಿಸಿದವರು. ಗೆಳೆಯರು ಮಾಡಿದ ಟೀಕೆಗಳನ್ನೇ ಸವಾಲಾಗಿ ಸ್ವೀಕರಿಸಿ ಡ್ರಮರ್ ಆಗಿದ್ದುಕೊಂಡೇ ಅಥ್ಲೆಟಿಕ್ಸ್‌ನಲ್ಲಿ ಪದಕಗಳ ಕೊಳ್ಳೆ ಹೊಡೆದರು. ಇದುವರೆಗೂ ರಾಷ್ಟ್ರೀಯ ಮಟ್ಟದಲ್ಲಿ ಅಭಿನ್ ಜೂನಿಯರ್ ಮತ್ತು ಸೀನಿಯರ್ ವಿಭಾಗ ಸೇರಿ ಒಟ್ಟು 27 ಪದಕಗಳನ್ನು ಗೆದ್ದಿದ್ದಾರೆ. ಗುಜರಾತ್‌ನಲ್ಲಿ ನಡೆಯುತ್ತಿರುವ 36ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಅವರು ಸ್ಪರ್ಧಿಸಿದ ಮೊದಲ ಸೀನಿಯರ್ ರಾಷ್ಟ್ರೀಯ ಸ್ಪರ್ಧೆಯಾಗಿದೆ.
ಕಲ್ಯಾಣಪುರ ಮಿಲಾಗ್ರಿಸ್ ಪ್ರಾಥಮಿಕ ಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣ ಮುಗಿಸಿದ ಅಭಿನ್, ನಂತರ ಮಿಲಾಗ್ರಿಸ್ ಪಿಯು ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಮುಗಿಸಿದರು. ಬಳಿಕ ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಪದವಿ ಗಳಿಸಿದರು.
ಒಂದನೇ ತರಗತಿಯಿಂದ ಡ್ರಮ್ಮರ್: ಉಡುಪಿ ಪರಿಸರದಲ್ಲಿ ಯಾವುದೇ ಸಂಗೀತ ಕಾರ್ಯಕ್ರಮ ನಡೆದರೂ ಅಲ್ಲಿ ಅಭಿನ್ ದೇವಾಡಿಗರ ಡ್ರಮ್ ಧ್ವನಿ ಕೇಳುತ್ತದೆ. ಕರ್ನಾಟಕದಲ್ಲಿ ಮಾತ್ರವಲ್ಲ ಮುಂಬಯಿ, ದೆಹಲಿಯಲ್ಲಿಯೂ ಅಭಿನ್ ಅವರ ಡ್ರಮ್ ಧ್ವನಿ ಮೊಳಗಿದೆ. ಅತ್ಯಂತ ಚಿಕ್ಕ ಪ್ರಾಯದಲ್ಲೇ ಯಾವುದೇ ಹಾಡಿಗೂ ಡ್ರಮ್ ನುಡಿಸಬಲ್ಲ ಸಾಮರ್ಥ್ಯ ಹೊಂದಿದ ಕಾರಣ ಅಭಿನ್ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದರು. ರಿದಂ ಪ್ಯಾಡ್‌ನಲ್ಲಿ ತಬಲದಲ್ಲೂ ಪರಿಣತರು. ಉಡುಪಿಯ ಸತೀಶ್ ಬನ್ನಂಜೆ ಅವರಲ್ಲಿ ಪಳಗಿ ಡ್ರಮ್ಮರ್ ಆದ ಅಭಿನ್ ಜಾಹೀರ್ ಅಬ್ಬಾಸ್ ಅವರಲ್ಲಿ ಉತ್ತಮ ಓಟಗಾರನಾಗಿ ಪಳಗಿದರು.
ಪ್ರಾಥಮಿಕ ಶಾಲೆಯಲ್ಲೇ ಓಟ ಆರಂಭ: ಡ್ರಮ್ ನುಡಿಸಿ ಖ್ಯಾತಿ ಪಡೆದಿದ್ದ ಅಭಿನ್ ಕ್ರೀಡೆಯಲ್ಲಿ ಯಶಸ್ಸು ಕಾಣುತ್ತಾರೆಂದು ಯಾರೂ ಊಹಿಸಿರಲಿಲ್ಲ. ಮಿಲಾಗ್ರೀಸ್ ಶಾಲೆಯ ದೈಹಿಕ ಶಿಕ್ಷಕರಾದ ವಿನ್ಸೆಂಟ್ ಅವರು ಅಭಿನ್ ಅವರಲ್ಲಿರುವ ಕ್ರೀಡಾ ಸಾಮರ್ಥ್ಯವನ್ನು ಬೆಳಕಿಗೆ ತಂದರು. “ಓಟವೆಂದರೆ ಡ್ರಮ್ ಬಾರಿಸುವುದಲ್ಲ,” ಎಂದು ಗೇಲಿ ಮಾಡುತ್ತಿದ್ದ ಹುಡುಗರ ಸಮ್ಮುಖದಲ್ಲೇ ಶಾಲಾ ಚಾಂಪಿಯನ್ ಆಗಿ ಮೂಡಿ ಬಂದರು. ದೈಹಿಕ ಶಿಕ್ಷಕರಾದ ವಿನ್ಸೆಂಟ್ ಅವರು ಮಗನನ್ನು ಕ್ರೀಡಾಭ್ಯಾಸಕ್ಕೆ ಕಳುಹಿಸಿ ಎಂದು ವಿನಂತಿಸಿದರು. “ಡ್ರಮ್ಮರ್ ಆಗಿರುವುದರಿಂದ ಎರಡೂ ಹೊತ್ತು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಆಗುವುದಿಲ್ಲ, ಬೆಳಿಗ್ಗೆ ಮಾತ್ರ ಬರಲು ಸಾಧ್ಯ,” ಎಂದು ಅಭಿನ್ ತಂದೆ ವಿನಂತಿಸಿಕೊಂಡರು. ಅದಕ್ಕೂ ಒಪ್ಪಿದ ವಿನ್ಸೆಂಟ್ ಸರ್ ಚಿಕ್ಕಂದಿನಲ್ಲೇ ಅಭಿನ್ ಅವರನ್ನು ಒಬ್ಬ ಉತ್ತಮ ಕ್ರೀಡಾಪಟುವಾಗಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.
ಹಿರಿಯರನ್ನೇ ಹಿಂದಿಕ್ಕಿದ!: ಮಿಲಾಗ್ರಿಸ್ ಪ್ರಾಥಮಿಕ ಶಾಲೆಯಲ್ಲಿ ಐದನೇ ತರಗತಿಯಲ್ಲಿ ಓದುತ್ತಿದ್ದ ಅಭಿನ್‌ಗೆ ಒಮ್ಮೆ ಏಳನೇ ತರಗತಿಯ ವಿದ್ಯಾರ್ಥಿಗಳೊಂದಿಗೆ ಸ್ಪರ್ಧಿಸುವ ಅವಕಾಶ ಸಿಕ್ಕಿತು. ಬ್ರಹ್ಮಾವರದ ಎಸ್‌ಎಂಎಸ್ ಕಾಲೇಜಿನ ಅಂಗಣದಲ್ಲಿ ನಡೆದ ಓಟದಲ್ಲಿ ಅಭಿನ್ ಬರಿಗಾಲಿನಲ್ಲಿ ಓಡಿ ಎಲ್ಲರಿಗೂ ಅಚ್ಚರಿ ಮೂಡಿಸುವಂತೆ ಚಿನ್ನದ ಪದಕ ಗೆದ್ದರು. ಅಲ್ಲಿಂದ ಮತ್ತೆ ಹಿಂದಿರುಗಿ ನೋಡಲಿಲ್ಲ. “ಜಿಲ್ಲಾ ಮತ್ತು ತಾಲೂಕು ಮಟ್ಟದ ಕೆಲವು ಸ್ಪರ್ಧೆಗಳಲ್ಲಿ ಪದಕ ಗೆಲ್ಲುವಲ್ಲಿ ವಿಫಲನಾಗಿರುವೆ, ಆದರೆ ಸೋಲಿನಿಂದ ಪಾಠ ಕಲಿತು ಯಶಸ್ಸಿನ ಹಾದಿ ಹಿಡಿದೆ,” ಎನ್ನುತ್ತಾರೆ ಅಭಿನ್.
ಗಾಯದೊಂದಿಗೆ ಓಡಿ ಚಿನ್ನ ಗೆದ್ದ!!: ಕುಂದಾಪುರ ತಾಲೂಕಿನ ಕೊಲ್ಲೂರಿನಲ್ಲಿ ಉಡುಪಿ ಜಿಲ್ಲಾ ಮಟ್ಟದ ಕ್ರೀಡಾಕೂಟ. ಅದರ ಮುಂಚಿನ ದಿನ ತಂದೆಯೊಂದಿಗೆ ಸ್ಕೂಟರಿನಲ್ಲಿ ಪ್ರಯಾಣಿಸುತ್ತಿದ್ದಾಗ. ರಸ್ತೆ ಅಪಘಾತ ಸಂಭವಿಸಿತು. ಅಭಿನ್ ಕಾಲಿಗೆ ಗಂಭೀರ ಗಾಯವಾಗಿತ್ತು. ನಾಳೆಯ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದು ಬೇಡವೆಂದು ತಂದೆ ಸಲಹೆ ನೀಡಿದರೂ, ಅಭಿನ್ ಒಪ್ಪಲಿಲ್ಲ. ಬ್ಯಾಂಡೇಜ್ ಹಾಕಿದ ಕಾಲಿನಲ್ಲೇ ಓಡಿ ಚಿನ್ನ ಗೆದ್ದ ಅಭಿನ್, “ ಆ ಯಶಸ್ಸಿಗೆ ತಾಯಿ ಮೂಕಾಂಬಿಕೆಯ ಆಶೀರ್ವಾದವೇ ಕಾರಣ,” ಎಂದು ಈಗಲೂ ಸ್ಮರಿಸುತ್ತಾರೆ, ಮಾತ್ರವಲ್ಲ ಅದು ನನ್ನ ಮನೋಬಲವನ್ನು ಹೆಚ್ಚಿಸಿದ ಮತ್ತು ಕ್ರೀಡಾ ಬದುಕಿಗೆ ತಿರುವು ನೀಡಿದ ಕ್ರೀಡಾಕೂಟ ಎನ್ನುತ್ತಾರೆ. ನಂತರ ಜೂನಿಯರ್ ಮಟ್ಟದಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಅಭಿನ್ ಪದಕಗಳನ್ನು ಗೆಲ್ಲಲಾರಂಭಿಸಿದರು.
ಹತ್ತನೇ ತರಗತಿಯಲ್ಲಿ ಸ್ಪರ್ಧೆಯೊಂದರಲ್ಲಿ ಕಾಲಿನ ಸ್ನಾಯು ಹರಿದ ಕಾರಣ ಅಭಿನ್ ಆರು ತಿಂಗಳ ಕಾಲ ಯಾವುದೇ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡಿರಲಿಲ್ಲ. ಆರು ತಿಂಗಳ ನಂತರ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಪದಕಗಳಿಗೆ ಮುತ್ತಿಟ್ಟರು. “ನಿನ್ನ ಕ್ರೀಡಾ ಬದುಕೇ ಮುಗಿಯಿತು,” ಎಂದು ಹಂಗಿಸಿದವರನ್ನೇ ಟ್ರ್ಯಾಕ್‌ನಲ್ಲಿ ಸೋಲಿಸಿ ಚಿನ್ನ ಗೆದ್ದರು.
ಹರಿಯಾಣದಲ್ಲಿ ನಡೆದ ಜೂನಿಯರ್ ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆಲ್ಲುವ ಮೂಲಕ ಅಭಿನ್ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದರು. ನಂತರ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ಮತ್ತು ಆಲ್ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ಗಳಲ್ಲಿ ದಾಖಲೆಯೊಂದಿಗೆ ಚಿನ್ನ ಗೆಲ್ಲುವಲ್ಲಿ ಅಭಿನ್ ಅವರ ಪಾತ್ರ ಪ್ರಮುಖವಾಗಿತ್ತು.
ಕೊರೋನಾ ತಂದ ಆಪತ್ತು: ಕೊರೋನಾ ಮಹಾಮಾರಿ ಜಗತ್ತಿನ ಜನರ ಬದುಕನ್ನೇ ಆತಂಕಕ್ಕೆ ನೂಕಿತ್ತು. ಕ್ರೀಡೆ ಇದರಿಂದ ಹೊರತಾಗಿಲ್ಲ. ಹಲವಾರು ಜಾಗತಿಕ ಕ್ರೀಡಾಕೂಟಗಳು ಮುಂದೂಡಲ್ಪಟ್ಟವು. ಇದು ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆಯ ಮೇಲೂ ಕೆಟ್ಟ ಪರಿಣಾಮ ಬೀರಿತು. ಅಭಿನ್ ವಿಶ್ವಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿಭಾರತವನ್ನು ಸ್ಪರ್ಧಿಸಲು ಅರ್ಹತೆ ಪಡೆದಿದ್ದರು. ಕೊರೋನಾ ಕಾರಣ ಕ್ರೀಡಾಕೂಟ ಮುಂದೂಡಲ್ಪಟ್ಟಿತು. 20ವರ್ಷದೊಳಗಿನವರು ಪಾಲ್ಗೊಳ್ಳಬೇಕಾಗಿದ್ದ ಈ ಕ್ರೀಡಾಕೂಟ ಒಂದು ವರ್ಷ ಮುಂದೂಡಲ್ಪಟ್ಟ ಕಾರಣ ಅಭಿನ್ ವಯಸ್ಸಿನ ಆಧಾರದ ಮೇಲೆ ಸ್ಪರ್ಧೆಯಿಂದ ವಂಚಿತರಾದರು. 2020ರಲ್ಲಿ ನಡೆದಿರುತ್ತಿದ್ದರೆ, ಭಾರತಕ್ಕೆ ಮತ್ತೊಂದು ಪದಕ ಖಚಿತವಾಗಿತ್ತು. ನಂತರ ವಿಶ್ವ ಯೂನಿವರ್ಸಿಟಿ ಗೇಮ್ಸ್ ಕೂಡ ಮುಂದೂಡಲ್ಪಟ್ಟ ಕಾರಣ ಅಭಿನ್ ಅದರಿಂದಲೂ ವಂಚಿತರಾದರು. ಆದರೆ ಆ ನಂತರದ ಸ್ಪರ್ಧೆಗಳಲ್ಲಿ ಅಭಿನ್ ಎಲ್ಲಿಯೂ ವೈಫಲ್ಯ ಕಾಣದೆ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.
“ನನ್ನ ಯಶಸ್ಸಿಗೆ ತಂದೆ ತಾಯಿ ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡಿದ್ದಾರೆ. ನಮ್ಮ ತಂದೆ ಗ್ಯಾರೇಜಿನಲ್ಲಿ ಕೆಲಸ ಮಾಡಿಕೊಂಡು ನನ್ನ ಕ್ರೀಡಾ ಬದುಕಿಗೆ ನೆರವಾಗುತ್ತಿದ್ದಾರೆ. ತಾಯಿ ನನ್ನಲ್ಲಿ ಮನೋಬಲವನ್ನು ತುಂಬಿದ್ದಾರೆ. ಕೋಚ್ ಜಾಹೀರ್ ಅಬ್ಬಾಸ್ ಉತ್ತಮ ರೀತಿಯಲ್ಲಿ ತರಬೇತಿ ನೀಡಿದ್ದಾರೆ. ಮುಂದೆ ಬೆಂಗಳೂರಿನಲ್ಲಿ ನಡೆಯಲಿರುವ ರಾಷ್ಟ್ರೀಯ ಓಪನ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಗುರಿ ಹೊಂದಿರುವೆ. ಅಹಮದಾಬಾದ್‌ನಲ್ಲಿ ಅಲ್ಪ ಅಂತರದಲ್ಲೇ ಚಿನ್ನ ಕೈ ತಪ್ಪಿತು. ದೇಹಕ್ಕೆ ಗಾಯವಾಗಿದ್ದರೂ ಅದು ಮನಸ್ಸಿನಲ್ಲಿ ಕಾಡಬಾರದು, ಹಾಗಿದ್ದಲ್ಲಿ ಮಾತ್ರ ಯಶಸ್ಸು ಸಾಧ್ಯ. ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿ ಪದಕ ಗೆಲ್ಲುವುದು ನನ್ನ ಗುರಿ,” ಎಂದಿದ್ದಾರೆ ಅಭಿನ್ ದೇವಾಡಿಗ.
ಅಭಿನ್ ಅವರ ಸಾಧನೆಯ ಬಗ್ಗೆ ಮಾತನಾಡಿರುವ ಕೋಚ್ ಜಾಹೀರ್ ಅಬ್ಬಾಸ್, “ನಮ್ಮ ಅಕಾಡೆಮಿಯ ಪ್ರತಿಭಾವಂತ ಅಥ್ಲೀಟ್. ಶಿಸ್ತಿನ ಓಟಗಾರ. ಈಗಾಗಲೇ ಹಲವಾರು ಕ್ರೀಡಾಕೂಟಗಳಲ್ಲಿ ಪದಕ ಗೆದ್ದು ಕೀರ್ತಿ ತಂದಿದ್ದಾನೆ. ಮುಂದೆಯೂ ಜಾಗತಿಕ ಮಟ್ಟದಲ್ಲಿ ಯಶಸ್ಸು ಕಾಣುವ ಸಾಮರ್ಥ್ಯಹೊಂದಿರುವ ಬದ್ಧತೆಯ ಓಟಗಾರ,” ಎಂದಿದ್ದಾರೆ.