ಅಹಮದಾಬಾದ್:
ಕರ್ನಾಟಕದ ಜಾವೆಲಿನ್ ಎಸೆತಗಾರ ಮನು ಡಿ.ಪಿ. ಅವರು ಐಐಟಿ ಗಾಂಧೀನಗರದ ಅಂಗಣದಲ್ಲಿ ನಡೆಯುತ್ತಿರುವ 36ನೇ ರಾಷ್ಟ್ರೀಯ ಕ್ರೀಡಾಕೂಟದ ಜಾವೆಲಿನ್ ಎಸೆತದಲ್ಲಿ 80.74ಮೀ. ದೂರಕ್ಕೆ ಜಾವೆಲಿನ್ ಎಸೆದು ಚಿನ್ನದ ಪದಕ ಗೆದ್ದು, ಕರ್ನಾಟಕಕ್ಕೆ ಕೀರ್ತಿ ತಂದಿದ್ದಾರೆ. ಇದು ಅವರ ಉತ್ತಮ ಎಸೆತ ಅಲ್ಲದಿದ್ದರೂ ಮುಂದಿನ ಪ್ರಯತ್ನದಲ್ಲಿ 85ಮೀ. ದೂರ ಎಸೆಯುವ ಗುರಿ ಹೊಂದಿರುವುದಾಗಿ ಹೇಳಿದ್ದಾರೆ.
“ಇದು ನನ್ನ ಉತ್ತಮ ಪ್ರಯತ್ನವಾಗಿರಲಿಲ್ಲ” ಎಂದು ಚಿನ್ನ ಗೆದ್ದ ನಂತರ ಮಾತನಾಡಿದ 22ರ ಹರೆಯದ ಮನು, “ತರಬೇತಿಯ ವೇಳೆ ನಾನು ನಿರಂತರವಾಗಿ 80+ದೂರಕ್ಕೆ ಎಸೆಯುತ್ತಿದ್ದೆ, ಇದು ಕಳೆದ ವರ್ಷಕ್ಕಿಂತ ಉತ್ತಮ ಸುಧಾರಣೆಯ ಎಸೆತವಾಗಿದೆ. ರಾಷ್ಟ್ರೀಯ ಕ್ರೀಡಾಕೂಟಕ್ಕಾಗಿ ಪ್ರೋಟಿನ್ ಮತ್ತು ಸಪ್ಲಿಮೆಂಟ್ ಸೇವನೆಯಿಂದ ದೇಹ ಬಹಳ ಭಾರವಾಗಿದೆ, ಇಲ್ಲಿಯ ಹವಾಮಾನಕ್ಕೆ ಅದು ಅಗತ್ಯವಾಗಿದೆ,” ಎಂದರು.
“ಹೊಸ ಋತುವಿನಲ್ಲಿ 85ಮೀ. ಹೆಚ್ಚಿನ ದೂರಕ್ಕೆ ಎಸೆಯುವ ಗುರಿ ಇದ್ದಿತ್ತು. ಈಗಾಗಲೇ ಅಂತರ್ ರಾಜ್ಯ ಕ್ರೀಡಾಕೂಟದಲ್ಲಿ 84.35 ಮೀ. ದೂರಕ್ಕೆ ಎಸೆದಿರುವೆ, ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ 82.28ಮೀ. ದೂರಕ್ಕೆ ಎಸೆದಿರುವೆ,” ಎಂದು ಒಲಿಂಪಿಯನ್ ನೀರಜ್ ಛೋಪ್ರಾ ಹಾಗೂ ಇತರ ದಾಖಲೆ ವೀರರು ಜಾವೆಲಿನ್ ಎಸೆಯುತ್ತಿರುವುದನ್ನು ನೋಡಿ ಬೆಳೆದ ಯುವ ಕ್ರೀಡಾಪಟು ಹೇಳಿದರು.
ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪದಕ ಗೆದ್ದಿರುವ ಕರ್ನಾಟಕದ ಜಾವೆಲಿನ್ ಎಸೆತಗಾರ ಕಾಶಿನಾಥ್ ನಾಯ್ಕ್ ಅವರು ಮನು ಡಿ.ಪಿ.ಗೆ ತರಬೇತಿ ನೀಡುತ್ತಿದ್ದಾರೆ.
ನೀರಜ್ ಛೋಪ್ರಾ ಅವ ಅಭಿಮಾನಿಯಾಗಿರುವ ಮನು, ಶ್ರೇಷ್ಠ ದರ್ಜೆಯ ಜಾವೆಲಿನ್ ಎಸೆತೆಗಾರರ ಸಾಲಿಗೆ ಸೇರಲು ಇನ್ನೂ ಬಹಳ ಶ್ರಮವಹಿಸಬೇಕು ಮತ್ತು ಸಾಕಷ್ಟು ಕಾಲಾವಕಾಶ ಬೇಕೆಂದು ಮನು ಹೇಳಿದ್ದಾರೆ.
ಈ ಬಾರಿಯ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ನೀರಜ್ ಛೋಪ್ರಾ ಅವರ ಅನುಪಸ್ಥಿತಿಯಲ್ಲಿ ದೇಶವನ್ನು ಪ್ರತಿನಿಧಿಸಿದ್ದ ಮನು ಹಾಗೂ ರೋಹಿತ್ ಯಾದವ್ ಅನುಕ್ರಮವಾಗಿ 82.28 ಮತ್ತು 82.22 ಮೀ ದೂರಕ್ಕೆ ಎಸೆದು ಐದು ಮತ್ತು ಆರನೇ ಸ್ಥಾನ ಗಳಿಸಿರುತ್ತಾರೆ.
ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್ ಮನು ಪಾಲಿಗೆ ಮೊದಲ ಅಂತಾರಾಷ್ಟ್ರೀಯ ಕ್ರೀಡಾಕೂಟವಾಗಿತ್ತು. ಆದ್ದರಿಂದ ಯಾವುದೇ ದಾಖಲೆಯನ್ನು ಮನದಲ್ಲಿಟ್ಟುಕೊಳ್ಳದೆ ಕೇವಲ ಉತ್ತಮ ಪ್ರದರ್ಶನ ನೀಡುವ ಗುರಿಯೊಂದಿಗೆ ಸ್ಪರ್ಧಿಸಿದ್ದರು.
“ಬರ್ಮಿಂಗ್‌ಹ್ಯಾಮ್ ನನ್ನ ಕ್ರೀಡಾಬದುಕಿನ ಮೊದಲ ಅಂತಾರಾಷ್ಟ್ರೀಯ ಸ್ಪರ್ಧೆಯಾಗಿತ್ತು. ಅದೊಂದು ಅದ್ಭುತ ಅನುಭವ. ಪಾಕಿಸ್ತಾನದ ಅರ್ಷಾದ್ ನದೀಮ್ ಮಾಡಿರುವ ಸಾಧನೆಗೆ ನಾನು ಯಾವುದೇ ರೀತಿಯಲ್ಲಿ ಹತ್ತಿರವಾಗಿರಲಿಲ್ಲ. ನಾನು ಯಾವುದೇ ದಾಖಲೆ ಮುರಿಯುತ್ತೇನೆಂಬ ಗುರಿಯೊಂದಿಗೆ ಸ್ಪರ್ಧೆಯಲ್ಲಿ ಪಾಲ್ಗೊಂಡಿರಲಿಲ್ಲ. ನನ್ನ ಯೋಜನೆ ಬಹಳ ಸರಳವಾಗಿತ್ತು. ನನ್ನಿಂದ ಉತ್ತಮವಾದುದನ್ನು ನೀಡುವುದು ನನ್ನ ಗುರಿಯಾಗಿತ್ತು, ನನ್ನ ಸಮಯವೂ ಬರುತ್ತದೆ ಎಂಬುದು ನನಗೆ ಗೊತ್ತಿತ್ತು,” ಎಂದು ಹೇಳಿದರು.
ಕಾಮನ್‌ವೆಲ್ತ್‌ನಲ್ಲಿ ಕೋಚ್ ಇಲ್ಲದೆ ಕಷ್ಟವಾಯಿತು:
ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಸರ್ವಿಸಸ್ ಕೋಚ್ ಕಾಶಿನಾಥ್ ನಾಯ್ಕ್ ಅವರ ಅನುಪಸ್ಥಿತಿಯಿಂದಾಗಿ ಮನು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಪುಣೆಯಲ್ಲಿರುವ ಆರ್ಮಿ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್‌ನಲ್ಲಿ ಕೋಚ್ ಆಗಿರುವ ಕಾಶಿನಾಥ್ ಅವರಿಗೆ ವೀಡಿಯೋ ಕಾಲ್ ಮಾಡಿ ಸಲಹೆಗಳನ್ನು ಪಡೆದಿರುವುದನ್ನು ಮನು ಈ ಸಂದರ್ಭದಲ್ಲಿ ನೆನೆಸಿಕೊಂಡರು.
“ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ನನ್ನ ಕೋಚ್ ಇಲ್ಲದೆ ಬಹಳ ಕಷ್ಟವಾಯಿತು. ತರಬೇತಿಯ ವೇಳೆ ನನಗೆ ಸಹಾಯ ಮಾಡಲು ಯಾರೂ ಇರಲಿಲ್ಲ. ನನ್ನ ಯೋಜನೆಗಳು ಯಾವುದೇ ಇದ್ದರೂ ಕೋಚ್‌ಗೆ ವೀಡಿಯೋ ಕರೆ ಮಾಡಿ ತಿಳಿದುಕೊಳ್ಳುತ್ತಿದ್ದೆ, ನನ್ನ ಪಾಲಿಗೆ ಕೋಚ್ ಕಾಶಿನಾಥ್ ಅವರು ಮಾಡುವ ಸಲಹೆಯೇ ಅಂತಿಮ.” ಎಂದರು.
“ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ನೀರಜ್ ಭಾಯಿ ಇಲ್ಲದಿರುವುದು ನಮ್ಮೆಲ್ಲರಿಗೂ ನಿರಾಸೆಯನ್ನುಂಟು ಮಾಡಿತ್ತು. ತರಬೇತಿ ವೇಳೆ ಪಾಕಿಸ್ತಾನದ ಅರ್ಷದ್ ನನ್ನೊಂದಿಗೆ ಮಾತನಾಡಿ, ನಿಮ್ಮಿಂದಾದಷ್ಟು ಉತ್ತಮ ಪ್ರದರ್ಶನ ನೀಡಿ ಎಂದು ಸಲಹೆ ನೀಡಿದ್ದರು,” ಎಂದು ಕರ್ನಾಟಕದ ಹಾಸನ ಜಿಲ್ಲೆಯ ಮನು ಹೇಳಿದರು.
ನೀರಜ್ ಅಣ್ಣ ಮೆಸೇಜ್ ಮಾಡಿದ್ರು!:
ಕಾಮನ್‌ವೆಲ್ತ್ ಕ್ರೀಡಾಕೂಟ ಆರಂಭವಾಗುವುದಕ್ಕೆ ಮೊದಲು ನೀರಜ್ ಛೋಪ್ರಾ ಮೆಸೇಜ್ ಮೂಲಕ ಸಲಹೆ ನೀಡಿರುವುದನ್ನು ಮನು ಈ ಸಂದರ್ಭದಲ್ಲಿ ಸ್ಮರಿಸಿಕೊಂಡರು. “ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಮುನ್ನ ನೀರಜ್ ಅಣ್ಣ ನನಗೆ ಸಂದೇಶ ಕಳುಹಿಸಿದ್ದರು. ನನ್ನಿಂದಾದ ಪ್ರಯತ್ನವನ್ನು ಮಾಡುವಂತೆ ಸಲಹೆ ನೀಡಿದ್ದರು. ಜಾಗತಿಕ ಮಟ್ಟದಲ್ಲಿ ಅಪಾರ ಸಾಧನೆ ಮಾಡಿರುವ ನೀರಜ್ ಅಣ್ಣ ಭಾರತೀಯರು ಎಂಬುದೇ ನಮ್ಮೆಲ್ಲರ ಹೆಮ್ಮೆ. ಅವರ ಮಾಡಿರುವ ಸಾಧನೆಯೇ ಪ್ರತಿಯೊಂದು ಸ್ಪರ್ಧೆಯಲ್ಲಿ ಉತ್ತಮ ಸಾಧನೆ ಮಾಡಲು ನಮಗೆಲ್ಲ ಸ್ಫೂರ್ತಿ,” ಎಂದು ಮನು ಹೇಳಿದರು.