Friday, February 23, 2024

ಕರ್ನಾಟಕ ಕ್ರಿಕೆಟ್‌ಗೆ ಪ್ರತ್ಯೂಷ್‌ ಎಕ್ಸ್‌ಪ್ರೆಸ್‌!

ಕೇವಲ 4 ಪಂದ್ಯಗಳು 17 ವಿಕೆಟ್‌! ಇದೇ ಕಾರಣಕ್ಕೆ ಒಬ್ಬ ಯುವ ಬೌಲರ್‌ನ ಭವಿಷ್ಯವನ್ನು ಹೇಳಲಾಗದು. ಆದರೆ ಮಂಗಳೂರು ಮೂಲದ ಪ್ರತ್ಯೂಷ್‌ ಜಿ. ಶೆಟ್ಟಿ ಕರ್ನಾಟಕ ಕ್ರಿಕೆಟ್‌ನ ಉತ್ತಮ ವೇಗದ ಬೌಲರ್‌ ಎಂದು ಧೈರ್ಯದಿಂದ ಹೇಳಬಹುದು. ಏಕೆಂದರೆ ಬೆಳೆವ ಸಿರಿ ಮೊಳಕೆಯಲ್ಲಿ ಎಂಬಂತೆ ಪ್ರತ್ಯೂಷ್‌ ತನ್ನ ಕ್ರಿಕೆಟ್‌ ಬದುಕಿನಲ್ಲಿ ಅಳವಡಿಸಿಕೊಂಡ ಶಿಸ್ತು, ಬದ್ಧತೆ ಹಾಗೂ ಸಮಯ ಪ್ರಜ್ಞೆ ಗಮನಾರ್ಹವಾದುದು. Young fast bowler Prathyush G Shetty asset of Indian cricket.

ದಕ್ಷಿಣ ಕನ್ನಡ ಜಿಲ್ಲೆಯ ಬಾಯಾರು ಕಂಬಳ ಗದ್ದೆಯ ಮನೆತನಕ್ಕೆ ಸೇರಿದ ಗಿರೀಶ್ ಶೆಟ್ಟಿ ಹಾಗೂ ಸ್ಮಿತಾ ಶೆಟ್ಟಿ ಅವರ ಪುತ್ರ ಪ್ರತ್ಯೂಷ್‌ ಶೆಟ್ಟಿ ಈ ಬಾರಿಯ ಕೆಎಸ್‌ಸಿಎ U14 ಲೀಗ್‌ನಲ್ಲಿ ಆಡಿದ ನಾಲ್ಕು ಪಂದ್ಯಗಳಲ್ಲಿ ಮೂರು ಬಾರಿ 5 ವಿಕೆಟ್‌ ಸಾಧನೆ ಮಾಡಿದರೆ ಒಂದು ಪಂದ್ಯದಲ್ಲಿ ಎರಡು ವಿಕೆಟ್‌ ಗಳಿಸಿದರು. ಅಂಕಿ ಸಂಖ್ಯೆಗಳನ್ನು ನೋಡಿ ಭವಿಷ್ಯ ತೀರ್ಮಾನಿಸಲಾಗದು, ನಿಜ. ಆದರೆ ಈ ಪುಟ್ಟ ಬಾಲಕನ ಶಿಸ್ತಿನ ಬದುಕನ್ನು ಕಂಡಾಗ ಇತರರಿಗೆ ಮಾದರಿ ಅನಿಸುತ್ತಿದೆ.

ಬೆಂಗಳೂರಿನ ಮಾಗಡಿ ಕ್ರಿಕೆಟ್‌ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರು ಪ್ರತ್ಯೂಷ್‌ಗೆ ಈಗ 13 ವರ್ಷ. ಕನಕಪುರ ರಸ್ತೆ ಏರಿಯಾದಲ್ಲಿ ಮನೆ. ಬೆಳಿಗ್ಗೆ 5 ಗಂಟೆಗೆ ಎದ್ದು ಸೈಕಲ್‌ ಏರಿ ಮೆಟ್ರೋ ನಿಲ್ದಾಣಕ್ಕೆ ಬಂದು ಮಾಗಡಿ ಕ್ರಿಕೆಟ್‌ ಅಕಾಡೆಮಿಗೆ ಕ್ಲಪ್ತ ಸಮಯಕ್ಕೆ ತಲಪುತ್ತಾನೆ. ಇದು ಸಮಯ ಪ್ರಜ್ಞೆ. ಕ್ರೀಡಾ ಸಾಧಕರಲ್ಲಿ ಅದೂ ಚಿಕ್ಕ ವಯಸ್ಸಿನಲ್ಲಿ ಈ ಪ್ರಜ್ಞೆ ಅತ್ಯಗತ್ಯ. ತರಬೇತಿ ಮುಗಿಯುತ್ತಿದ್ದಂತೆ ಮತ್ತೆ ಮೆಟ್ರೋ ಹತ್ತಿ. ನಿಲ್ದಾಣದಿಂದ ಸೈಕಲ್‌ ಏರಿ ಮನೆ ತಲುಪಿ, ಶಾಲೆಗೆ ಸಜ್ಜಾಗಿ ಕ್ಲಪ್ತ ಸಮಯಕ್ಕೆ ಕುಮಾರನ್ಸ್‌ ಶಾಲೆಯಲ್ಲಿ ಹಾಜರ್‌.

ಬಲಗೈ ವೇಗದ ಬೌಲರ್‌ ಪ್ರತ್ಯೂಷ್‌ ತನಗಿಂತ ದೊಡ್ಡವರೊಂದಿಗೆ ಆಡುತ್ತಾನೆ, ಅಭ್ಯಾಸ ಮಾಡುತ್ತಾನೆ. ಇದೇ ಆತನ ಯಶಸ್ಸಿನ ಗುಟ್ಟು. ಕೆಲವೊಮ್ಮೆ ಮಕ್ಕಳು ಅಕಾಡೆಮಿಗೆ ಬರಲು ತಡವಾಗುತ್ತದೆ ಎಂದರೆ ಹೆತ್ತವರು ಕೋಚ್‌ಗೆ ಕರೆ ಮಾಡಿ ಹೇಳುವುದಿದೆ. ಐದು ವರ್ಷದಿಂದ ತರಬೇತಿ ಪಡೆಯುತ್ತಿರುವ ಪ್ರತ್ಯೂಷ್‌ ಎಂದೂ ತರಬೇತಿಯ ವಿಷಯದಲ್ಲಿ ಮನೆಯವರ ಪ್ರಭಾವ ಬೀರಿದವನಲ್ಲ. ಕಳೆದ 7 ವರ್ಷಗಳಿಂದ ಅಭ್ಯಾಸ ನಡೆಸುತ್ತಿರುವ ಪ್ರತ್ಯೂಷ್‌ ಓದಿನಲ್ಲೂ ಅಗ್ರ ಸ್ಥಾನ ಪಡೆದವರ ಪಟ್ಟಿಯಲ್ಲಿದ್ದಾನೆ. ಕ್ರೀಡೆಯಿಂದ ಓದಿನಲ್ಲಿ ಹಿಂದೆ ಬಿದ್ದಿದ್ದಾನೆ ಎಂದು ಆರೋಪಿಸುವ ಹೆತ್ತವರಿಗೆ ಪ್ರತ್ಯೂಷ್‌ ಭಿನ್ನವಾಗಿ ಕಾಣುತ್ತಾನೆ. “ಭಾರತ ಆಡಬೇಕು, ವಿರಾಟ್‌ ಕೊಹ್ಲಿ ರೀತಿ ಬ್ಯಾಟಿಂಗ್‌ ಮಾಡಬೇಕು, ಐಪಿಎಲ್‌ ಆಡಬೇಕು ಎಂಬೆಲ್ಲ ಆಸೆಗಳು ಹೆತ್ತವರಿಗಿರುತ್ತದೆ. ಆದರೆ ನಾವು ನಮ್ಮ ಮಗುವನ್ನು ಕ್ರಿಕೆಟ್‌ ತರಬೇತಿಗೆ ಕಳುಹಿಸುತ್ತಿರುವುದು ಅವನ ಮನಸ್ಸು ಮೊಬೈಲ್‌ ಹಾಗೂ ಇನ್ನಿತರ ಆಕರ್ಷಣೆಗಳಿಂದ ದೂರ ಇರಲಿ ಎಂದು. ಯಾವುದಾದರೂ ಒಂದು ಕ್ರೀಡೆಯಲ್ಲಿ ತೊಡಗಿಸಿಕೊಂಡರೆ ಮನಸ್ಸು ಉಲ್ಲಾಸವಾಗಿರುತ್ತದೆ. ಸಮಯದ ಸದುಪಯೋಗವಾದರೆ ಅದೇ ತೃಪ್ತಿ,” ಎನ್ನುತ್ತಾರೆ ಪ್ರತ್ಯೂಷ್‌ ಅವರ ತಂದೆ ಗಿರೀಶ್ ಶೆಟ್ಟಿ. “ಮಕ್ಕಳಿಗೆ ಸಮಯ ಪ್ರಜ್ಞೆ ಹಾಗೂ ಬದ್ಧತೆ ಇವುಗಳು ಮುಖ್ಯ. ಅದು ನನ್ನ ಮಗ ಆಗಿರಬಹುದು ಅಥವಾ ಯಾರೇ ಅಗಿರಬಹುದು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಪ್ರತ್ಯೂಷ್‌ ವಿಷಯದಲ್ಲಿ ನನಗೆ ಈ ವಿಚಾರದಲ್ಲಿ ತೃಪ್ತಿ ಇದೆ. ಕ್ರೀಡೆ ಇದನ್ನು ಕಲಿಸುತ್ತದೆ ಎಂಬುದು ನನ್ನ ನಂಬಿಕೆ,” ಎನ್ನುತ್ತಾರೆ ಗಿರೀಶ್‌ ಶೆಟ್ಟಿ.

ಚಿಕ್ಕಂದಿನಿಂದಲೂ ಎಲ್ಲೇ ಪಂದ್ಯ ನಡೆದರೂ ಗಿರೀಶ್ ಮಗನನ್ನು ಕರೆದೊಯ್ಯುತ್ತಿದ್ದರು. ಹಿರಿಯ ಆಟದ ಶಿಸ್ತನ್ನು ಈ ಪುಟ್ಟ ಬಾಲಕ ತನ್ನಲ್ಲಿ ಮೈಗೂಡಿಸಿಕೊಂಡಿರುವುದು ವಿಶೇಷ. ಕ್ರೀಡಾಪಟುಗಳ ಕುರಿತಾದ ಸಿನಿಮಾಗಳನ್ನು ವೀಕ್ಷಿಸುವುದು ಪ್ರತ್ಯೂಷನ ಮತ್ತೊಂದು ಒಳ್ಳೆಯ ಹವ್ಯಾಸ. ಬದುಕಿನಲ್ಲಿ ಶಿಸ್ತು ಇರುವಂತೆ ನಾವಾಡುವ ಕ್ರೀಡೆಯಲ್ಲೂ ಶಿಸ್ತು ಅಗತ್ಯ. ಪ್ರತ್ಯೂಷ್‌ ಮಾಗಡಿ ಕ್ರಿಕೆಟ್‌ ಅಕಾಡೆಮಿಯ ಶಿಸ್ತಿನ ಬೌಲರ್‌ಗಳಲ್ಲಿ ಒಬ್ಬ. ಬೌಲಿಂಗ್‌ನಲ್ಲಿ ನಿಖರತೆ, ವೈಡ್‌ ಇಲ್ಲದೆಯೇ ಬೌಲಿಂಗ್‌ ಮಾಡುವುದು, ತಪ್ಪಿನ ಪುನರಾವರ್ತನೆ ಆಗದಂತೆ ನೋಡಿಕೊಳ್ಳುವುದು, ಒಂದೆರಡು ಎಸೆತಗಳಲ್ಲೇ ಬ್ಯಾಟ್ಸ್‌ಮನ್‌ನನ್ನು ಯಾವ  ರೀತಿಯಲ್ಲಿ ನಿಯಂತ್ರಿಸಬಹುದು ಎಂಬ ತಂತ್ರಗಾರಿಕೆ ಈ ಎಲ್ಲ ಅಂಶಗಳನ್ನು ಪ್ರತ್ಯೂಷ್‌ ಚಿಕ್ಕ ವಯಸ್ಸಿನಲ್ಲೇ ಅರಿತುಕೊಂಡಿರುವುದು ವಿಶೇಷ.

ಗುರುಗಳ ಮೆಚ್ಚುಗೆ:

ಬೆಂಗಳೂರಿನಲ್ಲಿ ಈಗ ಜನಪ್ರಿಯಗೊಳ್ಳುತ್ತಿರುವ ಮಾಗಡಿ ಕ್ರಿಕೆಟ್‌‌ ಅಕಾಡೆಮಿಯ ಕೋಚ್‌ ಮಂಜನಾಥ್‌ ಅವರಲ್ಲಿ ಪ್ರತ್ಯೂಷ್‌ ತರಬೇತಿ ಪಡೆಯುತ್ತಿದ್ದಾರೆ. “ಪ್ರತ್ಯೂಷ್‌ ನಮ್ಮ ಅಕಾಡೆಮಿಯ ಯುವ ಸ್ಟಾರ್‌ ಬೌಲರ್‌. ಪ್ರತಿಯೊಂದು ಪಂದ್ಯದಲ್ಲೂ ವಿಕೆಟ್‌ ಗಳಿಸುತ್ತಾನೆ. ಇತ್ತೀಚಿಗಂತೂ 5 ವಿಕೆಟ್‌ ಗಳಿಕೆಯಲ್ಲಿ ಹ್ಯಾಟ್ರಿಕ್‌ ಸಾಧನೆ ಮಾಡಿದ್ದಾನೆ. ಕ್ರೀಡೆಯನ್ನು ಸೂಕ್ಷ್ಮವಾಗಿ ಗಮನಿಸಿ. ಅದರಲ್ಲಿ ತನಗೆ ಅಗತ್ಯವಿರುವ ಅಂಶವನ್ನು ಬೇಗನೆ ಕಲಿಯುವುದು ಪ್ರತ್ಯೂಷನಲ್ಲಿ ನಾನು ಕಂಡುಕೊಂಡ ಅಂಶ. ಅತ್ಯಂತ ಶಿಸ್ತಿನ ಬೌಲರ್‌. ಸಿಕ್ಕ ಅವಕಾಶವನ್ನು ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳುವುದಿಲ್ಲ. ಹಿರಿಯರಿಗೆ ಗೌರವ ನೀಡುವುದು, ಹಿರಿಯರೊಂದಿಗೆ ಆಡಿ ಕಲಿಯುವ ಉತ್ತಮ ಗುಣ ಆತನಲ್ಲಿದೆ. ಇನ್ನೂ ಉತ್ತಮ ರೀತಿಯಲ್ಲಿ ತರಬೇತಿ ಸಿಕ್ಕರೆ ಭವಿಷ್ಯದಲ್ಲಿ ಉತ್ತಮ ವೇಗದ ಬೌಲರ್‌‌ ಆಗುವುದರಲ್ಲಿ ಸಂಶಯವಿಲ್ಲ,” ಎನ್ನುತ್ತಾರೆ ಕೋಚ್‌ ಮಂಜುನಾಥ್.‌

Related Articles